ADVERTISEMENT

ಮಕ್ಕಳಿಗೆ ಜಾಗತಿಕ ಮಟ್ಟದಲ್ಲಿ ವೇದಿಕೆ ಕಲ್ಪಿಸಿ

ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ; ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 5:35 IST
Last Updated 15 ನವೆಂಬರ್ 2025, 5:35 IST
ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ.ವಿಜಯ್‌ ಉದ್ಘಾಟಿಸಿದರು
ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ.ವಿಜಯ್‌ ಉದ್ಘಾಟಿಸಿದರು   

ಚಿತ್ರದುರ್ಗ: ‘ಮಕ್ಕಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಬೇಕು. ಅಷ್ಟೇ ಅಲ್ಲದೆ ಸಹಕಾರ, ರಕ್ಷಣೆ ಜತೆಗೆ ಉತ್ತಮ ಶಿಕ್ಷಣ ಕೊಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ.ವಿಜಯ್‌ ತಿಳಿಸಿದರು.

ಇಲ್ಲಿನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ‘ಜಾಗತಿಕ ಮಟ್ಟದಲ್ಲಿ ಉತ್ತಮ ವೇದಿಕೆ ಕಲ್ಪಿಸಬೇಕು. ಈ ಮೂಲಕ ಒಳ್ಳೆಯ ಪ್ರಜೆಗಳನ್ನಾಗಿಸಬೇಕಿದೆ’ ಎಂದರು.

‘ಬಾಲ್ಯವಿವಾಹ ಸೇರಿದಂತೆ ಅನೇಕ ಸಾಮಾಜಿಕ ಪಿಡುಗು ಹಾಗೂ ಅನಿಷ್ಟಗಳಿಗೆ ಮಕ್ಕಳು ಪ್ರತಿರೋಧ ತೋರಬೇಕು. ತಮಗಾದ ಸಮಸ್ಯೆಗಳ ಕುರಿತು ಸಂಬಂಧಪಟ್ಟವರಿಗೆ ಸೂಕ್ತ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.

ADVERTISEMENT

‘ಮಕ್ಕಳು ತಮ್ಮ ಹಕ್ಕು, ಸಮಸ್ಯೆ ಮತ್ತು ಗ್ರಾಮದ ಅಭಿವೃದ್ಧಿ ಕುರಿತು ಚರ್ಚಿಸಲು ಹಾಗೂ ಅಭಿಪ್ರಾಯ ವ್ಯಕ್ತಪಡಿಸಲು ಮಕ್ಕಳ ಗ್ರಾಮ ಸಭೆ ಆಯೋಜಿಸಲಾಗುತ್ತಿದೆ. ಶಿಕ್ಷಣದ ಪ್ರಗತಿ, ಬಿಸಿಯೂಟ, ಶೌಚಾಲಯ, ಶಾಲಾ ಸ್ವಚ್ಛತೆ, ಬಸ್‌ ವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಚರ್ಚಿಸಿ, ಅವುಗಳನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ಹೇಳಿದರು.

‘ಮಕ್ಕಳು ಒಂದು ರೀತಿಯಲ್ಲಿ ಚೈತನ್ಯದ ಚಿಲುಮೆ ಇದ್ದಂತೆ. ಮಕ್ಕಳನ್ನು ನೋಡಿದಾಗ ಶಾಂತಿ, ನೆಮ್ಮದಿ, ಸಮಾಧಾನ ತರಲಿದ್ದು, ಮಕ್ಕಳಿಗೆ ಆಂತರಿಕ ಶಿಕ್ಷಣ ಹಾಗೂ ಬಾಹ್ಯ ಶಿಕ್ಷಣ ಅತೀ ಮುಖ್ಯವಾಗಿ ಬೇಕಾಗಿದೆ’ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಪಿ. ಶೀಲಾ ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಚಳ್ಳಕೆರೆ ತಾಲ್ಲೂಕಿನ ರೆಡ್ಡಿಹಳ್ಳಿ ಸ್ವಪ್ನ, ಮೊಳಕಾಲ್ಮುರಿನ ಗಂಗಮ್ಮ ಅವರನ್ನು ಹಾಗೂ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿ ಸನ್ಮಾನಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್‌.ವಿಜಯ ಕುಮಾರ್‌, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ತಿಮ್ಮಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಿ.ಮಂಜುನಾಥ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಗಂಗಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ಪ್ರೇಮಮೂರ್ತಿ ಇದ್ದರು.

ಬಂಗಾರದಂತಹ ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಹಾಗೂ ಸೃಜನಶೀಲ ಪಠ್ಯೇತರ ಚಟುವಟಿಕೆಗಳ ಕಡೆ ಹೆಚ್ಚಿನ ಗಮನಹರಿಸುವ ಮೂಲಕ ಉತ್ತಮ ಪ್ರಜೆಗಳಾಗಬೇಕು.
ಎಂ.ವಿಜಯ್‌ ಹಿರಿಯ ಸಿವಿಲ್‌ ನ್ಯಾಯಾಧೀಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.