ಚಿತ್ರದುರ್ಗ: ಕಲ್ಲಿನಕೋಟೆಗೆ ಕೂಗಳತೆ ದೂರದಲ್ಲಿರುವ ದೋಬಿಘಾಟ್, ತೀಟೆ ಹೊಂಡ ಸ್ಮಾರಕಗಳು ಇತಿಹಾಸದ ಗರ್ಭ ಸೇರುವ ಕಾಲ ಸನ್ನಿಹಿತವಾಗಿದೆ. ಈ ಐತಿಹಾಸಿಕ ತಾಣದಲ್ಲಿ ಖಾಸಗಿಯವರು ಕಾಮಗಾರಿ ಆರಂಭಿಸಿದ್ದು ತಲೆತಲಾಂತರದಿಂದಲೂ ಬಟ್ಟೆ ಒಗೆದು ಬದುಕು ಕಟ್ಟಿಕೊಂಡಿದ್ದ ಅಗಸರು ಕಾಯಕ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಸಾಮಾನ್ಯವಾಗಿ ಎಲ್ಲೆಡೆ ನೀರು ಹರಿಯುವ ಜಾಗದಲ್ಲೇ ದೋಬಿಘಾಟ್ ಮಾಡಲಾಗಿರುತ್ತದೆ. ಕರುವರ್ತಿ ದೇವಾಲಯದ ಮುಂಭಾಗದಲ್ಲಿರುವ ದೋಬಿಘಾಟ್‌ಗೆ ಐತಿಹಾಸಿಕ ಹಿನ್ನೆಲೆ ಇದೆ. ನಾಯಕ ಅರಸರ ಕಾಲದಿಂದಲೂ ಅಲ್ಲಿ ದೋಬಿಘಾಟ್ ಇದೆ ಎಂದು ಸಂಶೋಧಕರು ಹೇಳುತ್ತಾರೆ. ವಿವಿಧ ಹೊಂಡ, ಒಡ್ಡುಗಳ ಮೂಲಕ ನೀರು ಹರಿವಿನ ಜಾಗದಲ್ಲೇ ಬಟ್ಟೆ ಒಗೆಯುವ ತಾಣ ರೂಪಿಸಲಾಗಿದೆ.
ದೇವಾಲಯ ಹಿಂಭಾಗದ ರಾಮದೇವರ ಒಡ್ಡು, ದೇವಾಲಯದ ಮುಂದಿನ ಸಣ್ಣ ಒಡ್ಡು ನೀರಿನ ಹರಿವಿನಲ್ಲಿ ಅಗಸರು ಬಟ್ಟೆ ಒಗೆಯುತ್ತಾರೆ. ದೋಬಿಘಾಟ್ ಪಕ್ಕದಲ್ಲಿ ತೀಟೆ ಹೊಂಡವಿದೆ. ಅರಸರ ಕಾಲದಲ್ಲಿ ನಿರ್ಮಾಣಗೊಂಡಿರುವ ನಗರದ ಹತ್ತಾರು ಐತಿಹಾಸಿಕ ಹೊಂಡಗಳಲ್ಲಿ ತೀಟೆ ಹೊಂಡ ಕೂಡ ಒಂದಾಗಿದೆ. ಕಲ್ಲಿನ ಕೋಟೆಗೆ 100 ಮೀಟರ್ ವ್ಯಾಪ್ತಿಯಲ್ಲಿ ಈ ಹೊಂಡವಿದೆ.
ರಾಮದೇವರ ಒಡ್ಡಿನ ಕೋಡಿ, ಸೋರಿಕೆ ನೀರು ಕರುವರ್ತಿ ದೇವಾಲಯದ ಮುಂದಿನ ಸಣ್ಣ ಒಡ್ಡು ಸೇರುತ್ತದೆ. ನಂತರ ದೋಬಿಘಾಟ್ ಕಾಲುವೆ ಮೂಲಕ ಹರಿದು ತೀಟೆಹೊಂಡ ಸೇರುತ್ತದೆ. ಬಟ್ಟೆ ಒಗೆದ ನಂತರ ಮೈಕೆರೆತ ಉಂಟು ಮಾಡುವಂತಹ ಕೊಳಚೆ ನೀರು ಹೊಂಡ ಸೇರಲಿರುವ ಕಾರಣಕ್ಕೆ ಇದನ್ನು ತೀಟೆ ಹೊಂಡ ಎಂದು ಕರೆಯಲಾಗುತ್ತದೆ.
ಇತ್ತೀಚೆಗೆ ಕರುವರ್ತಿ ದೇವಾಲಯದ ಮುಂದಿನ ಜಾಗವನ್ನು ಸಮತಟ್ಟು ಮಾಡಲಾಗಿದೆ. ದೋಬಿಘಾಟ್‌ಗೆ ಹೊಂದಿಕೊಂಡಂತೆ ಮಣ್ಣು ಸುರಿಯಲಾಗಿದ್ದು, ಶೀಘ್ರ ಬಟ್ಟೆ ಒಗೆಯುವ ಜಾಗ, ಹೊಂಡದ ಜಾಗವನ್ನು ಮುಚ್ಚಿಬಿಡುತ್ತಾರೆ, ಜಾಗವನ್ನು ವಶಕ್ಕೆ ಪಡೆಯುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಅಗಸರು ಆತಂಕ ವ್ಯಕ್ತಪಡಿಸುತ್ತಾರೆ.
‘ನಮ್ಮ ತಾತ, ಮುತ್ತಾತರ ಕಾಲದಿಂದಲೂ ಇಲ್ಲಿ ಬಟ್ಟೆ ಒಗೆಯುತ್ತಾ ಜೀವನ ಮಾಡುತ್ತಿದ್ದೇವೆ. ನಮಗೆ ಈ ಉದ್ಯೋಗ ಬಿಟ್ಟರೆ ಬೇರೆ ಕೆಲಸಗಳು ಗೊತ್ತಿಲ್ಲ. ಈಗ ಏಕಾಏಕಿ ನಮ್ಮ ಜಾಗಕ್ಕೆ ಮಣ್ಣು ತಳ್ಳಿದ್ದಾರೆ. ಈ ಜಾಗವನ್ನು ಬಹಳ ಹಿಂದೆಯೇ ಸ್ಥಳೀಯರಿಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ನಾವು ಕೆಲಸ ಕಳೆದುಕೊಳ್ಳುವ ಭಯ ಆರಂಭವಾಗಿದೆ’ ಎಂದು ದೋಬಿಘಾಟ್‌ನಲ್ಲಿ ಕಾಯಕ ಮಾಡುವ ಪ್ರಕಾಶ್ ಆತಂಕ ವ್ಯಕ್ತಪಡಿಸಿದರು.
ಕೇಳುವವರು ಯಾರೂ ಇಲ್ಲ:
ಭಾರತೀಯ ಪುರಾತತ್ವ ಕಾಯ್ದೆ, ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಾಚೀನ ಸ್ಮಾರಕಗಳ 300 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ, ಜನವಸತಿ ಪ್ರದೇಶ ಇರುವಂತಿಲ್ಲ. ಆದರೆ, ಕೋಟೆಯ 10 ಮೀಟರ್ ವ್ಯಾಪ್ತಿಯಲ್ಲೇ ಖಾಸಗಿ ಕಟ್ಟಡಗಳು ತಲೆ ಎತ್ತಿದರೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.
ಕೋಟೆ ಸುತ್ತಮುತ್ತಲಿನ ಜಾಗ ಖಾಸಗಿಯವರ ಪಾಲಾಗುತ್ತಿದ್ದರೂ ಇಲ್ಲಿಯವರೆಗೆ ಎಎಸ್‌ಐ, ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಮಾರಕ ರಕ್ಷಿಸುತ್ತಿಲ್ಲ. ಖಾಸಗಿ ಕಾಮಗಾರಿಗಳನ್ನು ನಿಲ್ಲಿಸಲೂ ಸಾಧ್ಯವಾಗುತ್ತಿಲ್ಲ. ಪ್ರಭಾವಿಗಳು ಸ್ಥಳೀಯ ಆಡಳಿತದ ಮೇಲೆ ಪ್ರಭಾವ ಬೀರಿ ಹಿಂದೆಯೇ ದುರ್ಗದ ಹಲವು ಸ್ಮಾರಕ ತಾಣಗಳನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
‘ರಾಮದೇವರ ಒಡ್ಡು, ಕರುವರ್ತಿ ದೇವಾಲಯ, ದೋಬಿಘಾಟ್, ತೀಟೆ ಹೊಂಡ ಹಲವು ಐತಿಹಾಸಿಕ ಪ್ರಸಂಗಗಳಲ್ಲಿ ಉಲ್ಲೇಖವಾಗಿವೆ. ಇವುಗಳು ಹೇಗೆ ಖಾಸಗಿಯವರ ಪಾಲಾದವು ಎಂಬ ಬಗ್ಗೆ ಸಮಗ್ರ ತನಿಖೆ ನಡೆಯಬೇಕಾದ ಅವಶ್ಯಕತೆ ಇದೆ’ ಎಂದು ಸಾಹಿತಿ, ಸಂಶೋಧಕ ಎಂ.ಮೃತ್ಯುಂಜಯಪ್ಪ ಒತ್ತಾಯಿಸಿದರು.
ಸಂರಕ್ಷಣಾ ತಾಣವಾಗಿದ್ದರೆ ಕ್ರಮ:
‘ಯಾವುದೇ ಸ್ಮಾರಕದ ಬಗ್ಗೆ ದೂರು ಬಂದರೆ ಮೊದಲು ಅದು ಸಂರಕ್ಷಣಾ ಸ್ಥಳವಾಗಿದೆಯೇ ಎಂಬುದನ್ನು ಪರಿಶೀಲಿಸುತ್ತೇವೆ. ಅನಧಿಕೃತವಾಗಿ ಕಾಮಗಾರಿ ಕೈಗೊಂಡಿದ್ದರೆ ಸ್ಥಳೀಯ ಆಡಳಿತ ಪೊಲೀಸರಿಗೆ ದೂರು ಸಲ್ಲಿಸಿ ಕ್ರಮ ಕೈಗೊಳ್ಳುತ್ತೇವೆ. ಅದರಂತೆ ದೋಬಿಘಾಟ್ ತೀಟೆ ಹೊಂಡದ ಬಗ್ಗೆಯೂ ಪರಿಶೀಲಿಸುತ್ತೇವೆ’ ಎಂದು ಎಎಸ್‌ಐ ಅಧಿಕಾರಿಯೊಬ್ಬರು ತಿಳಿಸಿದರು. ‘ಖಾಸಗಿ ಭೂಮಿಯಲ್ಲಿ ಕಾಮಗಾರಿ ನಡೆಸುತ್ತಿದ್ದರೆ ಯಾವುದೇ ತೊಂದರೆ ಇಲ್ಲ. ಘೋಷಿತವಾದ ಸಂರಕ್ಷಣಾ ತಾಣದಲ್ಲಿ ಅನಧಿಕೃತವಾಗಿ ಕಾಮಗಾರಿ ನಡೆಸಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ರಾಜ್ಯ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಜಿ.ಪ್ರಹ್ಲಾದ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.