ADVERTISEMENT

Highway Accidents: ಅಪಘಾತ ವಲಯವಾದ ದುರ್ಗದ ಹೆದ್ದಾರಿ

ಬೆಳ್ಳಂಬೆಳಿಗ್ಗೆ ಪದೇ ಪದೇ ಸಂಭವಿಸುತ್ತಿದೆ ಸಾವು–ನೋವು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯ

ಎಂ.ಎನ್.ಯೋಗೇಶ್‌
Published 25 ಡಿಸೆಂಬರ್ 2025, 23:30 IST
Last Updated 25 ಡಿಸೆಂಬರ್ 2025, 23:30 IST
   

ಚಿತ್ರದುರ್ಗ: ರಾಜಧಾನಿ ಬೆಂಗಳೂರಿನತ್ತ ಅಥವಾ ಬೆಂಗಳೂರಿನಿಂದ ರಾಜ್ಯದ ಉತ್ತರ ಭಾಗದತ್ತ ಪ್ರಯಾಣ ಆರಂಭಿಸಿದರೂ ಆ ವಾಹನಗಳು ನಸುಕಿನ ವೇಳೆಗೇ ಚಿತ್ರದುರ್ಗ ವ್ಯಾಪ್ತಿ ತಲುಪುವುದು ಸಾಮಾನ್ಯ. ಈ ಸಮಯದಲ್ಲಿ ನಿದ್ದೆಯ ಮಂಪರಿಗೆ ಜಾರುವ ಚಾಲಕರಿಂದಾಗಿಯೇ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ.

ಜಿಲ್ಲೆಯ ಹಿರಿಯೂರು ಬಳಿ ಗುರುವಾರ ನಸುಕಿನಲ್ಲಿ ಸಂಭವಿಸಿದ ಅಪಘಾತಕ್ಕೂ ಚಾಲಕ ನಿದ್ದೆಯ ಮಂಪರು ಕಾರಣವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

‌ರಾಜ್ಯದ ಕೇಂದ್ರ ಸ್ಥಾನವಾಗಿರುವ ಕೋಟೆನಾಡು ಅಪಘಾತ ಪ್ರಕರಣಗಳಿಗೂ ಕೇಂದ್ರಸ್ಥಾನ ಎಂಬಂತಾಗಿದೆ. ಇಲ್ಲಿ ನಡೆಯುವ ಬಹುತೇಕ ಅಪಘಾತಗಳು ನಸುಕಿನಲ್ಲೇ ಸಂಭವಿಸುತ್ತಿವೆ. ಇಡೀ ರಾಜ್ಯದಲ್ಲೇ ಎರಡು ರಾಷ್ಟ್ರೀಯ ಹೆದ್ದಾರಿಗಳು ‘ಪ್ಲಸ್‌’ ಆಕಾರದಲ್ಲಿ ಒಂದೆಡೆ ಸೇರುವ ಅಪರೂಪದ ತಾಣವಾಗಿಯೂ ಚಿತ್ರದುರ್ಗ ಗುರುತಿಸಿಕೊಂಡಿದೆ.

ADVERTISEMENT

ನಸುಕಿನ ಗುದ್ದಾಟ: ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌ 48), ಶಿವಮೊಗ್ಗ– ಚಿತ್ರದುರ್ಗ– ಸೊಲ್ಲಾಪುರ (ಎನ್‌ಎಚ್‌– 369), ಶ್ರೀರಂಗಪಟ್ಟಣ– ಬೀದರ್‌ (ಎನ್‌ಎಚ್‌– 150 ‘ಎ’) ರಾಷ್ಟ್ರೀಯ ಹೆದ್ದಾರಿಗಳು ಚಿತ್ರದುರ್ಗ ಮಾರ್ಗದಲ್ಲೇ ಸಾಗಿವೆ. ಎಲ್ಲೆಲ್ಲಿಂದಲೋ ರಾತ್ರಿ ಪ್ರಯಾಣ ಆರಂಭಿಸುವ ವಾಹನಗಳು ಇಲ್ಲಿಗೆ ತಲುಪುವಾಗ ನಸುಕಾಗಿರುತ್ತದೆ. ಅದೇ ಕಾರಣಕ್ಕೆ ಈ ಭಾಗದಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸು ತ್ತಿವೆ. ಬೆಂಗಳೂರು, ಮೈಸೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದಿಂದ ಹೊರಡುವ ವಾಹನಗಳು, ಮುಖ್ಯವಾಗಿ ಕಂಟೇನರ್‌ಗಳು ನಸುಕಿನಲ್ಲೇ ಅಪಘಾತಕ್ಕೆ ಈಡಾಗುತ್ತಿರುವುದು ಕಂಡುಬರುತ್ತಿದೆ.

ಚಿತ್ರದುರ್ಗ ಹಾಗೂ ಹಿರಿಯೂರು ನಡುವಿನ ಹಾದಿಯಲ್ಲಿ ಕಳೆದೊಂದು ವರ್ಷದಿಂದ ಐದಕ್ಕೂ ಹೆಚ್ಚು ಭೀಕರ ಅಪಘಾತಗಳು ಸಂಭವಿವೆ. ಕಳೆದ ಮಾರ್ಚ್‌ನಲ್ಲಿ ಮದಕರಿಪುರ ಬಳಿ ಸಂಭವಿಸಿದ ಅಪಘಾತದಲ್ಲಿ ಐವರು ಸಾವಿಗೀಡಾಗಿದ್ದರು. 2021ರಲ್ಲಿ ಕಸ್ತೂರಿ ರಂಗಪ್ಪನಹಳ್ಳಿ ಸಮೀಪ ಖಾಸಗಿ ಬಸ್‌ ಬೆಂಕಿಗಾಹುತಿ ಯಾಗಿ ಐವರು ಸಜೀವವಾಗಿ ದಹನವಾಗಿದ್ದರು. 2014ರಲ್ಲಿ ಮೇಟಿಕುರ್ಕೆ ಸಮೀಪ ಖಾಸಗಿ ಬಸ್ಸಿಗೆ ಬೆಂಕಿ ತಗುಲಿ 20 ಪ್ರಯಾಣಿಕರು ಸುಟ್ಟು ಕರಕಲಾಗಿದ್ದರು. 2020ರಿಂದ 300ಕ್ಕೂ ಹೆಚ್ಚು ಜನರು ಹೆದ್ದಾರಿ ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೆದ್ದಾರಿಯಲ್ಲೇ ನಿಲುಗಡೆ: ಈ ಹೆದ್ದಾರಿಯಲ್ಲಿ ಸಂಚರಿಸುವ ಲಾರಿಗಳು, ಕಂಟೇನರ್‌ಗಳು ಚಿತ್ರದುರ್ಗ, ಹಿರಿಯೂರು ವ್ಯಾಪ್ತಿಯಲ್ಲಿ ಹೆದ್ದಾರಿ ಬದಿಯಲ್ಲೇ ನಿಲ್ಲುತ್ತವೆ. ಬೆಳಿಗ್ಗೆ ರಸ್ತೆಯಲ್ಲಿ ಗಾಡಿ ನಿಲ್ಲಿಸಿ ಚಾಲಕರು ನಿತ್ಯಕರ್ಮಗಳಿಗೆ  ತೆರಳುತ್ತಾರೆ. ರಸ್ತೆ ಬದಿ ಕ್ಯಾಂಟೀನ್‌ಗಳಲ್ಲಿ ತಿಂಡಿ, ಕಾಫಿ, ಟೀ ಸೇವನೆಗೆ ತೆರಳುತ್ತಾರೆ. ನಿದ್ದೆ ಮಂಪರಿನಲ್ಲಿ ಚಾಲಕರು ವಾಹನ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿರುವ ಇಂಥ ವಾಹನಗಳಿಗೆ ಡಿಕ್ಕಿ ಹೊಡೆಯುವುದು ಸಾಮಾನ್ಯ ಎಂಬಂತಾಗಿದೆ.

‘ಹೆದ್ದಾರಿಯಲ್ಲಿ ಬೆಳ್ಳಂಬೆಳಿಗ್ಗೆ ನಿತ್ಯ ಒಂದಲ್ಲಾ ಒಂದು ಅಪಘಾತ ಆಗುತ್ತಲೇ ಇರುತ್ತದೆ. ಇದನ್ನು ತಪ್ಪಿಸಲು, ರಾತ್ರಿಯಿಡೀ ವಾಹನ ಓಡಿಸಿಕೊಂಡು ಬರುವ ಚಾಲಕರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿದ್ದೆಯ ಅವಧಿಯನ್ನು ನಿಗದಿ ಮಾಡಬೇಕು’ ಎಂದು ಹಿರಿಯೂರಿನ ಟಿ.ಮಂಜುನಾಥ್‌ ಒತ್ತಾಯಿಸಿದರು.

ವೈದ್ಯಕೀಯ ಸೌಲಭ್ಯ ಕೊರತೆ: ಚಿತ್ರದುರ್ಗ, ಹಿರಿಯೂರು ವ್ಯಾಪ್ತಿಯ ಹೆದ್ದಾರಿ ಬದಿಯಲ್ಲಿ ಅಪಘಾತಕ್ಕೀಡಾದ ವಾಹನಗಳಲ್ಲಿ ಗಾಯಗೊಂಡವರಿಗೆ ಯಾವುದೇ ವೈದ್ಯಕೀಯ ಸೌಲಭ್ಯ ದೊರೆಯುವುದಿಲ್ಲ. ಹೆದ್ದಾರಿ ಪ್ರಾಧಿಕಾರದ ಅಂಬುಲೆನ್ಸ್‌ ಸೇವೆಯೂ ಸಿಗುವುದಿಲ್ಲ. ಹೆದ್ದಾರಿಯಲ್ಲಿ ಅಪಘಾತವಾದರೆ ಸ್ಥಳೀಯ ಆಸ್ಪತ್ರೆಗಳ ಆಂಬುಲೆನ್ಸ್‌ ಬರುವವರೆಗೂ ಕಾಯುವ ಪರಿಸ್ಥಿತಿ ಇದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

‘ಹೆದ್ದಾರಿ ಬದಿಯಲ್ಲಿ ಹಾಕಿರುವ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೂ ಸ್ಪಂದಿಸುವುದಿಲ್ಲ. ಈ ಬಗ್ಗೆ ರಸ್ತೆ ಪೊಲೀಸರಿಗೆ ದೂರು ನೀಡಿದರೂ ಅವರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಸಾರಿಗೆ ಸಂಸ್ಥೆ ಬಸ್‌ನ ಚಾಲಕರೊಬ್ಬರು ಆರೋಪಿಸಿದರು.

ನಸುಕಿನ ವೇಳೆಗೆ ಚಿತ್ರದುರ್ಗ ಪ್ರವೇಶಿಸುವ ಬಸ್‌ಗಳು

ನಿದ್ದೆಯ ಮಂಪರಿನಿಂದ ಅಪಘಾತಗಳ ಸಂಖ್ಯೆ ಹೆಚ್ಚಳ

ರೋಡ್‌ ಕಾಂಗ್ರೆಸ್‌ ನಿಯಮ ಪಾಲನೆ ಇಲ್ಲ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿವಿಧ ಲೇನ್‌ಗಳಿದ್ದು ಆಯಾ ವಾಹನಗಳಿಗೆ ಭಿನ್ನಭಿನ್ನ ಲೇನ್‌ ನಿಗದಿಯಾಗಿರುತ್ತದೆ. ‘ರೋಡ್‌ ಕಾಂಗ್ರೆಸ್‌ ನಿಯಮ’ದ ಅನ್ವಯ ಬಸ್‌, ಕಂಟೇನರ್‌, ಕಾರುಗಳ ಸಂಚಾರಕ್ಕೆ ಪ್ರತ್ಯೇಕ ಲೇನ್‌ ನಿಗದಿ ಮಾಡಲಾಗಿದೆ. ಆದರೆ ವಾಹನ ಚಾಲಕರು ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಸಿಕ್ಕಸಿಕ್ಕ ಲೇನ್‌ಗಳಲ್ಲಿ ವಾಹನ ಓಡಿಸುವ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ.

‘ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ವಾಹನ ಅಪಘಾತಗಳ ಸಂಖ್ಯೆ ನಿಯಂತ್ರಿಸಲು ಕಾರ್ಯಸೂಚಿ ರೂಪಿಸಲಾಗಿದೆ. ಸಮರ್ಪಕವಾಗಿ ನಿಯಮ ಪಾಲನೆ ಮಾಡುವ ಜಾಗೃತಿ ಮೂಡಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.