ADVERTISEMENT

ಚಳ್ಳಕೆರೆ: ವಿನಾಶದ ಅಂಚಿನಲ್ಲಿ ಕೋಟೆ, ಬುರುಜು, ಬತ್ತೇರಿ

ತಿರುಗಿ ನೋಡದ ಪುರಾತತ್ವ ಇಲಾಖೆ, ಗ್ರಾಮ ಪಂಚಾಯಿತಿ ಆಡಳಿತ, ಸ್ಥಳೀಯರ ಆಕ್ರೋಶ

ಶಿವಗಂಗಾ ಚಿತ್ತಯ್ಯ
Published 6 ಜುಲೈ 2025, 6:16 IST
Last Updated 6 ಜುಲೈ 2025, 6:16 IST
ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ ಗ್ರಾಮದಲ್ಲಿ ಶಿಥಿಲಗೊಂಡಿರುವ ಕೋಟೆ
ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ ಗ್ರಾಮದಲ್ಲಿ ಶಿಥಿಲಗೊಂಡಿರುವ ಕೋಟೆ   

ಚಳ್ಳಕೆರೆ: ಗ್ರಾಮ ಪಂಚಾಯಿತಿ ಆಡಳಿತದ ನಿರ್ಲಕ್ಷ್ಯದಿಂದ ತಾಲ್ಲೂಕಿನ ದೇವರಮರಿಕುಂಟೆ, ಟಿ.ಎನ್.ಕೋಟೆ, ಚಿಕ್ಕೇನಹಳ್ಳಿ, ದೊಡ್ಡೇರಿ, ಹಿರೇಹಳ್ಳಿ, ಮನ್ನೇಕೋಟೆ, ಸಿದ್ದೇಶ್ವರದುರ್ಗ, ರಾಮದುರ್ಗದ ಹೊಸಗುಡ್ಡ ಮುಂತಾದ ಗ್ರಾಮದ ಪ್ರಾಚೀನ ಇತಿಹಾಸ ಸಾರುವ ಸ್ಮಾರಕಗಳು ದುಃಸ್ಥಿತಿಗೆ ತಲುಪಿವೆ.

ದೊಡ್ಡೇರಿ ಗ್ರಾಮದ ಒಂಟಿ ಬುರುಜು, ಊರನ್ನು ಸುತ್ತುವರಿದ ವಿಶಾಲವಾದ ಕೋಟೆ ಪ್ರದೇಶ ಅವನತಿಯ ಹಾದಿಯಲ್ಲಿವೆ. ಗ್ರಾಮದ ಪೂರ್ವಕ್ಕೆ ಕೋಟೆ ಹೆಬ್ಬಾಗಿಲಿನ ಬಲ ಭಾಗ ಆಂಜನೇಯ, ವೈಷ್ಣವ ದೇವಾಲಯದ ಬಳಿ ಶಾಸನೋಕ್ತ ಸ್ತಂಭಗಳು, ನೊಳಂಬ ಶೈಲಿಯ ಅತ್ಯಾಕರ್ಷಕ ವಾಸ್ತುಶಿಲ್ಪಗಳು, ಚಿತ್ರದುರ್ಗ ಪಾಳೇಗಾರರ ಕಾಲದ ದೇವಸ್ಥಾನಗಳು, ಅವುಗಳ ಅಳಿದುಳಿದ ಅವಶೇಷಗಳು ಪಳೆಯುಳಿಕೆಯಂತೆ ಕಾಣುತ್ತಿವೆ.

ಚಿತ್ರದುರ್ಗದ ಪಾಳೇಗಾರರು ಕ್ರಿ.ಶ. 1749ರಲ್ಲಿ ರಾಯದುರ್ಗದ ಪಾಳೇಗಾರರಿಂದ ವಶಪಡಿಸಿಕೊಂಡ ಕಾಟಂದೇವರ ಕೋಟೆ, ಚಿಕ್ಕೇನಹಳ್ಳಿ ಗ್ರಾಮದ ಚಿಕ್ಕನಾಯಕ ಕಟ್ಟಿದ ಕೋಟೆಗಳು ದುಃಸ್ಥಿತಿಯಲ್ಲಿವೆ. ನಿಡುಗಲ್ ಪಾಳೇಗಾರ ಓಬಣ್ಣನಾಯಕನ ಮೇಲೆ ಹೈದರ್ ಅಕ್ರಮಣ ಮಾಡಿದ ಸಂದರ್ಭದಲ್ಲಿ ತಿಮ್ಮಣ್ಣ ನಾಯಕ ಟಿ.ಎನ್.ಕೋಟೆ ಬಳಿ ನಿರ್ಮಿಸಿದ ಕೋಟೆ ಕೂಡ ಹಾಳಾಗುವ ಹಂತದಲ್ಲಿದೆ.

ADVERTISEMENT

ದೊಡ್ಡೇರಿ ಕ್ರಿ.ಶ. 16-17ನೇ ಶತಮಾನದಲ್ಲಿ ವಿಜಯನಗರದ ಅರಸು, ಮೊಘಲರು, ಮರಾಠರು. ಚಿತ್ರದುರ್ಗ ಪಾಳೇಗಾರರಿಗೆ ಸೇರಿದ ಕೋಟೆ, ಸಿದ್ಧೇಶ್ವರದುರ್ಗ ಗ್ರಾಮದ ಬಳಿ ಕೋಟೆಯಲ್ಲಿ ಅರ್ಧಭಾಗ ಕೊಳಗಳು ಮುಚ್ಚಿ ಹೋಗಿವೆ.

ದೇವರಮರಿಕುಂಟೆ ಗ್ರಾಮದಲ್ಲಿ ನಿಡಗಲ್ ರಾಜರು ನಿರ್ಮಿಸಿದ ಕೋಟೆ ಕೂಡ ಅವನತಿಯ ಹಂತದಲ್ಲಿವೆ. ವಿವಿಧ ಅರಸರ ಕಾಲದಲ್ಲಿ ನಿರ್ಮಿಸಿದ ಕಲ್ಲು ಮತ್ತು ಮಣ್ಣಿನ ಕೋಟೆ ಶಿಥಿಲಗೊಂಡಿವೆ. ಇವುಗಳನ್ನು ಸಂರಕ್ಷಣೆ ಮಾಡಿ ಎಂಬ ಕೂಗು ಇದ್ದರೂ ಸ್ಥಳೀಯ ಜನಪ್ರತಿನಿಧಿಗಳು ಕಿವಿಗೊಡುತ್ತಿಲ್ಲ. ಪುರಾತತ್ವ ಇಲಾಖೆ ಕೂಡ ಇಲ್ಲಿಯ ಸ್ಮಾರಕಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಗ್ರಾಮ ಪಂಚಾಯಿತಿ ಆಡಳಿತ ಕೂಡ ಸ್ಮಾರಕಗಳ ಬಗ್ಗೆ ನಿರ್ಲಕ್ಷ್ಯ ತೋರಿದೆ. ಕೋಟೆ ಶಿಥಿಲವಾಗಿ ಬಿದ್ದು ಹೋದಂತೆಲ್ಲಾ ಗ್ರಾಮದ ಜನರು ಮತ್ತಷ್ಟು ನಾಶಪಡಿಸುತ್ತ ಬಂದಿದ್ದಾರೆ. ಇತಿಹಾಸ ಸಾರುತ್ತಿದ್ದ ಕೋಟೆ ಮತ್ತು ಬುರುಜು ಶಿಥಿಲಗೊಂಡು ಕುಸಿದು ಬಿದ್ದಿವೆ. ಕೋಟೆಯ ತಳಪಾಯಕ್ಕೆ ಹೊಂದಿಸಿದ್ದ ಕಲ್ಲುಗಳು ಮನೆ ನಿರ್ಮಾಣಕ್ಕೆ ಬಳಕೆಯಾಗಿವೆ.

ತಾಲ್ಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಸ್ಮಾರಕಗಳನ್ನು ಗುರುತಿಸಿ ಆಯಾ ಗ್ರಾಮ ಪಂಚಾಯಿತಿ ಆಡಳಿತ ಮತ್ತು ಪ್ರಾಚ್ಯವಸ್ತು ಪುರಾತತ್ವ ಇಲಾಖೆ ಸಹಯೋಗದಲ್ಲಿ ದುರಸ್ತಿಗೆ ಪ್ರಯತ್ನಿಸಲಾಗುವುದು
ರೇಹಾನ್ ಪಾಷಾ, ತಹಶೀಲ್ದಾರ್

ಕೋಟೆ ಸಾಲು ಮಣ್ಣಿನ ದಿಬ್ಬವಾಗಿ ಪರಿವರ್ತನೆಗೊಂಡಿದೆ. ಇರುವ ಕಂದಕಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡಿವೆ. 

ಆಯಾ ಗ್ರಾಮದಲ್ಲಿ ಕೋಟೆಯ ಸುತ್ತಲೂ ಇದ್ದ ಕಂದಕಗಳು ಈಗಲೂ ಇದ್ದು ಗ್ರಾಮ ಬೆಳೆದಂತೆಲ್ಲಾ ಕಂದಕಗಳು ಸಮತಟ್ಟಾಗಿವೆ. ಅಳಿವಿನ ಹಂಚಿನಲ್ಲಿರುವ ಕಲ್ಲಿನ ಮಂಟಪ, ಕಲ್ಯಾಣಿ, ಉಯ್ಯಾಲೆಕಂಬ ಮತ್ತು ಬುರುಜು, ಬತೇರಿ ಹಾಗೂ ಕಂದಕ ಮತ್ತು ಸ್ಮಾರಕಗಳಿಗೆ ರಕ್ಷಣೆ ಇಲ್ಲವಾಗಿದೆ.

ಸ್ಥಳೀಯ ನೆಲದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಅಳಿದುಳಿದ ಅವಶೇಷಗಳ ರಕ್ಷಣೆ ಮತ್ತು ಕೋಟೆಗಳ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ನವ ಜಾಗೃತಿ ಯುವ ವೇದಿಕೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.