ADVERTISEMENT

ಚಿತ್ರದುರ್ಗ: ತಿಮ್ಮಣ್ಣನಾಯಕ ಕೆರೆಯಲ್ಲಿ ಮೋಜು– ಮಸ್ತಿ

ಎಲ್ಲೆಂದರಲ್ಲಿ ಬಿದ್ದಿವೆ ಮದ್ಯದ ಬಾಟಲಿ, ಮಾಂಸದೂಟಕ್ಕೆ ಉರಿಯುತ್ತಿವೆ ಒಲೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 9:36 IST
Last Updated 9 ಏಪ್ರಿಲ್ 2020, 9:36 IST
ಚಿತ್ರದುರ್ಗದ ತಿಮ್ಮಣ್ಣನಾಯಕ ಕೆರೆಯಂಗಳದ ಮರದ ನೆರಳಿನಲ್ಲಿ ಕುಳಿತ ಗುಂಪು
ಚಿತ್ರದುರ್ಗದ ತಿಮ್ಮಣ್ಣನಾಯಕ ಕೆರೆಯಂಗಳದ ಮರದ ನೆರಳಿನಲ್ಲಿ ಕುಳಿತ ಗುಂಪು   

ಚಿತ್ರದುರ್ಗ: ಲಾಕ್‌ಡೌನ್‌ ಘೋಷಣೆಯಾದ ಬಳಿಕ ಪ್ರವಾಸಿ ತಾಣಗಳು ಭಣಗುಡುತ್ತಿವೆ. ಆದರೆ, ತಿಮ್ಮಣ್ಣನಾಯಕ ಕೆರೆಯ ಅಂಗಳ ಮಾತ್ರ ಮೋಜು–ಮಸ್ತಿಯ ತಾಣವಾಗಿ ಬದಲಾಗಿದೆ. ಮಾಂಸದೂಟ ಹಾಗೂ ಮದ್ಯ ಸೇವನೆ ನಿರಾತಂಕವಾಗಿ ಸಾಗಿದೆ.

ನಗರದ ಹೊರವಲಯದ ತಿಮ್ಮಣ್ಣನಾಯಕ ಕೆರೆ ಅಂಗಳಕ್ಕೆ ನಿತ್ಯ ನೂರಾರು ಜನರು ಭೇಟಿ ನೀಡುತ್ತಿದ್ದಾರೆ. ಇಡೀ ದಿನ ವಿಹಾರ ನಡೆಸಿ ಸಂಜೆ ವೇಳೆಗೆ ಮನೆಗೆ ಮರಳುತ್ತಿದ್ದಾರೆ. ಈ ಮೋಜಿಗೆ ಕಡಿವಾಣ ಹಾಕಲು ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಯತ್ನಿಸಿ ವಿಫಲರಾಗಿದ್ದಾರೆ.

ಜಟ್‌ಪಟ್‌ ನಗರದ ವೃತ್ತದಿಂದ ಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಜೋಗಿಮಟ್ಟಿ ರಸ್ತೆಯಲ್ಲಿ ಸಾಗುವ ಪೊಲೀಸರು ಕೆರೆಯತ್ತ ಗಮನ ಹರಿಸುತ್ತಿಲ್ಲ. ಇದರ ಪ್ರಯೋಜನ ಪಡೆದಿರುವ ಅನೇಕರು ಕೆರೆಯ ಅಂಗಳವನ್ನು ಪ್ರವಾಸಿ ತಾಣವಾಗಿಸಿಕೊಂಡಿದ್ದಾರೆ. ದೇಗುಲದ ಸುತ್ತ ನಿಲುಗಡೆ ಆಗುವ ವಾಹನಗಳು ಕೆರೆಯಂಗಳದಲ್ಲಿರುವ ಜನಸಂಖ್ಯೆಗೆ ಕನ್ನಡಿ ಹಿಡಿಯುತ್ತವೆ.

ADVERTISEMENT

ಕೋಳಿ, ಕುರಿ ಮಾಂಸದೊಂದಿಗೆ ಬೆಳಿಗ್ಗೆಯೇ ಅಂಗಳಕ್ಕೆ ಬರುವವರು ಮರಗಳ ನೆರಳಲ್ಲಿ ಒಲೆ ಉರಿಸುತ್ತಾರೆ. ಮಧ್ಯಾಹ್ನದ ವೇಳೆಗೆ ಊಟ ತಯಾರಿಸುತ್ತಾರೆ. ಪ್ರತಿ ಮರಗಳ ನೆರಳಿನಲ್ಲಿ ಹಲವು ಗುಂಪುಗಳು ಕಾಣಸಿಗುತ್ತವೆ. ಯುವಕರ ಗುಂಪುಗಳು ಕೇಕೆ ಹಾಕಿ ಸಂಭ್ರಮಿಸುವುದು ಮಾಮೂಲು ಎಂಬಂತಾಗಿದೆ.

ಕೆರೆಯ ದಡದ ಮೇಲಿನ ತಂತಿ ಬೇಲಿಯ ಬಳಿ ನೂರಾರು ಮದ್ಯದ ಬಾಟಲಿಗಳಿವೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿದರೂ ಇಲ್ಲಿನ ಬಾಟಲಿಗಳು ಮಾತ್ರ ಬೇರೆಯದೇ ಕಥೆ ಹೇಳುತ್ತವೆ. ಕುಡಿದ ಅಮಲಿನಲ್ಲಿ ಗಲಾಟೆ ನಡೆದ ನಿದರ್ಶನಗಳೂ ಇವೆ. ಬೆಟ್ಟದ ಸಾಲಿನ ಕಲ್ಲು ಬಂಡೆಗಳ ನೆರಳು ಜೂಜು ಅಡ್ಡೆಗಳಾಗಿ ಪರಿವರ್ತನೆ ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.