ADVERTISEMENT

ಚಿತ್ರದುರ್ಗ ಬಸ್ ದುರಂತ: ಜೀವದ ಗೆಳತಿಯರ ಕಳೆದುಕೊಂಡ ದುಃಖದ ಮಡುವಿನಲ್ಲಿ...

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 5:47 IST
Last Updated 26 ಡಿಸೆಂಬರ್ 2025, 5:47 IST
<div class="paragraphs"><p>ನವ್ಯಾ,&nbsp;ರಶ್ಮಿ,&nbsp;ಮಾನಸಾ</p></div>

ನವ್ಯಾ, ರಶ್ಮಿ, ಮಾನಸಾ

   

ಚಿತ್ರದುರ್ಗ: ಕಂಟೇನರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಸೀಬರ್ಡ್‌ ಸ್ಲೀಪರ್‌ (ಎ.ಸಿ ರಹಿತ) ಬಸ್‌ಗೆ ಡಿಕ್ಕಿ ಹೊಡೆದಿದ್ದರಿಂದ ಬೆಂಕಿ ಹೊತ್ತಿಕೊಂಡು ಐವರು ಗುರುತಿಸಲು ಸಾಧ್ಯವಾಗದಷ್ಟು ಸುಟ್ಟು ಕರಕಲಾದ ದಾರುಣ ಘಟನೆ ಹಿರಿಯೂರು ತಾಲ್ಲೂಕು ಗೊರ್ಲಡುಕು ಕ್ರಾಸ್‌ ಬಳಿ ಗುರುವಾರ ನಸುಕಿನ 2 ಗಂಟೆ ವೇಳೆಗೆ ಸಂಭವಿಸಿದೆ. ಕಂಟೇನರ್‌ ಕೂಡ ಅಪ್ಪಚ್ಚಿಯಾಗಿದ್ದರಿಂದ ಚಾಲಕ ಕುಳಿತಲ್ಲೇ ಮೃತಪಟ್ಟಿದ್ದಾರೆ.

ಕ್ರಿಸ್‌ಮಸ್‌ ರಜೆ ಕಳೆಯಲು ಗೋಕರ್ಣ ಕಡಲ ಕಿನಾರೆಗೆ ತೆರಳುತ್ತಿದ್ದ ತಾಯಿ– ಮಗಳು ಹಾಗೂ ಮೂವರು ಯುವತಿಯರು ಪ್ರಯಾಣದ ಅರ್ಧದಲ್ಲೇ ತಮ್ಮ ಬದುಕಿನ ಯಾತ್ರೆ ಮುಗಿಸಿದರು. ಸಡಗರ ಸಂಭ್ರಮದ ನಡುವೆ ಬಸ್‌ ಹತ್ತಿದ್ದ ಅವರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾದರು.

ADVERTISEMENT

ಬೆಂಗಳೂರಿನ ಬಿಂದು (28), ಅವರ ಮಗಳು ಗ್ರೇಯಾ (5), ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಎಚ್‌.ಸಿ.ಮಾನಸ (26), ಮಂಡ್ಯ ಜಿಲ್ಲೆ ಅಂಕನಹಳ್ಳಿಯ ಎ.ಎಂ.ನವ್ಯಾ (27), ಭಟ್ಕಳದ ರಶ್ಮಿ ಆರ್‌. ಮಹಾಲೆ (25) ಸಜೀವ ದಹನಗೊಂಡವರು. ಕಂಟೇನರ್‌ ಚಾಲಕ ಕುಲದೀಪ್ ಯಾದವ್ (29) ಕೂಡ ಮೃತಪಟ್ಟರು.

ಗೆಳತಿಯರಿಲ್ಲದ ಗೋಳು:

ಒಂದೇ ಕಾಲೇಜಿನಲ್ಲಿ ಎಂ.ಟೆಕ್‌ ಪದವಿ ಪೂರೈಸಿದ ಮಾನಸ, ನವ್ಯಾ ಹಾಗೂ ಮಿಲನಾ ಅವರು ಬೆಂಗಳೂರಿನ ಮಾನ್ಯತಾ ಟೆಕ್‌ ಪಾರ್ಕ್‌ನ ವಿವಿಧ ಕಂಪನಿಗಳಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ಗುರುವಾರ ರಾತ್ರಿ 9 ಗಂಟೆಗೆ ಬಸ್‌ ಹತ್ತಿದ್ದರು. ಇಬ್ಬರೂ ಗೆಳತಿಯರನ್ನು ಕಳೆದುಕೊಂಡ ಮಿಲನಾ ಹಿರಿಯೂರು ತಾಲ್ಲೂಕು ಆಸ್ಪತ್ರೆಯಲ್ಲಿ ಮೌನಕ್ಕೆ ಶರಣಾಗಿದ್ದರು.

ಭಟ್ಕಳದ ರಶ್ಮಿ ಅವರು ತಮ್ಮಿಬ್ಬರು ಟೆಕ್ಕಿ ಗೆಳತಿಯರಾದ ಗಗನಾ, ರಕ್ಷಿತಾ ಅವರಿಗೆ ಗೋಕರ್ಣ, ಸಿಗಂದೂರು ಪ್ರವಾಸ ಮಾಡಿಸಿ ತಮ್ಮೂರಿಗೆ ಕರೆದೊಯ್ಯಲು ಸಿದ್ಧತೆ ಮಾಡಿಕೊಂಡಿದ್ದರು. ಗುರುವಾರ ರಾತ್ರಿ ತಾಯಿಗೆ ಕರೆ ಮಾಡಿ ತನ್ನ ಗೆಳತಿಯರೊಂದಿಗೆ ಊರಿಗೆ ಬರುವುದಾಗಿ ತಿಳಿಸಿದ್ದರು. ಬೆಂಗಳೂರಿನ ಗಾಂಧಿನಗರದಲ್ಲಿ ಪ್ರಯಾಣ ಆರಂಭಿಸುವ ಮುನ್ನ ಬಸ್‌ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ಚಿತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಶ್ಮಿ ಇನ್ನಿಲ್ಲ ಎಂಬ ಸುದ್ದಿ ತಿಳಿದ ಗಗನಾ, ರಕ್ಷಿತಾ ಆಸ್ಪತ್ರೆಯ ಹಾಸಿಗೆಯಲ್ಲಿ ಕಣ್ಣೀರು ಸುರಿಸುತ್ತಿದ್ದರು.

ಪತ್ನಿ ಬಿಂದು, ಪುತ್ರಿ ಗ್ರೇಯಾ ಅವರನ್ನು ಸಂಭ್ರಮ, ಸಡಗರದಿಂದ ಬಸ್‌ ಹತ್ತಿಸಿದ್ದ ಬೆಂಗಳೂರಿನ ದರ್ಶನ್‌ ಅವರು ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಗಡಗಡನೆ ನಡುಗುತ್ತಿದ್ದರು. ಮೃತದೇಹಗಳನ್ನು ಗುರುತಿಸಲು ಕಾರಿಳಿದು ಬರುವಂತೆ ಪೊಲೀಸರು ಒತ್ತಾಯಿಸುತ್ತಿದ್ದಾಗ ಅವರ ಕೈಕಾಲುಗಳು ಚಲನೆಯನ್ನೇ ಕಳೆದುಕೊಂಡಿದ್ದವು. ಪತ್ನಿ, ಮಗಳು ಬದುಕಿದ್ದಾರೆ ಎಂಬ ಭರವಸೆಯಲ್ಲೇ ಅವರಿದ್ದರು. ಆದರೆ ಕಪ್ಪು ಉಂಡೆಯಾಗಿದ್ದ ಮೃತದೇಹಗಳನ್ನು ಕಂಡು ದರ್ಶನ್‌ ನೆಲಕ್ಕುರುಳಿದರು.

ತಾಲ್ಲೂಕಿನಲ್ಲಿ ಸಂಭವಿಸಿದ ಬಸ್‌ ದುರಂತ ಅತ್ಯಂತ ದುಃಖದ ಸಂಗತಿ. ಸಾವಿನಲ್ಲಿರುವ ಕುಟುಂಬಗಳ ನೋವು ಅರ್ಥವಾಗಿದೆ. ನೋವಿನಿಂದ ಹೊರಬರುವ ಶಕ್ತಿಯನ್ನು ಸಂತ್ರಸ್ತ ಕುಟುಂಬಗಳಿಗೆ ದೇವರು ಕರುಣಿಸಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.