ಚಿತ್ರದುರ್ಗ: ಐತಿಹಾಸಿಕ ಕಲ್ಲಿನಕೋಟೆ ಸುತ್ತಮುತ್ತ ಅತಿಕ್ರಮಣದಾರರ ಹಾವಳಿ ಹೆಚ್ಚಾಗಿದ್ದು, ಕೋಟೆಯ ಆಸುಪಾಸಿನ ಜಾಗಗಳಿಗೆ ಕಾಂಪೌಂಡ್ ಕಟ್ಟಿಕೊಂಡಿದ್ದಾರೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್‌ಐ) ಇಲಾಖೆ ಹಾಗು ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಇತಿಹಾಸ ಪ್ರಸಿದ್ಧ ಸ್ಥಳಗಳು ಖಾಸಗಿ ವ್ಯಕ್ತಿಗಳ ಪಾಲಾಗುತ್ತಿವೆ.
ಭಾರತೀಯ ಪುರಾತತ್ವ ಕಾಯ್ದೆ, ಸುಪ್ರೀಂ ಕೋರ್ಟ್ ಆದೇಶದಂತೆ ಐತಿಹಾಸಿಕ ಸ್ಮಾರಕದ 300 ಮೀಟರ್ ವ್ಯಾಪ್ತಿಯಲ್ಲಿ ಖಾಸಗಿ ಕಟ್ಟಡಗಳು ಇರುವಂತಿಲ್ಲ. ಆದರೆ, ಕಲ್ಲಿನಕೋಟೆ 100 ಮೀಟರ್ ಅಂತರದಲ್ಲೇ ಖಾಸಗಿ ಕಟ್ಟಡಗಳು ತಲೆ ಎತ್ತಿದ್ದು ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಒತ್ತುವರಿ ನಿರಾತಂಕವಾಗಿ ನಡೆಯುತ್ತಿದ್ದರೂ ಜಿಲ್ಲಾಡಳಿತ, ನಗರಸಭೆ, ಎಎಸ್‌ಐ, ರಾಜ್ಯ ಪುರಾತತ್ವ ಇಲಾಖೆ ಕಣ್ಣುಮುಚ್ಚಿ ಕುಳಿತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಲ್ಲಿನಕೋಟೆಗೆ ಪೂರ್ವ ಭಾಗದಲ್ಲಿರುವ ಲಾಲ್‌ಕೋಟೆ ಬಾಗಿಲು (ಜೋಡು ಬತ್ತೇರಿ ಬಾಗಿಲು) ಅಪರೂಪದ ಸ್ಮಾರಕವಾಗಿದ್ದು, ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇದು ಕಿಡಿಗೇಡಿಗಳ ಆವಾಸಸ್ಥಾನವಾಗಿದ್ದು, ಪ್ರವಾಸಿಗರು ಭೇಟಿ ನೀಡದಂತಾಗಿದೆ. ಸುತ್ತಲೂ ಗಿಡಗಂಟಿಗಳು ಬೆಳೆದಿರುವ ಕಾರಣ ಇಲ್ಲೊಂದು ಸ್ಮಾರಕವಿದೆ ಎಂಬುದೇ ತಿಳಿಯುವುದಿಲ್ಲ.
ಲಾಲ್‌ಕೋಟೆ ದ್ವಾರಕ್ಕೆ ಹೊಂದಿಕೊಂಡಂತೆ 2–3 ಎಕರೆ ಜಾಗದಲ್ಲಿ ಸಿಮೆಂಟ್ ಬ್ಲಾಕ್ ಬಳಸಿ ಖಾಸಗಿ ವ್ಯಕ್ತಿಗಳು ಕಾಂಪೌಂಡ್ ಹಾಕಿಕೊಂಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೋಟೆಯ ಕಲ್ಲುಗಳನ್ನು ಸ್ಪರ್ಶಿಸಿದಂತೆ ಕಾಂಪೌಂಡ್ ನಿರ್ಮಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಅಧಿಕಾರಿಗಳ ಬೆಂಬಲದಿಂದಲೇ ಕಾಂಪೌಂಡ್ ಹಾಕಿದ್ದಾರೆ ಎಂದು ಆರೋಪಿಸುತ್ತಾರೆ.
‘ಲಾಲ್‌ಕೋಟೆ ಬಾಗಿಲ ಬಳಿ ಯಾರೇ ಹೋಗಿ ನಿಂತರೂ ಕೋಟೆ ಜಾಗದಲ್ಲಿ ಏಕೆ ಕಾಂಪೌಂಡ್ ಹಾಕಿಕೊಂಡಿದ್ದಾರೆ ಎಂಬ ಪ್ರಶ್ನೆ ಮೂಡುತ್ತದೆ. ಸಾಮಾನ್ಯ ಜನರಿಗೆ ಬರುವ ಪ್ರಶ್ನೆ ಅಧಿಕಾರಿಗಳಿಗೆ ಬಾರದಿರುವುದು ಸೋಜಿಗ ಮೂಡಿಸುತ್ತದೆ. ಕೋಟೆಯಿಂದ ಈ ಕಾಂಪೌಂಡ್ ಕೇವಲ 100 ಮೀಟರ್ ದೂರದಲ್ಲಿದ್ದು ಎಎಸ್‌ಐನವರು ಪರಿಶೀಲನೆ ನಡೆಸಿ ಐತಿಹಾಸಿಕ ಜಾಗವನ್ನು ಸಂರಕ್ಷಿಸಬೇಕು’ ಎಂದು ವಕೀಲ ಅಜಿತ್ ಜೋಗಿ ಒತ್ತಾಯಿಸಿದರು.
ಲಾಲ್‌ಕೋಟೆ ಬಾಗಿಲು ಮಾತ್ರವಲ್ಲದೇ ಕೋಟೆಯ ಸುತ್ತಲೂ ಹಲವು ಪ್ರದೇಶಗಳು ಅತಿಕ್ರಮಣಕ್ಕೆ ಒಳಗಾಗಿವೆ. ಕೋಟೆಯ ಪಶ್ಚಿಮ ಭಾಗದಲ್ಲಿ ಚಂದ್ರವಳ್ಳಿ ರಸ್ತೆಯಲ್ಲಿರುವ ಮೈದಾನ ಪ್ರದೇಶವನ್ನೂ ಕಬಳಿಸಲು ಹಲವು ಪ್ರಭಾವಿಗಳು ಹವಣಿಸುತ್ತಿದ್ದಾರೆ. ಹಲವರು ಸರ್ಕಾರಿ ಜಾಗವನ್ನು ತಮ್ಮದು ಎಂದು ಬೇಲಿ ಹಾಕಿಕೊಂಡಿದ್ದಾರೆ. ಕೆಲ ಅಂಗಡಿಗಳ ಮಾಲೀಕರು ಆ ಪ್ರದೇಶದಲ್ಲಿ ತ್ಯಾಜ್ಯ ತಂದು ಸುರಿಯುವ ಜಾಗ ಮಾಡಿಕೊಂಡಿದ್ದಾರೆ.
ಚಂದ್ರವಳ್ಳಿ ರಸ್ತೆಯ ಎರಡೂ ಕಡೆ ಇರುವ ಹತ್ತಾರು ಎಕರೆ ಮೈದಾನದಲ್ಲಿ ಸ್ಥಳೀಯ ನಿವಾಸಿಗಳು ವಿಹಾರ ಮಾಡುತ್ತಾರೆ. ಹಲವರು ಅಲ್ಲಿಯ ಜಾಗಗಳಿಗೆ ಬೇಲಿ ಹಾಕಿಕೊಂಡಿರುವ ಕಾರಣ ವಿಹಾರಿಗಳಿಗೂ ತೊಂದರೆಯಾಗಿದೆ. ಇನ್ನೂ ಕೆಲ ಕಿಡಿಗೇಡಿಗಗಳು ಈ ಜಾಗವನ್ನು ಕುಡಿಯುವ ಅಡ್ಡೆ ಮಾಡಿಕೊಂಡಿದ್ದಾರೆ.
‘ಚಂದ್ರವಳ್ಳಿ ಭಾಗದ ನೂರಾರು ಎಕರೆ ಜಾಗವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಬೇಕು. ಕನ್ನಡದ ಮೊಟ್ಟಮೊದಲ ದೊರೆ ಮಯೂರ ವರ್ಮನ ಕಾಲದಲ್ಲಿ ಈ ಜಾಗ ಸೈನಿಕ ತರಬೇತಿ ತಾಣವಾಗಿತ್ತು ಎಂದು ಇತಿಹಾಸದಲ್ಲಿ ದಾಖಲಿಸಲಾಗಿದೆ. ಇಲ್ಲಿ ಅಗತ್ಯವಾಗಿ ಉತ್ಖನನ ನಡೆಯಬೇಕು. ಹೀಗಾಗಿ ಈ ಜಾಗವನ್ನು ಖಾಸಗಿಯವರು ಅತಿಕ್ರಮಣ ಮಾಡಿಕೊಳ್ಳುವುದನ್ನು ತಡೆಯಬೇಕು’ ಎಂದು ಇತಿಹಾಸ ಸಂಶೋಧಕ ಮಹಾಂತೇಶ್ ಹೇಳಿದರು.
ಕೋಟೆ ಸಮೀಪ ಹಿಂದಿನಿಂದಲೂ ಖಾಸಗಿ ಜಾಗಗಳಿವೆ. ಇದು ಸಂರಕ್ಷಿತ ಪ್ರದೇಶವೇ ಎಂದು ಪರಿಶೀಲಿಸಬೇಕು. ಈ ಬಗ್ಗೆ ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರಾ ಇಲಾಖೆಗೆ ಪತ್ರ ಬರೆಯಲಾಗಿದೆ.ಜಿ.ಪ್ರಹ್ಲಾದ್ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ
ಮುಖ್ಯ ಕಾರ್ಯದರ್ಶಿಗೆ ದೂರು:
ಲಾಲ್‌ಕೋಟೆ ಬಾಗಿಲು ಚಂದ್ರವಳ್ಳಿ ರಸ್ತೆ ಜಾಗವನ್ನು ಖಾಸಗಿಯವರು ಕಬಳಿಸುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ‘ಚಿತ್ರದುರ್ಗ ಇತಿಹಾಸ ಕೂಟ’ದ ಸದಸ್ಯರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಸಿಕ್ಕಿದೆ. ‘ಲಾಲ್‌ಕೋಟೆ ಬಾಗಿಲು ಅತ್ಯಂತ ಸುಂದರ ಸ್ಮಾರಕವಾಗಿದ್ದು ಅಪರೂಪದ ವಾಸ್ತು ರಚನೆಯನ್ನು ಹೊಂದಿದೆ. ಇದನ್ನು ಅಹೋಬಲ ನರಸಿಂಹಸ್ವಾಮಿ ಬಾಗಿಲು ಎಂದೂ ಕರೆಯುತ್ತಾರೆ. ಈ ಸ್ಮಾರಕ ಹಾಗೂ ಸುತ್ತಮುತ್ತಲಿನ ಜಾಗವನ್ನು ಯಾರೂ ಅತಿಕ್ರಮಣ ಮಾಡದಂತೆ ಕಾಪಾಡಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.