ADVERTISEMENT

ಚಿತ್ರದುರ್ಗ: ಜಿಲ್ಲೆಯಾದ್ಯಂತ ಮನೆ ಮಾಡಿದ ಕ್ರಿಸ್‌ಮಸ್‌ ಸಂಭ್ರಮ

ಆಕರ್ಷಿಸುತ್ತಿವೆ ಗೋದಲಿ ; ಚರ್ಚ್‌ಗಳಿಗೆ ವಿದ್ಯುತ್ ದೀಪಾಲಂಕಾರ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 7:38 IST
Last Updated 25 ಡಿಸೆಂಬರ್ 2025, 7:38 IST
ವಿದ್ಯುತ್‌ ದೀಪಾಲಂಕಾರದಲ್ಲಿ ಕ್ರಿಸ್‌ಮಸ್‌ ಆಚರಣೆಗೆ ಸಿದ್ಧವಾದ ಚಿತ್ರದುರ್ಗದ ಕೆಳಗೋಟೆಯ ಹೋಲಿ ಫ್ಯಾಮಿಲಿ ಚರ್ಚ್‌
ವಿದ್ಯುತ್‌ ದೀಪಾಲಂಕಾರದಲ್ಲಿ ಕ್ರಿಸ್‌ಮಸ್‌ ಆಚರಣೆಗೆ ಸಿದ್ಧವಾದ ಚಿತ್ರದುರ್ಗದ ಕೆಳಗೋಟೆಯ ಹೋಲಿ ಫ್ಯಾಮಿಲಿ ಚರ್ಚ್‌   

ಚಿತ್ರದುರ್ಗ: ಜಗತ್ತಿಗೆ ಶಾಂತಿ ಸಂದೇಶ ಸಾರುವ ಕ್ರಿಸ್‌ಮಸ್‌ ಆಚರಣೆಗೆ ಜಿಲ್ಲೆಯ ಚರ್ಚ್‌ಗಳು ಅಲಂಕೃತಗೊಂಡಿವೆ. ತಿಂಗಳ ಆರಂಭದಿಂದಲೇ ಕ್ರೈಸ್ತ ಸಮುದಾಯದ ಸದಸ್ಯರು ಹಬ್ಬಕ್ಕೆ ತಯಾರಿ ನಡೆಸಿದ್ದರು. ಕಳೆದ ನಾಲ್ಕೈದು ದಿನದಿಂದ ಕೊನೆ ಹಂತದ ಸಿದ್ಧತೆ ನಡೆಸಿದ್ದಾರೆ.

ನಕ್ಷತ್ರಗಳು, ಗಂಟೆಗಳು, ಸಾಂತಾಕ್ಲಾಸ್‌ ಗೊಂಬೆ, ಸ್ನೇಹಿತರಿಗೆ ಉಡುಗೊರೆಗಳನ್ನು ನೀಡಲು ವಸ್ತುಗಳ ಖರೀದಿಸುತ್ತಿದ್ದ ದೃಶ್ಯ ಮಾರುಕಟ್ಟೆಯಲ್ಲಿ ಜೋರಾಗಿತ್ತು. ಮನೆ ಹಾಗೂ ಚರ್ಚ್‌ಗಳಲ್ಲಿ ಗೋದಲಿ ನಿರ್ಮಿಸಿ ಅಲಂಕರಿಸುವುದು ಕ್ರಿಸ್‌ಮಸ್ ಆಚರಣೆಯ ಪ್ರಮುಖ ಆಕರ್ಷಣೆಯಾಗಿರುವುದರಿಂದ ಪುಟ್ಟ ಗೋದಲಿಯೊಳಗೆ ಆಡು, ಕುರಿ, ಕರುಗಳ ಗೊಂಬೆ ಜೋಡಿಸುವ ಕಾರ್ಯಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಜಿಲ್ಲೆಯಲ್ಲಿ 120ಕ್ಕೂ ಹೆಚ್ಚು ಚರ್ಚ್‌ಗಳಿದ್ದು, ಅವುಗಳನ್ನು ವಿದ್ಯುತ್‌ ದೀಪ, ಆಕಾಶ ಬುಟ್ಟಿ, ಕ್ರಿಸ್‌ಮಸ್‌ ಟ್ರೀಗಳಿಂದ ಸಿಂಗರಿಸಲಾಗಿದೆ. ಏಸುಕ್ರಿಸ್ತನ ಜನನದ ಸನ್ನಿವೇಶವನ್ನು (ಗೋದಲಿ) ಕೃತಕವಾಗಿ ನಿರ್ಮಿಸಲಾಗಿದೆ.

ADVERTISEMENT

ಚರ್ಚ್‌ಗಳಲ್ಲಿ ಕ್ರಿಸ್ತನ ಆರಾಧನೆ, ಪೂಜಾರ್ಪಣೆ, ಪ್ರಾರ್ಥನೆಗಳು ಬುಧವಾರ ರಾತ್ರಿ 11ರಿಂದ ಮಧ್ಯರಾತ್ರಿ 2ರವರೆಗೆ ನಿರಂತರವಾಗಿ ಸಾಗಿದವು. ಬಳಿಕ ಏಸುಕ್ರಿಸ್ತನ ಭಕ್ತರು, ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿ ವಿಶೇಷವಾಗಿ ತಯಾರಿಸಿದ್ದ ಕೇಕ್‌ಗಳನ್ನು ಕತ್ತರಿಸಿ ಏಸುಕ್ರಿಸ್ತನ ಜನ್ಮದಿನವನ್ನು ಸಡಗರದಿಂದ ಆಚರಿಸಿದರು.

ಜಗತ್ತಿಗೆ ಶಾಂತಿ ಸಂದೇಶ ಸಾರುವ ಹಬ್ಬವಾಗಿರುವ ಕ್ರಿಸ್‌ಮಸ್‌ನಲ್ಲಿ ಎಲ್ಲೆಡೆ ಶಾಂತಿ ನೆಲೆಸಲಿ ಎಂಬ ದಿವ್ಯ ಸಂದೇಶದೊಂದಿಗೆ ಬಹುತೇಕ ಎಲ್ಲ ಕ್ಯಾಥೋಲಿಕ್‌ ಹಾಗೂ ಪ್ರೊಟೆಸ್ಟೆಂಟ್‌ ಚರ್ಚ್‍ಗಳಲ್ಲಿ ಗುರುವಾರ ಬೆಳಿಗ್ಗೆ 9ರಿಂದ ಬೆಳಗ್ಗೆ 11ರವರೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.

ನಗರದ ಸೇಂಟ್‌ ಜೋಸೆಫ್‌ ಶಾಲೆ ಸಮೀಪದ ಹೋಲಿ ಫ್ಯಾಮಿಲಿ ಕ್ಯಾಥೋಲಿಕ್‌ ಚರ್ಚ್‌ ಆವರಣದಲ್ಲಿ ಯೇಸುಕ್ರಿಸ್ತ ಹುಟ್ಟಿದ ಸಂದರ್ಭದಲ್ಲಿ ಇದ್ದಂಥ ವಾತಾವರಣದ ರೀತಿಯಲ್ಲಿ ‘ಗೋದಲಿ’ ಮಾದರಿಯನ್ನು ಅಚ್ಚುಕಟ್ಟಾಗಿ ನಿರ್ಮಿಸುವಲ್ಲಿ ಸದಸ್ಯರು ನಿರತರಾಗಿದ್ದರು.

ಇಲ್ಲಿನ ಫಿಲ್ಟರ್‌ಹೌಸ್‌ ರಸ್ತೆಯಲ್ಲಿರುವ ಪ್ರೊಟೆಸ್ಟಂಟ್‌ ಚರ್ಚ್‌ ಸಿಎಸ್‌ಐ ಪುನರುತ್ಥಾನ ದೇಗುಲವನ್ನು ರಂಗು ರಂಗಿನಿಂದ ಸಿಂಗಾರಗೊಳಿಸಲಾಗಿದೆ. ಕೆಳಗೋಟೆಯ ಹೋಲಿ ಫ್ಯಾಮಿಲಿ ಚರ್ಚ್‌, ಕಾಮನಬಾವಿ ಬಡಾವಣೆಯ ಆರೋಗ್ಯ ಮಾತೆ, ಡಾನ್‌ ಬೋಸ್ಕೊ, ಕೆಎಸ್‌ಎಫ್‌ಸಿ ಮುಂಭಾಗದ ಕ್ರಿಶ್ಚಿಯನ್‌ ವರ್ಷಿಪ್‌ ಚರ್ಚ್‌, ಸಿಎಸ್‌ಐ, ಸೆಂಟ್‌ ಜಾನ್ಸ್‌, ಫುಲ್‌ ಗಾಸ್ಪಲ್‌, ಹಳಿಯೂರಿನ ಬಾಲಏಸು, ಇಂಗಳದಾಳ್‌ನ ಕ್ಯಾಥೋಲಿಕ್‌ ಚರ್ಚ್‌, ರೆಹಬೋತ್‌, ಎಜಿ ಚರ್ಚ್‌, ಐಇಎಂ ಸೇರಿದಂತೆ ವಿವಿಧ ಚರ್ಚ್‍ಗಳಲ್ಲಿ ಹಬ್ಬ ಆಚರಿಸಲಾಗುತ್ತಿದೆ.

ಚರ್ಚ್‌ ಬಡಾವಣೆಯ ಹೋಲಿ ಫ್ಯಾಮಿಲಿ ಚರ್ಚ್‌ ಸೇರಿದಂತೆ ಜಿಲ್ಲೆಯ ಬಹುತೇಕ ಚರ್ಚ್‍ಗಳಲ್ಲಿ ಗುರುವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಹಬ್ಬದ ನಿಮಿತ್ತ ಬಹುತೇಕ ಬೇಕರಿಗಳಲ್ಲಿ ಸಿದ್ಧವಾಗಿದ್ದ ನವನವೀನ ವಿನ್ಯಾಸದ ಕೇಕ್‌ಗಳ ಖರೀದಿಗೆ ಜನರು ಮುಗಿಬಿದ್ದಿದ್ದರು.

ಕೆಳಗೋಟೆಯ ಹೋಲಿ ಫ್ಯಾಮಿಲಿ ಚರ್ಚ್‌ ಆವರಣದಲ್ಲಿ ಆಕರ್ಷಿಸುತ್ತಿರುವ ‘ಗೋದಲಿ’ ಮಾದರಿ ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ
ಗೋದಲಿ ನಿರ್ಮಿಸಿ ನಕ್ಷತ್ರಗಳನ್ನು ಕಟ್ಟಿ ಮನೆಯನ್ನು ಸಿಂಗರಿಸಲಾಗಿದೆ. ಹಬ್ಬಕ್ಕೆ ಸ್ನೇಹಿತರನ್ನು ಆಹ್ವಾನಿಸಿ ಅವರಿಗೆ ಕೇಕ್‌ ಉಡುಗೊರೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಫ್ರ್ಯಾನ್‌ಸಿಸ್‌ ಕ್ರಾಸ್ಥಾ ಏಸು ಆರಾಧಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.