ADVERTISEMENT

ಪಂಚಾಯಿತಿ ಗದ್ದುಗೆಗೆ ರಾಜಕೀಯ ಸಮರ

ಗ್ರಾಮ ಪಂಚಾಯಿತಿ ಚುನಾವಣೆ: ಆಯ್ಕೆಯಾದವರಲ್ಲಿ ಯುವಸಮೂಹದ ಪಾಲೇ ಅಧಿಕ

ಜಿ.ಬಿ.ನಾಗರಾಜ್
Published 1 ಜನವರಿ 2021, 2:34 IST
Last Updated 1 ಜನವರಿ 2021, 2:34 IST
ಎ.ಮುರುಳಿ
ಎ.ಮುರುಳಿ   

ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಶುಕ್ರವಾರ ಸಂಪೂರ್ಣ ಹೊರಬಿದ್ದಿದೆ. ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳಲ್ಲಿ ಸ್ಪರ್ಧೆ ಆರಂಭವಾಗಿದೆ. ತಮ್ಮದೇ ಗೆಲುವು ಎಂಬಂತೆ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಬೆನ್ನು ತಟ್ಟಿಕೊಳ್ಳುತ್ತಿವೆ.

ಗ್ರಾಮ ಪಂಚಾಯಿತಿಗೆ ನಡೆದಿದ್ದು ಪಕ್ಷ ರಹಿತ ಚುನಾವಣೆ. ಪಕ್ಷ ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಮಾಡುವಂತಿಲ್ಲ. ಆದರೆ, ಪಕ್ಷದ ಕಾರ್ಯಕರ್ತರನ್ನು ಬೆಂಬಲಿತ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಸಿದ್ದವು. ಫಲಿತಾಂಶ ಹೊರಬಿದ್ದ ಬಳಿಕ ಪಕ್ಷದ ಶಕ್ತಿ ಹೆಚ್ಚಿದೆ ಎಂದು ಮೂರು ಪಕ್ಷಗಳು ಬೀಗುತ್ತಿವೆ.

ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳ 3,421 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಇದರಲ್ಲಿ 347 ಸ್ಥಾನಗಳಿಗೆ ಅವಿರೋಧ ಆಯ್ಕೆ ಹಾಗೂ 10 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಒಂದು ಸ್ಥಾನದ ನಾಮಪತ್ರದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಚುನಾವಣೆ ನಡೆದಿಲ್ಲ. 3,073 ಸದಸ್ಯ ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ.

ADVERTISEMENT

ಜಿಲ್ಲೆಯ 2,151 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕ ಹೆಮ್ಮೆ ವ್ಯಕ್ತಪಡಿಸಿದೆ. 189 ಗ್ರಾಮ ಪಂಚಾಯಿತಿಯಲ್ಲಿ ತಲಾ 10ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದೇವೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕ ಬೀಗುತ್ತಿದೆ. ಈ ಲೆಕ್ಕಾಚಾರದ ಪ್ರಕಾರ 1,890ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್‌ ಬೆಂಬಲಿತರು ಗೆಲುವು ಸಾಧಿಸಿದಂತೆ ಆಗುತ್ತದೆ.ಎರಡೂ ಪಕ್ಷದ ಬೆಂಬಲಿತ ಸದಸ್ಯರ ಸಂಖ್ಯೆ ಲೆಕ್ಕಾಹಾಕಿದರೆ ನಿಗದಿತ ಸ್ಥಾನಕ್ಕೂ ಹೆಚ್ಚಿದೆ. ಜೆಡಿಎಸ್‌ ಕೂಡ ಗಣನೀಯ ಸಾಧನೆ ಮಾಡಿರುವುದಾಗಿ ಹೇಳಿಕೊಳ್ಳುತ್ತಿದೆ. ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದೆ.

ಚುನಾವಣೆ ಘೋಷಣೆಗೂ ಮೊದಲೇ ಸಕ್ರಿಯವಾಗಿದ್ದ ಬಿಜೆಪಿ ಗ್ರಾಮ ಸ್ವರಾಜ್‌ ಸಮಾವೇಶವನ್ನು ಹೊಳಲ್ಕೆರೆ ಹಾಗೂ ಚಳ್ಳಕೆರೆಯಲ್ಲಿ ನಡೆಸಿತ್ತು. ಜಿಲ್ಲೆಯ ಎಲ್ಲ ಬ್ಲಾಕ್‌ಗಳಲ್ಲಿ ಸಭೆ ನಡೆಸಿದ ಕಾಂಗ್ರೆಸ್‌ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಅಖಾಡಕ್ಕೆ ಇಳಿಸಿತ್ತು. ಹಿರಿಯೂರು, ಚಳ್ಳಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕು ಗಮನ ಕೇಂದ್ರೀಕರಿಸಿ ಜೆಡಿಎಸ್‌ ಕಾರ್ಯತಂತ್ರ ರೂಪಿಸಿತ್ತು. ಆದರೆ, ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಬಲ ಸಿಕ್ಕಿದೆ ಎಂಬುದು ಇನ್ನೂ ಗೊತ್ತಾಗಬೇಕಿದೆ.

2015ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಹೊಸ ಮನ್ವಂತರಕ್ಕೆ ಕಾರಣವಾಗಿದೆ. ಗೆಲುವು ಸಾಧಿಸಿದವರಲ್ಲಿ 20ರಿಂದ 40ರ ವಯೋಮಾನದವರ ಸಂಖ್ಯೆ ಹೆಚ್ಚಾಗಿದೆ. ರಾಜಕೀಯಕ್ಕೆ ಯುವ ಸಮೂಹ ಬರುತ್ತಿರುವ ಸೂಚಕವೇ ಎಂಬ ತರ್ಕವನ್ನು ಮುಂದಿಟ್ಟಿದೆ. ಲಾಕ್‌ಡೌನ್‌ ಬಳಿಕ ಬೆಂಗಳೂರಿನಿಂದ ಹಳ್ಳಿಗೆ ಮರಳಿದವರಲ್ಲಿ ಕೆಲವರು ಚುನಾವಣೆಗೆ ಸ್ಪರ್ಧಿಸಿ ಅಧಿಕಾರಕ್ಕೆ ಏರಿದ್ದಾರೆ.

ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯನ್ನೂ ನಾಚಿಸುವಷ್ಟು ಆಮಿಷಗಳು ಮತದಾರರನ್ನು ತಲುಪಿದ್ದು ಸುಳ್ಳಲ್ಲ. ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮುರು, ಹೊಸದುರ್ಗ, ಹೊಳಲ್ಕೆರೆ ಸೇರಿದಂತೆ ಬಹುತೇಕ ಎಲ್ಲೆಡೆ ಪ್ರತಿಯೊಬ್ಬ ಅಭ್ಯರ್ಥಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಗೃಹ ಉಪಯೋಗಿ ವಸ್ತುಗಳು, ಕುರಿ, ಕೋಳಿ ಹಾಗೂ ಹಣವನ್ನು ಹಂಚಿಕೆ ಮಾಡಿದ ಆರೋಪಗಳು ಕೇಳಿ ಬಂದಿವೆ. ಅಕ್ರಮದ ಮೇಲೆ ನಿಗಾ ಇಡಲು ರೂಪಿಸಿದ ತಂಡಗಳಿಗೆ ಯಾರೊಬ್ಬರು ಸಿಕ್ಕಿ ಬಿದ್ದಿಲ್ಲ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು ಕೂಡ ವಿರಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.