
ಚಿತ್ರದುರ್ಗ/ನಾಯಕನಹಟ್ಟಿ: ಹೀಲಿಯಂ ಬಲೂನ್‌ಗಳು ಹಾಗೂ ಅವುಗಳಿಗೆ ಗ್ಯಾಸ್ ತುಂಬುವ ಸಿಲಿಂಡರ್‌ಗಳು ಸ್ಫೋಟಗೊಂಡು ಅಮಾಯಕರು ಜೀವ ಕಳೆದುಕೊಂಡ ಅನೇಕ ಘಟನೆಗಳು ನಮ್ಮ ಕಣ್ಣೆದುರಿಗಿವೆ.
ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗದ ಜಯ ಮಾರ್ತಾಂಡ ದ್ವಾರದ ಬಳಿ ಮೂರು ತಿಂಗಳ ಹಿಂದೆ ನಡೆದಿದ್ದ ಸ್ಫೋಟ ಇದಕ್ಕೊಂದು ಉದಾಹರಣೆ. ಈ ದುರಂತದಲ್ಲಿ ಮೂವರು ಪ್ರಾಣ ತೆತ್ತಿದ್ದರು.
ಜಾತ್ರೆ, ಸಭೆ, ಸಮಾರಂಭಗಳಲ್ಲಿ ಹೀಲಿಯಂ ತುಂಬಿದ ಬಲೂನ್‌ಗಳ ಬಳಕೆ ಮತ್ತು ಮಾರಾಟ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಇವು ಜೀವಕ್ಕೆ ಕಂಟಕವಾಗಿವೆ. ಇವುಗಳಿಂದಾಗಿ ಊಹಿಸಲೂ ಸಾಧ್ಯವಾಗದಂತೆ ಕ್ಷಣ ಮಾತ್ರದಲ್ಲಿ ಅವಘಡಗಳು ಸಂಭವಿಸುತ್ತಿವೆ. ಲಕ್ಷಾಂತರ ಭಕ್ತರು ಸೇರುವ ಜಾತ್ರೆಗಳಲ್ಲಿ ಇಂತಹ ಬಲೂನ್‌ಗಳ ಮಾರಾಟ ನಿಜಕ್ಕೂ ಆತಂಕ ಸೃಷ್ಟಿಸುತ್ತಿದೆ.
ಮಧ್ಯ ಕರ್ನಾಟಕದ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗುತ್ತಾರೆ. ಜಾತ್ರೆಗೆ ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿವೆ. ಆದರೆ ನೆರೆಯ ರಾಜ್ಯಗಳಿಂದ ಆಗಮಿಸುವ ವ್ಯಾಪಾರಸ್ಥರು, ಬಲೂನ್ ಮಾರಾಟಗಾರರ ಮೇಲೆ ನಿಗಾವಹಿಸಲಾಗಿದೆಯೇ ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ. ಆಕಸ್ಮಿಕವಾಗಿ ಯಾವುದೇ ಅವಘಡಗಳು ಸಂಭವಿಸಿದರೂ ಜಾತ್ರೆಯ ಮೇಲೆ ಕರಿನೆರಳು ಕವಿಯುವುದು ಖಚಿತ.
ಅಂದಾಜು 5 ಲಕ್ಷಕ್ಕೂ ಅಧಿಕ ಜನ ಸೇರುವ ಜಾತ್ರೆಯಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯುತ್ತದೆ. ಖಾರ ಮಂಡಕ್ಕಿ, ತಿಂಡಿ ತಿನಿಸು, ಬೆಂಡು ಬತ್ತಾಸು, ಹೋಟೆಲ್‍ಗಳು, ಪೂಜಾ ಸಾಮಾಗ್ರಿ ಸೇರಿದಂತೆ ತರಹೇವಾರಿ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿರುತ್ತದೆ.
ಪಟ್ಟಣದ ಒಳಮಠ, ಹೊರಮಠ, ತೇರುಬೀದಿ, ಜೆ.ಸಿ.ರಸ್ತೆ, ಸಂತೆ ಮೈದಾನ, ಆಸ್ಪತ್ರೆಯ ಮುಂಭಾಗ, ಪಾದಗಟ್ಟೆ ರಸ್ತೆ ಸೇರಿದಂತೆ ಪಟ್ಟಣದ ಎಲ್ಲ ರಸ್ತೆಗಳ ಇಕ್ಕೆಲಗಳ ತುಂಬೆಲ್ಲಾ ಅಂಗಡಿ ಮುಂಗಟ್ಟುಗಳನ್ನು ಹಾಕಿರುತ್ತಾರೆ. ವಾರಕ್ಕೂ ಮುನ್ನವೇ ಮಾಲೀಕರು ಸ್ಥಳಗಳನ್ನು ಕಾಯ್ದಿರಿಸುತ್ತಾರೆ. ಮೂರ್ನಾಲ್ಕು ದಿನಗಳ ಮುಂಚೆ ಬಂದು ಅಂಗಡಿಗಳನ್ನು ತೆರೆಯಲು ಸಿದ್ಧತೆ ನಡೆಸುತ್ತಾರೆ. ಹಾಗೇ ಜಾತ್ರೆ ಮುಗಿದು ಮರಿಪರಿಷೆ ಮುಕ್ತಾಯವಾದರೂ ಹೆಚ್ಚುವರಿಯಾಗಿ 10 ರಿಂದ 15 ದಿನಗಳವರೆಗೂ ಪಟ್ಟಣದಲ್ಲಿ ಅಂಗಡಿಗಳು ಇರುತ್ತವೆ.
ಎರಡು ದಶಕಗಳ ಹಿಂದೆ ಜಾತ್ರೆಯಲ್ಲಿ ಹೋಟೆಲ್ ವ್ಯಾಪಾರಸ್ಥರು ಬಹುತೇಕ ಸೌದೆ ಒಲೆ ಬಳಸಿ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದರು. ಆದರೆ, ಇತ್ತೀಚಿನ ಕೆಲ ವರ್ಷಗಳಿಂದ ಸಿಲಿಂಡರ್‌ಗಳ ಮೊರೆ ಹೋಗಿದ್ದಾರೆ. ತಾತ್ಕಾಲಿಕ ಶೆಡ್‌ಗಳಲ್ಲಿ ನಡೆಯುವ ಈ ಹೋಟೆಲ್‌ಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿಲ್ಲ. ಸಿಲಿಂಡರ್ ಮುಗಿದರೆ ಬಿಸಿ ನೀರಿನ ಪಾತ್ರೆಯಲ್ಲಿ ಅದನ್ನು ಇಟ್ಟು ಬಳಕೆ ಮಾಡುವುದು ಸಾಮಾನ್ಯವಾಗಿ ಕಂಡು ಬರುತ್ತದೆ.
ಚಿಣ್ಣರ ಕಣ್ಮನ ಸೆಳೆಯುವ ಬಲೂನ್‍ಗಳು, ವಿವಿಧ ಆಟಿಕೆಗಳಿಗೆ ಹೀಲಿಯಂ ಗ್ಯಾಸ್ ತುಂಬಿಸಲು ಚಿಕ್ಕ ಗಾತ್ರದ ಸಿಲಿಂಡರ್‌ಗಳ ಬಳಕೆ ಹೆಚ್ಚಾಗಿದೆ. ಬೈಕ್, ಸೈಕಲ್‌ಗಳಿಗೆ ಇವುಗಳನ್ನು ಕಟ್ಟಿಕೊಂಡು ಬಲೂನ್ ವ್ಯಾಪಾರ ನಡೆಸುತ್ತಾರೆ. ಮಹಾರಾಷ್ಟ್ರ, ಗುಜರಾತ್‌ನಿಂದ ದೊಡ್ಡ ಕಂಟೇನರ್‌ಗಳಲ್ಲಿ ಆಟಿಕೆಗಳನ್ನು ಹೊತ್ತು ತಂದು ಜಾತ್ರೆಯಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ಅವುಗಳನ್ನು ಹೋಲ್‌ಸೇಲ್ ದರಕ್ಕೆ ನೀಡಲಾಗುತ್ತದೆ. ಜೊತೆಗೆ ಸಿಲಿಂಡರ್‌ಗಳನ್ನು ಬಾಡಿಗೆಗೆ ಕೊಟ್ಟು ವ್ಯಾಪಾರ ನಡೆಸುವುದು ಈಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.
‘ಜಿಲ್ಲಾಡಳಿತ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಪೊಲೀಸರು ಜಾತ್ರೆಯಲ್ಲಿ ಅಂಗಡಿ ತೆರೆಯುವ ಮಾಲೀಕರಿಗೆ ಸಿಲಿಂಡರ್ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕು. ಅವುಗಳ ಕಾರ್ಯದಕ್ಷತೆ ಪರಿಶೀಲಿಸಲು ವಿಶೇಷ ತಂಡ ರಚನೆ ಮಾಡಬೇಕಿದೆ’ ಎನ್ನುತ್ತಾರೆ ಭಕ್ತರಾದ ಕೆ.ಎಂ. ಜಗದೀಶ್.
‘ಪಟ್ಟಣ ಪಂಚಾಯಿತಿ ಅಧಿಕಾರಿಗಳು ಅಂಗಡಿಗಳಿಗೆ ಪರವಾನಗಿ ನೀಡುವ ವೇಳೆ ಸಿಲಿಂಡರ್ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕು. ಅಂಗಡಿ ಮಾಲೀಕರ ಮಾಹಿತಿ, ನೋಂದಣಿ ಹಾಗೂ ಅವರ ವೈಯಕ್ತಿಕ ದಾಖಲೆಗಳನ್ನು ಪಡೆಯುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂಬುದು ಗ್ರಾಮಸ್ಥರ ಒತ್ತಾಯ.
ಮೈಸೂರು ಸೇರಿದಂತೆ ವಿವಿಧೆಡೆ ಬಲೂನ್ ಸ್ಫೋಟ ಹಾಗೂ ಅಪರಾಧ ಕೃತ್ಯ ನಡೆದಿರುವುದನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯ ಜಾತ್ರೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತಿದೆ. ವ್ಯಾಪಾರಸ್ಥರ ನೋಂದಣಿ ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗಿದೆಟಿ.ವೆಂಕಟೇಶ್ ಜಿಲ್ಲಾಧಿಕಾರಿ
ಭಕ್ತರು ಅಗ್ನಿಕುಂಡ ತುಳಿಯುವ ವೇಳೆ ಸಣ್ಣಪುಟ್ಟ ಗಾಯಗಳು ಆಗುತ್ತವೆ. ಆರೋಗ್ಯ ಇಲಾಖೆಯಿಂದ ಇದುವರೆಗೂ ಸಹಕಾರ ಸಿಕ್ಕಿಲ್ಲ. ಈ ಬಾರಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಜಾತ್ರೆ ನಡೆಸಲು ಸಮಿತಿ ಮುಂದಾಗಿದೆಪಿ.ಜಿ.ರಾಮಣ್ಣ ಧರ್ಮದರ್ಶಿ ವೀರಭದ್ರಸ್ವಾಮಿ ದೇವಸ್ಥಾನ ಸಮಿತಿ
ಕಾಣದ ಆಂಬುಲೆನ್ಸ್; ಇಲ್ಲ ಸುರಕ್ಷತೆ
–ಆರ್. ವೆಂಕಟಾಚಲಪತಿ ಚಳ್ಳಕೆರೆ
ಪ್ರತಿ ವರ್ಷ ಏಪ್ರಿಲ್ ಮೇ ತಿಂಗಳಲ್ಲಿ ವೀರಭದ್ರ ಸ್ವಾಮಿ ಚಳ್ಳಕೆರೆಯಮ್ಮ ದೇವಿಯ ಜಾತ್ರೆ ನಡೆಯುತ್ತವೆ. ಸ್ವಾಮಿಯ ದರ್ಶನ ಹಾಗೂ ರಥೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ವೀರಭದ್ರ ಸ್ವಾಮಿ ಜಾತ್ರೆಯಲ್ಲಿ ವೀರಗಾಸೆ ಬೆಳ್ಳಿ ಪಲ್ಲಕ್ಕಿ ಉತ್ಸವ ಅಗ್ನಿಕುಂಡ ಹಾಯುವುದು ಕಡುಬಿನ ಕಾಳಗ ರಥೋತ್ಸವ ಮುಖ್ಯ ಆಚರಣೆಗಳಾಗಿವೆ. ಅಗ್ನಿಕುಂಡ ಜಾತ್ರೆಯ ವೈಶಿಷ್ಟ್ಯಗಳಲ್ಲಿ ಒಂದಾಗಿದ್ದು ಉರಿಯುವ ಕೆಂಡದ ಮೇಲೆ ಬೆಳಗಿನ ಜಾವ ನಡೆಯುವ ದೃಶ್ಯ ನೋಡುಗರನ್ನು ರೋಮಾಂಚನಗೊಳಿಸುತ್ತದೆ. ಜಾತ್ರೆಯಲ್ಲಿ ಭಕ್ತರ ಸುರಕ್ಷತೆಗಾಗಿ ತಾಲ್ಲೂಕು ಆಡಳಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಕೆಂಡ ಹಾಯುವ ಆಚರಣೆ ವೇಳೆ ಭಕ್ತರಿಗೆ ಸುಟ್ಟ ಗಾಯಗಳಾಗುವ ಸಾಧ್ಯತೆ ಇರುತ್ತದೆ. ಈ ವೇಳೆ ತುರ್ತು ಚಿಕಿತ್ಸೆಗೆ ಆರೋಗ್ಯ ಇಲಾಖೆಯು ವೈದ್ಯರು ಹಾಗೂ ಆಂಬುಲೆನ್ಸ್ ನಿಯೋಜಿಸಬೇಕು. ಆ ಕೆಲಸ ಇದುವರೆಗೂ ಆಗಿಲ್ಲ. ಕಿರಿದಾದ ಬೀದಿಗಳಲ್ಲಿ ಬೃಹತ್ ರಥ ಎಳೆಯಲಾಗುತ್ತದೆ. ಈ ವೇಳೆ ಕಾಲ್ತುಳಿತ ಆಗುವ ಸಂಭವ ಹೆಚ್ಚಾಗಿದ್ದರೂ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿಲ್ಲ. ಸಿ.ಸಿ.ಟಿ.ವಿ. ಕ್ಯಾಮೆರಾಗಳ ಅಳವಡಿಕೆ ದೂರದ ಮಾತಾಗಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಸಣ್ಣಪುಟ್ಟ ಅವಘಡಗಳು ಕಾಲ್ತುಳಿತದಂತಹ ಘಟನೆಗಳು ನಡೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದುವರೆಗೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೆ ತಾಲ್ಲೂಕು ಆಡಳಿತ ಜಾತ್ರೆಗೆ ಅನುಮತಿ ನೀಡುತ್ತಾ ಬಂದಿದೆ. ಈ ಬಾರಿಯಾದರೂ ಭಕ್ತರ ಸುರಕ್ಷತೆಯ ಬಗ್ಗೆ ಗಮನಹರಿಸಬೇಕು ಎನ್ನುತ್ತಾರೆ ಭಕ್ತರು.
ಎಗ್ಗಿಲ್ಲದೆ ನಡೆಯುತ್ತಿದೆ ಜೂಜಾಟ
–ಕೊಂಡ್ಲಹಳ್ಳಿ ಜಯಪ್ರಕಾಶ
ಮೊಳಕಾಲ್ಮುರು: ಜಾತ್ರೆ ಎಂದರೆ ಸಾಕು ಮೋಜಿನ ಆಟಿಕೆಗಳ ಮಾರಾಟ, ರಂಕಲು ರಾಟೆ ಸುತ್ತಾಟ ನೆನಪಿಗೆ ಬರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜಾತ್ರೆಯ ಸ್ವರೂಪ ಬದಲಾಗಿದ್ದು ಜೂಜಾಟ, ಕರ್ಕಶ ಧ್ವನಿಯ ಆಟಿಕೆಗಳ ಮಾರಾಟ, ಪುಂಡರ ಹಾವಳಿ ಹೆಚ್ಚಾಗಿದೆ.
ತಾಲ್ಲೂಕು ಆಂಧ್ರಗಡಿ ಭಾಗದಲ್ಲಿದ್ದು, ಜಾತ್ರೆ ಸಮಯದಲ್ಲಿ ಅಲ್ಲಿಂದ ಸಾಕಷ್ಟು ವ್ಯಾಪಾರಿಗಳು, ಜನರು ಬರುತ್ತಾರೆ. ಇದರಲ್ಲಿ ಜೂಜಾಟಕ್ಕೆ ಸಂಬಂಧಪಟ್ಟ ಮಳಿಗೆಗಳನ್ನು ಹಾಕುವವರು ಹೆಚ್ಚಾಗಿದ್ದಾರೆ. ಐಪಿಎಲ್ ಮಾದರಿ ಆಟಗಳು, ಸಿನಿಮಾ ನಟರ ಚಿತ್ರಗಳ ಮೇಲೆ ಹಣ ಕಟ್ಟುವುದು, ಕ್ರಿಕೆಟ್ ಆಟಗಾರರ ಚಿತ್ರಗಳ ಮೇಲೆ ಹಣ ಕಟ್ಟುವುದು, ಒಂದಕ್ಕೆ ಇಂತಿಷ್ಟು ಪಟ್ಟು ಎಂಬ ಹೊಸ ಆಟಗಳು ಚಾಲ್ತಿಗೆ ಬಂದಿವೆ.
ಪ್ರತಿ ಜಾತ್ರೆಯಲ್ಲಿ ಕನಿಷ್ಠ ಇಂತಹ 5–6ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗುತ್ತದೆ. ಪ್ರತಿ ಅಂಗಡಿಯವರು ಒಂದು ಲಕ್ಷದವರೆಗೂ ವ್ಯಾಪಾರ ಮಾಡುತ್ತಾರೆ. ಜಾತ್ರೆ ಸಮಿತಿಯವರು ಗಮನಹರಿಸಿ ಇಂತಹ ಅಂಗಡಿಗಳನ್ನು ನಿಷೇಧಿಸಬೇಕು ಎಂಬುದು ಜನರ ಒತ್ತಾಯ.
ಗ್ರಾಮ ಪಂಚಾಯಿತಿಗಳು ಸಿಬ್ಬಂದಿ ನೇಮಕ ಮಾಡಿ ಅಂಗಡಿ ಹಾಕುವರರ ನೋಂದಾಣಿಗೆ ಕ್ರಮವಹಿಸಬೇಕು. ಜೊತೆಗೆ ಜೂಜಾಟ ಅಂಗಡಿಗಳಿಗೆ ಅವಕಾಶ ನಿರಾಕರಣೆ ಮಾಡಬೇಕಿದೆ.
‘ಜಾತ್ರೆಗಳಲ್ಲಿ ಜೂಜಾಟಕ್ಕೆ ಉತ್ತೇಜನ ನೀಡುವಂತಹ ಅಂಗಡಿಗಳು ಕಂಡು ಬರುತ್ತಿವೆ. ಇದು ಗಮನಕ್ಕೆ ಬಂದಿದೆ. ಇವುಗಳಿಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎನ್ನುತ್ತಾರೆ ಪಿಎಸ್‌ಐ ಮಹೇಶ್ ಹೊಸಪೇಟೆ ಕೊಂಡ್ಲಹಳ್ಳಿ ಜಯಪ್ರಕಾಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.