ADVERTISEMENT

ನಾಯಕನಹಟ್ಟಿ: ಮಿಶ್ರ ಬೆಳೆಯಲ್ಲಿ ಯಶಸ್ಸು ಕಂಡ ರೈತ ಕೆ.ಎಸ್. ದಿವಾಕರ ರೆಡ್ಡಿ

ಸೀಬೆ, ದಾಳಿಂಬೆ ಫಲದಲ್ಲಿ ಸಫಲ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 19:30 IST
Last Updated 10 ನವೆಂಬರ್ 2021, 19:30 IST
ನಾಯಕನಹಟ್ಟಿ ಹೋಬಳಿಯ ಎನ್.ದೇವರಹಳ್ಳಿ ಗ್ರಾಮದ ರೈತ ಕೆ.ಎಸ್.ದಿವಾಕರ ರೆಡ್ಡಿ ಅವರು ತೋಟದಲ್ಲಿ ಬೆಳೆದಿರುವ ಸೀಬೆ ಹಣ್ಣು.
ನಾಯಕನಹಟ್ಟಿ ಹೋಬಳಿಯ ಎನ್.ದೇವರಹಳ್ಳಿ ಗ್ರಾಮದ ರೈತ ಕೆ.ಎಸ್.ದಿವಾಕರ ರೆಡ್ಡಿ ಅವರು ತೋಟದಲ್ಲಿ ಬೆಳೆದಿರುವ ಸೀಬೆ ಹಣ್ಣು.   

ನಾಯಕನಹಟ್ಟಿ: ಹೋಬಳಿಯ ಎನ್. ದೇವರಹಳ್ಳಿ ಗ್ರಾಮದ ರೈತ ಕೆ.ಎಸ್. ದಿವಾಕರ ರೆಡ್ಡಿ ವೈಜ್ಞಾನಿಕ ಕೃಷಿ ವಿಧಾನಗಳ ಮೂಲಕ ಸೀಬೆ ಮತ್ತು ದಾಳಿಂಬೆ ಬೆಳೆಯುವ ಮೂಲಕ ಉತ್ತಮ ಆದಾಯದ ಮಾರ್ಗವನ್ನು ಕಂಡುಕೊಂಡಿದ್ದಾರೆ.

ನಾಯಕನಹಟ್ಟಿ ಹೋಬಳಿ ಎಂದರೆ ಬರಗಾಲ, ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಕಣ್ಣಮುಂದೆ ಬರುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿನಿಂತು ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಛಲದಿಂದ 20 ಎಕರೆ ಜಮೀನಿನಲ್ಲಿ ಬೆಳೆಗಳನ್ನು ತೆಗೆಯುತ್ತಿದ್ದಾರೆ. 6 ಕೊಳವೆ ಬಾವಿಗಳು ಇವರಿಗೆ ಆಧಾರವಾಗಿವೆ.

ಮಿಶ್ರಬೆಳೆ ಬೇಸಾಯ ಪದ್ಧತಿ:

ADVERTISEMENT

ಒಂದೇ ಬೆಳೆಯನ್ನು ಬೆಳೆದರೆ ನಷ್ಟ ಖಚಿತ ಎಂಬ ಸತ್ಯವನ್ನು ಅರಿತ ದಿವಾಕರ ರೆಡ್ಡಿ ಅವರು ಮಿಶ್ರ ಬೆಳೆ ಬೇಸಾಯ ಪದ್ಧತಿಯನ್ನು ಅನುಸರಿಸಿದರು. ಸೀಬೆ, ದಾಳಿಂಬೆ, ಈರುಳ್ಳಿಯನ್ನು ಬೆಳೆಯಲು ಮುಂದಾದರು. 8 ಎಕರೆ ಜಮೀನಿನಲ್ಲಿಒಂದು ಸಾಲಿನಿಂದ ಮತ್ತೊಂದು ಸಾಲಿಗೆ 12 ಅಡಿಗಳ
ಅಂತರದಲ್ಲಿ 2,300 ಸೀಬೆ ಸಸಿಗಳನ್ನು ನಾಟಿ ಮಾಡಿದ್ದಾರೆ

8 ಎಕರೆ ಪ್ರದೇಶದಲ್ಲಿ 6 ಅಡಿಗಳ ಅಂತರದಲ್ಲಿ 2,500 ದಾಳಿಂಬೆ ಸಸಿಗಳನ್ನು ನಾಟಿ ಮಾಡಿರುವ ರೆಡ್ಡಿ ಅವರು ಗಿಡಗಳಿಗೆ ನೆರಳಿಗಾಗಿ ತೋಟದ ಸುತ್ತಲೂ ಅಗಸೆ ಗಿಡಗಳನ್ನು ಬೆಳೆಸಿದ್ದಾರೆ. ಇದರಿಂದಾಗಿ ದಾಳಿಂಬೆಗೆ ರೋಗಾಣುಗಳ ಬಾಧೆ ಕಡಿಮೆಯಾಗಿದೆ. 5 ಎಕರೆ ಪ್ರದೇಶಗಳಲ್ಲಿ ಈರುಳ್ಳಿ ಬೆಳೆಯುವುದರ ಜೊತೆಗೆ ನಿತ್ಯ ಆದಾಯ ಕಂಡುಕೊಳ್ಳಲು ಜರ್ಸಿ ತಳಿಯ ಹಸುಗಳ ಸಾಕಾಣಿಕೆಯಲ್ಲಿ ತೊಡಗಿದ್ದಾರೆ.

ಭೂಮಿಯ ಆರೋಗ್ಯ ಕಾಪಾಡಲು ರಾಸಾಯನಿಕ ಗೊಬ್ಬರಗಳ ಬದಲು ಜಿಕೆವಿಕೆ ಕೃಷಿ ವಿಜ್ಞಾನಿಗಳ ಸಲಹೆಯ ಮೇರೆಗೆ ವರ್ಷಕ್ಕೆ ಸುಮಾರು 50 ಲೋಡ್‌ನಷ್ಟು ಕೊಟ್ಟಿಗೆ ಗೊಬ್ಬರವನ್ನು ಜಮೀನಿಗೆ ಹಾಕಿ ಒಂದು ತಿಂಗಳು ಭೂಮಿಯನ್ನು ಹದಗೊಳಿಸಿದರು. ₹50ಕ್ಕೆ ಒಂದರಂತೆ ಲಕ್ನೋ-49 ಮತ್ತು ತೈವಾನ್‌ ಲೈಟ್‌ಪಿಂಕ್ ಮಾದರಿ ಎರಡು ತಳಿಯ ಸೀಬೆಗಿಡಗಳನ್ನು ನಾಟಿಮಾಡಿ ಕಾಲಕಾಲಕ್ಕೆ ನೀರು, ಗೊಬ್ಬರ ಹಾಕಿದರು. ನಾಟಿ ಮಾಡಿದ 9 ತಿಂಗಳಿಗೆ ಕಾಯಿ ಕಾಟಾವಿಗೆ ಬಂದಿದ್ದು, ಉತ್ತಮವಾದ ಇಳುವರಿ ಬಂದಿದೆ.

‘ಒಂದು ವರ್ಷದ ಅವಧಿಯಲ್ಲಿ ಒಂದು ಸೀಬೆಗಿಡದಲ್ಲಿ ಸುಮಾರು 15ರಿಂದ 25 ಕೆಜಿ ಹಣ್ಣು ದೊರೆಯುತ್ತಿದೆ. ಒಂದು ವರ್ಷದಲ್ಲಿ 35 ಟನ್‌ನಷ್ಟು ಸೀಬೆ ಕಟಾವು ಮಾಡಲಾಗಿದೆ. ಒಮ್ಮೆ ಗಿಡದ ಚಿಗುರು ಕತ್ತರಿಸಿದರೆ ಮೂರು ತಿಂಗಳ ನಂತರ ಸೀಬೆ ಹಣ್ಣು ಕೋಯ್ಲಿಗೆ ಸಿದ್ಧವಾಗುತ್ತದೆ’ ಎಂದು ರೈತ ಕೆ.ಎಸ್. ದಿವಾಕರ ರೆಡ್ಡಿ ಹೇಳುತ್ತಾರೆ.

‘ಸೀಬೆ ಗಿಡಗಳಲ್ಲಿ ನಿತ್ಯವೂ ಹಣ್ಣನ್ನು ಕಟಾವು ಮಾಡುತ್ತಿದ್ದು, ಜಮೀನಿನಲ್ಲಿ ಒಂದು ಕೆ.ಜಿ ಹಣ್ಣಿಗೆ ₹25ರಂತೆ ಮಾರಾಟ ಮಾಡಲಾಗಿದ್ದು, ವ್ಯಾಪಾರಿಗಳೇ ಜಮೀನಿಗೆ ಬಂದು ಹಣ್ಣುಗಳನ್ನು ಕೊಂಡೊಯ್ಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವು ಕಡೆಗಳಿಂದ ಬೇಡಿಕೆ ಹೆಚ್ಚಿದೆ. ಇದರಿಂದ ಈಗಾಗಲೇ ಒಂದು ವರ್ಷಕ್ಕೆ ಸುಮಾರು ₹ 12 ಲಕ್ಷನಿವ್ವಳ ಲಾಭ ದೊರೆತಿದೆ. ಎರಡು ವರ್ಷಗಳವರೆಗೆ ₹30 ಲಕ್ಷದವರೆಗೂ ಆದಾಯ ನಿರೀಕ್ಷೆಯಲ್ಲಿದ್ದೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸೀಬೆ ಬಳೆಯಲು ಕೂಲಿ ಕಾರ್ಮಿಕರ ಖರ್ಚು ಕಡಿಮೆ, ಯಾವುದೇ ಗಂಭೀರ ತರಹದ ರೋಗಗಳು ಇಲ್ಲ. ಸಾಮಾನ್ಯವಾಗಿ ಬೇರುಹುಳು, ಬಿಲ್ಲಿಬಗ್ಸ್‌ನಂತಹ ಕೀಟಾಣುಗಳ ಉಪಳಟವಿದ್ದು, ಮನೆಯಲ್ಲೇ ಸಿಗುವ ಅರಿಶಿನ, ಮಜ್ಜಿಗೆ, ಮೊಟ್ಟೆ, ಶಾಂಪೂ, ಹಸುಗಳ ಗಂಜಲ ಸಿಂಪಡಣೆಯಿಂದ ರೋಗವನ್ನು ಹತೋಟಿಗೆ ತರಬಹುದು. ವರ್ಷಕ್ಕೆ ₹15 ಸಾವಿರದಿಂದ₹ 20 ಸಾವಿರವರೆಗೆ ಮಾತ್ರ ಖರ್ಚು ಬರಲಿದ್ದು, ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸುವ ಕೆಲವೇ ಬೆಳೆಗಳಲ್ಲಿ ಸೀಬೆಯು ಒಂದಾಗಿದೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

‘ನಾಯಕನಹಟ್ಟಿ ಹೋಬಳಿಯಾದ್ಯಂತ ಸುಮಾರು 10 ಸಾವಿರ ಸೀಬೆ ಸಸಿಗಳನ್ನು ಬೆಳೆಸಲು ಹಲವು ರೈತರಿಗೆ ಪ್ರೇರಣೆ ನೀಡಿದ್ದೇನೆ. ಜಿಲ್ಲೆಯು ಸಮಶೀತೋಷ್ಣ ವಲಯದಲ್ಲಿ ಇದ್ದು, ತೋಟಗಾರಿಕೆ ಬೆಳೆ ಬೆಳೆಯಲು
ಸೂಕ್ತವಾದ ಹವಾಮಾನ ಹೊಂದಿರುವುದರಿಂದಈರುಳ್ಳಿ ಬೆಳೆಯ ನಂತರ ದ್ರಾಕ್ಷಿ ಬೆಳೆಯಲು ನಿರ್ಧರಿಸಿದ್ದೇನೆ’ ಎಂದು ಕೆ.ಎಸ್. ದಿವಾಕರರೆಡ್ಡಿ ಅನುಭವವನ್ನು ಹಂಚಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.