ADVERTISEMENT

ಚಿತ್ರದುರ್ಗ | ಕಲ್ಲಿನಕೋಟೆ ಗಡಿ ಸಂರಕ್ಷಣೆಗಾಗಿ ಜಂಟಿ ಸಮೀಕ್ಷೆ

ಎಂ.ಎನ್.ಯೋಗೇಶ್‌
Published 21 ಜನವರಿ 2026, 5:21 IST
Last Updated 21 ಜನವರಿ 2026, 5:21 IST
ಎಎಸ್‌ಐ ಹಾಗೂ ತಾಲ್ಲೂಕು ಆಡಳಿತದ ಸರ್ವೇಯರ್‌ಗಳು ಕೋಟೆ ಗಡಿ ಸಮೀಕ್ಷೆ ನಡೆಸುತ್ತಿರುವುದು
ಎಎಸ್‌ಐ ಹಾಗೂ ತಾಲ್ಲೂಕು ಆಡಳಿತದ ಸರ್ವೇಯರ್‌ಗಳು ಕೋಟೆ ಗಡಿ ಸಮೀಕ್ಷೆ ನಡೆಸುತ್ತಿರುವುದು   

ಚಿತ್ರದುರ್ಗ: ಐತಿಹಾಸಿಕ ಕಲ್ಲಿನಕೋಟೆ ಗಡಿಯನ್ನು ಒತ್ತುವರಿಯಿಂದ ಸಂರಕ್ಷಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್‌ಐ) ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿವೆ. ಆ ಮೂಲಕ ಗಡಿ ಸಂಬಂಧಿತ ಗೊಂದಲಗಳ ನಿವಾರಣೆಗೆ ಹೊಸ ಹೆಜ್ಜೆ ಇಟ್ಟಿವೆ.

ಕೋಟೆ ಸುತ್ತಮುತ್ತಲಿನ ಐತಿಹಾಸಿಕ ಖಾಲಿ ಜಾಗಗಳನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದಾರೆ. ಕೆಲವರು ಖಾಲಿ ಜಾಗ ತಮ್ಮದೆಂದು ಕಾಂಪೌಂಡ್‌ ಕಟ್ಟಿಕೊಂಡಿದ್ದಾರೆ. ಸ್ಥಳೀಯ ಆಡಳಿತಗಳು ಕೂಡ ಖಾಸಗಿಯವರ ಹೆಸರಿಗೆ ನೋಂದಣಿ ಮಾಡಿಕೊಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ಕೋಟೆ ನೂರಾರು ವರ್ಷಗಳ ಇತಿಹಾಸ ಹೊಂದಿದ್ದರೂ ಇಲ್ಲಿಯವರೆಗೆ ಗಡಿ ಗುರುತು ಮಾಡಿಲ್ಲ.

ಸ್ಮಾರಕಗಳ ನಿರ್ವಹಣೆ ಸಂಬಂಧ ಎಎಸ್‌ಐ ಹಾಗೂ ರಾಜ್ಯ ಪುರಾತತ್ವ ಇಲಾಖೆ ನಡುವೆ ಗೊಂದಲಗಳಿವೆ. ಅದರ ನಿವಾರಣೆಗಾಗಿ ಈಚೆಗೆ ಎಎಸ್‌ಐ ಅಧಿಕಾರಿಗಳು ಸಮೀಕ್ಷೆಗಾಗಿ ಚಿತ್ರದುರ್ಗ ತಹಶೀಲ್ದಾರ್‌ ಅವರನ್ನು ಕೋರಿದ್ದರು. ಅದರಂತೆ ತಾಲ್ಲೂಕು ಸರ್ವೇಯರ್‌ ಹಾಗೂ ಎಎಸ್‌ಐ ಅಧಿಕಾರಿಗಳ ನೇತೃತ್ವದಲ್ಲಿ 2025ರ ಡಿಸೆಂಬರ್‌ ತಿಂಗಳಲ್ಲಿ 10 ದಿನಗಳ ಕಾಲ ಸಮೀಕ್ಷೆ ನಡೆಸಲಾಗಿದೆ.

ADVERTISEMENT

ಎಎಸ್‌ಐ ಬೆಂಗಳೂರು ಕಚೇರಿಯ ಸಹಾಯಕ ಅಧೀಕ್ಷಕ ವೀರ ರಾಘವನ್‌, ಚಿತ್ರದುರ್ಗದ ಕೋಟೆ ಹಿರಿಯ ಸಹಾಯಕ ಸಂರಕ್ಷಣಾಧಿಕಾರಿ ಹರೀಶ್‌ ರಾಮ್‌ (ಸದ್ಯ ವರ್ಗಾವಣೆಯಾಗಿದ್ದಾರೆ) ನೇತೃತ್ವದಲ್ಲಿ ಎಎಸ್‌ಐ ಸರ್ವೇಯರ್‌ಗಳು ಹಾಗೂ ತಾಲ್ಲೂಕು ಆಡಳಿತದ ಸರ್ವೇಯರ್‌ಗಳು ಜಂಟಿಯಾಗಿ ಸಮೀಕ್ಷೆ ನಡೆಸಿದ್ದಾರೆ. ಈ ಸಂಬಂಧ ಕೋಟೆಯ ಸುತ್ತಮುತ್ತಲಿನ ಕೆಲವು ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ನೀಡಿದ್ದಾರೆ. ಗಡಿ ಸಂಬಂಧ ಎಎಸ್‌ಐ ಅಧಿಕಾರಿಗಳ ಬಳಿ ಇರುವ ದಾಖಲೆ, ತಾಲ್ಲೂಕು ಆಡಳಿತದಲ್ಲಿರುವ ದಾಖಲೆಗಳ ಅನುಸಾರ ಸಮೀಕ್ಷೆ ನಡೆಸಲಾಗಿದೆ.

‘ಭಾರತೀಯ ಪುರಾತತ್ವ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿ ಕೆಲವರು ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂಬ ದೂರುಗಳಿವೆ. ನಮ್ಮ ವ್ಯಾಪ್ತಿಯ ಜಾಗ ಸಂರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಜಂಟಿ ಸಮೀಕ್ಷೆ ನಡೆಸಲಾಗಿದೆ’ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಎಎಸ್‌ಐ ಸಿಬ್ಬಂದಿಯೊಬ್ಬರು ತಿಳಿಸಿದ್ದರು.

‘ಕಲ್ಲಿನಕೋಟೆಗೆ ಗಡಿ ಇಲ್ಲದಿದ್ದರೂ ಮೇಲುದುರ್ಗ ವ್ಯಾಪ್ತಿಯ ಬೆಟ್ಟದ ಸುತ್ತ ಬೇಲಿಯನ್ನಷ್ಟೇ ಹಾಕಲಾಗಿದೆ. ಬೇಲಿಯಿಂದ ಹೊರಗಿರುವ ಸ್ಮಾರಕಗಳು ತಮಗೆ ಸೇರಿಲ್ಲ ಎಂದು ಎಎಸ್‌ಐ ಅಧಿಕಾರಿಗಳು ಹೇಳುತ್ತಾರೆ. ರಾಜ್ಯ ಪುರಾತತ್ವ ಇಲಾಖೆಯವರೂ ತಮಗೆ ಸೇರಿಲ್ಲ ಎನ್ನುತ್ತಾರೆ. ಸಮೀಕ್ಷಾ ವರದಿ ಇದಕ್ಕೆ ಪರಿಹಾರವಾಗಲಿದೆ’ ಎಂದು ಮೂಲಗಳು ಹೇಳಿವೆ.

‘ಸರಹದ್ದು ಗುರುತು ಮಾಡದ ಕಾರಣ ಕೋಟೆಯ ಬಸವನ ಬುರುಜು ಸ್ಮಾರಕದ ಹಿಂಬದಿಯಲ್ಲಿ ನೂರಾರು ಮನೆಗಳು ಅಕ್ರಮವಾಗಿ ತಲೆ ಎತ್ತಿದ್ದವು. ಅವುಗಳಿಗೆ ನಗರಸಭೆಯೇ ಸಾಲ ಸೌಲಭ್ಯ ನೀಡಿತ್ತು. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಮೊಹಮ್ಮದ್‌ ಸಾದಿಕ್‌ ಅವುಗಳನ್ನು ಸ್ಥಳಾಂತರ ಮಾಡಿಸಿದ್ದರು. ಇದಾದ ನಂತರ ಗಡಿ ಸಂರಕ್ಷಣೆ ಮಾಡಿಕೊಳ್ಳದ ಕಾರಣ ಮತ್ತೆ ಅದೇ ಜಾಗದಲ್ಲಿ ಕೆಲವರು ಮನೆ ಕಟ್ಟಿಕೊಂಡಿದ್ದಾರೆ. ಗಡಿ ಗುರುತಾದರೆ ಈಗ ಮತ್ತೊಮ್ಮೆ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಲಿದೆ’ ಎಂದು ವಕೀಲ ಸಿ.ಮಂಜುನಾಥ್‌ ಹೇಳಿದರು.

ಎಎಸ್‌ಐ ಬಳಿಯಿರುವ ದಾಖಲೆಗಳ ಅನುಸಾರ ಪ್ರಾಥಮಿಕ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷಾ ವರದಿಯನ್ನು ತಾಲ್ಲೂಕು ಆಡಳಿತಕ್ಕೆ ನೀಡಲಾಗಿದ್ದು ಅವರು ಮುಂದಿನ ಕ್ರಮ ವಹಿಸಲಿದ್ದಾರೆ
ವೀರ ರಾಘವನ್‌ ಸಹಾಯಕ ಅಧೀಕ್ಷಕ ಎಎಸ್‌ಐ ಬೆಂಗಳೂರು
ಕಲ್ಲಿನಕೋಟೆಯ ಗಡಿ ಗುರುತು ಮಾಡಲು ಮೊದಲು ನಕ್ಷೆ ಸಿದ್ಧಗೊಳ್ಳಬೇಕಿದೆ. ನಂತರ ಎಲ್ಲಾ ದಾಖಲೆಗಳಲ್ಲೂ ಗಡಿ ಗುರುತು ಮಾಡಲಾಗುತ್ತದೆ. ಪ್ರಾಥಮಿಕ ವರದಿ ಪರಿಶೀಲಿಸಲಾಗುವುದು
ಟಿ.ವೆಂಕಟೇಶ್‌ ಜಿಲ್ಲಾಧಿಕಾರಿ

ಕಟ್ಟಡ ಮಾಲೀಕರಿಂದ ನಿಯಮ ಉಲ್ಲಂಘನೆ ಭಾರತೀಯ ಪುರಾತತ್ವ ಕಾಯ್ದೆ ಅನುಸಾರ ಕೋಟೆಯ ಆಸುಪಾಸಿನಲ್ಲಿರುವ ಪ್ರದೇಶಗಳನ್ನು 2 ಹಂತದಲ್ಲಿ ಗುರುತಿಸಲಾಗಿದೆ. 100 ಮೀಟರ್‌ ವ್ಯಾಪ್ತಿಯನ್ನು ನಿರ್ಬಂಧಿತ ಪ್ರದೇಶ 300 ಮೀಟರ್‌ ವ್ಯಾಪ್ತಿಯ ಪ್ರದೇಶವನ್ನು ನಿಯಂತ್ರಿತ ಪ್ರದೇಶ ಎಂದು ಗುರುತಿಸಲಾಗಿದೆ. ‘ನಿರ್ಬಂಧಿತ ಪ್ರದೇಶದಲ್ಲಿ ಯಾವುದೇ ಕಾಮಗಾರಿ ನಡೆಸುವಂತಿಲ್ಲ ನಿಯಂತ್ರಿತ ಪ್ರದೇಶದಲ್ಲಿ ಕಾಮಗಾರಿ ಮಾಡಲು ‘ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರ’ದಿಂದ ಅನುಮತಿ ಪಡೆಯಬೇಕು. ಆದರೆ ಕಲ್ಲಿನಕೋಟೆ ಸುತ್ತಮುತ್ತ ಖಾಸಗಿ ಕಟ್ಟಡ ಮಾಲೀಕರು ಯಾವುದೇ ಅನುಮತಿ ಪಡೆಯದೇ ಕಾಮಗಾರಿ ನಡೆಸುತ್ತಿದ್ದಾರೆ’ ಎಂದು ಎಎಸ್ಐ ಅಧಿಕಾರಿಯೊಬ್ಬರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.