ADVERTISEMENT

ಚಿತ್ರದುರ್ಗ | ಲಾಕ್‌ಡೌನ್‌ನಿಂದ ಪ್ರವಾಸೋದ್ಯಮ ಸ್ಥಗಿತ, ಸಂಕಷ್ಟದಲ್ಲಿ ಬದುಕು

ಟ್ಯಾಕ್ಸಿ, ಹೋಟೆಲ್‌ ಉದ್ಯಮಕ್ಕೆ ಭಾರಿ ಪೆಟ್ಟು, ಭಣಗುಡುತ್ತಿವೆ ಪ್ರವಾಸಿ ತಾಣ

ಜಿ.ಬಿ.ನಾಗರಾಜ್
Published 20 ಮೇ 2020, 19:45 IST
Last Updated 20 ಮೇ 2020, 19:45 IST
ಚಿತ್ರದುರ್ಗ ಏಳು ಸುತ್ತಿನ ಕೋಟೆ ಬಾಗಿಲು ಮುಚ್ಚಿದೆ.
ಚಿತ್ರದುರ್ಗ ಏಳು ಸುತ್ತಿನ ಕೋಟೆ ಬಾಗಿಲು ಮುಚ್ಚಿದೆ.   

ಚಿತ್ರದುರ್ಗ: ಲಾಕ್‌ಡೌನ್‌ ಘೋಷಣೆಗೂ ಮೊದಲೇ ಸ್ಥಗಿತಗೊಂಡ ಪ್ರವಾಸೋದ್ಯಮ ಪುನರಾರಂಭಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಪ್ರವಾಸಿಗರನ್ನೇ ನಂಬಿ ಬದುಕು ಕಟ್ಟಿಕೊಂಡವರು ಬೀದಿಗೆ ಬೀಳುವ ಆತಂಕದಲ್ಲಿದ್ದಾರೆ.

ಲಾಕ್‌ಡೌನ್‌ ನಿಯಮ ಸಡಿಲಗೊಂಡರೂ ಪ್ರವಾಸೋದ್ಯಮಕ್ಕೆ ಅವಕಾಶ ಸಿಕ್ಕಿಲ್ಲ. ಪ್ರವಾಸಿಗರಿಲ್ಲದೇ ತಾಣಗಳು ಬಿಕೊ ಎನ್ನುತ್ತಿವೆ. ಇಂತಹ ತಾಣಗಳಲ್ಲಿದ್ದ ಅಂಗಡಿಗಳು ಇನ್ನೂ ಬಾಗಿಲು ತೆರೆದಿಲ್ಲ. ಹೋಟೆಲ್‌, ಟ್ಯಾಕ್ಸಿ ಉದ್ಯಮ ಚೇತರಿಕೆ ಕಾಣದಷ್ಟು ಪಾತಾಳಕ್ಕೆ ಕುಸಿದಿದೆ.

ಐತಿಹಾಸಿಕ ಏಳು ಸುತ್ತಿನ ಕೋಟೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ. ಪ್ರತಿ ವರ್ಷ ಮೂರು ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಚಂದ್ರವಳ್ಳಿ, ಜೋಗಿಮಟ್ಟಿ, ಆಡುಮಲ್ಲೇಶ್ವರ ಕಿರು ಮೃಗಾಲಯ, ಮುರುಘಾ ವನ, ವಿ.ವಿ.ಸಾಗರ ಸೇರಿ ಹಲವು ಪ್ರವಾಸಿತಾಣಗಳು ಜಿಲ್ಲೆಯಲ್ಲಿವೆ. ಪ್ರತಿ ಬೇಸಿಗೆಯಲ್ಲಿ ಪ್ರವಾಸೋದ್ಯಮ ಗರಿಗೆದರುತ್ತದೆ. ಆದರೆ, ಈ ವರ್ಷ ಕೊರೊನಾ ಸೋಂಕಿನ ಭೀತಿಯಿಂದಾಗಿ ಪ್ರವಾಸಿ ತಾಣಗಳು ಬಾಗಿಲು ಮುಚ್ಚಿವೆ.

ADVERTISEMENT

65 ದಿನ ಚಟುವಟಿಕೆ ಸ್ಥಗಿತ:ಕೊರೊನಾ ಸೋಂಕಿನ ಭೀತಿ ಆವರಿಸುತ್ತಿದ್ದಂತೆ ಮೊದಲು ಸ್ಥಗಿತಗೊಂಡಿದ್ದೆ ಪ್ರವಾಸೋದ್ಯಮ. ಹೊರ ರಾಜ್ಯ ಹಾಗೂ ವಿದೇಶಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲು ಪ್ರವಾಸಿ ಚಟುವಟಿಕೆಗೆ ನಿರ್ಬಂಧ ವಿಧಿಸಲಾಯಿತು. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕೇಂದ್ರಗಳು ಬಾಗಿಲು ಮುಚ್ಚಿದವು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸೂಚನೆಯ ಮೇರೆಗೆ ಮಾರ್ಚ್‌ 16ರಂದು ಐತಿಹಾಸಿಕ ಕೋಟೆಯ ಬಾಗಿಲು ಮುಚ್ಚಿತು. ಈವರೆಗೆ ಜಿಲ್ಲೆಯ ಯಾವುದೇ ಪ್ರವಾಸಿ ತಾಣ ಕಾರ್ಯಾರಂಭವಾಗಿಲ್ಲ.

ಏಳು ಸುತ್ತಿನ ಕೋಟೆಯ ಪ್ರವೇಶ ದ್ವಾರದ ಎದುರು ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಕೋಟೆಯ ಒಳಗಿನ ಏಕನಾಥೇಶ್ವರಿ, ಗಣಪತಿ, ಬನಶಂಕರಿ, ಸಂಪಿಗೆ ಸಿದ್ದೇಶ್ವರ, ವೇಣುಗೋಪಾಲಸ್ವಾಮಿ ಸೇರಿ ಇತರ ದೇಗುಲದ ಅರ್ಚಕರಿಗೆ ಮಾತ್ರ ಪ್ರವೇಶವಿದೆ. ಅರ್ಚಕರೊಂದಿಗೆ ಸಹಾಯಕರು ತೆರಳಿ ದೇಗುಲದಲ್ಲಿ ಪೂಜೆ ನೆರವೇರಿಸುತ್ತಾರೆ.

ಬಾಗಿಲು ತೆರೆಯದ ಅಂಗಡಿ:ಲಾಕ್‌ಡೌನ್‌ ಸಡಿಲಿಕೆಯ ಪರಿಣಾಮವಾಗಿ ನಗರದ ಬಹುತೇಕ ಅಂಗಡಿಗಳು ಬಾಗಿಲು ತೆರೆದಿವೆ. ಆದರೆ, ಪ್ರವಾಸಿ ತಾಣದ ಸುತ್ತಲಿನ ಅಂಗಡಿಗಳಲ್ಲಿ ಇನ್ನೂ ವಹಿವಾಟು ಆರಂಭವಾಗಿಲ್ಲ. ಏಳು ಸುತ್ತಿನ ಕೋಟೆ ಮುಂಭಾಗದಲ್ಲಿ ಎರಡು ಅಂಗಡಿ ಮಾತ್ರ ಬಾಗಿಲು ತೆರೆದಿವೆ. ಗ್ರಾಹಕರಿಲ್ಲದೇ ಇಲ್ಲಿಯೂ ವಹಿವಾಟು ನಡೆಯುತ್ತಿಲ್ಲ. ಬೀದಿ ಬದಿಯ ವ್ಯಾಪಾರಿಗಳು ಕಾಣಿಸುತ್ತಿಲ್ಲ.

ನಿತ್ಯ ಬೆಳಿಗ್ಗೆ ಮತ್ತು ಸಂಜೆ ಸ್ಥಳೀಯರಿಗೆ ವಾಯು ವಿಹಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೋಟೆ ಮುಂಭಾಗದ ರಸ್ತೆಯಲ್ಲಿ ಸಾಗುವ ವಾಯುವಿಹಾರಿಗಳು ಕರುವರ್ತೀಶ್ವರ ದೇಗುಲ, ಸಣ್ಣ ವಡ್ಡು, ದೊಡ್ಡ ವಡ್ಡುಗಳವರೆಗೆ ಸಾಗುತ್ತಾರೆ. ಕೋಟೆಯಲ್ಲಿ ಜನಸಂಚಾರ ಇಲ್ಲದಿರುವುದರಿಂದ ಪ್ರಾಣಿ–ಪಕ್ಷಿಗಳ ಕಲರವ ಕೇಳಲಾರಂಭಿಸಿದೆ. ಕಾಮನಭಾವಿ ಬಡಾವಣೆವರೆಗೂ ನವಿಲು, ಕರಡಿಗಳು ಬರುತ್ತಿವೆ.

2020ರ ಜನವರಿ ಹಾಗೂ ಫೆಬ್ರವರಿಯಲ್ಲಿ 71,090 ಪ್ರವಾಸಿಗರು ಏಳು ಸುತ್ತಿನ ಕೋಟೆಗೆ ಭೇಟಿ ನೀಡಿದ್ದರು. ಮಾರ್ಚ್‌ 15ರಿಂದ ಪ್ರವಾಸಿಗಳಿಗೆ ನಿರ್ಬಂಧ ವಿಧಿಸಿದ್ದರಿಂದ ಯಾವೊಬ್ಬ ಪ್ರವಾಸಿಗರು ಇತ್ತ ಸುಳಿದಿಲ್ಲ. 2019ರ ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳಲ್ಲಿ ಲಕ್ಷಕ್ಕೂ ಅಧಿಕ ಪ್ರವಾಸಿಗರು ಕೋಟೆಗೆ ಭೇಟಿ ನೀಡಿದ್ದರು. ಬೇಸಿಗೆ ಸಂದರ್ಭದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ಹೆಚ್ಚು ಪ್ರವಾಸಿಗರು ಬರುವ ನಿರೀಕ್ಷೆ ಇತ್ತು.

ಚೇತರಿಕೆ ಅನುಮಾನ:ಪ್ರವಾಸಿ ಚಟುವಟಿಕೆಗೆ ಸರ್ಕಾರ ಅನುಮತಿ ನೀಡಿದರೂ ಪ್ರವಾಸೋದ್ಯಮ ಸಹಜ ಸ್ಥಿತಿಗೆ ಬರುವುದು ಅನುಮಾನ ಎನ್ನಲಾಗುತ್ತಿದೆ.

‘ಕೊರೊನಾ ಸೋಂಕು ಸೃಷ್ಟಿಸಿದ ಭೀತಿಯಿಂದಾಗಿ ಜನರು ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಅನುಮಾನ. ಜನರಲ್ಲಿ ಮೂಡಿರುವ ಈ ಭೀತಿಯನ್ನು ಹೋಗಲಾಡಲು ಇನ್ನೂ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ, ಪ್ರವಾಸಿ ಚಟುವಟಿಕೆ ಚೇತರಿಕೆ ಕಾಣುವುದು ಅನುಮಾನ’ ಎಂಬುದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬರ ವಿಶ್ಲೇಷಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.