ಹಿರಿಯೂರು: ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಬೆಂಗಳೂರಿನ ಮನೆಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಭೇಟಿ ನೀಡಿ ಭೋಜನ ಮಾಡಿದರು. ತಮ್ಮ ಪತಿ ಹಾಗೂ ಮಾಜಿ ಶಾಸಕ ಡಿ.ಟಿ. ಶ್ರೀನಿವಾಸ್ ಅವರೊಂದಿಗೆ ಪೂರ್ಣಿಮಾ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರುವ ವದಂತಿಗೆ ಇದರಿಂದ ಪುಷ್ಠಿ ಸಿಕ್ಕಂತಾಗಿದೆ.
ಪೂರ್ಣಿಮಾ ಅವರ ಮನೆಯಲ್ಲಿ ಪ್ರತಿ ವರ್ಷದಂತೆ ಶ್ರೀಕೃಷ್ಣ ಜನ್ಮಾಷ್ಠಮಿ ಪೂಜೆ ಹಮ್ಮಿಕೊಂಡಿದ್ದು, ಈ ಬಾರಿ ಡಿ.ಕೆ. ಶಿವಕುಮಾರ್ ಭಾಗಿಯಾಗಿದ್ದರು. ವಿಧಾನಸಭಾ ಚುನಾವಣೆಗೆ ಮೊದಲೇ ಪೂರ್ಣಿಮಾ ಅವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ವದಂತಿ ಹರಡಿತ್ತು. ಆದರೆ ಬಿ.ಎಸ್. ಯಡಿಯೂರಪ್ಪ ಅವರ ಮೇಲಿನ ಅಭಿಮಾನದ ಕಾರಣಕ್ಕೆ ಹಾಗೂ ಪರಿ ಶ್ರೀನಿವಾಸ್ ಅವರಿಗೆ ಇಷ್ಟವಿಲ್ಲದಿದ್ದರೂ ಹಿರಿಯೂರು ಕ್ಷೇತ್ರದಿಂದ ಬಿಜೆಪಿಯಿಂದ ಮತ್ತೊಮ್ಮೆ ಕಣಕ್ಕೆ ಇಳಿಯಲು ತೀರ್ಮಾನಿಸಿದ್ದರು. ಮೂರು ವರ್ಷದ ಹಿಂದೆ ನಡೆದಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಸೂಚನೆಯನ್ನು ಧಿಕ್ಕರಿಸಿ ಡಿ.ಟಿ. ಶ್ರೀನಿವಾಸ್ ಅವರು ಪಕ್ಷೇತರರಾಗಿ ಕಣಕ್ಕೆ ಇಳಿದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಶ್ರೀನಿವಾಸ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. ವಿಧಾನಸಭೆ ಚುನಾವಣೆ ಘೋಷಣೆಯ ನಂತರ ಅಮಾನತು ರದ್ದು ಪಡಿಸಲಾಗಿತ್ತು. ಪೂರ್ಣಿಮಾ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷರ ನೇಮಕ, ಬೇರೆ ಬೇರೆ ಸಂಸ್ಥೆಗಳಿಗೆ ಸರ್ಕಾರದ ನಾಮನಿರ್ದೇಶನ ಮಾಡಿದ್ದು ಡಿ.ಟಿ. ಶ್ರೀನಿವಾಸ್ ಅವರನ್ನು ಹೆಚ್ಚು ಘಾಸಿಗೊಳಿಸಿತ್ತು. ಚುನಾವಣೆಯಲ್ಲಿ ಬಿಜೆಪಿಯ ಕೆಲವು ಮುಖಂಡರು ಪಕ್ಷದ ಪರವಾಗಿ ಸಕ್ರಿಯವಾಗಿ ಕೆಲಸ ಮಾಡದೇ ಇದ್ದುದು ಅವರಿಗೆ ಇನ್ನಷ್ಟು ಬೇಸರ ಮೂಡಿಸಿತ್ತು.
ಮೂಲ ಕಾಂಗ್ರೆಸ್ಸಿಗರಾಗಿದ್ದ ಪೂರ್ಣಿಮಾ ಅವರ ತಂದೆ ದಿವಂಗತ ಎ. ಕೃಷ್ಣಪ್ಪ ಅವರು ನಂತರ ಜೆಡಿಎಸ್ ಸೇರಿದ್ದರು. ತಂದೆಯ ನಿಧನಾನಂತರ ಪೂರ್ಣಿಮಾ ಅವರು ಯಡಿಯೂರಪ್ಪನವರ ಆಹ್ವಾನದ ಮೇರೆಗೆ ಬಿಜೆಪಿಗೆ ಹೋಗಿದ್ದರು. ಬಿಜೆಪಿಯಿಂದ ಗೆದ್ದು ಶಾಸಕಿಯಾಗಿದ್ದ ಪೂರ್ಣಿಮಾ ಅವರನ್ನು ಕಾಂಗ್ರೆಸ್‌ಗೆ ಸೆಳೆಯುವ ಯತ್ನ ಹಿಂದೆಯೂ ನಡೆದಿತ್ತು.
ಡಿ.ಕೆ. ಶಿವಕುಮಾರ್ ಭೇಟಿ ಬಗ್ಗೆ ಸ್ಪಷ್ಟನೆ ಪಡೆಯಲು ಕರೆ ಮಾಡಿದಾಗ ಮಾಜಿ ಶಾಸಕರು ಪ್ರತಿಕ್ರಿಯೆಗೆ ಸಿಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.