ನಾಯಕನಹಟ್ಟಿ: ತುರುವನೂರು ಹೋಬಳಿಯ ಬೊಮ್ಮಕ್ಕನಹಳ್ಳಿ ಗ್ರಾಮದ ಆಂಜೇಯಸ್ವಾಮಿ ದೇಗುಲದ ಸಮೀಪ ನೊಳಂಬರ ಕಾಲದ್ದು ಎನ್ನುವ ಅಪ್ರಕಟಿತ ತುರುಗೋಳ್ ವೀರಗಲ್ಲು ಮತ್ತು ವೀರಗಲ್ಲು ಶಾಸನಗಳು ಪತ್ತೆಯಾಗಿವೆ.
ವಿಜಯನಗರ ತಿರುಗಾಟ ಸಂಶೋಧನ ತಂಡದ ಪ್ರೊ.ಎಚ್. ತಿಪ್ಪೇಸ್ವಾಮಿ, ಪ್ರೊ. ಗೋವಿಂದ, ಪ್ರೊ. ಕೃಷ್ಣೆಗೌಡ, ಪ್ರೊ. ವೀರಾಂಜನೇಯ ತಿಮ್ಮಲಾಪುರ ನರಸಿಂಹ, ವೀರಭದ್ರಗೌಡ ಸಂಶೋಧನಾರ್ಥಿ ಎಚ್. ರವಿ ಸ್ಥಳೀಯರಾದ ಕೆ.ಸಿ.ಚಿತ್ತಯ್ಯ, ಎ.ವೈ.ಚನ್ನಕೇಶವ ಅವರುಗಳ ಸಹಕಾರದೊಂದಿಗೆ ವೀರಗಲ್ಲುಗಳನ್ನು ಪತ್ತೆಹಚ್ಚಿದ್ದಾರೆ.
ವೀರಗಲ್ಲುಗಳ ವಿಶೇಷ : ಶಾಸನದ ಶಿಲ್ಪ ಹಾಗೂ ಅವುಗಳ ವೇಷಭೂಷಣ, ಆಯುಧ ಹಾಗೂ ಶಿಲೆಗಳ ಆಧಾರದ ಮೇಲೆ ನೊಳಂಬರ ಕಾಲದ್ದು ಎಂದು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ವೈರಿಯೊಂದಿಗೆ ಸೆಣಸಾಡುವ ವೀರ, ಆತನ ಬಳಿ ಹಿಂದಕ್ಕೆ ಮುಖ ಮಾಡಿ ನಿಂತಿರುವ ಹಸುಗಳನ್ನು ಚಿತ್ರಿಸಲಾಗಿದೆ. ಎರಡನೆಯ ಹಂತದಲ್ಲಿ ಹಸುಗಾಗಿ ಕಾದಾಟ ಮಾಡಿ ಮಡಿದ ವೀರನನ್ನು ದೇವ ಕನ್ನಿಕೆಯರು ಆತನ ಕೈಗಳನ್ನು ತಮ್ಮ ಭುಜದ ಮೇಲಿರಿಸಿಕೊಂಡು ಕರೆದೊಯ್ಯುವ ಚಿತ್ರಣವಿದೆ. ಮೂರನೆಯ ಹಂತದಲ್ಲಿ ಪಲ್ಲಕ್ಕಿಯಲ್ಲಿ ಮಡಿದ ವೀರ ಪದ್ಮಾಸನದಲ್ಲಿ ಕುಳಿತ ಭಂಗಿಯಲ್ಲಿದ್ದು, ಆತನ ಬಲ ಮತ್ತು ಎಡ ಬದಿಗೆ ಚಾಮರ ಬೀಸುವ ದೇವ ಕನ್ನಿಕೆಯರ ಚಿತ್ರಗಳಿವೆ.
ಈ ತುರುಗೋಳ್ ವೀರಗಲ್ಲಿನಲ್ಲಿ ಚಿತ್ರಿಸಲಾಗಿರುವ ಆಯುಧ, ಆಭರಣಗಳು ವಿಶೇಷವಾಗಿದ್ದು, ಅಧ್ಯಯನ ದೃಷ್ಟಿಯಿಂದ ಮುಖ್ಯವಾಗಿವೆ. ಇವುಗಳಿಂದ ಅಂದಿನ ಸೈನಿಕ ವ್ಯವಸ್ಥೆಯ ಬಲವನ್ನು ತಿಳಿಯಬಹುದು ಎಂದು ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಗೋವಿಂದ ಹೇಳುತ್ತಾರೆ.
ಮಹತ್ವದ ವೀರಗಲ್ಲು ಪತ್ತೆ: ಬೊಮ್ಮಕ್ಕನಹಳ್ಳಿ ಗ್ರಾಮದಲ್ಲಿ ಕೆರೆಗೆ ಹೋಗುವ ಮಾರ್ಗದಲ್ಲಿ ಅತ್ಯಂತ ಸುಂದರವಾಗಿ ಕೆತ್ತನೆ ಮಾಡಿದ ವೀರಗಲ್ಲೊಂದು ಪತ್ತೆಯಾಗಿದ್ದು, ಈ ವೀರಗಲ್ಲು ಶಾಸನವು ಸಹ ಮೂರು ಹಂತದಲ್ಲಿದ್ದು ನುಣುಪಾದ ಬಳಪ ಕಲ್ಲಿನಲ್ಲಿ ಕೆತ್ತಲಾಗಿದೆ. ಮೊದಲ ಹಂತದಲ್ಲಿ ಇಬ್ಬರು ವೀರರು ವೈರಿಯೊಂದಿಗೆ ಕಾದಾಟ ಮಾಡುವ ಚಿತ್ರವಿದ್ದು, ಆತನ ಬಳಿಯಲ್ಲಿ ಮೂರು ಅಲಂಕೃತ ಕುದುರೆ ಶಿಲ್ಪಗಳನ್ನು ಕೆತ್ತಲಾಗಿದೆ. ಎರಡನೆಯ ಹಂತದಲ್ಲಿ ಬಿಲ್ಲುಗಳನ್ನು ಹಿಡಿದು ಕಾದಾಟ ಮಾಡುವ ಚಿತ್ರಗಳಿದ್ದು, ಮೂರನೆಯ ಹಂತದಲ್ಲಿ ಕಾದಾಟದಲ್ಲಿ ಮಡಿದ ವೀರರು ಪದ್ಮಾಸನದಲ್ಲಿ ಅದರಲ್ಲೂ ಕೈಲಾಸದಲ್ಲಿ ಶಿವನ ಆರಾಧನೆಯಲ್ಲಿ ಧ್ಯಾನಸ್ತರಾಗಿರುವುದನ್ನು ಹಾಗೂ ಶಿವಲಿಂಗವನ್ನು ಅರ್ಚಕನೊಬ್ಬ ಪೂಜಿಸುತ್ತಿರುವ ಹಾಗೆ ಶಿಲ್ಪವನ್ನು ಚಿತ್ರಿಸಲಾಗಿದೆ.
ಈ ವೀರಗಲ್ಲಿಗೆ ಲಿಪಿ ಇಲ್ಲದಿರುವುದರಿಂದ ವೀರಗಲ್ಲಿನ ಶಿಲ್ಪದ ಶೈಲಿಯ ಆಧಾರದ ಮೇಲೆ ಇದನ್ನೂ ಸಹ ನೊಳಂಬರ ಕಾಲದ್ದು ಎಂದು ಹೇಳಬಹುದೆಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಪ್ರೊ.ಎಚ್. ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಇಂತಹ ಮಹತ್ವದ ವೀರಗಲ್ಲುಗಳನ್ನು ಸ್ಥಳೀಯ ಆಡಳಿತ ಸಂರಕ್ಷಣೆ ಮಾಡಿ, ಮುಂದಿನ ಪೀಳಿಗೆಗೆ ಇತಿಹಾಸದ ಮಹತ್ವ ತಿಳಿಯಲು ನೇರವಾಗಬೇಕೆಂದು ಪ್ರೊ.ಕೃಷ್ಣೆಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.