ADVERTISEMENT

ಚಿತ್ರದುರ್ಗ | ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕೋಟೆನಗರಿ ಸಜ್ಜು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 5:44 IST
Last Updated 17 ಫೆಬ್ರುವರಿ 2026, 5:44 IST
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬಿ.ಡಿ. ರಸ್ತೆ ಕನ್ನಡ ಬಾವುಟಗಳಿಂದ ಕಂಗೊಳಿಸುತ್ತಿರುವುದು
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬಿ.ಡಿ. ರಸ್ತೆ ಕನ್ನಡ ಬಾವುಟಗಳಿಂದ ಕಂಗೊಳಿಸುತ್ತಿರುವುದು   

ಚಿತ್ರದುರ್ಗ: ಬರೋಬ್ಬರಿ 6 ವರ್ಷಗಳ ನಂತರ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೋಟೆ ನಗರಿ ಸಿದ್ಧಗೊಂಡಿದೆ. ಸ್ಟೇಡಿಯಂ ರಸ್ತೆಯಲ್ಲಿರುವ ಜಿ.ಜಿ. ಸಮುದಾಯ ಭವನದಲ್ಲಿ ಫೆ.17 ಹಾಗೂ 18ರಂದು ಸಾಹಿತಿ ಕೆ.ಆರ್‌. ಸಂಧ್ಯಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನುಡಿಹಬ್ಬ ನಡೆಯಲಿದೆ.

ಸಾಹಿತ್ಯ ಸಮ್ಮೇಳನದ ಅಂಗವಾಗಿ ಇಡೀ ನಗರ ಕನ್ನಡ ಬಾವುಟದೊಂದಿಗೆ ಕಂಗೊಳಿಸುತ್ತಿದೆ. ಸಮುದಾಯ ಭವನಕ್ಕೆ ದೀಪಾಲಂಕಾರ ಮಾಡಲಾಗಿದೆ. ಸಮುದಾಯ ಭವನದ ಒಳಭಾಗದಲ್ಲಿ 15 ಪುಸ್ತಕ ಮಾರಾಟ ಮಳಿಗೆ ಸ್ಥಾಪನೆ ಮಾಡಲಾಗಿದೆ. ಸಪ್ನ ಬುಕ್ ಸ್ಟಾಲ್ ಸೇರಿದಂತೆ ಹಲವು ಪ್ರಕಾಶಕರು ಈಗಾಗಲೇ ನೋಂದಾಯಿಸಿಕೊಂಡಿವೆ.

ಸಮುದಾಯ ಭವನದ ಹೊರಭಾಗದಲ್ಲಿ ನಾನಾ ವಾಣಿಜ್ಯ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಸದಸ್ಯತ್ವ ನೋಂದಣಿಗೆ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ನೋಂದಣಿ ಮಾಡಿಕೊಂಡವರಿಗೆ ಕಿಟ್‌ ವಿತರಣೆ ಮಾಡಲಾಗುತ್ತಿದೆ. ಇದರಲ್ಲಿ ಟ್ರಾವೆಲ್ ಬ್ಯಾಗ್, ಕನ್ನಡ ಶಾಲು, ಕಿರು ಪುಸ್ತಕ, ವಿಶೇಷ ನಮೂನೆಯ ಬ್ಯಾಡ್ಜ್, ಪೆನ್‌ ನೀಡಲಾಗಿದೆ.

ADVERTISEMENT

ಸಮ್ಮೇಳನಾಧ್ಯಕ್ಷರಾದ ಕೆ.ಆರ್. ಸಂಧ್ಯಾರೆಡ್ಡಿ ಅವರ ಮೆರವಣಿಗೆ ವೇಳೆ 10ಕ್ಕೂ ಹೆಚ್ಚು ಕಲಾ ತಂಡಗಳು ಪಾಲ್ಗೊಳ್ಳಲಿವೆ. ಕನ್ನಡಾಂಬೆ, ಭಾರತಾಂಬೆ, ಗೋಮಾತೆ, ಡೊಳ್ಳು, ವೀರಗಾಸೆ, ಕಹಳೆ, ಟ್ರಾಷ್, ಬೃಹತ್ ಬೊಂಬೆ ಸೇರಿದಂತೆ ನಾನಾ ಕಲಾತಂಡಗಳು ಭಾಗವಹಿಸಲಿವೆ. ಬೆಳಗ್ಗೆ 9ಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಭಂಡಾರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸಮ್ಮೇಳನಾಧ್ಯಕ್ಷರಿಗೆ ಗೌರವ ಸಮರ್ಪಿಸಲಿದ್ದಾರೆ. ಮೆರವಣಿಗೆ ನೀಲಕಂಠೇಶ್ವರ ದೇವಾಲಯದಿಂದ ಆರಂಭಗೊಂಡು ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ಮದಕರಿ ವೃತ್ತದ ಮೂಲಕ ಹಾದು ಜೋಗಿಮಟ್ಟಿ ರಸ್ತೆ ಮೂಲಕ ಜಿ.ಜಿ. ಸಮುದಾಯ ಭವನ ತಲುಪಲಿದೆ.

ಸಮ್ಮೇಳನದಲ್ಲಿ ಐದು ಗೋಷ್ಠಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಜೀವಾಳ ಭದ್ರೆಯ ಭವಿಷ್ಯ , ಕೋಟೆ ನಾಡಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಮಠಮಾನ್ಯಗಳ ಸಾಂಸ್ಕೃತಿಕ ಅನನ್ಯತೆ, ಪುಸ್ತಕೋದ್ಯಮ ಮತ್ತು ಕನ್ನಡ ಭಾಷಾಭಿವೃದ್ಧಿ ಹಾಗೂ ಕವಿಗೋಷ್ಠಿ ನಡೆಯಲಿವೆ. ಸಮ್ಮೇಳನವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ. ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸ್ಮರಣ ಸಂಚಿಕೆಯ ಮುಖಪುಟ ಬಿಡುಗಡೆಗೊಳಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಶಾಸಕ ಕೆ.ಸಿ. ವೀರೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.

ಎರಡನೇ ದಿನದ ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕ ಬಂಜಗೆರೆ ಜಯಪ್ರಕಾಶ್ ಸಮಾರೋಪ ಭಾಷಣ ಮಾಡಲಿದ್ದಾರೆ. ಸಮ್ಮೇಳನದಲ್ಲಿ ಆಸಕ್ತ ನೌಕರರು ಭಾಗವಹಿಸುವಂತೆ ಎರಡು ದಿನಗಳ ಒಒಡಿ ಸೌಲಭ್ಯ ಒದಗಿಸಲಾಗಿದೆ.

6 ವರ್ಷಗಳ ನಂತರ ಜಿಲ್ಲಾ ಕೇಂದ್ರದಲ್ಲಿ ಸಮ್ಮೇಳನ 2 ದಿನಗಳ ಕಾಲ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆಗಳಿಗೆ ಅವಕಾಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.