
ಚಿತ್ರದುರ್ಗ: ಹಿರಿಯೂರು ಸಮೀಪದ ವಾಣಿವಿಲಾಸ ಸಾಗರ (ವಿ.ವಿ.ಸಾಗರ) ಜಲಾಶಯ 4ನೇ ಬಾರಿಗೆ ಭರ್ತಿಯಾಗಿ ಕೋಟೆ ನಾಡಿನಾದ್ಯಂತ ಸಂಭ್ರಮ ಮನೆಮಾಡುವಂತೆ ಮಾಡಿತು. ಇದೇ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಬಳಿ ಸ್ಲೀಪರ್ ಬಸ್ ಹೊತ್ತಿ ಉರಿದು 7 ಮಂದಿ ಜೀವ ಕಳೆದುಕೊಳ್ಳಬೇಕಾಯಿತು. ಇದರಿಂದ ಇಡೀ ನಾಡು ಬೆಚ್ಚಿ ಬಿದ್ದಿತು. ಈ ವರ್ಷವನ್ನೊಮ್ಮೆ (2025) ಹಿಂದಿರುಗಿ ನೋಡಿದಾಗ ಮಾರಿ ಕಣಿವೆ ತುಂಬಿದ ನೀರು ಸಂಭ್ರಮ ಮೂಡಿಸಿದರೆ, ಜೀವಗಳನ್ನು ಆಹುತಿ ಪಡೆದ ಬೆಂಕಿ ಕಣ್ಣೀರು ತರಿಸಿತು.
ವಿ.ವಿ ಸಾಗರ ಜಲಾಶಯ ನಿರ್ಮಾಣವಾಗಿ 89 ವರ್ಷಗಳ ನಂತರ 2022ರ ಸೆ.2ರಂದು ಜಲಾಶಯ 2ನೇ ಬಾರಿಗೆ ತುಂಬಿ ಕೋಡಿ ಬಿದ್ದಿತ್ತು. ನಂತರ ಈ ವರ್ಷದ ಜ.12ರಂದು ಜಲಾಶಯ 3ನೇ ಬಾರಿ ತುಂಬಿ ಕೋಡಿಯಲ್ಲಿ ನೀರು ಕಂಡಿತ್ತು. ನಂತರ ಇದೇ ಮತ್ತೆ ಅ.19ರಂದು ನಾಲ್ಕನೇ ಬಾರಿಗೆ ಕೋಡಿಯಲ್ಲಿ ನೀರು ಹರಿಯಿತು. ವರ್ಷದಲ್ಲಿ 2ನೇ ಬಾರಿಗೆ ಕೋಡಿ ಬಿದ್ದು ಹೊಸ ಇತಿಹಾಸ ನಿರ್ಮಾಣ ಮಾಡಿತು.
ವರ್ಷ ಮುಗಿಯಲು ಆರು ದಿನಗಳಷ್ಟೇ ಬಾಕಿ ಉಳಿದಿರುವಾಗ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಸೀಬರ್ಡ್ ಬಸ್ ದುರಂತ ದೇಶವನ್ನೇ ತಲ್ಲಣಗೊಳಿಸಿತು. ಕಂಟೇನರ್‌ವೊಂದು ಡಿವೈಡರ್ ದಾಟಿ ಬಂದು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಸ್ಲೀಪರ್ ಬಸ್‌ಗೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿತ್ತು. ಈ ದುರ್ಘಟನೆಯಲ್ಲಿ ಬಸ್‌ನಲ್ಲಿದ್ದ 6 ಜನ ಸಜೀವ ದಹನವಾದರು. ಕಂಟೇನರ್ ಚಾಲಕನೂ ಸುಟ್ಟು ಹೋಗಿದ್ದ.
ಈ ವರ್ಷ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತ ಪ್ರಕರಣಗಳಲ್ಲಿ ಹಲವು ಜೀವಗಳು ಬಲಿಯಾಗಬೇಕಾಯಿತು. ತಾಲ್ಲೂಕಿನ ತಮಟಕಲ್ಲು ಬಳಿ ಮಾರ್ಚ್ 9ರಂದು ನಿಂತಿದ್ದ ಲಾರಿಗೆ ಇನ್ನೊವಾ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್‌ಗೆ ಕಾರೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸಾವಿಗೀಡಾಗಿದ್ದರು. ಸೀಬಾರ ಬಳಿ ಇನ್ನೊವಾ ಕಾರ್‌ನ ಟೈರ್ ಸ್ಫೋಟಗೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ತಮಿಳುನಾಡು ಮೂಲದ ಮೂವರು ಅಸುನೀಗಿದ್ದರು.
ತಾಲ್ಲೂಕಿನ ಬೊಮ್ಮಕ್ಕನಹಳ್ಳಿ ಗ್ರಾಮದ ಬಳಿ ಅಳಿಯನೇ ಅತ್ತೆ– ಮಾವನನ್ನು ಕೊಂದ ಪ್ರಕರಣ ರಾಜ್ಯದ ಗಮನ ಸೆಳೆಯಿತು. ಗೋನೂರು ರಸ್ತೆಯಲ್ಲಿ ನಡೆದಿದ್ದ ಪದವಿ ವಿದ್ಯಾರ್ಥಿನಿ ವರ್ಷಿತಾ ಕೊಲೆ ಪ್ರಕರಣವೂ ಜನರಲ್ಲಿ ಭೀತಿ ಸೃಷ್ಟಿಸಿತ್ತು.
ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನ.12ರಿಂದ 16ರವರೆಗೆ ಸ್ವದೇಶಿ ಜಾಗರಣಾ ಮಂಚ್ ವತಿಯಿಂದ ನಡೆದ ಸ್ವದೇಶಿ ಮೇಳದಲ್ಲಿ ₹ 5 ಕೋಟಿಗೂ ಹೆಚ್ಚು ವಹಿವಾಟು ನಡೆದಿತ್ತು. ನಿರೀಕ್ಷೆಗೂ ಮೀರಿ ಮೇಳ ಯಶಸ್ವಿಯಾಗಿತ್ತು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ನಗರದ ಮುರುಘಾರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಜ.18 ಮತ್ತು 19ರಂದು ಅಖಿಲ ಭಾರತ 13ನೇ ಶರಣ ಸಾಹಿತ್ಯ ಸಮ್ಮೇಳನ ನಡೆದಿತ್ತು. ಬಸವಕಲ್ಯಾಣ, ಬಸವಮಹಾಮನೆಯ ಬೆಲ್ದಾಳ ಸಿದ್ದರಾಮ ಶರಣರು ಸರ್ವಾಧ್ಯಕ್ಷತೆ ವಹಿಸಿದ್ದರು.
ಹೊಳಲ್ಕೆರೆಯಲ್ಲಿ ಸಾಹಿತ್ಯ ಸಂಭ್ರಮ: ಹೊಳಲ್ಕೆರೆಯಲ್ಲಿ ಮಾರ್ಚ್ 27ರಂದು ಜಿ.ಪರಮೇಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಮಾರ್ಚ್ 6ರಂದು ತಾಲ್ಲೂಕಿನ ನೆಲ್ಲಿಕಟ್ಟೆಯ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಜೀವ ಕಳೆದುಕೊಂಡಿದ್ದರು. ಹೊಳಲ್ಕೆರೆಯಲ್ಲಿ ಹುಟ್ಟಿ ಬೆಳೆದ ನಟ ಬ್ಯಾಂಕ್ ಜನಾರ್ಧನ್ ಮಾರ್ಚ್ 27ರಂದು ನಿಧನರಾಗಿದ್ದರು.
ಮೇ 14ರಂದು ಕಂಬದ ದೇವರಹಟ್ಟಿಯಲ್ಲಿ ರಂಗಸ್ವಾಮಿ (21), ಪ್ರವೀಣ್ (13) ಎಂಬುವವರು ನೀರು ಕುಡಿಯಲು ಹೋಗಿ ಕೃಷಿ ಹೊಂಡದಲ್ಲಿ ಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದರು. ಜುಲೈ 27ರಂದು ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗ್ರಾಮದ ಜಿ.ಎನ್.ಮಲ್ಲಿಕಾರ್ಜುನ (23) ಎಂಬಾತನನ್ನು ಆಸ್ತಿಗಾಗಿ ಅಕ್ಕ ನಿಶಾ ಹಾಗೂ ಆಕೆಯ ಪತಿ ಮಂಜುನಾಥ ಉಸಿರುಗಟ್ಟಿಸಿ ಕೊಲೆ ಮಾಡಿದ್ದೂ ನಾಗರಿಕರ ತಲ್ಲಣಕ್ಕೆ ಕಾರಣವಾಗಿತ್ತು.
ಬಾಗಿನ ಅರ್ಪಣೆ: ಜ.21ರಂದು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಾಣಿವಿಲಾಸ ಸಾಗರಕ್ಕೆ ಬಾಗಿನ ಸಮರ್ಪಣೆ ಮಾಡಿದ್ದರು. ತಮ್ಮ ಪೂರ್ವಿಕರು ಕಟ್ಟಿಸಿದ ಜಲಾಶಯದ ವೈಭವವನ್ನೂ ಕಣ್ತುಂಬಿಕೊಂಡಿದ್ದರು. ಜ.23ರಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದರು. ಜ.11ರಂದು ಗುಯಿಲಾಳು ಟೋಲ್ ಸಮೀಪ ನಿರ್ಮಿಸಿರುವ ಸಾಯಿಬಾಬ ಗುಹಾಂತರ ದೇವಾಲಯದ ಲೋಕಾರ್ಪಣೆ ನಡೆದಿತ್ತು. ಆ.30 ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕೆಎಸ್‌ಆರ್‌ಟಿಸಿ ಡಿಪೊ ಉದ್ಘಾಟಿಸಿದ್ದರು.
ಸಿರಿಧಾನ್ಯ ಕಣಜ: ಇಡೀ ರಾಜ್ಯದಲ್ಲಿಯೇ ಅಧಿಕ ಸಿರಿಧಾನ್ಯ ಬೆಳೆಯುವ ಏಕೈಕ ತಾಲ್ಲೂಕು ಹೊಸದುರ್ಗ. ಹೀಗಾಗಿ ಸಿರಿಧಾನ್ಯಗಳ ನಾಡು ಎಂಬ ಸ್ವಾಗತ ಬೋರ್ಡ್ ಅನ್ನು ಅನಾವರಣಗೊಳಿಸಲಾಗಿತ್ತು. ಜ.21ರಂದು ಬೆಂಗಳೂರಿನಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಸಿರಿಧಾನ್ಯ ಮೇಳದಲ್ಲಿ ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಅವರಿಗೆ ಅಭಿನಂದನೆ ಸಲ್ಲಿಸಲಾಗಿತ್ತು. 2025ರಲ್ಲಿ ಸಿರಿಧಾನ್ಯಕ್ಕೆ ಪ್ರೋತ್ಸಾಹ ನೀಡಲು ₹5,000 ಬೆಂಬಲ ಬೆಲೆಯನ್ನೂ ಘೋಷಿಸಲಾಗಿತ್ತು.
ವಾಣಿ ವಿಲಾಸ ಜಲಾಶಯ ಕೋಡಿ ಬಿದ್ದ ಪರಿಣಾಮ, ಹಿನ್ನೀರಿನ ಪ್ರದೇಶ ಜಲಾವೃತವಾಗಿತ್ತು. ಹಲವು ಗ್ರಾಮಗಳು ನೀರಿನಲ್ಲಿ ಮುಳುಗಿದ್ದವು. ಸಾಣೇಹಳ್ಳಿಯಲ್ಲಿ ಜುಲೈನಲ್ಲಿ 100 ಜನ ಮಠಾಧೀಶರಿಗೆ ಮೂರು ದಿನಗಳ ಕಮ್ಮಟ ಏರ್ಪಡಿಸಲಾಗಿತ್ತು. ಲಿಂಗಾಯತ ಧರ್ಮದ ಆಚರಣೆ, ಹಿನ್ನೆಲೆ, ಸಂಘಟನೆ, ನಿಜಾಚರಣೆ ಕುರಿತು ಚರ್ಚೆ ನಡೆದಿತ್ತು.
ಮೊಳಕಾಲ್ಮುರಿನ ಅರ್ಧ ಪಟ್ಟಣಕ್ಕೆ ತುಂಗಭದ್ರಾ ಹಿನ್ನೀರು ಯೋಜನೆಯಲ್ಲಿ ಕುಡಿಯುವ ನೀರು ಸರಬರಾಜು ಆರಂಭವಾಗಿದ್ದು ಸಂತೋಷ ತಂದಿತು. ತಾಲ್ಲೂಕಿನ 15 ಹಳ್ಳಿಗಳಿಗೂ ಈ ಯೋಜನೆಯಲ್ಲಿ ನೀರು ನೀಡುತ್ತಿದ್ದು 2026ರಲ್ಲಿ ಯೋಜನೆ ಉದ್ಘಾಟನೆಯಾಗಲಿದೆ.
ಐತಿಹಾಸಿಕ ರೊಪ್ಪದಲ್ಲಿ ಭಾರತ ಮತ್ತು ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಜಂಟಿಯಾಗಿ ಶಿಲಾಯುಗ ಕಾಲದ ಪಳೆಯುಳಿಕೆಗಳ ಉತ್ಖನನ ಮಾಡಿದ್ದವು. 52 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದವು. ‘ನನ್ನಿಂದ ಒಂದು ಚರಂಡಿ ನಿರ್ಮಿಸಲೂ ಆಗುತ್ತಿಲ್ಲʼ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ನೀಡಿದ್ದ ಹೇಳಿಕೆ ರಾಜ್ಯದಾದ್ಯಂತ ಸುದ್ದಿಯಾಗಿತ್ತು.
ಪೂರಕ ಮಾಹಿತಿ: ಸುವರ್ಣಾ ಬಸವರಾಜ್, ಕೊಂಡ್ಲಹಳ್ಳಿ ಜಯಪ್ರಕಾಶ್, ಶಿವಗಂಗಾ ಚಿತ್ತಯ್ಯ, ಸಾಂತೇನಹಳ್ಳಿ ಸಂದೇಶ್‌ಗೌಡ, ಸಂತೋಷ್ ಎಚ್.ಡಿ.
ಸ್ವಾಮೀಜಿ ಬಿಡುಗಡೆ; ಶಾಸಕ ಬಂಧನ
ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅವರನ್ನು ಹಣ ಅಕ್ರಮ ವರ್ಗಾವಣೆ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆ.22ರಂದು ಬಂಧಿಸಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅವರು 6 ತಿಂಗಳಿನಿಂದಲೂ ಕಾನೂನು ಹೋರಾಟ ಮುಂದುವರಿಸಿದ್ದಾರೆ. ಚಿತ್ರದುರ್ಗ ಚಳ್ಳಕೆರೆ ಸೇರಿದಂತೆ ಅವರ ಹೆಸರಿನಲ್ಲಿರುವ ಎಲ್ಲಾ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿ ಇ.ಡಿ. ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ. ಪೋಕ್ಸೊ ಮೊದಲ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದ ಶಿವಮೂರ್ತಿ ಮುರುಘಾ ಶರಣರು ಹಾಗೂ ಇತರ ಇಬ್ಬರನ್ನು ಆರೋಪದಿಂದ ಖುಲಾಸೆಗೊಳಿಸಿ ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಲಯ ನ.26ರಂದು ಆದೇಶ ಪ್ರಕಟಿಸಿತ್ತು. ಶರಣರ ವಿರುದ್ಧ ದಾಖಲಾಗಿದ್ದ 2 ಪೋಕ್ಸೊ ಪ್ರಕರಣಗಳ ಪೈಕಿ ಮೊದಲ ಪ್ರಕರಣದ ಆದೇಶ ಹೊರಬಂದಿದ್ದು 2ನೇ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆನೀಡಿದೆ. ಶಿವಮೂರ್ತಿ ಮುರುಘಾ ಶರಣರು ಮಠದ ವ್ಯವಸ್ಥಾಪಕ ಪರಮಶಿವಯ್ಯ ಹಾಗೂ ಮಠದ ಹಾಸ್ಟೆಲ್‌ನ ಮಹಿಳಾ ವಾರ್ಡನ್ ರಶ್ಮಿ ಅವರನ್ನು ದೋಷಮುಕ್ತಗೊಳಿಸಲಾಗಿತ್ತು. ಸದ್ಯ ಕೋರ್ಟ್ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಇವೆರಡು ಪ್ರಕರಣಗಳು ಈ ವರ್ಷದಲ್ಲಿ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾದವು.
ಸಿರಿಗೆರೆಗೆ ಸಾಣೇಹಳ್ಳಿ ಶ್ರೀಗಳ ಭೇಟಿ
ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ 4 ವರ್ಷಗಳ ನಂತರ ಅ.15ರಂದು ತರಳಬಾಳು ಮಠಕ್ಕೆ ಭೇಟಿ ನೀಡಿದ್ದರು. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಆ ವೇಳೆ ಮಠದಲ್ಲಿ ಇರಲಿಲ್ಲ ಹೀಗಾಗಿ ಇಬ್ಬರ ಭೇಟಿ ಸಾಧ್ಯವಾಗಿರಲಿಲ್ಲ. ಅನ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುವ ಮಾರ್ಗಮಧ್ಯೆ ಮಠಕ್ಕೆ ಅವರು ಭೇಟಿ ನೀಡಿದ್ದರು. ಬೃಹನ್ಮಠದ ಆವರಣದಲ್ಲಿನ ಐಕ್ಯಮಂಟಪಕ್ಕೆ ತೆರಳಿದ್ದ ಸಾಣೇಹಳ್ಳಿ ಶ್ರೀ ಅಲ್ಲಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು. ‘ಸಾಣೇಹಳ್ಳಿಯಲ್ಲಿ ನವೆಂಬರ್ ತಿಂಗಳಿನಲ್ಲಿ ರಾಷ್ಟ್ರೀಯ ನಾಟಕೋತ್ಸವ ನಡೆದಿತ್ತು. ಅದರ ಸಮಾರೋಪ ಸಮಾರಂಭಕ್ಕೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯನ್ನು ಆಹ್ವಾನಿಸುವ ದೃಷ್ಟಿಯಿಂದ ಸಿರಿಗೆರೆಗೆ ಬಂದಿದ್ದೆ. ಶ್ರೀಗಳು ಅನ್ಯ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿರುವುದಾಗಿ ತಿಳಿಯಿತು’ ಎಂದು ಸಾಣೇಹಳ್ಳಿ ಶ್ರೀ ಹೇಳಿದ್ದರು. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಭೇಟಿ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಶಿವಮೂರ್ತಿ ಶಿವಾಚಾರ್ಯ ಶ್ರೀ ‘ಮಗುವನ್ನು ಚಿವುಟಿ ಜೋಗುಳ ಹಾಡುವ ಪ್ರಯತ್ನಗಳು ನಿಲ್ಲಲಿ’ ಎಂದಿದ್ದರು.
ಬೆಂಕಿ ಹೊತ್ತಿಸಿಕೊಂಡಿದ್ದ ಆಟೊ ಚಾಲಕ
ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ನ.22ರಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಆಟೊ ಚಾಲಕ ತಿಪ್ಪೇಸ್ವಾಮಿ ಡಿ.23ರಂದು ಮೃತಪಟ್ಟಿದ್ದರು. ಸಂಚಾರ ನಿಯಮ ಉಲ್ಲಂಘನೆ ಆರೋಪದ ಮೇಲೆ ಪೊಲೀಸರು ತಿಪ್ಪೇಸ್ವಾಮಿ ಅವರ ಆಟೊ ತಡೆದಿದ್ದರು. ಇದರಿಂದ ಬೇಸತ್ತಿದ್ದ ಅವರು ಆಟೊ ಬಿಟ್ಟು ತೆರಳಿದ್ದರು. ಕೆಲವೇ ಹೊತ್ತಿನಲ್ಲಿ ಪೆಟ್ರೋಲ್ ಜೊತೆ ಬಂದು ಜನರು ಪೊಲೀಸರು ನೋಡುತ್ತಿದ್ದಂತೆ ಮೈಮೇಲೆ ಅದನ್ನು ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಈ ದೃಶ್ಯಾವಳಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಘಟನೆಯ ನಂತರ ಪೊಲೀಸರು ಹಾಗೂ ಕುಟುಂಬ ಸದಸ್ಯರ ನಡುವೆ ಮಾತುಕತೆ ನಡೆದಿತ್ತು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.