ADVERTISEMENT

ಚಿತ್ರದುರ್ಗ: ಹಿಂದೂ ಮಹಾಗಣಪತಿ ಶೋಭಯಾತ್ರೆಗೆ ಹರಿದುಬಂದ ಜನಸಾಗರ

ನಾಲ್ಕು ಕಿ.ಮೀ ಸಾಗಿದ ಮೆರವಣಿಗೆ, ಚಂದ್ರವಳ್ಳಿ ಕೆರೆಯಲ್ಲಿ ಮುಳುಗಿದ ಗಣೇಶ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2018, 14:09 IST
Last Updated 29 ಸೆಪ್ಟೆಂಬರ್ 2018, 14:09 IST
ಚಿತ್ರದುರ್ಗದ ಜಿಲ್ಲಾ ಕ್ರೀಡಾಂಗಣ ರಸ್ತೆಯಲ್ಲಿ ಹಿಂದೂ ಮಹಾಗಣಪತಿಗೆ ಮಠಾಧೀಶರು ಪುಷ್ಪಾರ್ಚನೆ ಮಾಡುವ ಮೂಲಕ ಶೋಭಯಾತ್ರೆಗೆ ಚಾಲನೆ ನೀಡಿದರು
ಚಿತ್ರದುರ್ಗದ ಜಿಲ್ಲಾ ಕ್ರೀಡಾಂಗಣ ರಸ್ತೆಯಲ್ಲಿ ಹಿಂದೂ ಮಹಾಗಣಪತಿಗೆ ಮಠಾಧೀಶರು ಪುಷ್ಪಾರ್ಚನೆ ಮಾಡುವ ಮೂಲಕ ಶೋಭಯಾತ್ರೆಗೆ ಚಾಲನೆ ನೀಡಿದರು   

ಚಿತ್ರದುರ್ಗ: ಹಿಂದೂ ಮಹಾಗಣಪತಿಯ ವಿಸರ್ಜನೆಯ ಅಂಗವಾಗಿ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳ ಶನಿವಾರ ಆಯೋಜಿಸಿದ್ದ ಶೋಭಯಾತ್ರೆಗೆ ಜನಸಾಗರವೇ ಹರಿದು ಬಂದಿತ್ತು. ಸಾವಿರಾರು ಜನರ ಭಕ್ತಿಯ ಮೆರವಣಿಗೆಯಲ್ಲಿ ಸಾಗಿದ ವಿಘ್ನೇಶನ ಮೂರ್ತಿ ಚಂದ್ರವಳ್ಳಿ ಕೆರೆಯಲ್ಲಿ ಲೀನವಾಯಿತು.

ಕೇಸರಿ ಬಟ್ಟೆ, ಭಗವಾಧ್ವಜಗಳಿಂದ ಕಂಗೊಳಿಸುತ್ತಿದ್ದ ಕೋಟೆ ನಗರಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಶೋಭಯಾತ್ರೆ ಸಾಗುವ ಮಾರ್ಗಗಳು ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದವು. ಸುಮಾರು ನಾಲ್ಕು ಕಿ.ಮೀ ದೂರದ ಶೋಭಯಾತ್ರೆಯ ಮಾರ್ಗದಲ್ಲಿ ಒಂದೂವರೆ ಕಿ.ಮೀ. ವರೆಗೂ ಜನರು ಕಿಕ್ಕಿರಿದು ನಿಂತಿದ್ದರು. ಇದು ಮೈಸೂರು ದಸರಾ ಉತ್ಸವದ ಜಂಬೂಸವಾರಿಯನ್ನು ನೆನಪಿಸುವಂತಿತ್ತು.

ಜಿಲ್ಲಾ ಕ್ರೀಡಾಂಗಣ ರಸ್ತೆಯ ಆಂಜನೇಯಸ್ವಾಮಿ ದೇಗುಲದ ಮುಂಭಾಗದಲ್ಲಿ ಗಣಪತಿಯ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶೋಭಯಾತ್ರೆಗೆ ಚಾಲನೆ ನೀಡಲಾಯಿತು. ಬೃಹತ್‌ ಗಾತ್ರದ ಗಣೇಶಮೂರ್ತಿಯ ಮೇಲೆ ಪುಷ್ಪ ವೃಷ್ಠಿ ಸುರಿಯುತ್ತಿದ್ದಂತೆ ಜನರು ಭಕ್ತಿಯ ಪರಾಕಾಷ್ಠೆಗೆ ತಲುಪಿದರು. ‘ಗಣಪತಿ ಭಪ್ಪ ಮೋರೆಯಾ..’ ಎಂಬ ಘೋಷಣೆ ಮೊಳಗಿಸಿದರು. ಕೋಟೆ ನಾಡಿನಲ್ಲಿ ಈ ಘೋಷಣೆ ತಡರಾತ್ರಿಯವರೆಗೂ ಅನುರಣಿಸಿತು.

ADVERTISEMENT

ಕೋಟೆನಗರಿ ಕೇಸರಿಮಯ

ಶೋಭಯಾತ್ರೆಯ ಅಂಗವಾಗಿ ಕೋಟೆ ನಗರಿ ಸಂಪೂರ್ಣ ಕೇಸರಿಮಯವಾಗಿತ್ತು. ಭಗವಾಧ್ವಜ, ಬಟ್ಟಿಂಗ್ಸ್ ಹಾಗೂ ಕೇಸರಿ ಬಟ್ಟೆಗಳಿಂದ ಮೆರವಣಿಗೆ ಸಾಗುವ ಮಾರ್ಗಗಳನ್ನು ಅಲಂಕರಿಸಲಾಗಿತ್ತು. ಸುಮಾರು 10 ಸಾವಿರ ಮೀಟರ್‌ ಬಟ್ಟೆ, 3 ಸಾವಿರಕ್ಕೂ ಹೆಚ್ಚು ಕೇಸರಿ ಬಾವುಟಗಳು ಬಿ.ಡಿ ರಸ್ತೆ ಹಾಗೂ ಹೊಳಲ್ಕೆರೆ ಮಾರ್ಗದಲ್ಲಿ ರಾರಾಜಿಸುತ್ತಿದ್ದವು. ಹೀಗಾಗಿ, ಇಡೀ ನಗರ ಕೇಸರಿಯ ಬಣ್ಣಕ್ಕೆ ತಿರುಗಿತ್ತು.

ಮೂಡಣದಲ್ಲಿ ಉದಯಿಸಿದ ಸೂರ್ಯ ಮೇಲೆ ಬರುತ್ತಿದ್ದಂತೆ ಪ್ರಮುಖ ರಸ್ತೆಗಳಲ್ಲಿ ಜನಸಾಗರ ಹರಿದು ಬರಲು ಆರಂಭವಾಯಿತು. ಕೇಸರಿ ಶಾಲು, ಪೇಟ ಧರಿಸಿದ್ದ ಬಹುತೇಕ ಯುವಕರು ದ್ವಿಚಕ್ರ ವಾಹನ, ಕಾರುಗಳಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಶೋಭಯಾತ್ರೆ ಶುರುವಾಗುತ್ತಿದ್ದಂತೆ ಬಿ.ಡಿ ರಸ್ತೆ ಕಿಕ್ಕಿರಿದು ತುಂಬಿತು.

ಕಲಾ ತಂಡದ ಮೆರುಗು

ಕಲಾ ತಂಡಗಳು ಶೋಭಯಾತ್ರೆಯ ಮೆರುಗು ಹೆಚ್ಚಿಸಿದವು. ದಕ್ಷಿಣ ಕನ್ನಡ ಜಿಲ್ಲೆಯ ಚೆಂಡೆ ಮದ್ದಳೆಯ ನಿನಾದ ಭಕ್ತಿ–ಭಾವಗಳನ್ನು ಹೊರ ಹೊಮ್ಮಿಸಿತು. ಪ್ರತಿ ನಿಮಿಷಕ್ಕೂ ಬದಲಾಗುತ್ತಿದ್ದ ಸದ್ದು ಕಿವಿಗೆ ಇಂಪು ನೀಡುತ್ತಿತ್ತು. ಆಂಧ್ರಪ್ರದೇಶದ ತಮಟೆ ಸದ್ದು ಜನರನ್ನು ನೃತ್ಯಕ್ಕೆ ಪ್ರೇರೇಪಿಸುತ್ತಿತ್ತು. ಮಹಾರಾಷ್ಟ್ರದ ನಾಸಿಕ್‌ನ ಡೋಲು, ವೀರಗಾಸೆ ಕುಣಿತ ಜನರನ್ನು ಆಕರ್ಷಿಸುತ್ತಿದ್ದವು.

ಶ್ರೀರಾಮ, ಹನುಮಂತ, ಲಕ್ಷ್ಮಣ, ಸೀತೆ ಸೇರಿ ಪೌರಾಣಿಕ ವ್ಯಕ್ತಿಗಳ ವೇಷ ಧರಿಸಿದ್ದ ಅನೇಕರು ಜನರ ಗಮನ ಸೆಳೆಯುತ್ತಿದ್ದರು. ವೀರ ಮದಕರಿ ನಾಯಕ, ವಿಷ್ಣುವರ್ಧನ್‌ ವೇಷಧಾರಿಗಳು ಅಲ್ಲಲ್ಲಿ ಕಾಣಿಸಿಕೊಂಡರು. ಇವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಸಾರ್ವಜನಿಕರು ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಡಿ.ಜೆ. ಹಾಡಿಗೆ ಯುವಕರ ಹೆಜ್ಜೆ

ಶೋಭಯಾತ್ರೆಗೆ ಕೊನೆಯ ಕ್ಷಣದಲ್ಲಿ ಮೂರು ಡಿ.ಜೆ ಬಳಕೆಗೆ ಜಿಲ್ಲಾಡಳಿತ ಅನುಮತಿ ನೀಡಿತ್ತು. ಮೆರವಣಿಗೆಯ ಉದ್ದಕ್ಕೂ ಇದ್ದ ಡಿ.ಜೆಗಳ ಸಮೀಪ ಸಾವಿರಾರು ಜನರು ಕಿಕ್ಕಿರಿದು ನಿಂತಿದ್ದರು. ಹಾಡು ಹೊರಹೊಮ್ಮುತ್ತಿದ್ದಂತೆ ಯುವ ಸಮೂಹ ಹುಚ್ಚೆದ್ದು ಕುಣಿಯುತ್ತಿತ್ತು. ಈ ಸಮೂಹವನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸಂಘಪರಿವಾರದ ಕಾರ್ಯಕರ್ತರು ಕಷ್ಟಪಡುತ್ತಿದ್ದರು. ಅಲ್ಲಲ್ಲಿ ಯುವತಿಯರೂ ಹೆಜ್ಜೆ ಹಾಕುವ ಮೂಲಕ ಯುವಕರ ಹೃದಯಗಳಿಗೆ ಕಚಗುಳಿ ಇಡುತ್ತಿದ್ದರು.

ಬೆಳಿಗ್ಗೆ 11ಕ್ಕೆ ಆರಂಭವಾದ ಈ ಡಿ.ಜೆಗಳು ನಿರಂತರವಾಗಿ ಗಾನಸುಧೆಯನ್ನು ಉಣಬಡಿಸಿದವು. ನೃತ್ಯಕ್ಕೆ ಪ್ರೇರಣೆ ನೀಡುವ ಹಾಡುಗಳು ಹೊರಹೊಮ್ಮಿದವು. ಕನ್ನಡ, ಹಿಂದಿ ಸಿನಿಮಾದ ಬಹುತೇಕ ಹಾಡುಗಳಿಗೆ ಯುವ ಸಮೂಹ ನೃತ್ಯ ಪ್ರದರ್ಶಿಸಿತು. ಒಂದೊಂದು ಡಿ.ಜೆ. ಸಮೀಪ ಸುಮಾರು 10 ಸಾವಿರ ಜನ ಕುಣಿಯುತ್ತಿದ್ದರು.

ಕಟ್ಟಡ, ಮರ ಏರಿದರು

ಗಣಪತಿಮೂರ್ತಿ ಹಾಗೂ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಗ್ರಾಮೀಣ ಪ್ರದೇಶದ ಜನರೂ ಧಾವಿಸಿದ್ದರು. ದಾವಣಗೆರೆ, ಶಿವಮೊಗ್ಗ, ತುಮಕೂರು, ಬಳ್ಳಾರಿ ಸೇರಿ ರಾಜ್ಯದ ವಿವಿಧೆಡೆಯಿಂದಲೂ ಭಕ್ತ ಸಮೂಹ ಹರಿದು ಬಂದಿತ್ತು. ರಸ್ತೆಯಲ್ಲಿ ಸ್ಥಳಾವಕಾಶದ ಕೊರತೆ ಇದ್ದುದರಿಂದ ಅನೇಕರು ಕಟ್ಟಡ, ಮರಗಳನ್ನು ಏರಿ ಶೋಭಯಾತ್ರೆಯನ್ನು ವೀಕ್ಷಿಸಿದರು.

ಬಿ.ಡಿ ರಸ್ತೆಯ ಬಹುತೇಕ ಕಟ್ಟಡಗಳಲ್ಲಿ ಜನರು ತುಂಬಿಕೊಂಡಿದ್ದರು. ತಾಲ್ಲೂಕು ಕಚೇರಿಯ ವೃತ್ತದಿಂದ ಗಾಂಧಿ ವೃತ್ತದವರೆಗೆ ಅತಿ ಹೆಚ್ಚು ಜನಸ್ತೋಮವಿತ್ತು. ಮಕ್ಕಳು ಸೇರಿದಂತೆ ಕುಟುಂಬ ಸಮೇತರಾಗಿ ಬಂದಿದ್ದ ಅನೇಕರು ಮೆರವಣಿಗೆ ಕಣ್ತುಂಬಿಕೊಂಡರ. ಬಲೂನು, ಆಟಿಕೆಗಳನ್ನು ಖರೀದಿಸಿ ಮನೆಗೆ ಮರಳುತ್ತಿದ್ದರಿಂದ ಇದು ಜಾತ್ರೆಯಂತೆ ಗೋಚರಿಸುತ್ತಿತ್ತು.

ವಾಹನ ಪ್ರವೇಶ ನಿರ್ಬಂಧ

ಬಿ.ಡಿ ರಸ್ತೆ ಸಂಪರ್ಕಿಸುವ ಎಲ್ಲ ಮಾರ್ಗಗಳನ್ನು ಶುಕ್ರವಾರ ರಾತ್ರಿಯಿಂದಲೇ ಬಂದ್‌ ಮಾಡಲಾಗಿತ್ತು. ದ್ವಿಚಕ್ರ ವಾಹನ ಕೂಡ ಪ್ರವೇಶಿಸದಂತೆ ಬ್ಯಾರಿಕೇಡ್‌ ಹಾಕಲಾಗಿತ್ತು. ಕೆಲವೆಡೆ ದೊಡ್ಡ ಗಾತ್ರದ ಮರದ ಕೋಲುಗಳಿಂದ ನಿರ್ಬಂಧ ವಿಧಿಸಲಾಗಿತ್ತು. ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದ ‍ಪೊಲೀಸರು ಪ್ರಮುಖ ರಸ್ತೆಗೆ ಸಾಗುತ್ತಿದ್ದ ವಾಹನಗಳನ್ನು ತಡೆಯುತ್ತಿದ್ದರು.

ಹಿರಿಯೂರು, ಚಳ್ಳಕೆರೆ, ಹೊಸಪೇಟೆ, ಹೊಳಲ್ಕೆರೆ ಹಾಗೂ ದಾವಣಗೆರೆ ಮಾರ್ಗದಲ್ಲಿ ನಗರ ಪ್ರವೇಶಿಸುವ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ತುರುವನೂರು ಕಡೆಯಿಂದ ಬರುತ್ತಿದ್ದ ವಾಹನಗಳನ್ನು ಆರ್‌ಟಿಒ ಕಚೇರಿ ಬಳಿ ಹಾಗೂ ಹಿರಿಯೂರು, ಚಳ್ಳಕೆರೆ ಕಡೆಯಿಂದ ಬರುತ್ತಿದ್ದ ವಾಹನಗಳನ್ನು ಚಳ್ಳಕೆರೆ ಗೇಟ್‌ ಬಳಿ ಪೊಲೀಸರು ತಡೆಯುತ್ತಿದ್ದರು. ಇದರಿಂದ ನಗರ ಪ್ರವೇಶಿಸುವ ಹಾಗೂ ತೆರಳುವ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಪೊಲೀಸ್‌ ಸರ್ಪಗಾವಲು

ಶೋಭಯಾತ್ರೆಗೆ ಪೊಲೀಸರು ಸರ್ಪಗಾವಲು ನಿರ್ಮಿಸಿದ್ದರು. ಪೂರ್ವ ವಲಯದ ಐಜಿಪಿ ಬಿ.ದಯಾನಂದ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ್‌ ಎಂ.ಜೋಶಿ ಹಾಗೂ ಹಾವೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪರಶುರಾಮ್‌ ಭದ್ರತೆಯ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಮೂವರು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆಯ (ಕೆಎಸ್‌ಆರ್‌ಪಿ) 15 ತುಕಡಿ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ (ಡಿಎಆರ್‌) 9 ತುಕಡಿ ಸೇರಿದಂತೆ 3,500 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.