ADVERTISEMENT

ಚಿಕ್ಕಜಾಜೂರು: ಡೀಸೆಲ್‌ ಸಿಗದೆ ಪರದಾಡಿದ ರೈತರು

ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದ ರೈತರ ಅಲೆದಾಟ

​ಪ್ರಜಾವಾಣಿ ವಾರ್ತೆ
Published 31 ಮೇ 2022, 3:35 IST
Last Updated 31 ಮೇ 2022, 3:35 IST
ಚಿಕ್ಕಜಾಜೂರಿನ ಪೆಟ್ರೋಲ್‌ ಬಂಕ್‌ವೊಂದರ ಮುಂದೆ ಡೀಸೆಲ್‌ ಖರೀದಿಸಲು ಸೋಮವಾರ ಬೆಳಿಗ್ಗೆ ಕ್ಯಾನ್‌ಗಳನ್ನು ಹಿಡಿದು ನಿಂತ ರೈತರು ಹಾಗೂ ವಾಹನಗಳು
ಚಿಕ್ಕಜಾಜೂರಿನ ಪೆಟ್ರೋಲ್‌ ಬಂಕ್‌ವೊಂದರ ಮುಂದೆ ಡೀಸೆಲ್‌ ಖರೀದಿಸಲು ಸೋಮವಾರ ಬೆಳಿಗ್ಗೆ ಕ್ಯಾನ್‌ಗಳನ್ನು ಹಿಡಿದು ನಿಂತ ರೈತರು ಹಾಗೂ ವಾಹನಗಳು   

ಚಿಕ್ಕಜಾಜೂರು: ಪೆಟ್ರೋಲ್‌ ಬಂಕ್‌ಗಳಿಗೆ ದಿಢೀರನೆ ಡೀಸೆಲ್‌ ಆಮದು ನಿಂತ ಪರಿಣಾಮ ಹೋಬಳಿಯ ರೈತರು ಹಾಗೂ ವಾಹನಗಳ ಮಾಲೀಕರು ಪರದಾಡಿದರು.

ಹೊಲಗಳನ್ನು ಹಸನು ಮಾಡಿಕೊಳ್ಳುತ್ತಿದ್ದ ರೈತರು ಡೀಸೆಲ್‌ಗಾಗಿ ಮಧ್ಯಾಹ್ನದ ನಂತರ ಗ್ರಾಮದ ಮೂರು ಪೆಟ್ರೋಲ್‌ ಬಂಕ್‌, ಸಮೀಪದ ಕೊಡಗವಳ್ಳಿ ಗ್ರಾಮಗಳಲ್ಲಿನ ಪೆಟ್ರೋಲ್‌ ಬಂಕ್‌ಗೆ ದೌಡಾಯಿಸಿದರು. ಆದರೆ ಡೀಸೆಲ್‌ ಖಾಲಿಯಾದ ಕಾರಣಪರದಾಡುವಂತಾಯಿತು.

ಮಳೆ ಬಿಡುವು ನೀಡಿದ್ದರಿಂದ ಬಿತ್ತನೆಗಾಗಿ ಹೊಲಗಳನ್ನು ಹಸನು ಮಾಡಿಕೊಳ್ಳುತ್ತಿದ್ದ ರೈತರು ಡೀಸೆಲ್‌ ಖಾಲಿಯಾಗಿದ್ದರಿಂದ ಕಂಗಾಲಾದರು. ಮೇ 31ರಂದು ಪೆಟ್ರೋಲ್‌ ಬಂಕ್‌ಗಳ ಮುಷ್ಕರ ಇದೆ ಎಂದು ತಿಳಿದ ರೈತರು ಶನಿವಾರದಿಂದಲೇ ಹೊಲಗಳಲ್ಲಿ ಟ್ರ್ಯಾಕ್ಟರ್‌ ಹಸನುಮಾಡಿಕೊಳ್ಳಲಾರಂಭಿಸಿದರು. ಆದರೆ, ಭಾನುವಾರ ಮಧ್ಯಾಹ್ನ ಡೀಸೆಲ್‌ ಖಾಲಿಯಾಗಿದೆ ಎಂದು ಬಂಕ್‌ ಮಾಲೀಕರು ತಿಳಿಸಿದ್ದರಿಂದ ಬಂಕ್‌ಗಳಿಗೆ ತರಳಿದ ಕೆಲವು ರೈತರು ಕಾಲಿ ಕ್ಯಾನ್‌ಗಳನ್ನು ಹಿಡಿದು ಹಿಂತಿರುಗುತ್ತಿದ್ದುದು ಕಂಡುಬಂತು.

ADVERTISEMENT

ಸೋಮವಾರ ಬೆಳಿಗ್ಗೆಯೂ ಬಂಕ್‌ಗೆ ಡೀಸೆಲ್‌ ಬಂದಿಲ್ಲ ಎಂದು ತಿಳಿದು ನಿರಾಶರಾದರು. ಬೆಳಿಗ್ಗೆ ಹತ್ತು ಗಂಟೆಗೆ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ಗೆ ಡೀಸೆಲ್‌ ಬಂದಿದೆ ಎಂದು ತಿಳಿಯುತ್ತಿದ್ದಂತೆ ಹೋಬಳಿಯ ಬಹುತೇಕ ರೈತರು, ಟ್ರ್ಯಾಕ್ಟರ್‌ಗಳ ಮಾಲೀಕರು ಬಂಕ್‌ ಮುಂದೆ ಕ್ಯಾನ್‌ಗಳನ್ನು ಹಿಡಿದು ಸರತಿ ಸಾಲಿನಲ್ಲಿ ನಿಂತು ಕಾದರು. ಕಾರುಗಳು, ಆಟೊ, ಲಗೇಜ್‌ ಆಟೊಗಳು ಸರತಿ ಸಾಲಿನಲ್ಲಿ ನಿಂತಿದ್ದರು.

ಡೀಸೆಲ್‌ ಸರಬರಾಜುದಾರರು ಮುಷ್ಕರಕ್ಕೂ ಮುನ್ನವೇ ಡೀಸೆಲ್‌ ಇಲ್ಲ ಎಂದರೆ ಹೇಗೆ? ವಾರದಿಂದ ಮಳೆ ಬಿಡುವು ನೀಡಿದ್ದು, ಯಾವ ಸಮಯದಲ್ಲಾದರೂ ಮಳೆ ಬರಬಹುದು. ಮಳೆ ಬಂತೆಂದರೆ, ಮಳೆ ನಿಂತ ವಾರದವರೆಗೂ ಬೇಸಾಯ ಮಾಡುವಂತಿಲ್ಲ. ಹೀಗಾದರೆ ಹೇಗೆ. ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ರೈತರಿಗೆ ಉಳುಮೆ ಮಾಡಲು ಹಾಗೂ ಬಿತ್ತನೆವರೆಗೆ ಸಮರ್ಪಕ ಡೀಸೆಲ್‌ ಸರಬರಾಜು ವ್ಯವಸ್ಥೆಯನ್ನು ಮಾಡಬೇಕು ಎಂದು ರೈತರಾದ ಅಜ್ಜಪ್ಪ, ಲೋಕೇಶ್‌, ದಿವಾಕರ್‌, ದರ್ಶನ್‌, ಶ್ರೀನಿವಾಸ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.