ADVERTISEMENT

ಚಿತ್ರದುರ್ಗ | ಧ್ವಂದ್ವ ನೀತಿ ಬಿಟ್ಟು ಮಾರ್ಗಸೂಚಿ ರೂಪಿಸಿ: ಎಚ್‌. ಆಂಜನೇಯ ಒತ್ತಾಯ

ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಮಾಜಿ ಸಚಿವ ಎಚ್‌.ಆಂಜನೇಯ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 14:15 IST
Last Updated 20 ಏಪ್ರಿಲ್ 2020, 14:15 IST
ಎಚ್‌.ಆಂಜನೇಯ
ಎಚ್‌.ಆಂಜನೇಯ   

ಚಿತ್ರದುರ್ಗ: ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಜಾರಿಗೊಳಿಸಿದ ಲಾಕ್‌ಡೌನ್‌ ಬಗ್ಗೆ ದಿನಕ್ಕೊಂದು ನೀತಿ ರೂಪಿಸಿ ಜನರ ದಿಕ್ಕು ತಪ್ಪಿಸುವ ಬದಲಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಮಾಜಿ ಸಚಿವ ಎಚ್‌. ಆಂಜನೇಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಾಕ್‌ಡೌನ್‌ ಕುರಿತು ಸರ್ಕಾರ ಗಂಟೆಗೊಂದು ನೀತಿ ಪ್ರಕಟಿಸುತ್ತಿದೆ. ಇದು ಜನರಲ್ಲಿ ಗೊಂದಲ ಮತ್ತು ಆತಂಕಕ್ಕೆ ಕಾರಣವಾಗುತ್ತಿದೆ. ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕು. ದ್ವಿಚಕ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಕೆಲವೇ ಗಂಟೆಗಳ ಬಳಿಕ ನಿರ್ಬಂಧ ಹೇರಿ ನಗೆಪಾಟಲಿಗೆ ಈಡಾಗಿದೆ’ ಎಂದು ಆರೋಪಿಸಿದರು.

‘ಶತಮಾನದ ಬಳಿಕ ಮಹಾ ಸಾಂಕ್ರಾಮಿಕ ರೋಗವೊಂದು ವಿಶ್ವವನ್ನು ಬಾಧಿಸುತ್ತಿದೆ. ಅತ್ಯಂತ ಪ್ರಭಾವಶಾಲಿ ಹಾಗೂ ಮುಂದುವರಿದ ರಾಷ್ಟ್ರವಾದ ಅಮೆರಿಕ ಕೂಡ ತತ್ತರಿಸಿ ಹೋಗಿದೆ. ಸೋಂಕು ಪಸರಿಸುವ ಆರಂಭದ ದಿನಗಳಲ್ಲಿ ಮುಂಜಾಗ್ರತೆ ವಹಿಸಬೇಕಿದ್ದ ಕೇಂದ್ರ ಸರ್ಕಾರ ಎಡವಿದೆ. ಆದರೂ, ಇದು ಟೀಕೆ ಮಾಡುವ ಸಮಯವಲ್ಲ. ವಿರೋಧ ಪಕ್ಷಗಳು ನೀಡುವ ಸಲಹೆಗಳನ್ನು ಸರ್ಕಾರ ಸ್ವೀಕರಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕೊರೊನಾ ಸೋಂಕು ಹರಡುವುದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಫೆ.12ರಂದೇ ಎಚ್ಚರಿಕೆ ನೀಡಿದ್ದರು. ದೇಶದ ಪ್ರಜೆಗಳು ಹಾಗೂ ಆರ್ಥಿಕತೆಯ ಮೇಲೆ ಮಾರಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಸೂಚನೆ ನೀಡಿದ್ದರು. ಕೊರೊನಾ ಸೋಂಕು ಪತ್ತೆಯಾದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭಾರತಕ್ಕೆ ಕರೆಸಿ ಸಮಾವೇಶ ನಡೆಸಲಾಯಿತು. ಆದರೂ, ಕೊರೊನಾ ಹರಡುವಿಕೆಗೆ ಮುಸ್ಲಿಂ ಸಮುದಾಯ ಮಾತ್ರ ಕಾರಣವೆಂದು ವದಂತಿ ಹಬ್ಬಿಸಿ ಸಮಾಜದ ದಿಕ್ಕು ತಪ್ಪಿಸಲಾಗುತ್ತಿದೆ’ ಎಂದು ಕಿಡಿಕಾರಿದರು.

‘ಸೋಂಕಿತರ ಪತ್ತೆಗೆ ಸರ್ಕಾರ ಗಮನ ಕೇಂದ್ರೀಕರಿಸಬೇಕು. ಕೇರಳದಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ. ಮಹಾರಾಷ್ಟ್ರದಲ್ಲಿ ಇದು ಇನ್ನಷ್ಟು ಅಪಾಯಕಾರಿ ರೀತಿಯಲ್ಲಿ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಗೋಚರಿಸುತ್ತಿವೆ. ಲಾಕ್‌ಡೌನ್‌ಗೆ ಜನರು ಕೂಡ ಸಹಕಾರ ನೀಡಬೇಕು. ಸಂಕಷ್ಟದಿಂದ ಪಾರಾಗಲು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

‘ಲಾಕ್‌ಡೌನ್‌ ಜಾರಿಯಾದ ಪರಿಣಾಮ ಕೃಷಿ ಕ್ಷೇತ್ರ ದೊಡ್ಡ ಬಿಕ್ಕಟ್ಟು ಎದುರಿಸುತ್ತಿದೆ. ತರಕಾರಿ, ಹಣ್ಣು ಹಾಗೂ ಹೂ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಲ್ಲಂಗಡಿ, ಕರಬೂಜ, ಪಪ್ಪಾಯ ಹಾಗೂ ತರಕಾರಿಯನ್ನು ಸಾಗಣೆ ಮಾಡಲು ಸಾಧ್ಯವಾಗದೇ ನಷ್ಟಕ್ಕೆ ಸಿಲುಕಿದ್ದಾರೆ. ಸಮಸ್ಯೆಗೆ ಸಿಲುಕಿದ ರೈತರಿಗೆ ಸರ್ಕಾರ ನೆರವು ನೀಡಬೇಕು. ಕೃಷಿ ಉತ್ಪನ್ನಗಳನ್ನು ಸೂಕ್ತ ಬೆಲೆಗೆ ಸರ್ಕಾರವೇ ಖರೀದಿಸಿ ಜನರಿಗೆ ವಿತರಿಸಬೇಕು’ ಎಂದು ಸಲಹೆ ನೀಡಿದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನುಷ್ಠಾನಕ್ಕೆ ತಂದಿರುವ ಅನ್ನಭಾಗ್ಯ ಹಾಗೂ ಕ್ಷೀರಭಾಗ್ಯ ಯೋಜನೆಗಳೇ ಜನರ ಜೀವ ಉಳಿಸುತ್ತಿವೆ. ಕೂಲಿ ಕಾರ್ಮಿಕರು ಅತ್ಯಂತ ಸಂಕಷ್ಟಕ್ಕೆ ಸಿಲುಕಿದ್ದು, ಊಟಕ್ಕೆ ಪರದಾಡುತ್ತಿದ್ದಾರೆ. ದೇಶ ಯಥಾಸ್ಥಿತಿಗೆ ಮರಳುವವರೆಗೆ ಬಡವರಿಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ತಲುಪಿಸಬೇಕು. ಮುಂಗಾರು ಹಂಗಾಮು ಬಿತ್ತನೆಗೆ ಅಗತ್ಯವಿರುವ ಬೀಜ ಹಾಗೂ ಗೊಬ್ಬರ ದಾಸ್ತಾನು ಇಡಬೇಕು’ ಎಂದು ಹೇಳಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ ಇದ್ದರು.

**

ಬೇಸಿಗೆ ಬಿಸಿಲು ಹೆಚ್ಚುತ್ತಿದ್ದಂತೆ ಅಂತರ್ಜಲ ಕಡಿಮೆಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ನೀರಿನ ಬವಣೆ ತೀವ್ರವಾಗಿದೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು.
–ಎಚ್‌.ಆಂಜನೇಯ,ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.