ADVERTISEMENT

ಹೊಸದುರ್ಗ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2024, 16:08 IST
Last Updated 22 ಆಗಸ್ಟ್ 2024, 16:08 IST
ಹೊಸದುರ್ಗದ ಪುರಸಭೆಯಲ್ಲಿ ಗೆಲುವು ಸಂಭ್ರಮಿಸಿದ ಸದಸ್ಯರು
ಹೊಸದುರ್ಗದ ಪುರಸಭೆಯಲ್ಲಿ ಗೆಲುವು ಸಂಭ್ರಮಿಸಿದ ಸದಸ್ಯರು    

ಹೊಸದುರ್ಗ: ಪಟ್ಟಣದ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು.

ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ (ಎ) ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ 19ನೇ ವಾರ್ಡ್‌ನ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ ಸದಸ್ಯೆ ರಾಜೇಶ್ವರಿ ಆನಂದ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ 3ನೇ ವಾರ್ಡ್ ಸದಸ್ಯೆ ಗೀತಾ ಗಜೇಂದ್ರ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾ ಪ್ರಕ್ರಿಯೆ ವೇಳೆ ಕಾಂಗ್ರೆಸ್‌ನ 4 ಸದಸ್ಯರು ಗೈರಾಗಿದ್ದರು. ಬಿಜೆಪಿ ಮತ್ತು ಪಕ್ಷೇತರರು ಸೇರಿ 19 ಸದಸ್ಯರು ಹಾಜರಿದ್ದರು. ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ತಿರುಪತಿ ಪಾಟೀಲ್ ಅವರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಘೋಷಿಸಿದರು.

ADVERTISEMENT

ಪುರಸಭೆ ಮುಂಭಾಗದಲ್ಲಿ ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

23 ಸದಸ್ಯರ ಬಲ ಹೊಂದಿರುವ ಹೊಸದುರ್ಗ ಪಟ್ಟಣದ ಪುರಸಭೆಯಲ್ಲಿ ಬಿಜೆಪಿ ಸದಸ್ಯರು 14, ಪಕ್ಷೇತರರು 5, ಕಾಂಗ್ರೆಸ್ 4 ಸದಸ್ಯರ ಬಲ ಹೊಂದಿದೆ. 14 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಮೊದಲ ಅವಧಿಯ ವೇಳೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಲಿಂಗಮೂರ್ತಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮುರುಳಿ, ಮಂಡಲ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್, ಪ್ರಧಾನ ಕಾರ್ಯದರ್ಶಿ ಜಗದೀಶ್ ರಾಮಯ್ಯ, ಮುಖಂಡರಾದ ದೊಡ್ಡಘಟ್ಟ ಲಕ್ಷ್ಮಣ್, ಹೆಗ್ಗೆರೆ ಶಂಕ್ರಪ್ಪ ಮತ್ತು ದಿಲ್ಸೆ ದಿಲೀಪ್ ಗುರುಸ್ವಾಮಿ ಸೇರಿ ಹಲವು ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.