
ಚಿತ್ರದುರ್ಗ/ಮೊಳಕಾಲ್ಮುರು: ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯ ಚಿತ್ರದುರ್ಗದಲ್ಲಿ ಬಹುತೇಕರು ಆರೋಗ್ಯ ಸೇವೆಗೆ ಸರ್ಕಾರಿ ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿದ್ದಾರೆ. 4 ತಾಲ್ಲೂಕುಗಳಲ್ಲಿ ಕಾಯಂ ಆರೋಗ್ಯಾಧಿಕಾರಿಗಳೇ ಇಲ್ಲ. ಇದರಿಂದ ಆಡಳಿತಾತ್ಮಕ ಸಮಸ್ಯೆಯ ಜೊತೆಗೆ ಸಕಾಲದಲ್ಲಿ ಸೇವೆ ಒದಗಿಸುವುದೂ ಕಷ್ಟವಾಗುತ್ತಿದೆ. ರೋಗಿಗಳ ಪರದಾಟ ಸಾಮಾನ್ಯ ಎಂಬಂತಾಗಿದೆ.
ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಸಾರ್ವಜನಿಕ ಆಸ್ಪತ್ರೆಗಳಿವೆ. ಪ್ರಾಥಮಿಕ, ಸಮುದಾಯ, ನಗರ ಆರೋಗ್ಯ ಕೇಂದ್ರ, 24x7 ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಉಪಕೇಂದ್ರ ಸೇರಿ ಒಟ್ಟು 480 ಸರ್ಕಾರಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಪ್ರದೇಶದ ಬಹುಪಾಲು ಜನ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.
ಮೊಳಕಾಲ್ಮುರು, ಚಳ್ಳಕೆರೆ, ಹೊಸದುರ್ಗ, ಹೊಳಲ್ಕೆರೆ ತಾಲ್ಲೂಕುಗಳಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಹುದ್ದೆ ಖಾಲಿ ಇದೆ. ಹೀಗಾಗಿ ಆಡಳಿತದ ಹೊಣೆ ಪ್ರಭಾರಿಗಳ ಹೆಗಲೇರಿದೆ. ಹೊಸದುರ್ಗ ಬಿಟ್ಟರೆ ಉಳಿದ ಮೂರು ತಾಲ್ಲೂಕುಗಳಲ್ಲಿ ಆರೋಗ್ಯಾಧಿಕಾರಿಗೆ ಸ್ವಂತ ವಾಹನವೂ ಇಲ್ಲ. ಬೇರೊಂದು ವಾಹನ ಪಡೆದು, ಬೈಕ್ ಅಥವಾ ಬಸ್ ಹಿಡಿದು ತಮ್ಮ ವ್ಯಾಪ್ತಿಯ ಸ್ಥಳಗಳಿಗೆ ಭೇಟಿ ನೀಡುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಮೊಳಕಾಲ್ಮುರು ತಾಲ್ಲೂಕಿನಲ್ಲಿ 3 ವರ್ಷಗಳಿಂದ ಪ್ರಭಾರಿಯ ಆಡಳಿತ ಇದೆ. ಇದರಿಂದ ಇಲಾಖಾ ಕಾರ್ಯಕ್ರಮಗಳ ಅನುಷ್ಠಾನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ತಾಲ್ಲೂಕಿನಲ್ಲಿ ಕಸಬಾ ಮತ್ತು ದೇವಸಮುದ್ರ ಹೋಬಳಿಗಳ ಜೊತೆಗೆ 100ಕ್ಕೂ ಹೆಚ್ಚು ಜನವಸತಿ ಪ್ರದೇಶಗಳೂ ಇವೆ.
ಪಟ್ಟಣದಲ್ಲಿ ಸಾರ್ವಜನಿಕ ಆಸ್ಪತ್ರೆ ಇದೆ. ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ನಾಗಸಮುದ್ರ, ಚಿಕ್ಕೋಬನಹಳ್ಳಿ, ಅಶೋಕ ಸಿದ್ದಾಪುರದಲ್ಲಿ ಆರೋಗ್ಯ ಕೇಂದ್ರಗಳು ಮತ್ತು ರಾಂಪುರದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಇವೆ. ಇವುಗಳ ವ್ಯಾಪ್ತಿಯಲ್ಲಿ ಹತ್ತಾರು ಉಪ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕಾಯಂ ಆರೋಗ್ಯಾಧಿಕಾರಿ ಇಲ್ಲದಿರುವುದು ಆಡಳಿತಾತ್ಮಕ ಸಮಸ್ಯೆಯ ಸೃಷ್ಟಿಗೆ ಕಾರಣವಾಗಿದೆ.
ಮೊಳಕಾಲ್ಮುರು ಕ್ಷೇತ್ರದಿಂದ ಗೆದ್ದಿದ್ದ ಬಿ.ಶ್ರೀರಾಮುಲು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ಸಚಿವರಾಗಿದ್ದರು. ಹೀಗಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸಾಧ್ಯವಾಗಿಲ್ಲ. ಕಾಯಂ ಹುದ್ದೆ ಭರ್ತಿ ಮಾಡಿ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕೆಲಸ ಇನ್ನೂ ಆಗದಿರುವುದು ವಿಪರ್ಯಾಸ ಎಂದು ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ.
‘ಆಸ್ಪತ್ರೆಗಳ ಭೇಟಿ, ಔಷಧ ದಾಸ್ತಾನು, ಸಿಬ್ಬಂದಿ ಕಾರ್ಯನಿರ್ವಹಣೆ, ಸಾಮೂಹಿಕ ಅನಾರೋಗ್ಯ ಕಾಣಿಸಿಕೊಂಡ ಗ್ರಾಮಗಳ ಭೇಟಿ, ಪರಿಹಾರ ಕ್ರಮಗಳ ಅನುಷ್ಠಾನ, ತಾಲ್ಲೂಕು, ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಭಾಗವಹಿಸುವುದು ಆರೋಗ್ಯಾಧಿಕಾರಿಗಳ ಕರ್ತವ್ಯ. ಇಷ್ಟಾದರೂ ಕಾಯಂ ಅಧಿಕಾರಿಯೇ ಇಲ್ಲದಿರುವುದು ವಿಪರ್ಯಾಸ. ವೈದ್ಯರು ಸೇರಿ ಎಲ್ಲ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದರೂ ಕ್ರಮ ಜರುಗಿಲ್ಲ’ ಎಂದು ರೈತಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ದೂರುತ್ತಾರೆ.
‘15 ವರ್ಷಗಳಷ್ಟು ಹಳೆಯದಾಗಿರುವ ವಾಹನವನ್ನು ರಸ್ತೆಗಿಳಿಸಬಾರದು ಎಂಬ ನಿಯಮದಿಂದಾಗಿ ಜಿಲ್ಲೆಯ 14 ವಾಹನಗಳು ಗುಜರಿ ಪಾಲಾಗಿವೆ. ಹೊಸ ವಾಹನಕ್ಕೆ ಮನವಿ ಮಾಡಲಾಗಿದ್ದು, ಅವು ಇನ್ನೂ ಮಂಜೂರಾಗಿಲ್ಲ. ಬಾಡಿಗೆ ಆಧಾರದಲ್ಲಿ ವಾಹನ ಪಡೆಯಲೂ ಅವಕಾಶ ಇಲ್ಲ’ ಎಂದು ಆರೋಗ್ಯ ಇಲಾಖೆಯ ಸಾರಿಗೆ ವಿಭಾಗದ ಅಧಿಕಾರಿಯೊಬ್ಬರು ಹೇಳಿದರು.
ಜಿಲ್ಲಾ ಮಟ್ಟದಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಿಸಿಕೊಳ್ಳಲಾಗುತ್ತಿದೆ. ಅವರು ಎಲ್ಲ ವೇಳೆ ಕೇಂದ್ರಗಳಲ್ಲಿ ಲಭ್ಯವಿರದ ಕಾರಣ ಸಾರ್ವಜನಿಕ ಆರೋಗ್ಯ ಸೇವೆಗೇ ರೋಗ ಬಾಧಿಸಿದೆ. ಇದರಿಂದಾಗಿ ಜನ ಸಂಕಷ್ಟ ಎದುರಿಸುವಂತಾಗಿದೆ.
ಸಕಾಲಕ್ಕೆ ದೊರೆಯದ ವೈದ್ಯಕೀಯ ಸೌಲಭ್ಯ
ವರದಿ: ವಿ.ಧನಂಜಯ
ನಾಯಕನಹಟ್ಟಿ: ಜಿಲ್ಲೆಯ ಎರಡನೇ ದೊಡ್ಡ ತಾಲ್ಲೂಕಾಗಿರುವ ಚಳ್ಳಕೆರೆಯಲ್ಲಿ ನಾಲ್ಕು ವರ್ಷಗಳಿಂದ ಪ್ರಭಾರದ ಮೇಲೆ ತಾಲ್ಲೂಕು ಆರೋಗ್ಯಾಧಿಕಾರಿಯ ಕೆಲಸ ಸಾಗುತ್ತಿದೆ. ತಾಲ್ಲೂಕಿನಲ್ಲಿ ಸರ್ಕಾರಿ ಆಸ್ಪತ್ರೆಗಳಿದ್ದರೂ ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲದೆ ರೋಗಿಗಳು ಪರಿತಪಿಸುವುದು ಸಾಮಾನ್ಯವಾಗಿದೆ. ತಾಲ್ಲೂಕು ಆರೋಗ್ಯಾಧಿಕಾರಿಯ ಹುದ್ದೆ ಖಾಲಿ ಇದೆ. ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿಯಾಗಿ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಎನ್.ಕಾಶಿ ಅವರಿಗೇ ತಾಲ್ಲೂಕು ಆರೋಗ್ಯಾಧಿಕಾರಿಯ ಜವಾಬ್ದಾರಿಯನ್ನೂ ನೀಡಲಾಗಿದೆ. ಕಾರ್ಯಭಾರ ಹೆಚ್ಚಳದಿಂದಾಗಿ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಆಡಳಿತ ಆಮೆಗತಿಯಲ್ಲಿ ಸಾಗುತ್ತಿವೆ. ಚಳ್ಳಕೆರೆ ನಗರದಲ್ಲಿ 100 ಹಾಸಿಗೆ ಸಾರ್ಮಥ್ಯದ ಸಾರ್ವಜನಿಕ ಆಸ್ಪತ್ರೆ 30 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ತಲಾ ಒಂದು ನಗರ ಆರೋಗ್ಯ ಕೇಂದ್ರ ಮತ್ತು ನಮ್ಮ ಕ್ಲಿನಿಕ್ ಇವೆ. ಪರಶುರಾಂಪುರದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಾಯಕನಹಟ್ಟಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಹಾಗೂ ನಮ್ಮ ಕ್ಲಿನಿಕ್ ಇದೆ. ತಳಕು ಹೋಬಳಿಯ ಹಿರೇಹಳ್ಳಿ ಮತ್ತು ಓಬಳಾಪುರದಲ್ಲಿ ಆರೋಗ್ಯ ವಿಸ್ತರಣಾ ಘಟಕಗಳಿವೆ. ಮುಷ್ಟಲಗುಮ್ಮಿ ನೆಲಗೇತನಹಟ್ಟಿ ತಳಕು ಬೇಡರೆಡ್ಡಿಹಳ್ಳಿ ದೊಡ್ಡಉಳ್ಳಾರ್ತಿ ಸಿದ್ದೇಶ್ವರನದುರ್ಗ ದೊಡ್ಡಚೆಲ್ಲೂರು ಜಾಜೂರು ಚನ್ನಮ್ಮನಾಗತಿಹಳ್ಳಿ ಮೀರಾಸಾಬಿಹಳ್ಳಿ ಟಿ.ಎನ್.ಕೋಟೆ ಕಲಮರಹಳ್ಳಿ ಸಾಣಿಕೆರೆ ಗೋಪನಹಳ್ಳಿ ರಾಮಜೋಗಿಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ತಾಲ್ಲೂಕಿನಾದ್ಯಂತ 72 ಉಪ ಆರೋಗ್ಯ ಕೇಂದ್ರಗಳೂ ಕಾರ್ಯನಿರ್ವಹಿಸುತ್ತಿವೆ. ತಾಲ್ಲೂಕಿನಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಲಭಿಸದ ಹಾಗೂ ಸೌಲಭ್ಯಗಳ ಕೊರತೆಯ ಕಾರಣ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾತ್ತಿದೆ. ಇದರಿಂದ ಜಿಲ್ಲಾ ಆಸ್ಪತ್ರೆಯ ಮೇಲೆ ಕಾರ್ಯಭಾರ ಹೆಚ್ಚುತ್ತಿದೆ. ನಾಯಕನಹಟ್ಟಿಯಲ್ಲಿ ಹೆರಿಗೆ ಆಸ್ಪತ್ರೆಯಿದ್ದರೂ ಪ್ರಸೂತಿ ತಜ್ಞರಿಲ್ಲ. ಹೆರಿಗೆಗೆಂದು ಆಸ್ಪತ್ರೆಗೆ ಬರುವ ಗರ್ಭಿಣಿಯರ ಗೋಳು ಹೇಳತೀರದಾಗಿದೆ. ಬಹುತೇಕ ಸಂದರ್ಭದಲ್ಲಿ ಇಲ್ಲಿನ ಶುಶ್ರೂಷಕಿಯರೇ ಹೆರಿಗೆ ಮಾಡಿಸಲು ಮುಂದಾಗುತ್ತಾರೆ. ಒಂದು ವೇಳೆ ಸಮಸ್ಯೆಯಾದರೆ ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡುತ್ತಾರೆ. ಇದರಿಂದ ಗರ್ಭಿಣಿಯರು ನರಕಯಾತನೆ ಅನುಭವಿಸುವಂತಾಗಿದೆ.
ಆಸ್ಪತ್ರೆಗಳಿಗೆ ಬೇಕು ಮೂಲ ಸೌಲಭ್ಯ
ವರದಿ: ಎಚ್.ಡಿ.ಸಂತೋಷ್
ಹೊಸದುರ್ಗ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ತಾಲ್ಲೂಕಿನ ಹಲವು ಆರೋಗ್ಯ ಕೇಂದ್ರಗಳಿಗೆ ವೈದ್ಯರು ಸಿಬ್ಬಂದಿ ಪ್ರಯೋಗಾಲಯ ಉಪಕರಣ ಆಂಬುಲೆನ್ಸ್ ಸೇರಿದಂತೆ ಹಲವು ಸೌಲಭ್ಯದ ಅಗತ್ಯವಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ನಿತ್ಯ 300 ರಿಂದ 400 ಹೊರರೋಗಿಗಳು ಬರುತ್ತಾರೆ. 30 ರಿಂದ 35 ಜನರು ಒಳರೋಗಿಗಳಿರುತ್ತಾರೆ. 2 ಆಂಬುಲೆನ್ಸ್ ಮಾತ್ರ ಇದೆ. ಚರ್ಮ ರೋಗ ತಜ್ಞರ ಹುದ್ದೆ ಖಾಲಿಯಾಗಿ 3 ತಿಂಗಳಾಗಿದೆ. ಔಷಧ ವಿಭಾಗದಲ್ಲಿ 3 ಹುದ್ದೆ ಖಾಲಿಯಿದ್ದು ಒಬ್ಬರು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ಷ–ಕಿರಣ ವಿಭಾಗದ ಮುಖ್ಯಸ್ಥರೂ ಇಲ್ಲ. 2022ರಿಂದಲೂ ಹೊಸದುರ್ಗದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳೇ ಇಲ್ಲ. 2022ರ ಆಗಸ್ಟ್‌ನಿಂದ ಬೆಲಗೂರು ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ರಾಘವೇಂದ್ರ ಪ್ರಸಾದ್ ಅವರು ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಹಜ ಹೆರಿಗೆ ಪ್ರಮಾಣ ಕಡಿಮೆಯಾಗಿದೆ. ತಾಲ್ಲೂಕಿನಾದ್ಯಂತ ಶೇ 86ರಷ್ಟು ಸಿ ಸೆಕ್ಷನ್ ಹೆರಿಗೆ ಆಗುತ್ತಿವೆ. ಈ ಕಾರಣಕ್ಕೆ ಹೆರಿಗೆಗೆ ಸಾರ್ವಜನಿಕ ಆಸ್ಪತ್ರೆಗೆ ಬರುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಹೆಚ್ಚಿನವರು ತಿಪಟೂರು ಕಡೂರು ತರೀಕೆರೆ ಚಿತ್ರದುರ್ಗ ದಾವಣಗೆರೆ ಆಸ್ಪತ್ರೆಗಳಿಗೆ ಹೆರಿಗೆಗಾಗಿ ತೆರಳುತ್ತಿದ್ದಾರೆ. ಮಾಡದಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ಹೊರತುಪಡಿಸಿ ಬೇರೆ ಯಾವುದೇ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್‌ಗಳಿಲ್ಲ. ಸಾಣೇಹಳ್ಳಿ ಮತ್ತೋಡು ಜಿ.ಎನ್.ಕೆರೆ ಬಲ್ಲಾಳಸಮುದ್ರ ಸೇರಿದಂತೆ ಹಲವು ಆರೋಗ್ಯ ಕೇಂದ್ರಗಳು ಪಟ್ಟಣದಿಂದ ದೂರವಿದ್ದು ಈ ಭಾಗಗಳಲ್ಲಿ ಆಂಬುಲೆನ್ಸ್ ಹಾಗೂ ಪ್ರಯೋಗಾಲಯದ ಅಗತ್ಯವಿದೆ.
ತಜ್ಞ ವೈದ್ಯರಿಲ್ಲದೆ ರೋಗಿಗಳು ಕಂಗಾಲು
ನಾಯಕನಹಟ್ಟಿ ಹೋಬಳಿ ಕೇಂದ್ರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿತ್ಯ 150ರಿಂದ 200ಹೊರರೋಗಿಗಳು ಮತ್ತು 20ರಿಂದ 30 ಒಳರೋಗಿಗಳಾಗಿ ದಾಖಲಾಗುತ್ತಿದ್ದಾರೆ. ಆದರೆ ವೈದ್ಯರ ಕೊರತೆಯಿಂದ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಪ್ರಸ್ತುತ ಆಸ್ಪತ್ರೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಆಯುಷ್ ವೈದ್ಯರು ಚಿಕಿತ್ಸೆ ನೀಡಿದರೆ ರಾತ್ರಿ ತಾಲ್ಲೂಕಿನಾದ್ಯಂತ ಇರುವ ಬೇರೆ ಬೇರೆ ಆಸ್ಪತ್ರೆಗಳಿಂದ ದಿನಕ್ಕೊಬ್ಬರಂತೆ ವೈದ್ಯರು ಬಂದು ಚಿಕಿತ್ಸೆ ನೀಡುತ್ತಾರೆ. ಹಗಲು ಹೊತ್ತಿನಲ್ಲಿ ತುರ್ತು ಚಿಕಿತ್ಸೆಗೆಂದು ರೋಗಿಗಳು ಬಂದರೆ ಆಸ್ಪತ್ರೆಯಲ್ಲಿ ತಜ್ಞ ವೈದ್ಯರೇ ಇರುವುದಿಲ್ಲ. ಇದರಿಂದ ರೋಗಿಗಳು ಜಿಲ್ಲಾ ಆಸ್ಪತ್ರೆಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.
ಮೊಳಕಾಲ್ಮುರು ಚಳ್ಳಕೆರೆ ಹೊಸದುರ್ಗ ಹೊಳಲ್ಕೆರೆ ತಾಲ್ಲೂಕುಗಳಲ್ಲಿ ಪ್ರಭಾರಿಗಳು ಇದ್ದಾರೆ. ಈಚೆಗೆ ಸರ್ಕಾರ ಕಾಯಂ ಹುದ್ದೆಗಳ ಭರ್ತಿಗೆ ಕೌನ್ಸೆಲಿಂಗ್ ನಡೆಸಿದೆ. ತಾಂತ್ರಿಕ ಕಾರಣದಿಂದ ನೇಮಕಾತಿ ಪತ್ರ ವಿತರಣೆಯಾಗಿಲ್ಲಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಸರ್ಕಾರ 15 ವರ್ಷ ಹಳೆಯದಾದ ವಾಹನ ವಾಪಸ್ ಪಡೆಯುವ ಆದೇಶ ಜಾರಿಗೊಳಿಸುವ ಮುನ್ನ ಹೊಸ ವಾಹನಗಳನ್ನು ನೀಡಬೇಕಿತ್ತು. ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಇದು ಅನುವು ಮಾಡಿಕೊಟ್ಟಿದೆಜಾಫರ್ ಷರೀಫ್ , ಸಿಪಿಐ ಮುಖಂಡ ಮೊಳಕಾಲ್ಮುರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.