
ಚಿತ್ರದುರ್ಗ: ದೇವರಾಜ ಅರಸು ಶಿಕ್ಷಣ ಸಂಸ್ಥೆಯ ವಿವಿಧ ಶಾಲಾ, ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳ ಸಡಗರ, ಸಂಭ್ರಮದ ನಡುವೆ ಶನಿವಾರ ‘ಡೆಸ್ಟಿನಿ–2026’ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ಶಿಕ್ಷಣ ಸಂಸ್ಥೆಯ ಸ್ಥಾಪಕ, ಶಾಸಕ ಎಂ.ಚಂದ್ರಪ್ಪ ಅವರು ಉತ್ಸವವನ್ನು ಉದ್ಘಾಟಿಸಿದರು.
ವಿದ್ಯಾಸಂಸ್ಥೆಯ ಆವರಣದಲ್ಲಿ ಹಾಕಲಾಗಿದ್ದ ಅದ್ದೂರಿ ‘ವಿದ್ಯಾದಾನ ಸೌಧ’ದಲ್ಲಿ ಉತ್ಸವ ಉದ್ಘಾಟಿಸಲಾಯಿತು. ವೇದಿಕೆಯ ಮೇಲೆ ದೀಪ ಹಚ್ಚುತ್ತಿದ್ದಂತೆ ಪಟಾಡಿ, ಸಿಡಿಮದ್ದಿನ ಸದ್ದು ಕಣ್ಣರಳಿಸಿತು, ಬೆಳಕಿನ ಚಿತ್ತಾರ ಎತ್ತರಕ್ಕೇರಿತು. ವೇದಿಕೆ ಮುಂಭಾಗದಲ್ಲಿ ನೆರೆದಿದ್ದ ಸಾವಿರಾರು ವಿದ್ಯಾರ್ಥಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಂ.ಚಂದ್ರಪ್ಪ ‘ಗ್ರಾಮೀಣ ಭಾಗದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು, ಸಂಸ್ಕಾರವಂತರನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ನಾವು ಶಿಕ್ಷಣ ಸಂಸ್ಥೆ ಕಟ್ಟಿದ್ದೇವೆ. ಪೋಷಕರಿಂದ ಹಣ ಪಡೆದು ಶಾಲೆ ನಡೆಸುವ ಸಂಸ್ಕೃತಿ ನಮ್ಮದಲ್ಲ. ಉತ್ತಮ ನಾಗರಿಕರನ್ನು ಸಮಾಜಕ್ಕೆ ನೀಡಬೇಕು ಎಂಬ ಉದ್ದೇಶದಿಂದ ನಾವು ಶಿಕ್ಷಣ ಸಂಸ್ಥೆ ಕಟ್ಟಿದ್ದೇವೆ. ಕಳೆದ 43 ವರ್ಷಗಳಿಂದ ನಮ್ಮ ಸಂಸ್ಥೆಗಳಲ್ಲಿ ಕಲಿತ ಮಕ್ಕಳು ಇಂದು ದೇಶ, ವಿದೇಶಗಳಲ್ಲಿ ಸಾಧನೆ ಮಾಡಿದ್ದಾರೆ. ಅದೇ ನಮಗೆ ಸಾರ್ಥಕ’ ಎಂದು ಹೇಳಿದರು.
‘ವಿದ್ಯಾಭ್ಯಾಸದ ಜೊತೆಗೆ ಉತ್ತಮ ಸಂಸ್ಕಾರ ನೀಡುವುದು ನಮ್ಮ ಉದ್ದೇಶವಾಗಿದೆ. ನಾನು 32 ವರ್ಷಗಳಿಂದ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲೂ ಉತ್ತಮ ಶಿಕ್ಷಣ ದೊರೆಯುತ್ತಿದೆ. ಮಕ್ಕಳ ಮನೆ ಬಾಗಿಲಿಗೆ ಉಚಿತವಾಗಿ ಬಸ್ ಕಳುಹಿಸುವ ಮೂಲಕ ಬಡವರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಬಡತನದ ಕಾರಣಕ್ಕೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ’ ಎಂದರು.
‘43 ವರ್ಷಗಳ ನಮ್ಮ ಹಾದಿ ಸುಲಭದ್ದಾಗಿರಲಿಲ್ಲ, ಒಂದೊಂದೇ ಇಟ್ಟಿಗೆಗಳನ್ನು ಇಟ್ಟು ಸಂಸ್ಥೆ ಕಟ್ಟಿದ ಕಾರಣ ಇಂದು ಶಾಲಾ, ಕಾಲೇಜುಗಳು ದೊಡ್ಡ ಮಟ್ಟದಲ್ಲಿ ಬೆಳೆದಿವೆ. ಸಂಸ್ಥೆಯ ಎಲ್ಲಾ ಶ್ರೇಯಸ್ಸನ್ನು ನಮ್ಮ ಪೋಷಕರು ಹಾಗೂ ಶಿಕ್ಷಕರಿಗೆ ಸಲ್ಲಿಸುತ್ತೇನೆ. ಎಲ್‌ಕೆಜಿಯಿಂದ ಆಯುರ್ವೇದ ವೈದ್ಯಕೀಯ ಶಿಕ್ಷಣದವರೆಗೂ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಮ್ಮಲ್ಲಿ ಕಲಿಯುತ್ತಿದ್ದಾರೆ’ ಎಂದು ವಿದ್ಯಾಸಂಸ್ಥೆಯ ಸಿಇಒ ಎಂ.ಸಿ.ರಘುಚಂದನ್ ಹೇಳಿದರು.
‘ಪ್ರತಿ ವರ್ಷ ಬಹಳ ದೊಡ್ಡ ಮಟ್ಟದಲ್ಲಿ ನಾವು ಡೆಸ್ಟಿನಿ ಸಾಂಸ್ಕೃತಿಕ ಉತ್ಸವ ಆಯೋಜನೆ ಮಾಡುತ್ತೇವೆ. ಮಕ್ಕಳು ಸಂಭ್ರಮಿಸಬೇಕು. ಹೊಸ ಸ್ಫೂರ್ತಿ, ಭರವಸೆ ಪಡೆಯಬೇಕು ಎಂಬುದೇ ಇದರ ಉದ್ದೇಶವಾಗಿದೆ. ಇಂದು ನಮ್ಮ ಮಕ್ಕಳು ವಿಶ್ವವಿದ್ಯಾಲಯ ಮಟ್ಟದಲ್ಲಿ ರ್‍ಯಾಂಕ್ ಪಡೆದಿದ್ದಾರೆ, ಹಲವರು ಚಿನ್ನದ ಪದಕ ಜಯಿಸಿದ್ದಾರೆ. ವಿವಿಧ ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಮಟ್ಟಕ್ಕೂ ಬೆಳೆದಿದ್ದಾರೆ’ ಎಂದರು.
‘ಪರಿಶ್ರಮದಿಂದ ಅಧ್ಯಯನ ಮಾಡಿದರೆ ಪ್ರತಿಯೊಬ್ಬರೂ ಅದ್ಭುತಗಳನ್ನು ಸಾಧಿಸಲು ಅವಕಾಶವಿದೆ. ವಿದ್ಯಾರ್ಥಿಗಳು ಮೊಬೈಲ್, ಟಿವಿಗಳನ್ನು ಬಿಟ್ಟು ಅಧ್ಯಯನಶೀಲರಾಗಿ ಮುನ್ನಡೆಯಬೇಕು. ಅಂತಹ ವಾತಾವರಣವನ್ನು ದೇವರಾಜ ಅರಸು ಶಿಕ್ಷಣ ಸಂಸ್ಥೆ ಒದಗಿಸಿಕೊಟ್ಟಿದೆ’ ಎಂದು ಹಿರಿಯ ಉಪ ನೋಂದಣಾಧಿಕಾರಿ ತಿಪ್ಪೇರುದ್ರಪ್ಪ ಹೇಳಿದರು.
‘ಯುವಜನರು ಬದುಕಿನಲ್ಲಿ ಯಶಸ್ಸು ಸಾಧಿಸಬೇಕಾದರೆ ಸ್ಥಿರತೆ ಕಾಪಾಡಿಕೊಳ್ಳಬೇಕು. ಕೃತಜ್ಞತಾ ಮನೋಭಾವವನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು. ಯಾವುದೇ ಕೆಲಸಗಳನ್ನು ಮುಂದಕ್ಕೆ ಹಾಕುವ ಮನೋಭಾವವನ್ನು ಕೈಬಿಡಬೇಕು’ ಎಂದು ಸಂಸ್ಥೆಯ ಅಧ್ಯಕ್ಷೆ ಎಂ.ಸಿ.ಯಶಸ್ವಿನಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಎಚ್.ಚಂದ್ರಕಲಾ, ಮೈರಾ ಸಂಸ್ಥೆಯ ಮನೀಶ್, ಸುಧಾ ದೇವರಾಜ್, ಪ್ರದೀಪ್, ಎಂ.ಸಿ.ದೀಪ್‌ಚಂದನ್, ಶಿವಕುಮಾರ್ ಇದ್ದರು.
ನಗುವಿನ ಗುಳಿಗೆ: ಇದೇ ಸಂದರ್ಭದಲ್ಲಿ ಕಾಮಿಡಿ ಕಿಲಾಡಿಗಳ ತಂಡದ ಜಗ್ಗಪ್ಪ– ಸುಶ್ಮಿತಾ ಅವರ ತಂಡ ನಡೆಸಿಕೊಟ್ಟ ಹಾಸ್ಯ ಕಾರ್ಯಕ್ರಮ ಇಡೀ ಆವರಣವನ್ನು ನಗುವಿನ ಅಲೆಯಲ್ಲಿ ತೇಲಿಸಿತು. ಡೀಪ್ ಮ್ಯೂಸಿಕ್ ವಾದ್ಯ ಸಂಗೀತ ಕಾರ್ಯಕ್ರಮ ರೋಮಾಂಚನ ಮೂಡಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.