ADVERTISEMENT

ಅಲ್ಪಸಂಖ್ಯಾತ ಮತದಾರರನ್ನು ಕೈಬಿಡುವ ಹುನ್ನಾರ

ಬಿಜೆಪಿ ವಿರುದ್ಧ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ತಾಜ್‌ಪೀರ್‌ ಆರೋಪ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 12:31 IST
Last Updated 14 ಜನವರಿ 2021, 12:31 IST
ಮೊಳಕಾಲ್ಮುರು ತಾಲ್ಲೂಕು ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗಕ್ಕೆ ನೇಮಕಗೊಂಡಿರುವ ಎಂ.ಜುಬೇರ್ ಅಹಮ್ಮದ್ ಹಾಗೂ ಕೆ.ಮಹಮ್ಮದ್ ಮೆಹಬೂಬ್ ಅವರಿಗೆ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ ಅವರು ಗುರುವಾರ ನೇಮಕಾತಿ ಪತ್ರ ನೀಡಿದರು.
ಮೊಳಕಾಲ್ಮುರು ತಾಲ್ಲೂಕು ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗಕ್ಕೆ ನೇಮಕಗೊಂಡಿರುವ ಎಂ.ಜುಬೇರ್ ಅಹಮ್ಮದ್ ಹಾಗೂ ಕೆ.ಮಹಮ್ಮದ್ ಮೆಹಬೂಬ್ ಅವರಿಗೆ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ ಅವರು ಗುರುವಾರ ನೇಮಕಾತಿ ಪತ್ರ ನೀಡಿದರು.   

ಚಿತ್ರದುರ್ಗ: ಮತದಾರರ ‍ಪಟ್ಟಿಯಿಂದ ಅಲ್ಪಸಂಖ್ಯಾತರನ್ನು ಕೈಬಿಡುವ ಹುನ್ನಾರಗಳು ನಡೆಯುತ್ತಿವೆ. ಚುನಾವಣೆಗೂ ಮುನ್ನ ಪಟ್ಟಿಯನ್ನು ಪರಿಶೀಲಿಸಬೇಕು ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ ತಿಳಿಸಿದರು.

ಮೊಳಕಾಲ್ಮುರು ತಾಲ್ಲೂಕು ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ನೇಮಕಗೊಂಡಿರುವ ಎಂ.ಜುಬೇರ್ ಅಹಮ್ಮದ್ ಹಾಗೂ ಕಾರ್ಯಾಧ್ಯಕ್ಷ ಕೆ.ಮಹಮ್ಮದ್ ಮೆಹಬೂಬ್ ಅವರಿಗೆ ಗುರುವಾರ ನೇಮಕಾತಿ ಪತ್ರ ನೀಡಿ ಮಾತನಾಡಿದರು.

‘ಕೋಮುವಾದಿ ಶಕ್ತಿಗಳು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿವೆ. ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗುತ್ತಿವೆ. ಹೆಸರು ಬಿಟ್ಟು ಹೋಗಿದ್ದರೆ ಪುನಾ ಸೇರಿಸಿ. 18 ವರ್ಷ ತುಂಬಿದ ಎಲ್ಲರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿ’ ಎಂದರು.

ADVERTISEMENT

‘ಭಾರತ ಜಾತ್ಯತೀತ ರಾಷ್ಟ್ರ. ಹಲವು ಜಾತಿ, ಧರ್ಮದ ಜನರು ಸಹಬಾಳ್ವೆ ನಡೆಸುತ್ತಿದ್ದಾರೆ. ರಾಜಕೀಯ ಅಧಿಕಾರ ಹಿಡಿಯುವ ಉದ್ದೇಶದಿಂದ ಧರ್ಮಗಳ ನಡುವೆ ಕಂದಕ ಸೃಷ್ಟಿಸಿ ಗಲಾಟೆಗೆ ಕುಮ್ಮಕ್ಕು ನೀಡಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್‌ ಎಲ್ಲ ಜಾತಿ, ಧರ್ಮಗಳನ್ನು ಸಮಾನವಾಗಿ ಕಾಣುತ್ತಿದೆ. ಸಾಮಾಜಿಕ ನ್ಯಾಯದ ಪರ ಧ್ವನಿ ಎತ್ತುತ್ತಿದೆ’ ಎಂದು ಹೇಳಿದರು.

‘ಹಲವು ವರ್ಷ ದೇಶ ಆಳಿದ ಕಾಂಗ್ರೆಸ್‌ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಪಂಚವಾರ್ಷಿಕ ಯೋಜನೆ ಜಾರಿಗೆ ತಂದು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದೆ. ಶೀಘ್ರದಲ್ಲೇ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗೆ ಚುನಾವಣೆ ಘೋಷಣೆಯಾಗಲಿದ್ದು, ನಿಷ್ಠೆಯಿಂದ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ’ ಎಂದರು.

ಮೊಳಕಾಲ್ಮುರು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟೇಲ್ ಜಿ.ಪಾಪನಾಯಕ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಲ್ಲಾಭಕ್ಷಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.