ADVERTISEMENT

ಟ್ರಾಫಿಕ್‌ ಸಿಗ್ನಲ್‌ ದೀಪಗಳೇ ಇಲ್ಲದ ಕೋಟೆನಗರಿ...

ನಿರ್ವಹಣೆ ಮಾಡುತ್ತಿದ್ದ ಕಂಪನಿಗೆ ₹ 30 ಲಕ್ಷ ನೀಡದ ನಗರಸಭೆ; ಗೊಂದಲದ ಗೂಡಾದ ಸರ್ಕಲ್‌ಗಳು

ಎಂ.ಎನ್.ಯೋಗೇಶ್‌
Published 12 ಜನವರಿ 2026, 6:45 IST
Last Updated 12 ಜನವರಿ 2026, 6:45 IST
ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿ ಟ್ರಾಫಿಕ್‌ ದೀಪ ಹೊತ್ತಿಕೊಳ್ಳದ ಕಾರಣ ಸಂಚಾರ ಸಮಸ್ಯೆ ಉಂಟಾಗಿರುವುದು
ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿ ಟ್ರಾಫಿಕ್‌ ದೀಪ ಹೊತ್ತಿಕೊಳ್ಳದ ಕಾರಣ ಸಂಚಾರ ಸಮಸ್ಯೆ ಉಂಟಾಗಿರುವುದು   

ಚಿತ್ರದುರ್ಗ: ಮಧ್ಯಕರ್ನಾಟಕ ಭಾಗದ ಪ್ರಮುಖ ಜಿಲ್ಲಾ ಕೇಂದ್ರ, ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿರುವ ಕೋಟೆನಗರಿಯ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್‌ ದೀಪಗಳೇ ಇಲ್ಲವಾಗಿವೆ. ದೀಪಗಳ ಅಳವಡಿಕೆ ಹಾಗೂ ನಿರ್ವಹಣೆ ವಿಚಾರದಲ್ಲಿ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದರಿಂದ ಟ್ರಾಫಿಕ್‌ ಪೊಲೀಸರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ.

2022ರಲ್ಲಿ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರವು ನಗರದ ಪ್ರಮುಖ ವೃತ್ತಗಳಿಗೆ ಸಿಗ್ನಲ್‌ ದೀಪ ಅಳವಡಿಸಲು ಅನುದಾನ ಒದಗಿಸಿತ್ತು. ನಗರಸಭೆ ಅವುಗಳನ್ನು ಅಳವಡಿಸಿ ನಿರ್ವಹಣೆಯ ಜವಾಬ್ದಾರಿಯನ್ನು ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡಿತ್ತು.  ₹ 30 ಲಕ್ಷ ನಿರ್ವಹಣಾ ವೆಚ್ಚ ಪಾವತಿಸದ ಕಾರಣ 6 ತಿಂಗಳ ಹಿಂದೆ ಆ ಕಂಪನಿ ಏಕಾಏಕಿ ದೀಪಗಳ ನಿರ್ವಹಣೆಯನ್ನು ಸ್ಥಗಿತಗೊಳಿಸಿದೆ. ಈಗ ದೀಪಗಳು ಉರಿಯದ ಕಾರಣ ಸಂಚಾರ ವ್ಯವಸ್ಥೆ ಅಯೋಮಯವಾಗಿದೆ. 

ನಗರದ ಗಾಂಧಿ ವೃತ್ತ, ಚಳ್ಳಕೆರೆ ವೃತ್ತ, ಚೈತನ್ಯ ಸರ್ಕಲ್‌, ಎಸ್‌ಬಿಎಂ ಸರ್ಕಲ್‌, ಕನಕ ವೃತ್ತ ಸೇರಿದಂತೆ ವಿವಿಧೆಡೆ ಟ್ರಾಫಿಕ್‌ ದೀಪ ಅಳವಡಿಸಲಾಗಿತ್ತು. ಈಗ ಎಲ್ಲೆಡೆಯೂ ಟ್ರಾಫಿಕ್‌ ದೀಪಗಳು ಹೊತ್ತಿಕೊಳ್ಳದ ಕಾರಣ ವಾಹನ ದಟ್ಟಣೆ ನಿಯಂತ್ರಿಸಲು ಸಂಚಾರ ಪೊಲೀಸರು ಪ್ರಯಾಸ ಪಡುವಂತಾಗಿದೆ. ಇದರಿಂದ ಬೇಸತ್ತಿರುವ ಅವರು ದೀಪಗಳನ್ನು ಅಳವಡಿಸುವಂತೆ 6 ತಿಂಗಳಲ್ಲಿ ಹಲವು ಬಾರಿ ಪತ್ರ ಬರೆದಿದ್ದಾರೆ. ಇದಕ್ಕೆ ನಗರಸಭೆ ಅಧಿಕಾರಿಗಳು ಸ್ಪಂದಿಸದ ಕಾರಣ ಟ್ರಾಫಿಕ್‌ ಗೊಂದಲ ಮುಂದುವರಿದಿದೆ.

ADVERTISEMENT

‘ನಗರದ ಪ್ರಮುಖ ರಸ್ತೆಗಳ ವಿಸ್ತರಣೆ ಮಾಡದ ಕಾರಣ ವಾಹನ ದಟ್ಟಣೆ ನಿಯಂತ್ರಿಸುವುದು ಕಷ್ಟವಾಗುತ್ತಿದೆ. ಪ್ರಮುಖ ವೃತ್ತಗಳಲ್ಲಿ ಸಿಗ್ನಲ್‌ ದೀಪಗಳೂ ಇಲ್ಲದ ಕಾರಣ ಅಪಘಾತಗಳು ಹೆಚ್ಚುತ್ತಿವೆ. ಪ್ರಮುಖ ವೃತ್ತಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ, ಸಿಗ್ನಲ್‌ ಲೈಟ್‌, ಕಮಾಂಡ್‌ ಕೇಂದ್ರ ಮಾಡಿಕೊಡುವಂತೆ ಪೊಲೀಸರು ಹಲವು ಬಾರಿ ಕೋರಿದ್ದಾರೆ. ಆದರೂ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದು ವಕೀಲ ಸಿ.ಮಂಜುನಾಥ್‌ ಆರೋಪಿಸಿದರು.

ನೆಪಕ್ಕಷ್ಟೇ ರಸ್ತೆ ಸುರಕ್ಷತಾ ಸಮಿತಿ ಸಭೆ: ಪ್ರತಿ ತಿಂಗಳು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯುತ್ತದೆ. ಈ ವೇಳೆ ಟ್ರಾಫಿಕ್‌ ಪೊಲೀಸರು ಪಿಪಿಟಿ ವಿಡಿಯೊ ಮೂಲಕ ನಗರದ ಜನರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಿಚ್ಚಿಡುತ್ತಾರೆ. ಸುಲಲಿತ ಸಂಚಾರ ನಿರ್ವಹಣೆಗೆ ಏನೇನು ಅಗತ್ಯವಿದೆ ಎಂಬುದರ ಕುರಿತ ಬೇಡಿಕೆಗಳನ್ನು ಸಲ್ಲಿಸುತ್ತಾರೆ. ಅದ್ಯಾವುದನ್ನೂ ಸಂಬಂಧಪಟ್ಟವರು ಈಡೇರಿಸುವುದಿಲ್ಲ. ಹೀಗಾಗಿ ಈ ಸಭೆ ನೆಪ ಮಾತ್ರಕ್ಕೆ ನಡೆಸಲಾಗುತ್ತಿದೆ ಎಂಬ ಆರೋಪ ವ್ಯಾಪಕವಾಗಿದೆ.

‘ಒಂದೇ ಸಮಸ್ಯೆಯ ಬಗ್ಗೆ ಹಲವು ಸಭೆಗಳಲ್ಲಿ ಚರ್ಚೆ ಮಾಡುತ್ತಾರೆ. ಅಷ್ಟಾದರೂ ಅದಕ್ಕೆ ಮುಕ್ತಿ ಒದಗಿಸುವುದಿಲ್ಲ. ಕೆಳ ಹಂತದ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶ ಪಾಲನೆ ಮಾಡುತ್ತಿಲ್ಲ. ನಗರದಲ್ಲಿ ಸಂಚಾರ ದೀಪ ಅಳವಡಿಕೆಗೆ ಜಿಲ್ಲಾಧಿಕಾರಿ 6 ತಿಂಗಳ ಹಿಂದೆಯೇ ಸೂಚಿಸಿದ್ದಾರೆ. ಆದರೆ ಇಲ್ಲಿವರೆಗೂ ದೀಪಗಳನ್ನು ಅಳವಡಿಸಿಲ್ಲ’ ಎಂದು ಸಮಿತಿಯ ಸದಸ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು.

ಸಿ.ಸಿ.ಟಿ.ವಿ ಕ್ಯಾಮೆರಾಗಳು ಇಲ್ಲ: ಸಿಗ್ನಲ್‌ ದೀಪಗಳಷ್ಟೇ ಅಲ್ಲ, ನಗರದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳೂ ಹಾಳಾಗಿ 3 ವರ್ಷಗಳೇ ಆಗಿವೆ. ಖಾಸಗಿ ಕಂಪನಿಯೊಂದು 32 ಕ್ಯಾಮೆರಾ ಅಳವಡಿಸಿ ಅವುಗಳ ನಿರ್ವಹಣೆ ಮಾಡುತ್ತಿತ್ತು. ನಿರ್ವಹಣಾ ಅವಧಿ ಮುಗಿದಿರುವುದರಿಂದ ಈಗ ಅವು ಕೆಟ್ಟು ನಿಂತಿವೆ. ಅವುಗಳನ್ನು ರಿಪೇರಿ ಮಾಡಿಸಲು ನಗರಸಭೆ ಅಧಿಕಾರಿಗಳು ವಿಫಲವಾಗಿದ್ದು, ನಗರದಾದ್ಯಂತ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲು ಇಲ್ಲದಂತಾಗಿದೆ. 

ನಗರದ ವಿವಿಧ ಬಡಾವಣೆಯ ಮನೆ, ಅಂಗಡಿ, ಶಾಲೆಗಳಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳೇ ಪೊಲೀಸರಿಗೆ ಆಧಾರವಾಗಿವೆ. ಸಾರ್ವಜನಿಕರ ಸುರಕ್ಷತೆ ಕಾಯ್ದೆಯಡಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯವಾಗಿದೆ. ನಗರದಾದ್ಯಂತ 430 ಕ್ಯಾಮೆರಾಗಳಿವೆ. ನಾಗರಿಕರು ಅಳವಡಿಸಿಕೊಂಡಿರುವ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲಿನಲ್ಲೇ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಅನಿವಾರ್ಯತೆ ನಿರ್ಮಾಣವಾಗಿದೆ. ನಗರಸಭೆಯಾಗಲೀ, ಪೊಲೀಸ್‌ ಇಲಾಖೆಯಾಗಲೀ ಪ್ರಮುಖ ಪ್ರದೇಶದಲ್ಲಿ ಕ್ಯಾಮೆರಾ ಅಳವಡಿಸದ ಕಾರಣ ಕಿಡಿಗೇಡಿಗಳ ಕೃತ್ಯವನ್ನು ತಡೆಯಲು ಸಾಧ್ಯವಾಗದ ಪರಿಸ್ಥಿತಿ ಇದೆ.

ನಗರದ ಪ್ರಮುಖ ಜನನಿಬಿಡ ಪ್ರದೇಶವಾದ ಗಾಂಧಿ ವೃತ್ತದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಇಲ್ಲದಿರುವುದು ಟ್ರಾಫಿಕ್‌ ನಿರ್ವಹಣೆಗೂ ಸವಾಲಾಗಿದೆ. ಐದು ರಸ್ತೆಗಳು ಕೂಡುವ ಈ ಸರ್ಕಲ್‌ನ ಮೂಲೆಯೊಂದರಲ್ಲಿ ಟ್ರಾಫಿಕ್‌ ಪೊಲೀಸರು ನಿಲ್ಲುತ್ತಾರೆ. ಸಿಗ್ನಲ್ ಉಲ್ಲಂಘಿಸುವುದು ಸಾಮಾನ್ಯ ಎಂಬಂತಾಗಿದೆ. ನಿಯಮ ಉಲ್ಲಂಘಿಸುವವರ ಪತ್ತೆಗೂ ಕ್ಯಾಮೆರಾ ಇಲ್ಲವಾಗಿದೆ. ಜೊತೆಗೆ ಕನಕ ವೃತ್ತ, ಮಾರಮ್ಮ ಸರ್ಕಲ್‌, ಸಂಗೊಳ್ಳಿ ರಾಯಣ್ಣ ವೃತ್ತ, ಎಸ್‌ಜೆಎಂ ವೃತ್ತ, ಮದಕರಿ ಸರ್ಕಲ್‌, ಅಂಬೇಡ್ಕರ್‌ ಸರ್ಕಲ್‌ನಲ್ಲಿ ಕ್ಯಾಮೆರಾ ಇಲ್ಲದ ಕಾರಣ ಕಿಡಿಗೇಡಿಗಳ ಓಡಾಟಕ್ಕೆ ಕಡಿವಾಣ ಇಲ್ಲವಾಗಿದೆ.

ನಗರದ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದ ಬಳಿ ಹಿಂದೆ ಸಿ.ಸಿ.ಟಿ.ವಿ ಕ್ಯಾಮೆರಾ ಇತ್ತು. ಆದರೆ ಅದು ಕೆಟ್ಟು ಹೋಗಿ ಹಲವು ವರ್ಷಗಳು ಉರುಳಿವೆ. ಸುತ್ತಲೂ ಬಾರ್‌ ಮತ್ತು ರೆಸ್ಟೋರೆಂಟ್‌ಗಳೇ ಹೆಚ್ಚಾಗಿದ್ದು ಕುಡುಕರ ಹಾವಳಿ ತೀವ್ರವಾಗಿದೆ. ಸರಗಳ್ಳತನ, ಪರ್ಸ್‌ ಕಳ್ಳರಿಗೆ ಕಡಿವಾಣ ಹಾಕಲು ನೆರವಾಗುವ ಕ್ಯಾಮೆರಾಗಳೇ ಇಲ್ಲದ ಕಾರಣ ಜನರು ಪರದಾಡುವ ಪರಿಸ್ಥಿತಿ ಇದೆ. ಖಾಸಗಿ ಬಸ್‌ ನಿಲ್ದಾಣದ ಬಳಿ ಕಿಡಿಗೇಡಿಗಳ ಹಾವಳಿ ವಿಪರೀತವಾಗಿದ್ದು ಅವರ ಮೇಲೆ ಕ್ಯಾಮೆರಾ ಕಣ್ಗಾವಲು ಇಲ್ಲವಾಗಿದೆ.

ನಗರದೊಳಗಿನ ಹಳೇ ರಾಷ್ಟ್ರೀಯ ಹೆದ್ದಾರಿ ಕೆಳಸೇತುವೆಗಳು ಅಪಾಯಕಾರಿ ಆಗಿವೆ. ಇಲ್ಲಿ ದೀಪದ ವ್ಯವಸ್ಥೆಯೂ ಇಲ್ಲದ ಕಾರಣ ಸರಗಳ್ಳತನದ ಹಾವಳಿ ವಿಪರೀತವಾಗಿದೆ. ಜೆಸಿಆರ್‌ ರಸ್ತೆ, ಮೆದೇಹಳ್ಳಿ ಬಳಿಯ ಕೆಳಸೇತುವೆ, ಸರ್ವೀಸ್‌ ರಸ್ತೆಯಲ್ಲಿ ಸಂಜೆಯ ವೇಳೆ ಹೆಚ್ಚು ಮಹಿಳೆಯರ ಓಡಾಟ ಇರುತ್ತದೆ. ಸಮೀಪದಲ್ಲೇ ಗಾರ್ಮೆಂಟ್ಸ್‌ ಕಾರ್ಖಾನೆಗಳಿದ್ದು, ಕೆಲಸಕ್ಕೆಂದು ನಿತ್ಯವೂ ಮಹಿಳೆಯರು ಓಡಾಡುತ್ತಾರೆ. ಜೊತೆಗೆ ಎಪಿಎಂಸಿ ಮಾರುಕಟ್ಟೆಗೂ ನಿತ್ಯ ಮಹಿಳೆಯರು ಓಡಾಡುತ್ತಾರೆ.

‘ನಗರದ ಪ್ರಮುಖ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕು ಎಂದು ಒತ್ತಾಯಿಸಿ ನಗರಸಭೆಗೆ ಪ್ರಸ್ತಾವ ಕಳುಹಿಸಿಯೇ 3 ವರ್ಷಗಳಾಗಿವೆ. ಕ್ಯಾಮೆರಾ ಅಳವಡಿಸಬೇಕಾದ ಸ್ಥಳಗಳ ಪಟ್ಟಿಯನ್ನೂ ನೀಡಲಾಗಿದೆ. ಆದರೆ ನಗರಸಭೆ ಕ್ಯಾಮೆರಾ ಅಳವಡಿಸದ ಕಾರಣ ಕಿಡಿಗೇಡಿಗಳ ಕೃತ್ಯಗಳಿಗೆ ಕಡಿವಾಣ ಹಾಕುವುದು ಕಷ್ಟವಾಗುತ್ತಿದೆ’ ಎಂದು ಪೊಲೀಸ್‌ ಸಿಬ್ಬಂದಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಗಿತಗೊಂಡಿರುವ ಟ್ರಾಫಿಕ್‌ ಸಿಗ್ನಲ್‌ ದೀಪಗಳು
ಹೊತ್ತಿಕೊಳ್ಳದ ಸಿಗ್ನಲ್‌ ದೀಪಗಳು
ಹಿರಿಯೂರಿನ ಮಹಾತ್ಮಗಾಂಧಿ ವೃತ್ತದಲ್ಲಿ ವಾಹನ ದಟ್ಟಣೆ ಉಂಟಾಗಿರುವುದು 
ಟ್ರಾಫಿಕ್‌ ಸಿಗ್ನಲ್‌ ದೀಪಗಳ ಅಳವಡಿಕೆ ಸಂಬಂಧ ಸಂಚಾರ ಪೊಲೀಸರಿಂದ ಮನವಿ ಬಂದಿದೆ. ಆದಷ್ಟು ಬೇಗ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು
ಎಸ್‌.ಲಕ್ಷ್ಮಿ ನಗರಸಭೆ ಪೌರಾಯುಕ್ತೆ ಚಿತ್ರದುರ್ಗ

ನಗರಸಭೆಯಾದರೂ ಸಿಗ್ನಲ್‌ ಸೌಲಭ್ಯವಿಲ್ಲ

ಸುವರ್ಣಾ ಬಸವರಾಜ್

ಹಿರಿಯೂರು: ಇಲ್ಲಿನ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಿ ಹತ್ತು ವರ್ಷ ಕಳೆದರೂ ನಗರದ ಪ್ರಧಾನ ರಸ್ತೆ ವಿಸ್ತರಣೆ ಆಗಿಲ್ಲ. ಸುಗಮ ಸಂಚಾರಕ್ಕೆ ಸಿಗ್ನಲ್ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ ನಾಗರಿಕರಿಗೆ ವಾಹನ ಸವಾರರಿಗೆ ಸಂಚಾರದ ಕಿರಿಕಿರಿ ತಪ್ಪಿಲ್ಲ. ವಾಣಿವಿಲಾಸ ಬಲನಾಲೆಯಿಂದ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರೆಗಿನ ಹುಳಿಯಾರು ಮಾರ್ಗವನ್ನು ದ್ವಿಪಥ ರಸ್ತೆಯನ್ನಾಗಿಸಲಾಗಿದೆ. ವೇದಾವತಿ ಸೇತುವೆಯಿಂದ ಪ್ರವಾಸಿ ಮಂದಿರ ವೃತ್ತದವರೆಗಿನ ರಸ್ತೆಯನ್ನು ವಿಸ್ತರಿಸುವ ಕೆಲಸ ಎರಡು ವರ್ಷದಿಂದ ನಡೆಯುತ್ತಲೇ ಇದೆ. ಆದರೆ ನಿತ್ಯ ನೂರಾರು ಬಾರಿ ಸಂಚಾರ ಅಸ್ತವ್ಯಸ್ತಗೊಳ್ಳುವ ಗಾಂಧಿ ವೃತ್ತ–ವೇದಾವತಿ ಸೇತುವೆ ನಡುವಿನ ರಸ್ತೆಯನ್ನು ಇದುವರೆಗೂ ವಿಸ್ತರಿಸಲು ನಗರಸಭೆ ಆಡಳಿತದಿಂದ ಸಾಧ್ಯವಾಗಿಲ್ಲ. ನಗರದ ತಾಲ್ಲೂಕು ಕಚೇರಿ ಮುಂಭಾಗ ಗಾಂಧಿ ವೃತ್ತ ಸಾರ್ವಜನಿಕ ಆಸ್ಪತ್ರೆ ವೃತ್ತ ಗಿರೀಶ ಶಿಕ್ಷಣ ಸಂಸ್ಥೆ ಹುಳಿಯಾರು ರಸ್ತೆಯಲ್ಲಿನ ಕಿತ್ತೂರು ಚನ್ನಮ್ಮ ವೃತ್ತ ರಾಷ್ಟ್ರೀಯ ಅಕಾಡೆಮಿ ಶಾಲೆಯ ಮುಂಭಾಗದಲ್ಲಿ ರಸ್ತೆ ದಾಟಲು ಶಾಲಾ– ಕಾಲೇಜು ವಿದ್ಯಾರ್ಥಿಗಳು ಪೋಷಕರು ಸಾರ್ವಜನಿಕರು ಹರಸಾಹಸ ಪಡಬೇಕಿದೆ. ಈ ಸ್ಥಳಗಳಲ್ಲಿ ಸಿಗ್ನಲ್ ಅಳವಡಿಸಬೇಕು. ಶಾಲಾ– ಕಾಲೇಜು ಆರಂಭ ಹಾಗೂ ಮುಕ್ತಾಯದ ಸಮಯದಲ್ಲಿ ಪ್ರಮುಖ ಸ್ಥಳಗಳಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಬೇಕು ಎಂಬುದು ನಾಗರಿಕರ ಬಹುವರ್ಷಗಳ ಬೇಡಿಕೆ.

ಕೆಟ್ಟುಹೋದ ದೀಪಗಳಿಗೆ ರಿಪೇರಿ ಇಲ್ಲ

– ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ: ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿರುವ ಪರಿಣಾಮ ದಿನ ದಿನಕ್ಕೂ ವಾಹನ ದಟ್ಟಣೆ ಅಧಿಕಗೊಳ್ಳುತ್ತಿದೆ. ನಗರದಲ್ಲಿ ಟ್ರಾಫಿಕ್ ಸಿಗ್ನಲ್ ದೀಪ ಅಳವಡಿಸದ ಕಾರಣ ನಗರದ ನಾಗರಿಕರ ಓಡಾಟ ಮತ್ತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಹೊಸದಾಗಿ ಬಂದಾಗ ಹುರುಪಿನಿಂದ ಕೆಲಸ ಮಾಡುತ್ತಾರೆ. ಕ್ರಮೇಣ ಸಂಚಾರ ದಟ್ಟಣೆ ನಿಯಂತ್ರಣದ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಾರೆ. ನಗರಸಭೆ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ನಗರದ ಬಳ್ಳಾರಿ ಬೆಂಗಳೂರು ಪಾವಗಡ ಮತ್ತು ಚಿತ್ರದುರ್ಗ ಮಾರ್ಗ ಕೂಡುವ ನೆಹರೂ ಸರ್ಕಲ್ ಬಳಿ ನಾಲ್ಕು ಕಡೆಗೆ ಅಳವಡಿಸಿರುವ ಸಂಚಾರ ದೀಪಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಗರದ ನೆಹರೂ ವೃತ್ತದ ಮುಖ್ಯ ರಸ್ತೆ ಬದಿ ಹೆಚ್ಚು ಗೂಡಂಗಡಿ ಇರುವುದರಿಂದ ವಾಹನ ನಿಲುಗಡೆ ಮತ್ತು ನಿಯಂತ್ರಣ ಸವಾಲಾಗಿದೆ.  ನಗರದಲ್ಲಿ ಸಂಚಾರ ಸಿಬ್ಬಂದಿಯ ಕೊರತೆಯೂ ಇದೆ ಎಂದು ಪೊಲೀಸರು ಹೇಳುತ್ತಾರೆ. ‘ನೆಹರೂ ವೃತ್ತದಲ್ಲಿ ಅಳವಡಿಸಿದ ಸಿಗ್ನಲ್ ದೀಪ ಕೆಟ್ಟು 2-3 ವರ್ಷ ಆದರೂ ರಿಪೇರಿ ಮಾಡಿಸುವುದಿಲ್ಲ. ರಸ್ತೆ ಸುರಕ್ಷತಾ ಸಂಚಾರ ನಿಯಮ ಮತ್ತು ಟ್ರಾಫಿಕ್ ಸಿಗ್ನಲ್ ಬಗ್ಗೆ ಜನಸಾಮಾನ್ಯರಿಗೆ ತಿಳಿವಳಿಕೆ ನೀಡುವ ಕೆಲಸಕ್ಕೆ ಮುಂದಾಗಬೇಕು’ ಎಂದು ಜಿಲ್ಲಾ ನವ ಜಾಗೃತಿ ಯುವ ವೇದಿಕೆ ಅಧ್ಯಕ್ಷ ಚಿತ್ರ ಲಿಂಗಪ್ಪ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.