
ಚಿತ್ರದುರ್ಗ: ‘ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಜನರು ಬರುತ್ತಿದ್ದಾರೆ. ಹಿಂದೆಲ್ಲಾ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಲಾಲ್‌ಬಾಗ್‌ಗೆ ತೆರಳಬೇಕಾಗಿತ್ತು. ಮುಂದಿನ ದಿನಗಳಲ್ಲಿ ಲಾಲ್‌ಬಾಗ್ ಮಾದರಿಯಲ್ಲೇ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ವತಿಯಿಂದ ನಗರದ ವಿ.ಪಿ. ಬಡಾವಣೆಯ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಫಲ–ಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ರೈತರು ತೋಟಗಾರಿಕೆ ಬೆಳೆ ಬೆಳೆಯಲು ಆದ್ಯತೆ ನೀಡಬೇಕು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಮಾದರಿಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲೂ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಹೆಚ್ಚಿಸಲು ಕ್ರಮ ವಹಿಸಬೇಕು. ಜಿಲ್ಲೆಗೆ ಭದ್ರಾ ನೀರನ್ನು ಫೆಬ್ರುವರಿ ಅಂತ್ಯದೊಳಗೆ ಪ್ರಾಯೋಗಿಕವಾಗಿ ಹರಿಸಲು ಯೋಜಿಸಲಾಗಿತ್ತು. ಕೆಲವು ತಾಂತ್ರಿಕ ಅಡೆತಡೆಗಳಿಂದ ಇದು ವಿಳಂಬವಾಗಿದ್ದು, ಮುಂದಿನ ತಿಂಗಳ ಅಂತ್ಯದೊಳಗೆ ನೀರು ಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದರು.
ಸಾಹಿತಿ ಬಿ.ಎಲ್. ವೇಣು ಮಾತನಾಡಿ ‘ಫಲಪುಷ್ಪ ಪ್ರದರ್ಶನದಲ್ಲಿ ನನ್ನ ಪ್ರತಿಮೆ ಹಾಗೂ ನಾವು ರಚಿಸಿದ ಕೃತಿಗಳ ಕಲಾಕೃತಿ ಮಾಡಿರುವುದು ಸಂತೋಷವಾಗಿದೆ. ಕಲ್ಲು ಬಂಡೆಗಳ ಮೇಲೆ ಕೃತಿಗಳ ಹೆಸರು ಪ್ರದರ್ಶನಕ್ಕೆ ಇಡಲಾಗಿದೆ. ಸಾಮಾನ್ಯವಾಗಿ ಇಂತಹ ಗೌರವಗಳು ಸಾಹಿತಿ ಸತ್ತ ಮೇಲೆ ಸಿಗುತ್ತವೆ. ನಾನು ಬದುಕಿರುವಾಗಲೇ ತೋಟಗಾರಿಕೆ ಇಲಾಖೆಯು ಈ ರೀತಿ ಗೌರವಿಸಿರುವುದು ನನ್ನ ಪುಣ್ಯ’ ಎಂದು ಅವರು ಭಾವುಕರಾದರು.
‘ನಾನು ಸಂಭಾಷಣೆ ಬರೆದ ಚಲನಚಿತ್ರಗಳು ಯಶಸ್ವಿಯಾಗಿದ್ದಲ್ಲದೆ, ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಗಳನ್ನು ತಂದುಕೊಟ್ಟಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ನನ್ನ ಚಲಚಿತ್ರ ಜೀವನದ ಕುರಿತು 'ಬೆಳ್ಳಿ ಹೆಜ್ಜೆ' ಎನ್ನುವ ಸಾಕ್ಷ್ಯಚಿತ್ರ ನಿರ್ಮಿಸಿ ಗೌರವ ನೀಡಿದೆ. ಹಂಪಿ, ದಾವಣಗೆರೆ ಹಾಗೂ ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ‘ದುರ್ಗದ ಬೇಡರು’, ‘ದೊಡ್ಡಗಾಡಿಸಿದ್ದನ ಪ್ರಸಂಗ’ ಮತ್ತು ‘ನಾಳೆಗಳಿಲ್ಲದವರು’ ಕಾದಂಬರಿಗಳು ಪಠ್ಯವಾಗಿವೆ’ ಎಂದರು.
‘ಚಿತ್ರದುರ್ಗ ನಗರಸಭೆ ನನ್ನ ಹೆಸರಿನಲ್ಲಿ ‘ಬಿ.ಎಲ್. ವೇಣು ವೃತ್ತ’ ನಿರ್ಮಿಸಿದೆ. ಹೀಗೆ ನಾನಾ ರೀತಿಯಲ್ಲಿ ನನಗೆ ಬದುಕಿರುವಾಗಲೇ ಗೌರವಗಳು ಸಂದಿರುವುದು ನನ್ನ ಪುಣ್ಯವಾಗಿದೆ. ಅನಾರೋಗ್ಯ ಹಾಗೂ ಮಂಡಿ ನೋವು ಇದ್ದರೂ ಇಲಾಖೆಯು ತೋರಿದ ಪ್ರೀತಿ ಮತ್ತು ಅಭಿಮಾನಕ್ಕೆ ಓಗೊಟ್ಟು ಕಾರ್ಯಕ್ರಮಕ್ಕೆ ಬಂದಿದ್ದೇನೆ’ ಎಂದರು.
ಹೂವಿನಿಂದ ಅರಳಿದ ಕಲಾಕೃಗತಿಗಳು: ಫಲಪುಷ್ಪ ಪ್ರದರ್ಶನದಲ್ಲಿ ಕಲಾವಿದರ ಕೈಚಳಕದಲ್ಲಿ ಮೂಡಿಬಂದಿರುವ ಹೂವಿನ ಟಾಂಗ, ನಾಯಕನಹಟ್ಟಿ ಶ್ರೀ ಕ್ಷೇತ್ರದ ತಿಪ್ಪೇರುದ್ರಸ್ವಾಮಿ, ಒನಕೆ ಓಬವ್ವ, ಒಳಮಠ, ಹೊರಮಠ, ಚಿತ್ರದುರ್ಗ ಹೆಸರಾಂತ ಸಾಹಿತಿ ಬಿ.ಎಲ್. ವೇಣು ಅವರ ಸಾಹಿತ್ಯ ಕೊಡುಗೆಗಳನ್ನು ಬಿಂಬಿಸುವ ಕಲಾಕೃತಿ, ಮತ್ಸ್ಯ ಪ್ರದರ್ಶನಗಳು ಆಕರ್ಷಣೆ ಎನಿಸಿವೆ.
ಫಲಪುಷ್ಪ ಪ್ರದರ್ಶನದ ಅಂಗವಾಗಿ ಆಕರ್ಷಕ ದೀಪಾಲಂಕಾರ ಅಳವಡಿಸಿರುವುದು ಸಾರ್ವಜನಿಕರು, ಮಕ್ಕಳನ್ನು ಕೈಬೀಸಿ ಕರೆಯುತ್ತಿದೆ. ಮೊದಲ ದಿನವೇ ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗಿಯಾಗಿದ್ದರು.
ಈ ವೇಳೆ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಶಿವಣ್ಣ, ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ಮಹೇಶ್ವರಪ್ಪ, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿ.ಪಂ. ಉಪಕಾರ್ಯದರ್ಶಿ ರಂಗಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್, ತೋಟಗಾರಿಕೆ ಜಂಟಿ ನಿರ್ದೇಶಕಿ ಜಿ. ಸವಿತಾ, ಹಿರಿಯ ಸಹಾಯಕ ನಿರ್ದೇಶಕ ತೋಟಯ್ಯ, ಜಲತಜ್ಞ ದೇವರಾಜ ರೆಡ್ಡಿ, ಜಿಲ್ಲಾ ತೋಟಗಾರಿಕೆ ಸಂಘದ ರೀನಾ ವೀರಭದ್ರಪ್ಪ, ಸತ್ಯ ನಾರಾಯಣ ನಾಯ್ಡು, ಸುಮನಾ ಅಂಗಡಿ, ಸುಮನ ತಿಮ್ಮಾರೆಡ್ಡಿ, ಶ್ವೇತಾ, ನಾಗರಾಜ ಬೇಂದ್ರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.