ADVERTISEMENT

ಹಿರಿಯೂರು| ಕುಟುಂಬದ ಅಭಿವೃದ್ಧಿಗೆ ಸೌಲಭ್ಯ ಬಳಸಿಕೊಳ್ಳಿ: ಸಚಿವ ಸುಧಾಕರ್ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 6:25 IST
Last Updated 8 ಡಿಸೆಂಬರ್ 2025, 6:25 IST
   

ಹಿರಿಯೂರು: ‘ಪರಿಶಿಷ್ಟ ಜಾತಿ–ಪಂಗಡ ಹಾಗೂ ಹಿಂದುಳಿದ ವರ್ಗದವರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಸರ್ಕಾರ ನೀಡುವ ಆರ್ಥಿಕ ನೆರವನ್ನು ಕುಟುಂಬದ ಆರ್ಥಿಕ ಸ್ಥಿತಿ ಸುಧಾರಣೆಗೆ ಬಳಸಿಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಸೂಚಿಸಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಗರಸಭೆಯ ಎಸ್ಎಫ್‌ಸಿ ನಿಧಿಯಡಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಸಮುದಾಯದ ವಿದ್ಯಾರ್ಥಿಗಳು, ಅಂಗವಿಕಲರು, ಪೌರ ಕಾರ್ಮಿಕರು, ಅಲೆಮಾರಿ ಸಮುದಾಯದವರಿಗೆ 2019–20 ರಿಂದ 2025–26ನೇ ಸಾಲಿನವರೆಗಿನ ವಿವಿಧ ಸೌಲಭ್ಯಗಳನ್ನು ವಿತರಿಸಿ ಶನಿವಾರ ಮಾತನಾಡಿದರು.

‘ಬಡತನ ರೇಖೆಗಿಂತ ಕೆಳಗಿನವರಿಗೆ ಸರ್ಕಾರ ನೀಡುವ ಸವಲತ್ತುಗಳು ದುರುಪಯೋಗವಾಗುತ್ತಿವೆ ಎಂಬ ಆರೋಪಗಳಿವೆ. ಸರ್ಕಾರ ಬಡವರ ಬಗ್ಗೆ ಹೊಂದಿರುವ ಕಾಳಜಿಯನ್ನು ಫಲಾನುಭವಿಗಳು ಅರ್ಥ ಮಾಡಿಕೊಳ್ಳಬೇಕು. ನಿಗದಿತ ಉದ್ದೇಶಕ್ಕೆ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳುವ ಮೂಲಕ ಕುಟುಂಬದ ಆರ್ಥಿಕತೆ ಸುಧಾರಣೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಫಲಾನುಭವಿಗಳಿಗೆ ಟಾರ್ಪಲಿನ್, ತ್ರಿಚಕ್ರ ವಾಹನ, ಗ್ಯಾಸ್ ಸಿಲಿಂಡರ್ ಮುಂತಾದವುಗಳನ್ನು ಸಚಿವರು ವಿತರಿಸಿದರು. ಜಿಲ್ಲಾಧಿಕಾರಿ ಟಿ. ವೆಂಕಟೇಶ್, ತಹಶೀಲ್ದಾರ್, ಎಂ. ಸಿದ್ದೇಶ್. ಪೌರಾಯುಕ್ತ ಎ. ವಾಸಿಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ನಗರಸಭೆ ಮಾಜಿ ಅಧ್ಯಕ್ಷ ಬಾಲಕೃಷ್ಣ, ಮಾಜಿ ಸದಸ್ಯರಾದ ಬಿ.ಎನ್. ಪ್ರಕಾಶ್, ವಿಠ್ಠಲ್ ಪಾಂಡುರಂಗ, ಮಮತಾ, ಮಂಜುಳಾ, ಈರಲಿಂಗೇಗೌಡ, ಜಿ.ಎಲ್. ಮೂರ್ತಿ, ಸಾದತ್ ಉಲ್ಲಾ, ಕಲ್ಲಟ್ಟಿ ಹರೀಶ್, ಜಿ. ದಾದಾಪೀರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.