
ಹಿರಿಯೂರು: ತಾಲ್ಲೂಕಿನ 151 ಶಾಲೆಗಳ ಹೆಸರಿಗೆ ಜಾಗವನ್ನು ಕಾಲಮಿತಿಯೊಳಗೆ ನೋಂದಣಿ ಮಾಡಿಕೊಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಆಕಾಶ್ ತಾಲ್ಲೂಕು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಬಿಇಒ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಬಹಳಷ್ಟು ಕಡೆ ಶಾಲೆಗಳು ಸ್ಥಳೀಯರ, ದಾನಿಗಳ ಹೆಸರಿನಲ್ಲಿದ್ದು, ಅಭಿಯಾನದ ಮಾದರಿಯಲ್ಲಿ ತಾಲ್ಲೂಕು ಆಡಳಿತವು ತಕ್ಷಣ ಕ್ರಮ ಕೈಗೊಂಡು ಶಾಲೆಗಳಿರುವ ಜಾಗವನ್ನು ಶಾಲೆಯ ಹೆಸರಿಗೆ ಮಾಡಿಕೊಡಬೇಕು. ಮಾರ್ಚ್ ಮೊದಲ ವಾರದ ವೇಳೆಗೆ ಈ ಕೆಲಸ ಮುಕ್ತಾಯಗೊಳ್ಳಬೇಕು ಎಂದು ತಿಳಿಸಿದರು.
ಪಿಆರ್‌ಇಡಿ ಇಲಾಖೆಯಿಂದ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುವ ಶಾಲೆಗಳ ಕೊಠಡಿ ಕಟ್ಟಡಗಳ ಕಾಮಗಾರಿಗಳ ಬಗ್ಗೆ ತಕ್ಷಣ ಕ್ರಮ ವಹಿಸಬೇಕು. ಅಂದಾಜು 38 ಶಾಲೆಗಳ 80 ಕೊಠಡಿಗಳು ದುಸ್ಥಿತಿಯಲ್ಲಿದ್ದು, ಅವುಗಳನ್ನು ನೆಲಸಮಗೊಳಿಸಬೇಕು. ಜೊತೆಗೆ ಶಾಲೆಗಳಿಗೆ ಅಗತ್ಯವಾಗಿ ಶುದ್ಧ ಕುಡಿಯುವ ನೀರು, ಶೌಚಾಲಯ, ಕಾಂಪೌಂಡ್ ನಿರ್ಮಾಣದಂತಹ ಕಾಮಗಾರಿಗಳು ಅಗತ್ಯವಾಗಿದ್ದು, ಇವುಗಳ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಎಸ್‌ಎಸ್‌ಎಲ್‌ಸಿ ಫಲಿತಾಂಶದ ಸುಧಾರಣೆಗೆ ಅಗತ್ಯ ಸಹಕಾರ ನೀಡಬೇಕು ಎಂದು ತಾಲ್ಲೂಕು ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷ ಎ.ಎಂ. ಅಮೃತೇಶ್ವರ ಸ್ವಾಮಿ ಮನವಿ ಮಾಡಿದರು.
ವಿವಿಧ ಇಲಾಖೆಯ ಅಧಿಕಾರಿಗಳನ್ನು ಎಸ್‌ಎಸ್ಎಲ್‌ಸಿ ಫಲಿತಾಂಶ ಸುಧಾರಣೆಗೆ ನೇಮಕ ಮಾಡಿದ್ದು, ವಿದ್ಯಾರ್ಥಿಗಳ ಮನೆ ಭೇಟಿ, ವಿಶೇಷ ತರಗತಿ, ದತ್ತು ಯೋಜನೆ ಸೇರಿ ಮುಂತಾದ ಕಾರ್ಯ ಚಟುವಟಿಕೆಗಳ ಮುಖಾಂತರ ಶ್ರಮಿಸುತ್ತಿದ್ದೇವೆ. ಪರೀಕ್ಷೆಗೆ ವಿದ್ಯಾರ್ಥಿಗಳ ಗೈರುಹಾಜರಿಯನ್ನು ಕಡಿಮೆ ಮಾಡಲು ಪ್ರಯತ್ನಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ ಸ್ಪಷ್ಟಪಡಿಸಿದರು.
ಶಾಲೆಗಳ ಹೆಸರಿಗೆ ಜಾಗಗಳನ್ನು ನೋಂದಾಯಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ತಹಶೀಲ್ದಾರ್ ಎಂ. ಸಿದ್ದೇಶ್ ತಿಳಿಸಿದರು.
ಸಮಿತಿ ಸದಸ್ಯರಾದ ನಯೀಮುದ್ದೀನ್, ಅಂಜನಪ್ಪ, ಗೀತಾನಾಗಕುಮಾರ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಮೂರ್ತಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಹನುಮಂತಪ್ಪ, ಎಸ್‌ಡಿಎಂಸಿ ಅಧ್ಯಕ್ಷರಾದ ತಿಮ್ಮಶೆಟ್ಟಿ, ಹನುಮಂತಪ್ಪ, ಬಿಆರ್‌ಸಿ ಆರ್.ಟಿ.ಎಸ್. ಶ್ರೀನಿವಾಸ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.