ADVERTISEMENT

ಚಿತ್ರದುರ್ಗ | ಬಾಯ್ತೆರೆದ ಚರಂಡಿ, ಮ್ಯಾನ್‌ಹೋಲ್‌ಗಳಿಂದ ಅಪಾಯ

ಹದಗೆಟ್ಟ ಒಳಚರಂಡಿ ವ್ಯವಸ್ಥೆ; ಮಳೆಗಾಲ ನಿಭಾಯಿಸಲು ನಗರಸಭೆ ಸಿಬ್ಬಂದಿ ಸಿದ್ಧವಾಗಿದ್ದಾರಾ?

ಎಂ.ಎನ್.ಯೋಗೇಶ್‌
Published 7 ಏಪ್ರಿಲ್ 2025, 7:02 IST
Last Updated 7 ಏಪ್ರಿಲ್ 2025, 7:02 IST
ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ ಚರಂಡಿಯ ದುಃಸ್ಥಿತಿ
ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ ಚರಂಡಿಯ ದುಃಸ್ಥಿತಿ   

ಚಿತ್ರದುರ್ಗ: ಮಳೆಗಾಲ ಆರಂಭವಾಗುತ್ತಿದ್ದು, ನಗರದಾದ್ಯಂತ ಚರಂಡಿಗಳು, ಮ್ಯಾನ್‌ಹೋಲ್‌ಗಳು ಬಾಯ್ತೆರೆದು ನಿಂತಿವೆ. ಬಹುತೇಕ ಕಡೆ ಜನರು ಚರಂಡಿಗೆ ಘನತ್ಯಾಜ್ಯ ಸುರಿಯುತ್ತಿದ್ದು, ಹೆಚ್ಚು ಮಳೆಯಾದಾಗ ಚರಂಡಿ ಕಟ್ಟಿಕೊಂಡು ಕೊಳಚೆ ನೀರು ರಸ್ತೆಗೆ ಹರಿಯುವ ಅಪಾಯವೂ ಸೃಷ್ಟಿಯಾಗಿದೆ.

ಕಳೆದ ವಾರ ಸುರಿದ ಸಣ್ಣ ಮಳೆಗೇ ಜೋಗಿಮಟ್ಟಿ ರಸ್ತೆ, ಬಿ.ಡಿ ವೃತ್ತದ ಭಾಗದಲ್ಲಿ ಚರಂಡಿಗಳು ತುಂಬಿ ಹರಿದಿವೆ. ಜೋಗಿಮಟ್ಟಿ ರಸ್ತೆಯ ಚರಂಡಿಯಲ್ಲಿ ಕಲ್ಮಶ ತುಂಬಿದ್ದ ಕಾರಣ ಕೊಳಚೆ ಹರಿಯಲಾಗದೇ ರಸ್ತೆಗೆ ನುಗ್ಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದ್ದು, ನಗರದಲ್ಲಿ ಉಂಟಾಗಬಹುದಾದ ಅಪಾಯಗಳನ್ನು ನಗರಸಭೆ ಸಮರ್ಪಕವಾಗಿ ನಿಭಾಯಿಸಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. 

ಐತಿಹಾಸಿಕ ನಗರಿ ಚಿತ್ರದುರ್ಗದ ಕಾಲುವೆಗಳನ್ನು ರಾಜರ ಕಾಲದಲ್ಲೇ ವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿತ್ತು. ಆದರೆ ಈಗಿನ ನಗರಸಭೆ ಹಳೆಯ ಕಾಲುವೆ ವ್ಯವಸ್ಥೆಯನ್ನು ಉಳಿಸಿಕೊಂಡು ಹೊಸದಾಗಿ ಸುಸಜ್ಜಿತ ಒಳಚರಂಡಿ ವ್ಯವಸ್ಥೆ ರೂಪಿಸದ ಪರಿಣಾಮ ಚರಂಡಿ ನೀರು ಸಮರ್ಪಕವಾಗಿ ಹರಿದು ಹೋಗುತ್ತಿಲ್ಲ. ನಗರದ ಲಕ್ಷ್ಮ ಬಜಾರ್‌ ಭಾಗದಲ್ಲಿರುವ ಚರಂಡಿಗಳು ತೆರೆದುಕೊಂಡಿದ್ದು ವಿವಿಧೆಡೆ ನೀರು ಕಟ್ಟಿಕೊಂಡು ಕೊಳಚೆ ನೀರು ಮಾರುಕಟ್ಟೆ ಪ್ರದೇಶಕ್ಕೆ ಹರಿಯುವ ಅಪಾಯವಿದೆ. ಆಗಿಂದಾಗ್ಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ADVERTISEMENT

ನಗರದಲ್ಲಿ ಇದ್ದ ರಾಜಕಾಲುವೆಗಳು ಈಗ ಸಣ್ಣ ಚರಂಡಿಗಳಾಗಿವೆ. ರಾಜಕಾಲುವೆಗಳ ಮೇಲೆ ಖಾಸಗಿ ಕಟ್ಟಡಗಳು ತಲೆ ಎತ್ತಿರುವ ಕಾರಣ ಕೊಳಚೆ ನೀರು, ಮಳೆ ನೀರು ಹರಿಯುವುದಕ್ಕೆ ಜಾಗವೇ ಇಲ್ಲದಂತಾಗಿದೆ. ಆಡುಮಲ್ಲೇಶ್ವರ ಅರಣ್ಯ ಭಾಗದಲ್ಲಿ ಬಿದ್ದ ಮಳೆ ನೀರು ಬುದ್ಧನಗರದ ಮೂಲಕ ಜಿ.ಜಿ.ಸಮುದಾಯ ಭವನದ ಬಳಿ ಚರಂಡಿ ಪ್ರವೇಶಿಸುತ್ತದೆ. ಜೋಗಿಮಟ್ಟಿ ರಸ್ತೆ, ಅಗಳೇರಿ ಭಾಗದ ಚರಂಡಿಗಳು ಹದಗೆಟ್ಟಿದ್ದು, ನೀರು ನಿಲ್ಲುವುದು ಸಾಮಾನ್ಯವಾಗಿದೆ.

ಎಲ್‌ಐಸಿ ಕಚೇರಿ, ಜೂನಿಯರ್‌ ಕಾಲೇಜು ಭಾಗದಲ್ಲೂ ಚರಂಡಿಗಳು ಕಿರಿದಾಗಿದ್ದು, ಕೊಳಚೆ ನೀರು ಸದಾ ರಸ್ತೆಯಲ್ಲಿ ಹರಿಯುತ್ತದೆ. ಕೆಎಸ್‌ಆರ್‌ಟಿಸಿ ಹಳೇ ಡಿಪೊ, ಐಶ್ವರ್ಯ ಫೋರ್ಟ್‌ ಹೋಟೆಲ್‌, ಬೆಸ್ಕಾಂ ಕಚೇರಿ ಸಮೀಪವೂ ನೀರು ಕಟ್ಟಿಕೊಂಡು ರಸ್ತೆಯಲ್ಲಿ ಹರಿಯುತ್ತದೆ. ಚಂದ್ರವಳ್ಳಿ ಭಾಗದಿಂದ ಹರಿದು ಬರುವ ನೀರು ನೆಹರೂ ನಗರ, ಕಾರ್ಪೊರೇಷನ್‌ ಬ್ಯಾಂಕ್‌, ಆದರ್ಶ ಕಲ್ಯಾಣ ಮಂಟಪ ಭಾಗದಲ್ಲಿ ಕಟ್ಟಿಕೊಂಡು ರಸ್ತೆಗಳು ದುರ್ವಾಸನೆ ಬೀರುತ್ತವೆ.

ಮಳೆ ಆರಂಭವಾಗುವ ಮುನ್ನವೇ ಚರಂಡಿ ಕಟ್ಟಿಕೊಳ್ಳುವಂತಹ ಜಾಗಗಳನ್ನು ಗುರುತಿಸಿ ನಗರಸಭೆ ಸಿಬ್ಬಂದಿ ಸ್ವಚ್ಛಗೊಳಿಸಬೇಕು. ಕಾಲುವೆಗಳು ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸಿ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು’ ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

ನನೆಗುದಿಗೆ ಬಿದ್ದ ಒಳಚರಂಡಿ ಕಾಮಗಾರಿ:

2011ರಲ್ಲಿ ನಗರದಲ್ಲಿ ₹ 95 ಕೋಟಿ ವೆಚ್ಚದಲ್ಲಿ ಯುಜಿಡಿ ಕಾಮಗಾರಿ ಕೈಗೊಳ್ಳಲಾಗಿತ್ತು. 264 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪೈಪ್‌ಲೈನ್‌ ಅಳವಡಿಸಿತ್ತು. ಈ ಕಾಮಗಾರಿ ಸಮರ್ಪಕವಾಗಿ ನಡೆಯದ ಕಾರಣ ನಗರದ ಒಳಚರಂಡಿ ವ್ಯವಸ್ಥೆ ಈವರೆಗೂ ಸರಿಯಾಗಿಲ್ಲ. ಇನ್ನೂ ಸಾವಿರಕ್ಕೂ ಹೆಚ್ಚು ಮನೆಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ನಗರದಾದ್ಯಂತ 35 ವಾರ್ಡ್‌ಗಳಿದ್ದು, ಬಹುತೇಕ ಬಡಾವಣೆಗಳಲ್ಲಿ ತೆರೆದ ಚರಂಡಿಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ತ್ಯಾಜ್ಯದ ರಾಶಿಯೂ ತುಂಬಿಕೊಂಡು ಸರಾಗವಾಗಿ ಹರಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 6,500ಕ್ಕೂ ಹೆಚ್ಚು ಮ್ಯಾನ್‌ಹೋಲ್‌ಗಳಿದ್ದು, ಮಳೆಗಾಲದಲ್ಲಿ ಉಕ್ಕಿ ಹರಿಯುತ್ತವೆ. ಸಿ.ಸಿ ರಸ್ತೆ ನಿರ್ಮಿಸುವ ವೇಳೆ ಮ್ಯಾನ್‌ಹೋಲ್‌ಗಳನ್ನು ರಸ್ತೆಯ ಮಧ್ಯ ಭಾಗದಲ್ಲೇ ನಿರ್ಮಿಸಿದ್ದಾರೆ. ಇದರಿಂದಾಗಿ ಮ್ಯಾನ್‌ಹೋಲ್‌ ಉಕ್ಕಿದರೆ ರಸ್ತೆಯಾದ್ಯಂತ ದುರ್ವಾಸನೆ ಹರಡುತ್ತದೆ.

ಕೆಲವು ಕಡೆ ಮ್ಯಾನ್‌ಹೋಲ್‌ಗಳು ಮೇಲೆದ್ದು ಬಂದಿದ್ದು ವಾಹನ ಸವಾರರು ತೀವ್ರ ಸಮಸ್ಯೆ ಅನುಭವಿಸುವಂತಾಗಿದೆ. ಬಸ್‌, ಕಾರು ಇತರೆ ವಾಹನಗಳು ಇವುಗಳಲ್ಲಿ ಸಿಲುಕಿಕೊಳ್ಳುತ್ತಿವೆ. ದ್ವಿಚಕ್ರ ವಾಹನ ಸವಾರರು ಮತ್ತು ವೃದ್ಧರು ಬಿದ್ದು, ಗಾಯಗೊಂಡ ನಿದರ್ಶನಗಳಿವೆ. ನಗರದಾದ್ಯಂತ ಒಳಚರಂಡಿ ವ್ಯವಸ್ಥೆ ಹದಗೆಟ್ಟಿರುವ ಕಾರಣ ಒಳಚರಂಡಿ ನೀರು ಸಮರ್ಪಕವಾಗಿ ಹರಿಯದಾಗಿದೆ. ತೆರೆದ ಚರಂಡಿಯಲ್ಲಿ ಹರಿಯುವ ಕೊಳಚೆಯು ನೇರವಾಗಿ ಮಲ್ಲಾಪುರ ಕೆರೆಗೆ ಸೇರಿ ಕೆರೆಯ ವಾತಾವರಣವನ್ನು ಕಲುಷಿತಗೊಳಿಸಿದೆ.

ಕೊಳಚೆ ನೀರು ಶುದ್ಧೀಕರಣಗೊಳಿಸಲು ಪಿಳ್ಳೆಕೇರನಹಳ್ಳಿ ಬಳಿ 5 ಎಕರೆಯಷ್ಟು ವಿಶಾಲ ಜಾಗದಲ್ಲಿ ಎಸ್‌ಟಿಪಿ ನಿರ್ಮಾಣ ಮಾಡಲಾಗಿದೆ. 20 ಎಂಎಲ್‌ಡಿ (ಮಿಲಿಯನ್‌ ಲೀಟರ್‌ ಪರ್‌ ಡೇ) ಸಾಮರ್ಥ್ಯದ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ನಗರದ ಎಲ್ಲಾ ಒಳಚರಂಡಿ ನೀರನ್ನು ಈ ಘಟಕಕ್ಕೆ ತಿರುಗಿಸಿದರೆ ನಗರದಾದ್ಯಂತ ಕೊಳಚೆ ನೀರಿನ ಸಮಸ್ಯೆಯೇ ಇರುವುದಿಲ್ಲ. ಆದರೆ ನೀರು ಎಸ್‌ಟಿಪಿ ಘಟಕಕ್ಕೆ ಹರಿಯದೇ ಮಲ್ಲಾಪುರ ಕೆರೆಗೆ ಹರಿಯುತ್ತಿದೆ. ಇದರಿಂದ ಸುತ್ತಮುತ್ತ ಇರುವ ಬಡಾವಣೆ, ಹಳ್ಳಿಗಳ ಜನರಿಗೆ ರೋಗಭೀತಿ ಎದುರಾಗಿದೆ.

ಚಿತ್ರದುರ್ಗದ ಕೆಳಗೋಟೆಯಲ್ಲಿ ತೆರೆದ ಚರಂಡಿ ಅಪಾಯಕ್ಕೆ ಆಹ್ವಾನ ನೀಡುವಂತಿರುವುದು
ಮಳೆಗಾಲ ಆರಂಭವಾಗುತ್ತಿದ್ದು ಅದರಿಂದ ಉಂಟಾಗುವ ಸಮಸ್ಯೆಗಳನ್ನು ನಗರ ಸ್ಥಳೀಯ ಸಂಸ್ಥೆಗಳು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಪೌರಾಯುಕ್ತರು ಮತ್ತು ಮುಖ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ
ಟಿ.ವೆಂಕಟೇಶ್‌ ಜಿಲ್ಲಾಧಿಕಾರಿ
ರಾಜಕಾಲುವೆಗೆ ವಿಚಿತ್ರ ತಿರುವು ಸುವರ್ಣಾ ಬಸವರಾಜ್‌
ಹಿರಿಯೂರು: ಯೋಜಿತ ರೀತಿಯಲ್ಲಿ ನಗರವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ರಚನೆಯಾಗಿದ್ದ ನಗರಾಭಿವೃದ್ಧಿ ಪ್ರಾಧಿಕಾರ ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ತಾಜಾ ನಿದರ್ಶನ ನಗರದ ಆಶ್ರಯ ಕಾಲೊನಿಯಿಂದ ಚಿಟುಗುಮಲ್ಲೇಶ್ವರ ಬಡಾವಣೆಯವರೆಗೆ ನಿರ್ಮಿಸಿರುವ ರಾಜಕಾಲುವೆ. ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ಮಳೆ ಸುರಿದಲ್ಲಿ ಜನರ ಜೀವ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ರಾಜಕಾಲುವೆಗಳನ್ನು ನಿರ್ಮಿಸಲಾಗುತ್ತದೆ. ಆದರೆ ನಗರದಲ್ಲಿ ಆಶ್ರಯ ಕಾಲೊನಿಯಿಂದ ಆರಂಭವಾದ ರಾಜಕಾಲುವೆ ನೇರ ಮಾರ್ಗದಲ್ಲಿ ಸಾಗುತ್ತ ಹೋಗುತ್ತದೆ. ಆದರೆ ವಾಣಿವಿಲಾಸ ನಾಲೆ ದಾಟಿದ ತಕ್ಷಣ ನೇರವಾಗಿ ಕಾಲುವೆ ಹೋಗುವಂತೆ ನಕ್ಷೆ ರೂಪಿಸುವ ಬದಲು ವಿಚಿತ್ರ ರೀತಿಯಲ್ಲಿ ತಿರುವು ಪಡೆಯುತ್ತದೆ. ರಾಜಕಾಲುವೆಯನ್ನು ನೇರ ಮಾರ್ಗದಲ್ಲಿ ಒಯ್ದಿದ್ದರೆ ಗಾಂಧಿ ಬಡಾವಣೆ ಕೆಳಭಾಗದಲ್ಲಿ ಸಿಎಂ ಬಡಾವಣೆ ಮೇಲ್ಭಾಗದಲ್ಲಿ ಹಾದು ಹೋಗಿರುವ ರಾಜಕಾಲುವೆಗೆ ಸೇರುತ್ತಿತ್ತು.  ಪ್ರಾಧಿಕಾರ ಮಾಡಿದ ಯಡವಟ್ಟಿನಿಂದ 2013 2022ರಲ್ಲಿ ಸುರಿದ ಭಾರಿ ಮಳೆಗೆ ಇಡೀ ಚಿಟುಗುಮಲ್ಲೇಶ್ವರ ಬಡಾವಣೆ ನೀರಿನಲ್ಲಿ ಮುಳುಗಿ ದ್ವೀಪದಂತೆ ಆಗಿತ್ತು. ರಾಜಕಾಲುವೆ ಕಾಮಗಾರಿ ಮಲ್ಲೇಶ್ವರ ಬಡಾವಣೆಗೆ ಅಂತ್ಯಗೊಂಡು ಬಡಾವಣೆಯ ಮೇಲ್ಭಾಗದ ಮಳೆಯ ನೀರೆಲ್ಲ ಒಮ್ಮೆಗೆ ನುಗ್ಗಿದ್ದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಸ್ತುತ ರಾಜಕಾಲುವೆ ಅಂತ್ಯಗೊಂಡಿರುವ ಮಲ್ಲೇಶ್ವರ ಬಡಾವಣೆಯ 30x40 ಅಳತೆಯ ಆರು ನಿವೇಶನಗಳಿಗೆ ಚರಂಡಿ ನೀರು ಹರಿದು ನಿವೇಶನ ಕಾಣದ ರೀತಿ ಹುಲ್ಲು ಬೆಳೆದು ನಿಂತಿದೆ. ನಿವೇಶನ ಖರೀದಿಸಿರುವವರು ಚರಂಡಿ ನೀರಿನಲ್ಲಿ ಮನೆ ನಿರ್ಮಿಸಲಾರದೆ ಬೇರೆಯವರಿಗೆ ಮಾರಲೂ ಆಗದೆ ಅಸಹಾಯಕರಾಗಿ ಕುಳಿತಿದ್ದಾರೆ ಎಂದು ನಿವಾಸಿಗಳು ಹೇಳುತ್ತಾರೆ.
ಚರಂಡಿ ಮೇಲೆ ಅಕ್ರಮ ಕಟ್ಟಡಗಳು ಶಿವಗಂಗಾ ಚಿತ್ತಯ್ಯ
ಚಳ್ಳಕೆರೆ: ನಗರಸಭೆ ನಿರ್ಲಕ್ಷ್ಯದಿಂದಾಗಿ ವಿವಿಧ ವಾರ್ಡ್‌ನ ಚರಂಡಿಯಲ್ಲಿ ಹಳೆ ಪ್ಲಾಸ್ಟಿಕ್ ಪೇಪರ್ ಕಡ್ಡಿ ಕಸ ತುಂಬಿಕೊಂಡಿದೆ. ಚರಂಡಿ ಸ್ವಚ್ಛತೆಗೊಳಿಸಿಲ್ಲ. ಜೊತೆಗೆ ಚರಂಡಿ ಒತ್ತುವರಿಯಿಂದಾಗಿ ಕೊಳಚೆ ನೀರಿನ ಸರಾಗ ಹರಿವಿಗೆ ತೊಂದರೆಯಾಗಿದೆ. ಚರಂಡಿಯ ಮೇಲೆ ಎಲ್ಲೆಂದರಲ್ಲೆ ಮನೆ ಕಟ್ಟಡ ಶೌಚಾಲಯ ಕಾಂಪೌಂಡ್ ಗೋಡೆಗಳನ್ನು ಅಕ್ರಮವಾಗಿ ನಿರ್ಮಿಸಿಕೊಂಡಿರುವ ಕಾರಣ ಅಲ್ಪ ಪ್ರಮಾಣದ ಮಳೆ ಬಿದ್ದರೂ ಗಾಂಧಿನಗರ ಅಂಬೇಡ್ಕರ್ ನಗರ ಜಗಜೀವನ್‌ರಾಂ ನಗರ ಜನತಾ ಕಾಲೊನಿ ಶಾಂತಿ ನಗರ ರಹೀಂನಗರ ಹಳೆ ಟೌನ್ ಮದಕರಿನಗರ ಕೊಲುಮೆಬೀದಿ ಮತ್ತು ನಗರದ ಹೊರವಲಯದ ಮೈರಾಢ ಕಾಲೊನಿ ಸೂಜಿ ಮಲ್ಲೇಶ್ವರ ನಗರ ಮುಂತಾದ ವಾರ್ಡ್‌ಗಳಲ್ಲಿ ಮನೆಗೆ ನೀರು ನುಗ್ಗಿ ಕೊಳಚೆ ಪ್ರದೇಶಗಳ ನಿವಾಸಿಗಳ ಜೀವನ ಅಸ್ತವ್ಯಸ್ತವಾಗುತ್ತವೆ. ನಗರದ ಮಧ್ಯೆ ಹಾದು ಹೋಗುವ ರಾಜಕಾಲುವೆಯನ್ನು ಸ್ವಚ್ಛಗೊಳಿಸುವುದರ ಜತೆಗೆ ದುರಸ್ತಿ ಕಾರ್ಯವೂ ಕೈಗೊಳ್ಳಬೇಕು. ಮಳೆ ನೀರು ಹರಿದು ಹೋಗಲು ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.