ADVERTISEMENT

ಚಿತ್ರದುರ್ಗ | ಡಿವೈಡರ್‌: ಮಣ್ಣು ಹಾಕಿ 3 ವರ್ಷವಾದರೂ ಸಸಿ ನೆಟ್ಟಿಲ್ಲ!

ಕೋಟೆನಗರಿಯ ರಸ್ತೆಗಳಿಗೆ ಹಸಿರು ರೂಪ ನೀಡಲು ನಗರಸಭೆ ವಿಫಲ, ಪರಿಸರ ಪ್ರೇಮಿಗಳ ಅಸಮಾಧಾನ

ಎಂ.ಎನ್.ಯೋಗೇಶ್‌
Published 26 ಫೆಬ್ರುವರಿ 2026, 6:41 IST
Last Updated 26 ಫೆಬ್ರುವರಿ 2026, 6:41 IST
ಬಿ.ಡಿ. ರಸ್ತೆ ಮದಕರಿ ವೃತ್ತದ ಬಳಿ ರಸ್ತೆ ಡಿವೈಡರ್‌ನಡುವೆ ನೀರಿಲ್ಲದೇ ಒಣಗುತ್ತಿರುವ ಸಸಿಗಳು
ಬಿ.ಡಿ. ರಸ್ತೆ ಮದಕರಿ ವೃತ್ತದ ಬಳಿ ರಸ್ತೆ ಡಿವೈಡರ್‌ನಡುವೆ ನೀರಿಲ್ಲದೇ ಒಣಗುತ್ತಿರುವ ಸಸಿಗಳು   

ಚಿತ್ರದುರ್ಗ: ನಗರದ ವಿವಿಧೆಡೆಯಿರುವ ರಸ್ತೆ ವಿಭಜಕ (ಡಿವೈಡರ್‌)ಗಳ ನಡುವೆ ಸಸಿ ನೆಡಲು ಮಣ್ಣು ಹಾಕಿ 3 ವರ್ಷಗಳಾಗಿವೆ. ಅದಕ್ಕಾಗಿ ₹ 1 ಕೋಟಿ ವ್ಯಯಿಸಲಾಗಿದೆ. ಇಲ್ಲಿಯವರೆಗೂ ಸಸಿ ನೆಡದೆ ಹಾಗೆಯೇ ಬಿಟ್ಟಿರುವುದು ಸಾರ್ವಜನಿಕರ ಆಕ್ರೊಶಕ್ಕೆ ಕಾರಣವಾಗಿದೆ.

ಜಿ.ಎಚ್‌. ತಿಪ್ಪಾರೆಡ್ಡಿ ಅವರು ಶಾಸಕರಾಗಿದ್ದ ಸಂದರ್ಭ ನಗರದ ವಿವಿಧೆಡೆ ಇರುವ ಮುಖ್ಯ ರಸ್ತೆಗಳನ್ನು ದ್ವಿಪಥವನ್ನಾಗಿ ಮಾಡಿ ಡಿವೈಡರ್‌ ನಿರ್ಮಿಸಲಾಯಿತು. ಚಳ್ಳಕೆರೆ ವೃತ್ತದಿಂದ ಗಾಂಧಿ ವೃತ್ತದವರೆಗೂ ನಿರ್ಮಿಸಿರುವ ದ್ವಿಪಥ ಹಾಗೂ ಡಿವೈಡರ್‌ ನಗರಕ್ಕೆ ಒಂದು ಸೌಂದರ್ಯ ತಂದುಕೊಟ್ಟಿದೆ. ಡಿವೈಡರ್‌ ಕಂಬಗಳಿಗೆ ದೀಪಾಲಂಕಾರ ಮಾಡಿರುವ ಕಾರಣ ರಾತ್ರಿಯ ವೇಳೆ ಸುಂದರವಾಗಿ ಕಾಣಿಸುತ್ತವೆ.

ಬಿ.ಡಿ. ರಸ್ತೆ ಮಾತ್ರವಲ್ಲದೇ ಹೊಳಲ್ಕೆರೆ ರಸ್ತೆ, ಜೋಗಿಮಟ್ಟಿ ರಸ್ತೆ, ಜೆಸಿಆರ್‌ ರಸ್ತೆ, ಮೆದೇಹಳ್ಳಿ ರಸ್ತೆ, ಸ್ಟೇಡಿಯಂ ರಸ್ತೆ, ದಾವಣಗೆರೆ ರಸ್ತೆಗೂ ಡಿವೈಡರ್‌ ಅಳವಡಿಸಲಾಗಿದ್ದು ದೀಪಗಳು ಕಣ್ಮನ ಸೆಳೆಯುತ್ತಿವೆ. ಆದರೆ, ಡಿವೈಡರ್‌ ನಡುವೆ ಹೂವಿನ ಗಿಡ ಹಾಕಿ ಹಸಿರು ರೂಪ ನೀಡಬೇಕು ಎಂಬ ಉದ್ದೇಶ ಈಗಲೂ ಸಾಕಾರಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿರುವ ಡಿವೈಡರ್‌ಗೆ ಹಸಿರು ರೂಪ ನೀಡಲಾಗಿದೆ. ಅದೇ ರೀತಿ ಕೋಟೆನಗರಿ ರಸ್ತೆ ಹಾಗೂ ಡಿವೈಡರ್‌ಗೆ ನಡುವೆ ಸಸಿ ಹಾಕಲು ನಗರಸಭೆ ನಿರ್ಧಾರ ಕೈಗೊಂಡಿತ್ತು.

ADVERTISEMENT

2023ರಲ್ಲಿ ಎಲ್ಲಾ ಡಿವೈಡರ್‌ಗೂ ಸಸಿ ನೆಡಲು ಹಾಗೂ ನೀರು ಪೂರೈಕೆಗೆ ಪೈಪ್‌ಲೈನ್‌ ಅಳವಡಿಸಲು ₹ 1 ಕೋಟಿ ವೆಚ್ಚ ಮಾಡಲಾಗಿತ್ತು. ಡಿವೈಡರ್‌ಗೆ ಡ್ರಿಪ್‌ ಮಾದರಿಯಲ್ಲಿ ನೀರು ಪೂರೈಸಲು ಪೈಪ್‌ಲೈನ್‌ ಕೂಡ ಅಳವಡಿಸಲಾಗಿತ್ತು. ಸಸಿ ನೆಡುವ ಉದ್ದೇಶದಿಂದ ಡಿವೈಡರ್‌ ನಡುವಿನ ಜಾಗಕ್ಕೆ ಮಣ್ಣಿನಿಂದ ಭರ್ತಿ ಮಾಡಲಾಗಿತ್ತು. ನೆಪಕ್ಕೆ ಎಂಬಂತೆ ಕೆಲವು ಕಡೆಗಳಲ್ಲಿ ಮಾತ್ರ ತುಂಡು ತುಂಡಾಗಿ ಸಸಿ ಹಾಕಲಾಗಿತ್ತು.

‘ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ನಗರಸಭೆ ಅಧಿಕಾರಿಗಳು ಡಿವೈಡರ್‌ಗಳನ್ನು ಮರೆತೇಬಿಟ್ಟರು. ಹೊಸದಾಗಿ ಸಸಿ ಹಾಕುವುದಿರಲಿ, ಹಾಕಿರುವ ಸಸಿಗಳನ್ನು ನಿರ್ವಹಣೆ ಮಾಡಲೂ ಇಲ್ಲ, ಅವುಗಳಿಗೆ ನೀರನ್ನೂ ಬಿಡಲಿಲ್ಲ. ಹೀಗಾಗಿ ಡಿವೈಡರ್‌ಗಳು ಕೇವಲ ದೀಪಾಲಂಕಾರಕ್ಕೆ ಸೀಮಿತವಾಗಿವೆ’ ಎಂದು ನಗರದ ಪರಿಸರ ಪ್ರೇಮಿ ಜೆ. ರುದ್ರಮೂರ್ತಿ ಹೇಳಿದರು.

ಕಳೆದ ವರ್ಷ ಉತ್ತಮ ಮಳೆಯಾದ ಕಾರಣ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣ, ಮದಕರಿ ವೃತ್ತ ಸೇರಿದಂತೆ ಒಂದೆರಡು ಕಡೆ ಸಸಿಗಳು ಉಳಿದುಕೊಂಡಿದ್ದವು. ಆದರೆ, ಇತ್ತೀಚೆಗೆ ಬೇಸಿಗೆ ಬಿಸಿಲ ಝಳ ದಿನೇದಿನೇ ಹೆಚ್ಚುತ್ತಿರುವ ಕಾರಣ ಇರುವ ಗಿಡಗಳೂ ಒಣಗಿ ಹೋಗುತ್ತಿವೆ. ಇದನ್ನು ಕಂಡ ಸಾರ್ವಜನಿಕರು ಗಿಡ ಉಳಿಸಿ ಹಸಿರು ಪರಿಸರ ಕಾಪಾಡುವಂತೆ ಒತ್ತಾಯ ಮಾಡುತ್ತಿದ್ದಾರೆ.

‘ಡಿವೈಡರ್‌ ನಡುವೆ ಮಣ್ಣು ಹಾಕುವುದರಲ್ಲೇ ಮೂರು ವರ್ಷ ಮುಗಿಸಿದ್ದಾರೆ. ಕೇವಲ ಮಣ್ಣಿಗಾಗಿ ₹ 1 ಕೋಟಿ ಹಣ ವೆಚ್ಚ ಮಾಡಿದ್ದಾರೆ. ಅಷ್ಟೂ ಹಣ ಅವ್ಯವಹಾರವಾಗಿದೆ. ಪೈಪ್‌ ಅಳವಡಿಸಿರುವ ಕಾರಣ ನೀರು ಸಿಗುತ್ತದೆ. ಈಗಲಾದರೂ ಗಿಡ ಹಾಕಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು’ ಎಂದು ಸ್ಟೇಡಿಯಂ ರಸ್ತೆ ನಿವಾಸಿ ಎಚ್‌.ಕೆ. ಅಶೋಕ್‌ ಕುಮಾರ್‌ ಒತ್ತಾಯಿಸಿದರು.

ಪ್ರವಾಸದಲ್ಲಿ ಕಲಿತದ್ದು ಏನು?

‘ನಗರಸಭಾ ಸದಸ್ಯರು ಅಧಿಕಾರಿಗಳು ಪ್ರತಿ ವರ್ಷ ದೇಶದ ಮಾದರಿ ನಗರಕ್ಕೆ ಪ್ರವಾಸ ಮಾಡಿ ಅಲ್ಲಿಯ ಪ್ರಮುಖ ಅಂಶಗಳನ್ನು ಅಧ್ಯಯನ ಮಾಡುತ್ತಾರೆ. ಕಳೆದ ವರ್ಷ ಗುಜರಾತ್ ರಾಜ್ಯದ ಅಹಮದಾಬಾದ್‌ಗೆ ಹೋಗಿ ಬಂದಿದ್ದಾರೆ. ಅಲ್ಲಿ ಕಸ ನಿರ್ವಹಣೆ ಹಸಿರು ಪರಿಸರ ಸೃಷ್ಟಿಸಿರುವ ವಿಧಾನಗಳನ್ನು ನೋಡಿ ಬಂದಿದ್ದಾರೆ. ಅಲ್ಲಿಂದ ಬಂದ ನಂತರ ಕಲಿತದ್ದನ್ನು ಏಕೆ ಕಾರ್ಯರೂಪಕ್ಕೆ ತರುತ್ತಿಲ್ಲ? ಕೇವಲ ಮೋಜು ಮಸ್ತಿಗಾಗಿ ಕುಟುಂಬ ಸಮೇತರಾಗಿ ಹೋಗಿ ಬರುತ್ತಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ’ ಎಂದು ಹಸಿರು ಪ್ರೇಮಿ ಟಿ.ಎಂ. ವೀರೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

ಡಿವೈಡರ್‌ ನಡುವೆ ಗಿಡಗಳನ್ನು ಹಾಕಿಸಲು ಕ್ರಮ ವಹಿಸಲಾಗುವುದು. ಈಗಿರುವ ಸಸಿಗಳನ್ನು ಉಳಿಸಿಕೊಳ್ಳಲು ನೀರು ಹಾಯಿಸುವಂತೆ ಸಿಬ್ಬಂದಿ ಸೂಚನೆ ನೀಡುತ್ತೇನೆ.
–ಎಸ್‌.ಲಕ್ಷ್ಮಿ, ಪೌರಾಯುಕ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.