
ಚಿತ್ರದುರ್ಗ: ‘ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಫೆ. 20ರಿಂದ 3 ದಿನಗಳು 33ನೇ ಫಲ–ಪುಷ್ಪ ಪ್ರದರ್ಶನ ನಡೆಯಲಿದ್ದು, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಾಲಯ, ಐತಿಹಾಸಿಕ ಕಲ್ಲಿನಕೋಟೆ, ಒಂಟಿಕಲ್ಲು ಬಸವಣ್ಣ, ಒನಕೆ ಓಬವ್ವ, ಸಾಲುಮರದ ತಿಮ್ಮಕ್ಕ ಸೇರಿದಂತೆ ವಿವಿಧ ಕಲಾಕೃತಿಗಳ ಪ್ರದರ್ಶನ ವಿಶೇಷ ಆಕರ್ಷಣೆಯಾಗಿರಲಿವೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಆಕಾಶ್ ಹೇಳಿದರು.
‘ಜಿಲ್ಲಾ ಫಲ–ಪುಷ್ಪ ಪ್ರದರ್ಶನ ಪ್ರತಿ ವರ್ಷವೂ ನಡೆಯುತ್ತಿದ್ದು ವಿವಿಧ ಜಾತಿಯ ಹೂವು, ಹಣ್ಣು, ತರಕಾರಿ ಮತ್ತು ಹಲವು ವಿಶೇಷ ಬಗೆಯ ಅಲಂಕಾರಿಕಾ ಗಿಡಗಳನ್ನು ಬೆಳೆಸಿ ಪ್ರದರ್ಶಿಸಲಾಗುತ್ತಿದೆ. ಜಾನೂರ್ ಕಲಾಕೃತಿಗಳು, ಜೇನು ನೊಣಗಳ ಪರಾಗಸ್ಪರ್ಶ ಕಲಾಕೃತಿ, ಕುಬ್ಜ ಮರ ಗಿಡಗಳು, ತರಕಾರಿ ಕೆತ್ತನೆ, ಅಲಂಕಾರಿಕಾ ಗಿಡಗಳ ಜೋಡಣೆ ಹಾಗೂ ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ಏರ್ಪಡಿಸಲಾಗಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಮಾಡಿದಷ್ಟು ನೀಡು ಭಿಕ್ಷೆ’ ಎಂಬ ತತ್ವ ಭೋದಿಸಿ ಈ ಭಾಗದ ಜನರ ಆರಾಧ್ಯ ದೈವವಾಗಿರುವ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ, ಹೊರಮಠ, ಒಳಮಠದ ಕಲಾಕೃತಿಗಳನ್ನು ರೂಪಿಸಲಾಗಿದೆ. ಜಾನೂರು ಕಲೆ ಇಂಡೊನೇಷ್ಯಾದಲ್ಲಿ ಜಾನೂರು ಕೂನಿಂಗ್ ಎಂದು ಪರಿಚಿತವಾಗಿರುತ್ತದೆ. ತೆಂಗಿನ ಗರಿ ಬಳಸಿ ಮಾಡುವ ಸಾಂಪ್ರದಾಯಿಕ ಕಲೆಯಾಗಿದೆ. ಹಸಿರು ಮತ್ತು ಹಳದಿ ಎಲೆ ಬಣ್ಣಗಳನ್ನು ಬಳಸಿ ವಿಶಿಷ್ಟ ವಿನ್ಯಾಸಗಳನ್ನು ರೂಪಿಸಲಾಗಿದೆ. ಗರಿಯಿಂದ ರೂಪಿಸಿದ ಕಲೆ ಪ್ರದರ್ಶನದಲ್ಲಿ ರಾರಾಜಿಸಲಿದೆ’ ಎಂದರು.
ಜೇನು ನೊಣಗಳ ಪರಾಗಸ್ಪರ್ಶ: ‘ಜಗತ್ತಿನಲ್ಲಿ ಬೆಳೆಯುವ ಬೆಳೆಗಳ ಉತ್ಪಾದನೆ ಪರಾಗಸ್ಪರ್ಶದ ಮೇಲೆ ಅವಲಂಬಿತವಾಗಿದೆ. ಹವಮಾನ ಬದಲಾವಣೆ, ರಾಸಾಯನಿಕ, ಕೀಟನಾಶಕಗಳ ಬಳಕೆ, ಪರಿಸರ ಮಾಲಿನ್ಯ, ಆವಾಸ ಸ್ಥಾನಗಳ ಅಳಿವು ಮುಂತಾದ ಕಾರಣಗಳಿಂದ ಪರಾಗಸ್ಪರ್ಶ ಕ್ರಿಯೆ ಅವನತಿ ಉಂಟಾಗುತ್ತಿದೆ. ಈ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಹೂವು, ಜೇನು ನೊಣಗಳ ಕಲಾಕೃತಿಗಳನ್ನು ಆಕರ್ಷಕವಾಗಿ ಪ್ರದರ್ಶಿಸಲಾಗುವುದು’ ಎಂದರು.
‘ಸಾಲುಮರದ ತಿಮ್ಮಕ್ಕ ರಾಜ್ಯದ ಮಹಾನ್ ಪರಿಸರ ಪ್ರೇಮಿಯಾಗಿದ್ದು, ಸಸಿ ನೆಟ್ಟು ಮಕ್ಕಳಂತೆ ಪೋಷಣೆ ಮಾಡಿದ್ದಾರೆ, ಮರವಾಗಿ ಬೆಳೆಸಿದ್ದಾರೆ. ವೃಕ್ಷಮಾತೆಯಾಗಿ ಪ್ರಸಿದ್ಧಿ ಪಡೆದಿದ್ದಾರೆ. ಅವರ ಅದಮ್ಯ ಪರಿಸರ ಪ್ರೇಮ ಮತ್ತು ಸೇವೆ ನಮ್ಮಗೆಲ್ಲರಿಗೂ ಚಿರಸ್ಥಾಯಿಯಾಗಿದೆ. ಅವರ ಕಲಾಕೃತಿಯನ್ನು ವಿಶೇಷವಾಗಿ ಪ್ರದರ್ಶಿಸಲಾಗುತ್ತಿದೆ’ ಎಂದರು.
‘ಜಟಕಾ ಬಂಡಿ, ಹುಡುಗ, ಹುಡುಗಿ, ಟಾಂಗಾ ಹಾಗೂ ಕುದುರೆ ಕಲಾಕೃತಿಗಳಿಗೆ ಹೂವಿನಿಂದ ಹೊಸ ರೂಪ ನೀಡಲಾಗುತ್ತಿದೆ. ಕಲ್ಲಿನಕೋಟೆಯ ಉಯ್ಯಾಲೆ ಕಂಬದ ಕಲಾಕೃತಿಯನ್ನು ವಿಶೇಷವಾಗಿ ಪ್ರದರ್ಶಿಸಲಾಗುವುದು. ಕ್ರಿಕೆಟ್ ಪ್ರಿಯರ ಮನರಂಜನೆಗಾಗಿ ಟಿ–20 ವಿಶ್ವಕಪ್ ಆಡುತ್ತಿರುವ ಭಾರತ ತಂಡಕ್ಕೆ ಶುಭಾಶಯ ಕೋರುವ ತಂಡದ ಸದಸ್ಯರ ಮುಖಗಳ ಕಲಾಕೃತಿಗಳನ್ನು ಕಲ್ಲಂಗಡಿಯಲ್ಲಿ ಕೆತ್ತನೆ ಮಾಡಿ ಪ್ರದರ್ಶಿಸಲಾಗುವುದು’ ಎಂದರು.
‘ಅಂದಾಜು 70ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಹೂವಿನ ಗಿಡ ಬೆಳೆಸಲಾಗಿದೆ. ಚಿತ್ರದುರ್ಗದ ಖ್ಯಾತ ಚಿತ್ರಕಲಾವಿದರಿಂದ ಅಕ್ರಾಲಿಕ್, ಜಲವರ್ಣ ಚಿತ್ರಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಫಲಪುಷ್ಪದಲ್ಲಿ ಜಲಾಪಾತಗಳು ಹರಿಯಲಿವೆ. ಜಿಲ್ಲೆಯ ವಿವಿಧ ಇಲಾಖೆಗಳಿಂದ ತಮ್ಮ ಇಲಾಖೆ ಮಾಹಿತಿ ನೀಡುವ ಮಳಿಗೆ ಸ್ಥಾಪನೆ ಮಾಡಲಾಗುವುದು. ಜೊತೆಗೆ ಮಾರಾಟ ಮಳಿಗೆಗಳೂ ಸ್ಥಾಪನೆಗೊಳ್ಳಲಿವೆ’ ಎಂದರು.
‘ಪ್ರದರ್ಶನದ ಅಂಗವಾಗಿ ನಗರದ ವಿವಿಧ ಶಾಲೆಗಳ ಶಾಲಾ ವಿದ್ಯಾರ್ಥಿಗಳಿಗೆ ಜಾನಪದ ಹಾಗೂ ಭಾವಗೀತೆ ಸ್ಪರ್ಧೆ, ಚಿತ್ರಕಲಾ ಸ್ಟರ್ಧೆ, ಪ್ರಬಂಧ ಸ್ಪರ್ಧೆ, ಹಣ್ಣು ಮತ್ತು ಹೂ ತರಕಾರಿ ಬಳಸಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆ, ಚಿಕ್ಕ ಮಕ್ಕಳಿಗೆ ಹಣ್ಣು ಮತ್ತು ತರಕಾರಿಗಳ ಗುರುತಿಸುವ ಸ್ಪರ್ಧೆ ಏರ್ಪಡಿಸಲಾಗಿದೆ. ಸಾರ್ವಜನಿಕರಿಗೆ ರಂಗೋಲಿ ಸ್ಪರ್ಧೆ, ಮನೆಯ ಆವರಣದಲ್ಲಿ ವಿವಿಧ ಜಾತಿಯ ಅಲಂಕಾರಿಕ ಕುಂಡಗಳ ಜೋಡಣೆ, ಮನೆ, ಸಂಸ್ಥೆಗಳ ಆವರಣದಲ್ಲಿ ಉದ್ಯಾನ ನಿರ್ಮಿಸಿದವರಿಗೆ ಸ್ಪರ್ಧೆ ಏರ್ಪಡಿಸಲಾಗಿದೆ’ ಎಂದರು.
ತೋಟಗಾರಿಕೆ ಜಂಟಿ ನಿರ್ದೇಶಕಿ ಜಿ. ಸವಿತಾ, ರಾಜ್ಯವಲಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಟಿ. ತೋಟಯ್ಯ, ಜಿಲ್ಲಾ ತೋಟಗಾರಿಕೆ ಸಂಘದ ಜಂಟಿ ಕಾರ್ಯದರ್ಶಿ ಗಿರೀಶ್, ಖಜಾಂಚಿ ನಾಗರಾಜ್ ಬೇದ್ರೆ, ಹಿರಿಯ ಸಲಹೆಗಾರ ಜಿ.ಎಸ್. ಉಜ್ಜೀನಪ್ಪ, ನಿರ್ದೇಶಕರಾದ ಸುಮನಾ ಅಂಗಡಿ, ಸತ್ಯನಾರಾಯಣ ನಾಯ್ಡು, ಶ್ವೇತಾ ವಿಶ್ವನಾಥ್, ರೀನಾ ವೀರಭದ್ರಪ್ಪ ಇದ್ದರು.
ವೇಣು ಕೃತಿಗಳಿಗೆ ಕಲಾಕೃತಿ ರೂಪ
‘ಫಲಪುಷ್ಪ ಪ್ರದರ್ಶನದಲ್ಲಿ ಹಿರಿಯ ಸಾಹಿತಿ ಕತೆಗಾರ ಬಿ.ಎಲ್. ವೇಣು ಅವರ ಸಾಹಿತ್ಯ ಕೃಷಿಗೆ ಕಲಾಕೃತಿ ರೂಪ ನೀಡಲಾಗಿದೆ. ಕಥಾ ಸಂಕಲನ ಕಾದಂಬರಿ ನಾಟಕ ಐತಿಹಾಸಿಕ ಕಾದಂಬರಿ ಅಂಕಣ ಬರಹ ಕ್ಷೇತ್ರದಲ್ಲಿ ಅವರು ಪ್ರಸಿದ್ಧಿ ಪಡೆದಿದ್ದಾರೆ. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಕಲಾಕೃತಿ ಪ್ರದರ್ಶನ ಮಾಡಲಾಗುತ್ತಿದೆ’ ಎಂದು ಸಿಇಒ ಆಕಾಶ್ ಹೇಳಿದರು. ‘ಹಲವು ಚಲನಚಿತ್ರಗಳಿಗೆ ಚಿತ್ರಕತೆ ಸಂಭಾಷಣೆ ಬರೆದಿದ್ದಾರೆ. ಪರಾಜಿತ ಪ್ರೇಮ ಪರ್ವ ಪೂವಿಳಂಗು (ತಮಿಳು) ಪ್ರೀತಿ ವಾತ್ಸಲ್ಯ ಒಲವಿನ ಉಡುಗೊರೆ ದೇವ ವೀರಪ್ಪ ನಾಯಕ ಆಟೊ ಶಂಕರ್ ಚಿತ್ರಗಳು ಶತದಿನ ಕಂಡಿವೆ. ಅವರ 19 ಕಾದಂಬರಿಗಳು ಚಲನಚಿತ್ರಗಳಾಗಿವೆ. ಬಿ.ಎಲ್. ವೇಣು ಅವರು ಚಿತ್ರದುರ್ಗದ ಹೆಮ್ಮೆಯಾಗಿದ್ದು ಕಲಾಕೃತಿಗಳ ಮೂಲಕ ಅವರನ್ನು ಗೌರವಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.