ಧರ್ಮಪುರ: ಹೆಲ್ಮೆಟ್ ಧರಿಸಿ ಬೈಕ್ ಓಡಿಸಿಕೊಂಡು ಬಂದ ವಾಹನ ಸವಾರರಿಗೆ ಸಿಪಿಐ ಗುಡ್ಡಪ್ಪ ಶಾಲು ಹೊದಿಸಿ ಸನ್ಮಾನಿಸಿದರು. ಧರಿಸದೇ ಬಂದವರಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಸಮೀಪದ ಅಬ್ಬಿನಹೊಳೆ ಪೊಲೀಸ್ ಠಾಣೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಅಪರಾಧ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ನಾಗರಿಕರಲ್ಲಿ ಸಂಚಾರ ಜಾಗೃತಿ ಮೂಡಿಸಿದರು.
ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಬಾರದು. ಕೆಲವರು ಮದ್ಯಪಾನ ಮಾಡಿ ಹಾಗೂ ಮಾದಕ ವಸ್ತುಗಳನ್ನು ಸೇವಿಸಿ ವಾಹನ ಚಾಲನೆ ಮಾಡುತ್ತಾರೆ. ಇದರಿಂದ ಅಪಘಾತಗಳು ಸಂಭವಿಸಿ ಪ್ರಾಣಕ್ಕೆ ಅಪಾಯ ಎದುರಾಗಲಿದೆ. ಪ್ರತಿಯೊಬ್ಬರೂ ಜಾಗೃತರಾಗಿ ವಾಹನ ಚಾಲನೆ ಮಾಡಬೇಕು ಎಂದು ಸಿಪಿಐ ಗುಡ್ಡಪ್ಪ ತಿಳಿಸಿದರು.
ಯುವಕರು ಮೋಜಿಗಾಗಿ ವ್ಹೀಲಿ ಮಾಡಲು ಮುಂದಾಗುತ್ತಾರೆ. ಇನ್ನೂ ಕೆಲವರು ವಾಹನ ಚಲಾಯಿಸುವಾಗ ಮೊಬೈಲ್ ಬಳಸುತ್ತಾರೆ. ಇಂತಹ ಪ್ರಕರಣಗಳಲ್ಲಿ ₹10,000ದವರೆಗೂ ದಂಡ ವಿಧಿಸಲು ಅವಕಾಶವಿದೆ. ಸೀಟ್ ಬೆಲ್ಟ್ ಧರಿಸದವರಿಗೆ ₹1,000, ಹೆಲ್ಮೆಟ್ ಧರಿಸದವರಿಗೆ ₹500 ದಂಡ ವಿಧಿಸಲಾಗುವುದು ಎಂದು ಪಿಎಸ್ಐ ಬಾಹುಬಲಿ ಎಂ. ಪಡನಾಡ ತಿಳಿಸಿದರು.
ಪಿಎಸ್ಐ ಮಂಜುನಾಥ್ ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.