ಹೊಸದುರ್ಗದ ಮೆಣಸಿನೊಡು ಗ್ರಾಮದಲ್ಲಿನ ಬಸವರಾಜಪ್ಪ ಅವರ ಜಮೀನಿನಲ್ಲಿ ಹೆಸರು ಬೆಳೆ ಜಾನುವಾರುಗಳಿಗೆ ಆಹಾರ ಆಗಿರುವುದು.
ಹೊಸದುರ್ಗ: ತಾಲ್ಲೂಕಿನಾದ್ಯಂತ ಮಳೆ ಇಲ್ಲದ ಕಾರಣ ಬೆಳೆಗಳು ಬಾಡುತ್ತಿವೆ. ಈ ಮಧ್ಯೆ ಹೆಸರು ಬೆಳೆ ಮಾತ್ರ ಕಾಯಿ– ಹೂ ಏನೂ ಬಾರದ ಕಾರಣ ನೊಂದ ರೈತರು ಜಮೀನುಗಳಿಗೆ ಜಾನುವಾರುಗಳನ್ನು ಮೇಯಲು ಬಿಟ್ಟಿದ್ದಾರೆ.
ಒಂದೂವರೆ ತಿಂಗಳಿಂದ ಮಳೆ ಯಾಗಿಲ್ಲ. ಬೆಳೆಗಳೆಲ್ಲಾ ಭೂಮಿಯಲ್ಲೇ ಕುಸಿದಿವೆ. ಇನ್ನು ಮುಂದಿನ ಬಿತ್ತನೆಗಾಗಿ ಭೂಮಿ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿರುವ ರೈತರು ಮಳೆಗಾಗಿ ಮುಗಿಲಿನ ಕಡೆ ಮುಖಮಾಡಿದ್ದಾರೆ.
‘ಮೇ ತಿಂಗಳ ಕೊನೆಯ ವಾರದಲ್ಲಿ ಎರಡು ಎಕರೆ ಭೂಮಿಯಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. ಇದುವರೆಗೂ ₹ 30,000 ಖರ್ಚು ಮಾಡಲಾಗಿದೆ. ಆದರೆ, ಮಳೆ ಇಲ್ಲದ ಕಾರಣ ಹೆಸರು ಬೆಳೆ ಇನ್ನೂ ಹೂ ಹಾಗೂ ಕಾಯಿ ಕಟ್ಟಿಲ್ಲ. ರಾಗಿ ಬಿತ್ತನೆಗೆ ಭೂಮಿ ಸಿದ್ಧತೆ ಮಾಡಿಕೊಳ್ಳಲು ಹೆಸರು ಬೆಳೆ ತೆಗೆಯಬೇಕು. ಹಾಗಾಗಿ ಜಾನುವಾರುಗಳಿಗಾದರೂ ಮೇವು ಆಗಲಿ ಎಂದು ಬಿಟ್ಟಿದ್ದೇವೆ. ಸರ್ಕಾರ ನೊಂದ ರೈತರಿಗೆ ಸಹಾಯ ಹಸ್ತ ಚಾಚಬೇಕು’ ಎಂದು ಮೆಣಸಿನೊಡು ರೈತ ಬಸವರಾಜಪ್ಪ ಬೇಸರ ವ್ಯಕ್ತಪಡಿಸಿದರು.
ಮೇ ಮೊದಲ ವಾರದಲ್ಲಿ ಬಿತ್ತನೆಯಾಗಿರುವ ಹೆಸರು ಬೆಳೆಯಲ್ಲಿ ಅಲ್ಪಸ್ವಲ್ಪ ಕಾಳು ಇದ್ದು, ಕೊನೆಯ ವಾರದಲ್ಲಿ ಬಿತ್ತನೆಯಾಗಿರುವ ಹೆಸರು ಬೆಳೆ ಸ್ವಲ್ಪ ಮಾತ್ರ ಬಂದಿದೆ. ಆದರೆ, ಹೂ– ಕಾಯಿ ಇಲ್ಲ. ಅದರಲ್ಲೂ ಕೆಲವು ಹಳದಿ ರೋಗಕ್ಕೆ ತುತ್ತಾಗಿ ಅಳಿವಿನಂಚಿನಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.