ADVERTISEMENT

ಚಿತ್ರದುರ್ಗ: ಜಿಲ್ಲೆಗೆ ಮರಳಿದ್ದು 67 ಸಾವಿರ ಜನ!

ಪ್ರತಿಯೊಬ್ಬರ ಮೇಲೆ ನಿಗಾ, 21 ದಿನ ಕ್ವಾರಂಟೈನ್‌ ಕಡ್ಡಾಯ

ಜಿ.ಬಿ.ನಾಗರಾಜ್
Published 19 ಏಪ್ರಿಲ್ 2020, 19:30 IST
Last Updated 19 ಏಪ್ರಿಲ್ 2020, 19:30 IST
ಡಾ.ಪಾಲಾಕ್ಷ
ಡಾ.ಪಾಲಾಕ್ಷ   

ಚಿತ್ರದುರ್ಗ: ಕೊರೊನಾ ಸೋಂಕು ನಿಯಂತ್ರಣಕ್ಕೆ ದೇಶದಲ್ಲಿ ಲಾಕ್‌ಡೌನ್‌ ಘೋಷಣೆ ಮಾಡಿದ ಬೆನ್ನಲ್ಲೇ ಭಾರಿ ಸಂಖ್ಯೆಯ ಜನರು ಕೋಟೆನಾಡಿಗೆ ಮರಳಿದ್ದಾರೆ. ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಬಂದಿರುವ 67 ಸಾವಿರಕ್ಕೂ ಅಧಿಕ ಜನರನ್ನು ಜಿಲ್ಲಾಡಳಿತ ಗುರುತಿಸಿದೆ.

ಮನೆ–ಮನೆಗೂ ಭೇಟಿ ನೀಡಿದ ಆಶಾ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕರಿಯರು ಈ ಮಾಹಿತಿ ಕಲೆಹಾಕಿದ್ದಾರೆ. ಇವರೆಲ್ಲರ ಮೇಲೆ ನಿಗಾ ಇಟ್ಟಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸೋಂಕಿತ ಪ್ರದೇಶದಿಂದ ಬಂದವರು ಹಾಗೂ ಅನಾರೋಗ್ಯ ಪೀಡಿತರ ಪತ್ತೆಗೆ ಮುಂದಾಗಿದೆ.

ಹೊರಗಿನಿಂದ ಬಂದಿರುವವರ ಮೇಲೆ ಹದ್ದಿನಕಣ್ಣು ಇಟ್ಟಿದ್ದ ಜಿಲ್ಲಾಡಳಿತಕ್ಕೆ ಆರಂಭದಲ್ಲಿ 24 ಸಾವಿರ ಜನರ ಮಾಹಿತಿ ಮಾತ್ರ ಲಭ್ಯವಾಗಿತ್ತು. ಅನೇಕರು ಮಾಹಿತಿ ಮರೆಮಾಚಿದ ಅನುಮಾನದ ಮೇರೆಗೆ ಪುನಾ ಸಮೀಕ್ಷೆ ನಡೆಸಲಾಯಿತು. ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶದಿಂದ ಬಂದಿರುವವರ ಬಗ್ಗೆ ಪ್ರತ್ಯೇಕ ಮಾಹಿತಿ ಕಲೆಹಾಕಲಾಗಿದೆ. ವಿದೇಶ ಹಾಗೂ ಹೊರ ರಾಜ್ಯದಿಂದ ಬಂದವರ ಮೇಲೆ ಹೆಚ್ಚು ನಿಗಾ ಇಡಲಾಗಿದೆ. ಹೊರ ಜಿಲ್ಲೆಯಿಂದ ಬಂದವರಿಗೂ ಕ್ವಾರಂಟೈನ್‌ಗೆ ಸೂಚಿಸಲಾಗಿದೆ.

ADVERTISEMENT

‘ಯುಗಾದಿ ಹಬ್ಬದ ಸಂದರ್ಭದಲ್ಲಿಯೇ ಲಾಕ್‌ಡೌನ್‌ ಕೂಡ ಘೋಷಣೆಯಾಯಿತು. ಹೀಗಾಗಿ, ಬಹುತೇಕರು ಮಾರ್ಚ್‌ ಮೂರು ಮತ್ತು ನಾಲ್ಕನೇ ವಾರ ಜಿಲ್ಲೆಗೆ ಬಂದಿದ್ದಾರೆ. ಇವರೆಲ್ಲರ ಮೇಲೆ ನಿಗಾ ಇಡಲಾಗಿದ್ದು, ಯಾರೊಬ್ಬರಲ್ಲೂ ಸೋಂಕಿನ ಲಕ್ಷಣ ಕಾಣಿಸಿಕೊಂಡಿಲ್ಲ. ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುವವರು ಹಾಗೂ ಜ್ವರ, ಶೀತ, ಕೆಮ್ಮು ಸಮಸ್ಯೆ ಕಾಣಿಸಿಕೊಂಡವರ ಮೇಲೆ ಹೆಚ್ಚು ನಿಗಾ ವಹಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಲಾಕ್ಷ ಮಾಹಿತಿ ನೀಡಿದ್ದಾರೆ.

ಹೊರಗಿನಿಂದ ಬಂದವರ ಪತ್ತೆ ಹಾಗೂ ನಿಗಾ ವಹಿಸಲು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಕಿರಿಯ ಆರೋಗ್ಯ ಸಹಾಯಕಿಯರ ತಂಡ ರಚಿಸಲಾಗಿದೆ. ಮಾರ್ಚ್ 23ರಿಂದಲೇ ಕಾರ್ಯಪ್ರವೃತ್ತರಾದ ಈ ತಂಡ ತಮ್ಮ ವ್ಯಾಪ್ತಿಯ ಎಲ್ಲರ ಬಗ್ಗೆ ಮಾಹಿತಿ ಕಲೆಹಾಕಿದೆ. ತಹಶೀಲ್ದಾರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್‌ ಸಮಿತಿಯೂ ಇದೆ.

‘ಆರೋಗ್ಯ ಇಲಾಖೆ ಹಾಗೂ ಸಮಾಜದ ನಡುವೆ ಸೇತುವೆಯಾಗಿ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಸಾವಿರ ಜನರಿಗೆ ಒಬ್ಬರು ಆಶಾ ಕಾರ್ಯಕರ್ತೆಯರಿದ್ದಾರೆ. ಸುಮಾರು 250 ಮನೆಗಳು ಇವರ ವ್ಯಾಪ್ತಿಗೆ ಬರುತ್ತವೆ. ಪ್ರತಿ ದಿನ 40 ಮನೆಗಳನ್ನು ಭೇಟಿ ಮಾಡುತ್ತಾರೆ. ವಾರಕ್ಕೊಮ್ಮೆ ಪ್ರತಿ ಮನೆಯ ಮಾಹಿತಿ ಸಂಗ್ರಹಿಸಿ ಟಾಸ್ಕ್‌ಫೋರ್ಸ್‌ಗೆ ನೀಡುತ್ತಾರೆ’ ಎಂದು ಪಾಲಾಕ್ಷ ವಿವರಿಸಿದರು.

ಬರದ ನಾಡು ಎಂದೇ ಹೆಸರಾಗಿರುವ ಚಿತ್ರದುರ್ಗ ಜಿಲ್ಲೆ ಮಳೆಯಾಶ್ರಿತ ಕೃಷಿ ಪದ್ಧತಿಯನ್ನು ಅವಲಂಬಿಸಿದೆ. ಗ್ರಾಮೀಣ ಪ್ರದೇಶವೇ ಹೆಚ್ಚಾಗಿರುವ ಜಿಲ್ಲೆಯ ಪ್ರತಿ ಗ್ರಾಮದಲ್ಲೂ ವಲಸಿಗರು ಸಿಗುತ್ತಾರೆ. ಇವರಲ್ಲಿ ಬಹುತೇಕರು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಲಾಕ್‌ಡೌನ್‌ ಜಾರಿಗೊಳಿಸಿದ ಮರುದಿನವೇ ಇವರು ಊರುಗಳಿಗೆ ಧಾವಿಸಿದ್ದಾರೆ. ಇದರಿಂದ ಗ್ರಾಮಗಳಲ್ಲೂ ಕೊರೊನಾ ಸೋಂಕಿನ ಭೀತಿ ಹುಟ್ಟಿಕೊಂಡಿತ್ತು.

‘ಜಿಲ್ಲೆಗೆ ಮರಳಿದವರಲ್ಲಿ ಶೇ 60ರಷ್ಟು ಜನರು ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಿದ್ದಾರೆ. ಯಾರೊಬ್ಬರಲ್ಲೂ ಸೋಂಕು ಕಾಣಿಸಿಕೊಳ್ಳದೇ ಇರುವುದು ಸಮಾಧಾನಕರ ಸಂಗತಿ. ಆದರೂ, ಮನೆ–ಮನೆಗೆ ಭೇಟಿ ನೀಡುವ ಆಶಾ ಕಾರ್ಯಕರ್ತೆಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗಿದೆ. ಮಾಸ್ಕ್‌, ಸ್ಯಾನಿಟೈಸರ್‌ ನೀಡಲಾಗಿದೆ. ಸೋಂಕು ಕಾಣಿಸಿಕೊಂಡರೆ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ ಕಿಟ್‌) ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದರು.

ಜಿಲ್ಲೆಗೆ ಮರಳಿದವರ ವಿವರ

ಹೊಸದುರ್ಗ:18,000

ಚಿತ್ರದುರ್ಗ:17,000

ಚಳ್ಳಕೆರೆ:16,000

ಹೊಳಲ್ಕೆರೆ:09,000

ಹಿರಿಯೂರು:06,535

ಮೊಳಕಾಲ್ಮುರು:01,400

ಒಟ್ಟು:67,935

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.