
ಚಿತ್ರದುರ್ಗ/ಶಿವಮೊಗ್ಗ: ‘ಒಳಮೀಸಲಾತಿ ವಿಚಾರದಲ್ಲಿ ಗಿಮಿಕ್ ಮಾಡುತ್ತಿರುವ ರಾಜ್ಯ ಸರ್ಕಾರ, ನೇಮಕಾತಿ ವೇಳೆ ಹಳೆಯ ಮೀಸಲಾತಿ ಪದ್ಧತಿಯನ್ನೇ ಅನುಸರಿಸುವುದಾಗಿ ಹೇಳಿ ಪರಿಶಿಷ್ಟರಿಗೆ ವಿಶ್ವಾಸ ದ್ರೋಹ ಮಾಡುತ್ತಿದೆ’ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ ದಿನವೇ ಸರ್ಕಾರ 56,432 ಹುದ್ದೆಗಳ ನೇರ ನೇಮಕಾತಿಯ ನಿರ್ಧಾರ ಕೈಗೊಂಡಿರುವುದು ಖಂಡನೀಯ. ಒಳಮೀಸಲು ವರ್ಗೀಕರಣಕ್ಕೆ ಅನುಗುಣವಾಗಿ ನೇಮಕಾತಿ ನಡೆಯದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಸ್ತೆಗಿಳಿದು ಓಡಾಡುವುದೇ ಕಷ್ಟವಾಗುತ್ತದೆ’ ಎಂದು ಎಚ್ಚರಿಸಿದರು.
‘ಮುಖ್ಯಮಂತ್ರಿಯವರು ಎಸ್‌ಸಿ/ ಎಸ್‌ಟಿ ಸಮುದಾಯ ಕುರಿತು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಮೀಸಲಾತಿ ಕಬಳಿಸುತ್ತಿರುವ ಕೆಲವರ ಪರ ನಿಂತಿದ್ದಾರೆ’ ಎಂದು ಆರೋಪಿಸಿದರು.
‘ಒಳ ಮೀಸಲಾತಿ ಅನ್ವಯ ನೇಮಕಾತಿ ಆಗದಿದ್ದರೆ ಸಹಿಸುವುದಿಲ್ಲ. ಕೂಡಲೇ ಸರ್ವ ಪಕ್ಷಗಳ ಹಾಗೂ ಎಸ್.ಸಿ. ಪಟ್ಟಿಯಲ್ಲಿರುವ 101 ಜಾತಿಗಳ ಮುಖಂಡರ ಸಭೆ ಕರೆದು ಚರ್ಚಿಸಬೇಕು’ ಎಂದು ಒತ್ತಾಯಿಸಿದರು.
‘ಸಿದ್ದರಾಮಯ್ಯ ದಲಿತರಿಗೆ ದ್ರೋಹ ಮಾಡುತ್ತಿದ್ದು, ಸಾಮಾಜಿಕ ನ್ಯಾಯದ ವಿರೋಧಿಯಾಗಿದ್ದಾರೆ. ಆರ್ಥಿಕವಾಗಿ ದಿವಾಳಿಯಾಗಿರುವ ರಾಜ್ಯ ಸರ್ಕಾರ ಒಳ ಮೀಸಲಾತಿ ಅನ್ವಯ ನಡೆಸಬೇಕಾದ ನೇಮಕಾತಿ ಪಕ್ರಿಯೆಯನ್ನು ಮುಂದೂಡುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.
‘ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ₹ 39,000 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ವರ್ಷಗಳಿಂದಲೂ ಬೇರೆ ಉದ್ದೇಶಕ್ಕೆ ಬಳಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಆ ಹಣ ವಾಪಸ್ ಕೊಡಲಿ’ ಎಂದು ಒತ್ತಾಯಿಸಿದರು.
‘ಮಾದಿಗ ಮಹಾಸಭಾ ರಚಿಸಿಕೊಂಡಿರುವ ಕೆ.ಎಚ್. ಮುನಿಯಪ್ಪ ಅವರು ಕೂಡಲೇ ಸಚಿವ ಸ್ಥಾನ ತೊರೆಯಬೇಕು. ಸಚಿವರಾದ ಆರ್.ಬಿ.ತಿಮ್ಮಾಪುರ ಹಾಗೂ ಡಾ.ಎಚ್.ಸಿ.ಮಹದೇವಪ್ಪ ಅವರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.