ADVERTISEMENT

ಪ್ರೀತಿಗಾಗಿ ಧರ್ಮ ತ್ಯಜಿಸಿದ ‘ದುರ್ಗದ ರಾಮಾಚಾರಿ’

ಒಲಿದ ಹೃದಯಗಳಿಗೆ ಮಾದರಿಯಾದ ‘ಕಪ್ಪು– ಬಿಳುಪು ಕಾಲ’ದ ಪ್ರೇಮಕತೆ

ಎಂ.ಎನ್.ಯೋಗೇಶ್‌
Published 14 ಫೆಬ್ರುವರಿ 2025, 3:18 IST
Last Updated 14 ಫೆಬ್ರುವರಿ 2025, 3:18 IST
ವಿವಾಹ ಸಂದರ್ಭದಲ್ಲಿ ಎಂ.ಮೃತ್ಯುಂಜಯಪ್ಪ– ಲೀನಾ ಕುಮಾರಿ 
ವಿವಾಹ ಸಂದರ್ಭದಲ್ಲಿ ಎಂ.ಮೃತ್ಯುಂಜಯಪ್ಪ– ಲೀನಾ ಕುಮಾರಿ    

ಚಿತ್ರದುರ್ಗ: ಎಪ್ಪತ್ತರ ದಶಕದಲ್ಲಿ ರಂಗನಟಿಯೊಬ್ಬರನ್ನು ಪ್ರೀತಿಸಿ ಆಕೆಗಾಗಿ ಕ್ರೈಸ್ತಧರ್ಮಕ್ಕೆ ಬದಲಾದ ಸಾಹಿತಿಯೊಬ್ಬರ ಪ್ರೇಮಕತೆ ಪ್ರೀತಿಸುವ ಹೃದಯಗಳಿಗೆ ಮಾದರಿಯಾಗಿದೆ. ತರಾಸು ಕಾದಂಬರಿ ಆಧರಿತ ‘ನಾಗರಹಾವು’ ಚಿತ್ರದ ರಾಮಾಚಾರಿ– ಮಾರ್ಗರೇಟ್‌ ಪ್ರೇಮವನ್ನೇ ಹೋಲುವ ಈ ಹಳೆಯ ಪ್ರೇಮ ಪುರಾಣ ಕಪ್ಪು– ಬಿಳುಪಿನ ಕಾಲದ ದರ್ಶನ ಮಾಡಿಸುತ್ತದೆ.

81ರ ಹರೆಯದ ಮೃತ್ಯುಂಜಯಪ್ಪ ಅವರು ತಮ್ಮ ಯೌವ್ವನದಲ್ಲಿ ಲೀನಾಕುಮಾರಿ ಅವರನ್ನು ಪ್ರೀತಿಸಿ ಮದುವೆಯಾದ ಕಥೆ ರೋಚಕವಾದುದು. ನಾಗರಹಾವು ಚಿತ್ರದಲ್ಲಿ ರಾಮಾಚಾರಿ– ಮಾರ್ಗರೇಟ್‌ ಒಂದಾಗುವುದಿಲ್ಲ. ಆದರೆ, ಮೃತ್ಯುಂಜಯ್ಯ– ಲೀನಾಕುಮಾರಿ ಒಬ್ಬರಿಗೊಬ್ಬರು ಒಲಿದು 40 ವರ್ಷ ಸಂಸಾರ ನಡೆಸಿದ್ದಾರೆ. 14 ವರ್ಷಗಳ ಹಿಂದೆಯೇ ಲೀನಾಕುಮಾರಿ ಅವರು ಕ್ಯಾನ್ಸರ್‌ಗೆ ಬಲಿಯಾಗಿದ್ದರೂ ಮೃತ್ಯುಂಜಯಪ್ಪ ಅವರು ಶುದ್ಧ ಪ್ರೀತಿಯ ರೂಪಕವಾಗಿದ್ದಾರೆ. ಅವರ ಪ್ರೀತಿಯನ್ನು ಬಲ್ಲವರು ಅವರನ್ನು ‘ದುರ್ಗದ ರಾಮಾಚಾರಿ’ ಎನ್ನುತ್ತಾರೆ.

‘ದುರ್ಗದ ಹುಲಿ ಶಿಕಾರಿ’ ಸೇರಿ ಹಲವು ಕೃತಿ ಬರೆದಿರುವ ಅವರು ಸಂಶೋಧಕರಾಗಿಯೂ ಗುರುತಿಸಿಕೊಂಡಿದ್ದಾರೆ. ದುರ್ಗದ ಕೋಟೆ ಸೇರಿದಂತೆ ಐತಿಹಾಸಿಕ ಸ್ಮಾರಕಗಳ ಉಳಿವಿಗಾಗಿ ತುಡಿಯುತ್ತಾರೆ. ಕಲ್ಲಿನಕೋಟೆ ವಿಶ್ವ ಪಾರಂಪರಿಕ ತಾಣವಾಗಬೇಕು ಎಂಬ ಹೋರಾಟಕ್ಕೂ ಮುನ್ನುಡಿ ಬರೆದಿದ್ದಾರೆ.

ADVERTISEMENT

ಎಪಿಎಂಸಿ ನೌಕರರಾಗಿದ್ದ ಮೃತ್ಯುಂಜಯಪ್ಪ ಎಸ್‌ಎಲ್‌ಎನ್‌ ರಂಗಮಂದಿರದಲ್ಲಿ ‘ರಾಜವೀರ ಮದಕರಿ ನಾಯಕ’ ನಾಟಕ ನೋಡಿ ನಟಿ ಲೀನಾ ಕುಮಾರಿ ಅಭಿನಯಕ್ಕೆ ಮಾರು ಹೋಗಿದ್ದರು. ತಾವೂ ನಟರಾಗಿ ವೇದಿಕೆ ಹತ್ತಿ ಲೀನಾ ಸ್ನೇಹ ಸಂಪಾದಿಸಿದ್ದರು.

ಒಂದು ರೋಚಕ ಘಟ್ಟದಲ್ಲಿ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು. ದಾವಣಗೆರೆಯಲ್ಲಿ ನಡೆದ ನಾಟಕಕ್ಕೆ ಚಿತ್ರನಟಿ ಭಾರತಿ ವಿಷ್ಣುವರ್ಧನ್‌ ಗೈರು ಹಾಜರಾಗಿದ್ದರು. ನೆಚ್ಚಿನ ನಟಿ ನೋಡಲು ಬಂದಿದ್ದವರು ರಂಗದತ್ತ ಕಲ್ಲು ತೂರಿದರು. ಕಲ್ಲೇಟು ತಪ್ಪಿಸಿಕೊಳ್ಳಲು ಕಲಾವಿದರು ಓಡಿ ಹೋಗಿದ್ದರು. ಮೃತ್ಯುಂಜಯಪ್ಪ ಅವರು ಲೀನಾ ಕೈ ಹಿಡಿದು ಎಳೆದೊಯ್ದ ಘಟನೆ ನಡೆದಿತ್ತು.

‘ನಾನು ಮೊದಲ ಬಾರಿ ಆಕೆಯ ಕೈ ಹಿಡಿದಾಗ ‘ಕೈ ಬಿಡ್ರಿ’ ಅಂದಳು. ಬಿಡುವುದಿಲ್ಲ, ಸದಾ ಹೀಗೇ ಹಿಡಿದುಕೊಂಡಿರುತ್ತೇನೆ ಎಂದೆ. ‘ಆ ಧೈರ್ಯ ನಿಮಗಿದೆಯಾ’ ಎಂದು ಪ್ರಶ್ನಿಸಿದಳು. ನಂತರ ಬಂದ ಅಡೆತಡೆ ಎದುರಿಸಿ ಶಾಶ್ವತವಾಗಿ ಕೈಹಿಡಿದೆ’ ಎಂದು ಭಾವುಕರಾಗಿ ನುಡಿದರು ಮೃತ್ಯುಂಜಯಪ್ಪ.

ಲೀನಾ ಅವರು ಮೃತ್ಯುಂಜಯಪ್ಪ ಅವರ ಪ್ರೇಮವನ್ನು ಒಪ್ಪಿಕೊಳ್ಳುವ ಮೊದಲು, ‘ಕ್ರೈಸ್ತ ಧರ್ಮಕ್ಕೆ ಬರಬೇಕು, ನಾಟಕದವಳು ಎನ್ನಕೂಡದು, ನಟರ ಒಡನಾಟವನ್ನು ತಪ್ಪು ತಿಳಿಯಬಾರದು’ ಎಂಬ 3 ಷರತ್ತು ಹಾಕಿದ್ದರು. ಕಲ್ಲಿನಕೋಟೆಯ ಒಂಟಿಕಲ್ಲು ಬಸವಣ್ಣನ ಗುಡಿ ಮುಂದೆ ದಿನಗಟ್ಟಲೇ ಯೋಚಿಸಿದ್ದ ಮೃತ್ಯುಂಜಯಪ್ಪ ಎಲ್ಲಾ ಷರತ್ತುಗಳನ್ನು ಒಪ್ಪಿದ್ದರು.

ವಿವಾಹ ನೋಂದಣಿಯಾಗಬೇಕು ಎನ್ನುವಷ್ಟರಲ್ಲಿ ಮೃತ್ಯುಂಜಯಪ್ಪ ಮನೆಯಲ್ಲಿ ಗದ್ದಲ ಸೃಷ್ಟಿಯಾಯಿತು. ಮನೆಯ ಹಿರಿಯ ಮಗ ಕ್ರೈಸ್ತ ಸಮುದಾಯದ ಹುಡುಗಿಯನ್ನು ವಿವಾಹವಾಗಲು ಒಪ್ಪಲಿಲ್ಲ. ಆದರೂ ದಾವಣಗೆರೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕೇರ್‌ ಆಫ್‌ ವಿಳಾಸ ನೀಡಿ, ವಿವಾಹವಾಗಿ ಲೀನಾ ಮನೆ ಸೇರಿಕೊಂಡರು.

ಇದರಿಂದ ಆಕ್ರೋಶಗೊಂಡ ಮೃತ್ಯುಂಜಯಪ್ಪ ಮನೆಯವರು ಇಬ್ಬರನ್ನು ಮನೆಯಿಂದ ಹೊರಗೆಳೆದು ಚರ್ಮ ಸುಲಿಯುವಂತೆ ಹೊಡೆದಿದ್ದರು. ಲೀನಾ ಪೊಲೀಸರಿಗೆ ದೂರು ನೀಡಿದ್ದರು. ಏಟುಗಳಿಂದ ಗಾಯಗೊಂಡಿದ್ದ ಪತಿ ಮೃತ್ಯುಂಜಯಪ್ಪ ಅವರನ್ನು ಲೀನಾಕುಮಾರಿ ತಿಂಗಳುಗಟ್ಟಲೇ ಆರೈಕೆ ಮಾಡಿದ್ದರು.

ಹಿಂದೂ ಧರ್ಮ ತ್ಯಜಿಸಿ ಕ್ರೈಸ್ತ ಧರ್ಮಕ್ಕೆ ಬದಲಾದ ಘಟನೆ ಚಿತ್ರದುರ್ಗದಲ್ಲಿ ಆಗ ದೊಡ್ಡ ಸುದ್ದಿಯಾಗಿತ್ತು. ‘ಇದು ಒತ್ತಾಯದ ಮತಾಂತರವಲ್ಲ. ಪತ್ನಿಯ ಪ್ರೀತಿಗಾಗಿ, ಆಕೆಯ ಸ್ವಾಭಿಮಾನಕ್ಕಾಗಿ ಧರ್ಮ ಬದಲಿಸಿದೆ’ ಎಂದು ಮೃತ್ಯಂಜಯಪ್ಪ ಸಮಜಾಯಿಶಿ ನೀಡಿದ್ದರು.

‘ರಾಮಾಚಾರಿ– ಮಾರ್ಗರೇಟ್‌ ಚಿತ್ರದ ಶೂಟಿಂಗ್‌ ನಡೆಯುವಾಗ ನಮ್ಮ ತಾಯಿ ಪುಟ್ಟಣ್ಣ ಕಣಗಾಲ್‌ ಅವರನ್ನು ‘ನನ್ನ ಮಗನೂ ಕ್ರೈಸ್ತ ಹುಡುಗಿಯನ್ನು ಪ್ರೀತಿಸಿ ಹಾಳಾದ, ಮನೆಯಿಂದ ಹೊರ ಹಾಕಿದ್ದೇವೆ’ ಎಂದಿದ್ದರು. ಅದಕ್ಕೆ ಪುಟ್ಟಣ್ಣ ‘ಪ್ರೀತಿಯನ್ನು ಒಪ್ಪಿಕೊಳ್ಳಿ, ರಾಮಚಾರಿ– ಮಾರ್ಗರೇಟ್‌ ಸಾಯುತ್ತಾರೆ. ನಿಮ್ಮ ಮಗ– ಸೊಸೆ ಬದುಕಬೇಕು ಅಂತ ತಿಳಿಸಿದ್ದರು’ ಎಂದು ಮೃತ್ಯುಂಜಯಪ್ಪ ನೆನೆಯುತ್ತಾರೆ.

‘ಲೀನಾ ಬದುಕಿಲ್ಲ ಎನ್ನುವ ಭಾವನೆ ನನ್ನಲ್ಲಿಲ್ಲ. ಅವಳ ಭಾವಚಿತ್ರದ ಜೊತೆ ನಿತ್ಯ ಮಾತನಾಡುತ್ತೇನೆ. ಬದಲಾದ ಕಾಲದ ಮಹಿಮೆಯನ್ನು ಅವಳಿಗೆ ತಿಳಿಸುತ್ತೇನೆ. ಲೀನಾ ನನ್ನ ಸ್ಫೂರ್ತಿ’ ಎಂದೂ ಅವರು ಹೇಳಿದರು.

ಖುಷಿಯ ಸಂದರ್ಭದಲ್ಲಿ ಲೀನಾಕುಮಾರಿ– ಎಂ.ಮೃತ್ಯುಂಜಯಪ್ಪ
ನಿತ್ಯ ಈಜು ಓದು ಹವ್ಯಾಸ...
ಎಂ.ಮೃತ್ಯುಂಜಯಪ್ಪ ಅವರು 81ರ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಾಗಿದ್ದಾರೆ. ಪ್ರತಿದಿನ ಬೆಳಿಗ್ಗೆ 6ಕ್ಕೆ ಒನಕೆ ಓಬವ್ವ ಈಜುಕೊಳದಲ್ಲಿ ಗಂಟೆಗಟ್ಟಲೆ ಈಜುತ್ತಾರೆ. ಎಲ್ಲರೊಂದಿಗೂ ಅವರು ಹೊಂದಿರುವ ಆತ್ಮೀಯ ಸಂಬಂಧ ಪ್ರೀತಿಯೇ ಅವರ ಆರೋಗ್ಯದ ಗುಟ್ಟು. ‘ಯುವ ಪೀಳಿಗೆಗೆ ಸ್ಫೂರ್ತಿಯಾಗಿರುವ ಮೃತ್ಯುಂಜಯಪ್ಪ ಅವರಿಗೊಂದು ಅಭಿನಂದನಾ ಗ್ರಂಥ ಅರ್ಪಿಸುವ ಚಿಂತನೆ ಇದೆ. ‘ದುರ್ಗದ ರಾಮಾಚಾರಿ’ ಅದರ ಶೀರ್ಷಿಕೆ ಎಂದು ಚಿತ್ರಕಲಾ ಕಲಾವಿದ ಟಿ.ಎಂ. ವೀರೇಶ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.