ADVERTISEMENT

ಲಂಚಕ್ಕೆ ಬೇಡಿಕೆ ಆರೋಪ: ಅಬಕಾರಿ ಡಿಸಿ ಆಸ್ತಿ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಮೇ 2022, 9:20 IST
Last Updated 11 ಮೇ 2022, 9:20 IST
ನಾಗಶಯನ
ನಾಗಶಯನ    

ಚಿತ್ರದುರ್ಗ: ಮದ್ಯದಂಗಡಿ ಸನ್ನದು ವಾರ್ಷಿಕ ನವೀಕರಣಕ್ಕೆ ಲಂಚ ಪಡೆದ ಆರೋಪದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿರುವ ಅಬಕಾರಿ ಉಪ ಆಯುಕ್ತ ನಾಗಶಯನ ಸಂಪಾದಿಸಿದ ಅಕ್ರಮ ಆಸ್ತಿಯನ್ನು ತನಿಖೆಗೆ ಒಳಪಡಿಸಬೇಕು ಎಂದು ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರರ ಸಂಘ ಒತ್ತಾಯಿಸಿದೆ.

‘ಮದ್ಯ ಮಾರಾಟಗಾರರಿಂದ ವಸೂಲಿ ಮಾಡಿದ ಲಂಚದಲ್ಲಿ ಸಾಕಷ್ಟು ಆಸ್ತಿ ಸಂಪಾದಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಂಘದ ಬಳಿ ದಾಖಲೆಗಳಿವೆ. ಭ್ರಷ್ಟಾಚಾರ ನಿಗ್ರಹ ದಳ ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅಕ್ರಮವಾಗಿ ಸಂಪಾದಿಸಿದ ಆಸ್ತಿ ಬೆಳಕಿಗೆ ತರಬೇಕು’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಬುರೆಡ್ಡಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ನಾಗಶಯನ ಅವರು ಅಬಕಾರಿ ಇಲಾಖೆಗೆ ಸೇರಿದಾಗಿನಿಂದ ಇಂತಹ ಸಮಸ್ಯೆ ಸೃಷ್ಟಿಯಾಗಿದೆ. ಅವರು ಕರ್ತವ್ಯ ನಿರ್ವಹಿಸಿದ ಎಲ್ಲ ಸ್ಥಳಗಳಲ್ಲಿ ಇಂತಹ ಆರೋಪಗಳು ಕೇಳಿಬಂದಿವೆ. 2017ರಲ್ಲಿ ಮೊದಲ ಬಾರಿಗೆ ಜಿಲ್ಲೆಗೆ ನಿಯೋಜನೆಗೊಂಡಾಗ ಅಧಿಕಾರಿಯ ನಿಜ ಸ್ವರೂಪ ಗೊತ್ತಾಯಿತು. 2020ರಲ್ಲಿ ಮತ್ತೆ ಜಿಲ್ಲೆಗೆ ಮರಳಿದಾಗ ಸಮಸ್ಯೆ ಬಿಗಡಾಯಿಸಿತು’ ಎಂದು ವಿವರಿಸಿದರು.

ADVERTISEMENT

‘ಮದ್ಯದಂಗಡಿ ಸನ್ನದು ನವೀಕರಣ ಪ್ರಕ್ರಿಯೆ ಪ್ರತಿ ವರ್ಷ ನಡೆಯುತ್ತದೆ. ಇದಕ್ಕೆ ಇಲಾಖೆಯಲ್ಲಿ ಮಾಮೂಲಿ ವ್ಯವಸ್ಥೆ ಇದೆ. ಪ್ರತಿ ಮದ್ಯದಂಗಡಿಯಿಂದ ಮಾಸಿಕ ಲಂಚ ನೀಡುವಂತೆ ಪೀಡಿಸಲಾಗಿದೆ. ಈ ಬಗ್ಗೆ ಅಧಿಕಾರಿಯೊಂದಿಗೆ ಹಲವು ಬಾರಿ ಚರ್ಚೆ ಮಾಡಿದ್ದೇವೆ. ಮದ್ಯ ಮಾರಾಟಗಾರರ ಸಮಸ್ಯೆಗಳನ್ನು ವಿವರಿಸುವ ಪ್ರಯತ್ನ ಮಾಡಿದ್ದೇವೆ. ಇದಕ್ಕೆ ಮಣಿಯದೇ ಇದ್ದಾಗ ಎಸಿಬಿಗೆ ದೂರು ನೀಡಬೇಕಾಯಿತು’ ಎಂದು ಮಾಹಿತಿ ನೀಡಿದರು.

‘ಮದ್ಯ ಮಾರಾಟ ಕೆಟ್ಟ ದಂಧೆಯಲ್ಲ. ಮದ್ಯ ಮಾರಾಟಗಾರರನ್ನು ಸಮಾಜ ಕೆಟ್ಟದಾಗಿ ನೋಡುತ್ತಿದೆ. ಇದೊಂದು ಉದ್ಯಮವಾಗಿದ್ದು, ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ. ಮದ್ಯ ಮಾರಾಟಕ್ಕೆ ಸರ್ಕಾರ ಕಡಿವಾಣ ಹಾಕಿದರೆ ನಮ್ಮ ತಕರಾರು ಏನೂ ಇಲ್ಲ. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಮದ್ಯ ಮಾರಾಟ ವ್ಯವಸ್ಥೆ ಪಾರದರ್ಶಕವಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಭ್ರಷ್ಟರ ವಿರುದ್ಧ ಹೋರಾಟ’

ಅಬಕಾರಿ ಇಲಾಖೆಯಲ್ಲಿ ಇಂತಹ ಭ್ರಷ್ಟರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ರಾಜ್ಯದ ಹಲವೆಡೆ ಮದ್ಯ ಮಾರಾಟಗಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಇವರ ವಿರುದ್ಧ ಇದೇ ಮಾದರಿಯ ಹೋರಾಟ ಮುಂದುವರಿಸಲಾಗುವುದು ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಎಸ್.ಗುರುಸ್ವಾಮಿ ತಿಳಿಸಿದರು.

‘ಅಬಕಾರಿ ಇಲಾಖೆಯ ಭ್ರಷ್ಟತೆ ಎಲ್ಲ ಕಾಲದಲ್ಲೂ ನಡೆದುಕೊಂಡು ಬಂದಿದೆ. ಕೆಲ ಅಧಿಕಾರಿಗಳು ಮಿತಿಮೀರಿ ವಸೂಲಿಗೆ ನಿಂತಿದ್ದಾರೆ. ಸರ್ಕಾರ ನಿಗದಿಪಡಿಸಿದ ಶೇ 10ರಷ್ಟು ಕಮಿಷನ್‌ನಲ್ಲಿ ತೆರಿಗೆ ತೆಗೆದು ಶೇ 7ರಷ್ಟು ಮಾತ್ರ ಮಾರಾಟಗಾರರಿಗೆ ಉಳಿಯುತ್ತದೆ. ಬಾಡಿಗೆ, ಸಿಬ್ಬಂದಿ ವೇತನ ಹಾಗೂ ಇತರ ಖರ್ಚು ತೆಗೆದರೆ ಲಂಚ ಎಲ್ಲಿಂದ ನೀಡುವುದು’ ಎಂದು ಪ್ರಶ್ನಿಸಿದರು.

ಜಿಲ್ಲಾ ಮದ್ಯ ಮಾರಾಟಗಾರರ ಸಂಘ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್‌ ಇದ್ದರು.

***

ಅಬಕಾರಿ ಕಾಯ್ದೆ ಸಂಪೂರ್ಣ ದುರುಪಯೋಗ ಆಗುತ್ತಿದೆ. ಅಧಿಕಾರಿಗಳು ತಮ್ಮ ಇಷ್ಟಕ್ಕೆ ತಕ್ಕಂತೆ ಇದನ್ನು ಬಳಸುತ್ತಿದ್ದಾರೆ. ಇಂತಹ ನೀತಿಗಳನ್ನು ಸರಳೀಕರಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.

-ಗೋವಿಂದರಾಜ ಹೆಗಡೆ, ಉಪಾಧ್ಯಕ್ಷ, ರಾಜ್ಯ ಮದ್ಯ ಮಾರಾಟಗಾರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.