ADVERTISEMENT

ರೈತರಿಗೆ ಮಧ್ಯಂತರ ಪರಿಹಾರ ನೀಡಿ

ವಿಮಾ ಕಂಪನಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ತಾಕೀತು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 8:57 IST
Last Updated 30 ಡಿಸೆಂಬರ್ 2025, 8:57 IST
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಮಾತನಾಡಿದರು
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಮಾತನಾಡಿದರು   

ಚಿತ್ರದುರ್ಗ: ತೊಗರಿ ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳದೇ ನಿರ್ಲಕ್ಷ್ಯ ತೋರಿದ ವಿಮಾ ಕಂಪನಿ ಪ್ರತಿನಿಧಿಗಳ ಧೋರಣೆಯನ್ನು ತೀವ್ರವಾಗಿ ಖಂಡಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅವರು, ಕೂಡಲೇ ಮಧ್ಯಂತರ ಪರಿಹಾರ ನೀಡಲು ಶಿಫಾರಸು ಮಾಡುವಂತೆ ತಾಕೀತು ಮಾಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ತೊಗರಿ ಬೆಳೆ ನಷ್ಟ ಕುರಿತು ನಾಲ್ಕೈದು ಬಾರಿ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಆದರೂ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಳ್ಳದೆ ಸಭೆಯಲ್ಲಿ ಇಲ್ಲಸಲ್ಲದ ಸಬೂಬು ಹೇಳುತ್ತಿದ್ದೀರಿ’ ಎಂದು ಕಿಡಿಕಾರಿದರು.

ADVERTISEMENT

‘ಚಳ್ಳಕೆರೆ ತಾಲ್ಲೂಕಿನಲ್ಲಿ ಆಗಸ್ಟ್‌, ಸೆಪ್ಟಂಬರ್‌, ಅಕ್ಟೋಬರ್‌ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾದ ಪರಿಣಾಮ ತೊಗರಿ ಬೆಳೆಯಲ್ಲಿ ಹೂ ಕಟ್ಟುವಿಕೆ ನಿಂತು ಹೋಗಿ ಸಾಕಷ್ಟು ನಷ್ಟ ಉಂಟಾಗಿದೆ. ಈ ಕುರಿತು ಅ.13 ರಂದು ಜರುಗಿದ ಜಿಲ್ಲಾ ಮಟ್ಟದ ಸಭೆಯಲ್ಲಿ ತೊಗರಿ ಬೆಳೆ ಸಮೀಕ್ಷೆ ನಡಿಸಿ, ಮಧ್ಯಂತರ ಪರಿಹಾರ ನೀಡಲು ತೀರ್ಮಾನಿಸಲಾಗಿತ್ತು’ ಎಂದರು.

‘ಸಭೆಯ ತೀರ್ಮಾನದಂತೆ ಚಳ್ಳಕೆರೆ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಸಮೀಕ್ಷೆಗೆ ವೇಳಾಪಟ್ಟಿ ಸಿದ್ದಪಡಿಸಿ, ವಿಮಾ ಕಂಪನಿಗೆ ಈ-ಮೇಲ್ ಮುಖಾಂತರ ಮಾಹಿತಿ ನೀಡಿದ್ದಾರೆ. ಈ-ಮೇಲ್‌ಗೆ ಪ್ರತಿಕ್ರಿಯಿಸಿ, ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಳ್ಳುವುದಾಗಿ ವಿಮಾ ಕಂಪನಿ ಅಧಿಕಾರಿಗಳು ತಿಳಿಸಿದ್ದೀರಿ. ಸಮೀಕ್ಷೆಯಲ್ಲಿ ಪಾಲ್ಗೊಳ್ಳದ ಜತೆಗೆ ಸಕಾರಾತ್ಮಕವಾಗಿಯೂ ಸ್ಪಂದಿಸುತ್ತಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

‘ನಿಮ್ಮ ನಿರ್ಲಕ್ಷ್ಯದಿಂದ ರೈತರಿಗೆ ನಷ್ಟ ಪರಿಹಾರ ದೊರಕುವುದು ವಿಳಂಬವಾಗುತ್ತಿದೆ. ಸಭೆ ನಡಾವಳಿಯಲ್ಲಿ ವಿಮಾ ಕಂಪನಿ ಅಧಿಕಾರಿಗಳು ನೀಡುವ ಬೇಜವಾಬ್ದಾರಿ ಹೇಳಿಕೆಗಳನ್ನು ಪದಶಃ ದಾಖಲಿಸಿ ಸರ್ಕಾರಕ್ಕೆ ವರದಿ ನೀಡಿ’ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

‘ಈ ಬಾರಿ ಜಿಲ್ಲೆಗೆ ಓರಿಯಂಟಲ್‌ ಇನ್ಷೂರೆನ್ಸ್ ಕಂಪನಿಯನ್ನು ಬೆಳೆ ವಿಮಾ ಕಂಪನಿಯನ್ನಾಗಿ ಆಯ್ಕೆ ಮಾಡಲಾಗಿದೆ. ಕೃಷಿ, ತೋಟಗಾರಿಕೆ ಹಾಗೂ ಜಿಲ್ಲಾಡಳಿತದಿಂದ ರೈತರಿಗೆ ಬೆಳೆ ವಿಮೆ ಬಗ್ಗೆ ಜಾಗೃತಿ ಮೂಡಿಸಿದ ಪರಿಣಾಮ ಸಾಕಷ್ಟು ರೈತರು ತಮ್ಮ ಬೆಳೆಗಳಿಗೆ ಕಂತು ತುಂಬಿದ್ದಾರೆ. ಆದರೆ ವಿಮೆ ತುಂಬಿಸಿಕೊಂಡ ಓರಿಯಂಟಲ್ ಕಂಪನಿ ಪ್ರತಿನಿಧಿಗಳು ಅಧಿಕಾರಿಗಳೊಂದಿಗೆ ಉತ್ತಮ ಸಮನ್ವಯ ಕಾಪಾಡಿಕೊಂಡಿಲ್ಲ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖರೇಷಿ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ, ಜಿಲ್ಲಾ ಅಂಕಿ ಸಂಖ್ಯೆ ಸಂಗ್ರಹಣಾಧಿಕಾರಿ ರವಿಕುಮಾರ್, ಓರಿಯಂಟ್ ಇನ್ಷೂರೆನ್ಸ್ ಕಂಪನಿಯ ರಾಜ್ಯ ಪ್ರತಿನಿಧಿ ಸುಚಿತ್ರಾ ಶಾಲಿನಿ ಇದ್ದರು.

ನಿರೀಕ್ಷಿತ ಇಳುವರಿ ನೀಡಿದ ತೊಗರಿ ಈ ಬಾರಿಯ ಮುಂಗಾರು ಹಂಗಾಮಿನ ಆರಂಭದ ಜೂನ್ ತಿಂಗಳ ನಂತರ ಜುಲೈನಲ್ಲಿ ಉತ್ತಮ ಮಳೆಯಾಗಿತ್ತು. ಚಳ್ಳಕೆರೆ ಭಾಗದ ರೈತರು ಹರ್ಷದಿಂದ ಹೊಲದಲ್ಲಿ ತೊಗರಿ ಬಿತ್ತಿದ್ದರು. ಆರಂಭದಲ್ಲಿ ತೊಗರಿ ಗಿಡಗಳು ಉತ್ತಮವಾಗಿ ಬೆಳೆದು ಹಸಿರಿನಿಂದ ಕಂಗೊಳಿಸುತ್ತಿದ್ದವು. ಆದರೆ ತೊಗರಿ ಗಿಡ ಟಿಸಿಲೊಡೆದು ಹೂ ಬಿಟ್ಟು ಕಾಯಿತೊಟ್ಟು ಉತ್ತಮ ಇಳುವರಿ ನೀಡುವ ಸಮಯದಲ್ಲಿ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಸತತ 6 ವಾರ ಮಳೆ ಕೊರತೆ ಉಂಟಾಯಿತು. ಇದರಿಂದಾಗಿ ತೊಗರಿ ಗಿಡಗಳು ಉತ್ತಮ ಫಸಲು ನೀಡುವಲ್ಲಿ ವಿಫಲವಾದವು. ರೈತರಿಗೆ ಇಳುವರಿಯಲ್ಲಿ ಸಾಕಷ್ಟು ನಷ್ಟ ಉಂಟಾಗಿದೆ ಎಂದು ಬಬ್ಬೂರು ಕೃಷಿ ವಿವಿ ವಿಜ್ಞಾನಿಗಳಾದ ಓಂಕಾರಪ್ಪ ಹಾಗೂ ಹನುಮಂತರಾಯ ಸಭೆಯಲ್ಲಿ ತಿಳಿಸಿದರು.

ಅಸಂಬದ್ಧ ಉತ್ತರಕ್ಕೆ ಗರಂ ವಿಮಾ ಕಂಪನಿಯ ಪ್ರತಿನಿಧಿ ಮಂಗೇಶ್‌ ಅವರು ತೊಗರಿ ಬೆಳೆ ನಷ್ಟ ಸಮೀಕ್ಷೆಯಲ್ಲಿ ಪಾಲ್ಗೊಳ್ಳದೇ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ತೋರಿದ್ದಾರೆ. ಇದಲ್ಲದೇ ವಾಹನ ವಿಮೆ ನೋಡಿಕೊಳ್ಳುವ ಪ್ರತಿನಿಧಿಯನ್ನು ಕೇವಲ ಒಂದು ದಿನ ಬೆಳೆ ಸಮೀಕ್ಷಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಇದೀಗ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಮಾ ಕಂಪನಿ ಅಧಿಕಾರಿಗಳು ಅಸಂಬದ್ಧವಾಗಿ ಉತ್ತರ ನೀಡುತ್ತಿದ್ದುದು ಕಂಡುಬಂದಿತು.  ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ವಿಮಾ ಕಂಪನಿ ಅಧಿಕಾರಿಗಳು ನಿರ್ಲಕ್ಷ್ಯ ಹಾಗೂ ಉದ್ಧಟತನವನ್ನು ತೀವ್ರವಾಗಿ ಖಂಡಿಸಿದರು. ಇದೇ ರೀತಿ ಮುಂದುವರೆದರೆ ದಾಖಲೆ ಸಹಿತ ಕಂಪನಿ ಪ್ರತಿನಿಧಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.