ADVERTISEMENT

ಮೊಳಕಾಲ್ಮುರು: 17ನೇ ಶತಮಾನದ ಗರುಡಗಂಬ ಶಾಸನ ಪತ್ತೆ

ಜೆ.ಬಿ.ಹಳ್ಳಿ ಬಳಿ ಉಪನ್ಯಾಸಕ ಒ. ಓಬಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 6:13 IST
Last Updated 6 ಅಕ್ಟೋಬರ್ 2025, 6:13 IST
ಮೊಳಕಾಲ್ಮುರು ತಾಲ್ಲೂಕಿನ ಜಾಗೀರ ಬುಡ್ಡೇನಹಳ್ಳಿ ಬಳಿ ಪತ್ತೆಯಾಗಿರುವ 17ನೇ ಶತಮಾನದ ಗರುಡಗಂಬ
ಮೊಳಕಾಲ್ಮುರು ತಾಲ್ಲೂಕಿನ ಜಾಗೀರ ಬುಡ್ಡೇನಹಳ್ಳಿ ಬಳಿ ಪತ್ತೆಯಾಗಿರುವ 17ನೇ ಶತಮಾನದ ಗರುಡಗಂಬ   

ಮೊಳಕಾಲ್ಮುರು: ತಾಲ್ಲೂಕಿನ ರಾಂಪುರ ಸಮೀಪದ ಜಾಗೀರ ಬುಡ್ಡೇನಹಳ್ಳಿ (ಜೆ.ಬಿ.ಹಳ್ಳಿ) ಬಳಿ 500 ವರ್ಷದಷ್ಟು ಹಳೆಯದಾದ ಗರುಡಗಂಬ ಮತ್ತು ಶಾಸನ ಪತ್ತೆಯಾಗಿವೆ.

‘ಜೆ.ಬಿ. ಹಳ್ಳಿ ಸಮೀಪದ ಹೊಸಹಳ್ಳಿಯ ತಿಮ್ಮಪ್ಪನ ಬೆಟ್ಟದಲ್ಲಿ ಇವು ಪತ್ತೆಯಾಗಿದ್ದು, ಇಲ್ಲಿ ಯಾವುದೇ ದೇವಸ್ಥಾನವಿಲ್ಲ. ಆದರೆ ಪುಷ್ಕರಣಿ ಇದ್ದು, ಸಮೀಪದಲ್ಲಿ ಒಂದು ಮೀಟರ್‌ ಎತ್ತರ ಮತ್ತು 8 ಮೀಟರ್‌ ಸುತ್ತಳತೆ ಹೊಂದಿರುವ ಬಂಡೆಯ ಮೇಲೆ 5 ಮೀಟರ್‌ ಎತ್ತರದ ಗರುಡಗಂಬ ಪ್ರತಿಷ್ಠಾಪಿಸಲಾಗಿದೆ. ಕಂಬದ ಕೆಳಗಡೆ ಎರಡೂ ಕಡೆ ಮುಖಾಮುಖಿಯಾಗಿ ಆನೆಗಳನ್ನು ಪಕ್ಕದಲ್ಲಿ ಮಿಥುನ ಶಿಲ್ಪವನ್ನು ಕೆತ್ತನೆ ಮಾಡಲಾಗಿದೆ’ ಎಂದು ಅನ್ವೇಷಣಾ ಕಾರ್ಯದ ನೇತೃತ್ವ ವಹಿಸಿದ್ದ ಕೂಡ್ಲಿಗಿಯ ಸರ್ಕಾರಿ ಪದವಿ ಕಾಲೇಜಿನ  ಇತಿಹಾಸ ಉಪನ್ಯಾಸಕರಾಗಿರುವ ರಾಂಪುರದ ಒ. ಓಬಯ್ಯ ಹಾಲುಸಾಗರ ತಿಳಿಸಿದರು.

ಗರುಡಗಂಬದ ಬುಡದಲ್ಲಿ ಮಹಿಳೆ ಮತ್ತು ಪುರುಷ ಕೈಮುಗಿದು ನಿಂತಿದ್ದು, ಮೇಲ್ಗಡೆ ಆಂಜನೇಯ ಮೂರ್ತಿ ಇದೆ. ರಾಜನಿಗೆ ನಿಷ್ಠರಾಗಿ ಪ್ರಾಣತ್ಯಾಗ ಮಾಡಿದ ಲೆಂಕರು ಅಥವಾ ಸ್ವಾಮಿ ನಿಷ್ಠೆ ತೋರುವವರ ನೆನಪಿಗಾಗಿ ಈ ಕಂಬವನ್ನು ನೆಡಲಾಗಿದೆ. ಇದು 17ನೇ ಶತಮಾನಕ್ಕೆ ಸೇರಿದ್ದು, ಈವರೆಗೆ ಎಲ್ಲಿಯೂ ಪ್ರಕಟವಾಗಿಲ್ಲ. ಸ್ಥಳೀಯರು ಇದನ್ನು ತಿಮ್ಮಪ್ಪ ದೇವರು ಎಂದು ಕರೆಯುತ್ತಿದ್ದು ಪ್ರತಿವರ್ಷ ಪರವು ಆಚರಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಕಂಬದ ಪೂರ್ವ ದಿಕ್ಕಿನಲ್ಲಿ 5 ಸಾಲಿನ ಹಳೆಕನ್ನಡ ಶಾಸನವಿದೆ. ಇದರಲ್ಲಿ ಕಂಬ ಮಾಡಿಸಿದವರ ಮತ್ತು ಮಾಡಿಸಿದ ಉದ್ದೇಶವನ್ನು ಉಲ್ಲೇಖಿಸಲಾಗಿದೆ. ಪುಷ್ಕರಣಿ ಶಿಥಿಲಾವಸ್ಥೆಯಲ್ಲಿದ್ದು ದುರಸ್ತಿಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಿದೆ.

ಕಾರ್ಯಾಚರಣೆ ತಂಡದಲ್ಲಿ ರಾಂಪುರ ಎಸ್‌ಪಿಎಸ್‌ಆರ್‌ ಪದವಿ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಪೂಜಾರಿ ಬೊಮ್ಮಣ್ಣ, ವೀರೇಶ್‌, ಉಪನ್ಯಾಸಕ ಬಿ. ಬಸವರಾಜ್ ಇದ್ದರು. ಮೈಸೂರು ವಿಶ್ವ ವಿದ್ಯಾಲಯದ ನಿವೃತ್ತ ಶಾಸನ ತಜ್ಞ ಎಚ್.ಎನ್.‌ ನಾಗರಾಜ ರಾವ್‌ ಶಾಸನವನ್ನು ಓದಿದರು ಎಂದು ಉಪನ್ಯಾಸಕ ಓಬಣ್ಣ ತಿಳಿಸಿದರು.

ಗರುಡಗಂಬದ ಬಳಿಯಿರುವ ಶಾಸನ
ಓಬಣ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.