
ಗೋವಿಂದ ಕಾರಜೋಳ
ಚಿತ್ರದುರ್ಗ: ‘ಕಾಂಗ್ರೆಸ್ ಪಕ್ಷದ ಪುಢಾರಿಗಳಿಂದ ರಾಜ್ಯದಾದ್ಯಂತ ಕ್ಲಬ್, ಅಕ್ರಮ ಬಾರ್, ಡ್ರಗ್ಸ್ ಕಾರ್ಖಾನೆಗಳು ನಡೆಯುತ್ತಿವೆ. ಕಾಂಗ್ರೆಸ್ ಸರ್ಕಾರದ ರಕ್ಷಣೆಯಲ್ಲೇ ಇವೆಲ್ಲ ನಡೆಯುತ್ತಿವೆ. ಇದಕ್ಕೆ ನಾಚಿಕೆ ಪಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು.
ಶನಿವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಉತ್ತರ ಕರ್ನಾಟಕವು ಶರಣರು, ಸೂಫಿ ಸಂತರ ನಾಡು. ಜಾತಿ, ಧರ್ಮದ ಹೆಸರಿನಲ್ಲಿ ದ್ವೇಷ ಸರಿಯಲ್ಲ. ಬಾಗಲಕೋಟೆಯಲ್ಲಿ ಸಮಾಜಘಾತುಕ ಶಕ್ತಿಗಳಿಂದ ದುಷ್ಟ ಕೃತ್ಯ ನಡೆದಿದೆ. ತಪ್ಪು ಮಾಡಿದವರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
‘ಹುಬ್ಬಳ್ಳಿಯ ಕಾರಾಗೃಹದಲ್ಲಿ ಗಾಂಜಾ ಪತ್ತೆಯಾಗಿದೆ. ಜೈಲಿನಲ್ಲಿ ಮಾತ್ರವಲ್ಲ, ಕಾಂಗ್ರೆಸ್ ಆಡಳಿತದಲ್ಲಿ ಜಮೀನುಗಳಲ್ಲೂ ಇಸ್ಪೀಟ್ ದಂಧೆ ನಡೆಯುತ್ತಿದೆ. ಕಿರಾಣಿ ಅಂಗಡಿಗಳಲ್ಲೂ ಸಾರಾಯಿ ಮಾರಾಟ ನಡೆಯುತ್ತಿದೆ. ಕಾಂಗ್ರೆಸ್ ಪುಢಾರಿಗಳೇ ಇದನ್ನೆಲ್ಲಾ ಮಾಡುತ್ತಿದ್ದಾರೆ. ನೆರೆ ರಾಜ್ಯದ ಪೊಲೀಸರು ಬಂದು ದಾಳಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.
‘ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದು ಖಂಡನೀಯ. ಇಂದಿರಾಗಾಂಧಿ ಇದೇ ರೀತಿ ದುರಾಡಳಿತ ನಡೆಸಿದ್ದರು. ಇಂತಹ ಕೆಲಸದಿಂದ ಕಾಂಗ್ರೆಸ್ ಪಕ್ಷ ಅವಸಾನದ ಅಂಚಿಗೆ ತಲುಪಿದೆ. ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆಯಾಗಿರುವ ಮಾಧ್ಯಮಗಳಿಗೆ ಗೌರವ ನೀಡುವ ಕೆಲಸ ಮಾಡಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.