ADVERTISEMENT

ಯೋಧರು, ರೈತರದು ಪೂಜ್ಯನೀಯ ಸ್ಥಾನ: ಮಾದಾರ ಚನ್ನಯ್ಯ ಸ್ವಾಮೀಜಿ

ಯೋಧರ ಸ್ಮರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 11:39 IST
Last Updated 14 ಫೆಬ್ರುವರಿ 2020, 11:39 IST
ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ವೀರಯೋಧರ ಸ್ಮರಣೆ ಅಂಗವಾಗಿ ಚಿತ್ರದುರ್ಗದಲ್ಲಿ ಶುಕ್ರವಾರ ಕಂಥಕ ಫೌಂಡೇಶನ್‌ನಿಂದ ನಡೆದ ಕಾರ್ಯಕ್ರಮದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಸಿ ನೆಡುತ್ತಿರುವುದು. 
ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ವೀರಯೋಧರ ಸ್ಮರಣೆ ಅಂಗವಾಗಿ ಚಿತ್ರದುರ್ಗದಲ್ಲಿ ಶುಕ್ರವಾರ ಕಂಥಕ ಫೌಂಡೇಶನ್‌ನಿಂದ ನಡೆದ ಕಾರ್ಯಕ್ರಮದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಸಿ ನೆಡುತ್ತಿರುವುದು.    

ಚಿತ್ರದುರ್ಗ: ‘ಭಾರತ ಸೇರಿ ವಿಶ್ವದ ಯಾವುದೇ ದೇಶದ ಪ್ರಜೆಯಾಗಲಿ ದೇವರ ನಂತರದ ಗೌರವವನ್ನು ಯೋಧರು ಮತ್ತು ರೈತರಿಗೆ ಕೊಡುವುದೇ ಉತ್ತಮ ಸಂಸ್ಕೃತಿ’ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಲಹೆ ನೀಡಿದರು.

ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ವೀರಯೋಧರ ಸ್ಮರಣೆ ಅಂಗವಾಗಿಒನಕೆ ಓಬವ್ವ ವೃತ್ತ ಸಮೀಪದ ವೀರವನಿತೆ ಒನಕೆ ಓಬವ್ವ ಪ್ರತಿಮೆ ಬಳಿ ಕಂಥಕ ಫೌಂಡೇಶನ್‌ ಶುಕ್ರವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದ ನೇತೃತ್ವವಹಿಸಿ ಅವರು ಮಾತನಾಡಿದರು.

‘ರಾಷ್ಟ್ರೀಯ ಹಬ್ಬ, ಹುತಾತ್ಮ ಯೋಧರ ದಿನಾಚರಣೆಗೆ ಮಾತ್ರ ಯೋಧರ ಸ್ಮರಣೆ ಸೀಮಿತವಾಗಬಾರದು. ಪ್ರಾಣವನ್ನು ಲೆಕ್ಕಿಸದೇ ದೇಶ ಕಾಯುವ ಅವರನ್ನು ವರ್ಷವಿಡಿ ಸ್ಮರಿಸಬೇಕಾದ್ದು ಪ್ರತಿಯೊಬ್ಬರ ಜವಾಬ್ದಾರಿ. ಒಂದು ದಿನ ಯೋಧರು ಕರ್ತವ್ಯ ಮರೆತರೆ, ದೇಶ ಪರಕೀಯರ ಪಾಲಾಗಬಹುದು. ಇಲ್ಲವೇ ಆಂತರಿಕ ಭದ್ರತೆ ಕುಸಿಯಬಹುದು. ಹೀಗೆ ಶತ್ರುಗಳಿಂದ ಉಂಟಾಗಬಹುದಾದ ತೊಂದರೆಗಳ ಕುರಿತು ಪ್ರಜೆಗಳು ಆಲೋಚಿಸಿದರೆ ಸೈನಿಕರ ಬಗ್ಗೆ ಯಾರು ಹಗುರವಾಗಿ ಮಾತನಾಡುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಪುಲ್ವಾಮಾ ದಾಳಿ ನಡೆದು ವರ್ಷವಾಗಿದ್ದು, ಹುತಾತ್ಮರನ್ನು ನೆಪಮಾತ್ರಕ್ಕೆ ಸ್ಮರಿಸಿದರೆ ಮನಸಾಕ್ಷಿ ವಿರುದ್ಧ ನಡೆದುಕೊಂಡಂತೆ ಆಗುತ್ತದೆ. ಆದ್ದರಿಂದ ಅವರ ಸ್ಮರಣಾರ್ಥ ಸಸಿ ನೆಟ್ಟು ಮರ ಬೆಳೆಸುವುದು ಸೇರಿ ಇತರರಿಗೂ ಮಾದರಿಯಾಗುವಂತೆ ಗೌರವಯುತವಾಗಿ ನೆನೆಯುವ ಕೆಲಸ ಆಗಬೇಕು’ ಎಂದು ಸಲಹೆ ನೀಡಿದರು.

‘ಪರಿಸರ ಮನುಕುಲ ಸೇರಿ ಇಡೀ ಜೀವರಾಶಿಗಳಿಗೆ ಅತ್ಯಂತ ಅಗತ್ಯವಾಗಿ ಬೇಕಾಗಿರುವ ಸಂಪತ್ತಿನ ರಾಶಿಯಾಗಿದೆ. ಆದರೆ, ಮಾನವನ ದುರಾಸೆಯಿಂದಾಗಿ ಪ್ರಸ್ತುತ ದಿನಗಳಲ್ಲಿ ಪ್ರಾಕೃತಿಕ ಸಂಪತ್ತಾದ ನೀರನ್ನು ದುಡ್ಡು ಕೊಟ್ಟು ಕೊಳ್ಳಬೇಕಾದ ಪರಿಸ್ಥಿತಿ ನಾವೇ ನಿರ್ಮಾಣ ಮಾಡಿಕೊಂಡಿದ್ದೇವೆ. ಮುಂದೊಂದು ದಿನ ಗಾಳಿಗೂ ಇಂತಹ ದುಸ್ಥಿತಿ ಎದುರಾಗಬಾರದು. ಅದಕ್ಕಾಗಿ ದೇಶದ ಹಿಮಾಲಯ, ಈಶಾನ್ಯ ರಾಜ್ಯ, ಪಶ್ಚಿಮ ಘಟ್ಟಗಳಲ್ಲಿನ ಅರಣ್ಯ ಪ್ರದೇಶ ಹಾಗೂ ನೈಸರ್ಗಿಕ ಸಂಪತ್ತನ್ನು ಉಳಿಸಬೇಕಾದ ಅಗತ್ಯವಿದೆ’ ಎಂದು ಮನವಿ ಮಾಡಿದರು.

ಪತ್ರಕರ್ತ ಹರಿಯಬ್ಬೆ ಹೆಂಜೆರಪ್ಪ, ಫೌಂಡೇಶನ್‌ನ ಭಾರ್ಗವಿ, ಜೀತೇಂದ್ರ, ದಗ್ಗೆ ಶಿವಪ್ರಕಾಶ್, ಪೃಥ್ವಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.