ADVERTISEMENT

ಹೊಳಲ್ಕೆರೆ ವಾರದ ಸಂತೆಗೆ ಮತ್ತೆ ಗ್ರಹಣ !

ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಬಡ್ತಿ, ಹೊನ್ನೆಕೆರೆ ಅಂಗಳದಲ್ಲಿ ಕೆಸರು

ಸಾಂತೇನಹಳ್ಳಿ ಸಂದೇಶ ಗೌಡ
Published 14 ಅಕ್ಟೋಬರ್ 2020, 2:57 IST
Last Updated 14 ಅಕ್ಟೋಬರ್ 2020, 2:57 IST
ಹೊಳಲ್ಕೆರೆಯ ಪ್ರಮುಖ ರಸ್ತೆಯ ಪಕ್ಕದಲ್ಲೇ ವಾರದ ಸಂತೆ ನಡೆಯುತ್ತಿರುವ ದೃಶ್ಯ.
ಹೊಳಲ್ಕೆರೆಯ ಪ್ರಮುಖ ರಸ್ತೆಯ ಪಕ್ಕದಲ್ಲೇ ವಾರದ ಸಂತೆ ನಡೆಯುತ್ತಿರುವ ದೃಶ್ಯ.   

ಹೊಳಲ್ಕೆರೆ: ಪಟ್ಟಣದಲ್ಲಿ ನಡೆಯುವ ವಾರದ ಸಂತೆಗೆ ಗ್ರಹಣ ಬಿಟ್ಟಂತೆ ಕಾಣುತ್ತಿಲ್ಲ. ಹಿಂದೆ ರಾಜ್ಯಹೆದ್ದಾರಿಯ ಪಕ್ಕದಲ್ಲಿ ನಡೆಯುತ್ತಿದ್ದ ಸಂತೆ ಈಗ ಮುಂಬಡ್ತಿ ಪಡೆದು ರಾಷ್ಟ್ರೀಯ ಹೆದ್ದಾರಿ ಬದಿಗೆ ಸ್ಥಳಾಂತರಗೊಂಡಿದೆ!

ಪಟ್ಟಣದಲ್ಲಿ ಪ್ರತಿ ಭಾನುವಾರ ವಾರದ ಸಂತೆ ನಡೆಯುತ್ತದೆ. ಸಂತೆಯಲ್ಲಿ ಸೊಪ್ಪು, ತರಕಾರಿ, ದಿನಸಿ ಸೇರಿದಂತೆ ನೂರಾರು ಅಂಗಡಿಗಳು, ವ್ಯಾಪಾರಿಗಳು, ಗ್ರಾಹಕರು ಸೇರುತ್ತಾರೆ. ತರಕಾರಿ ಮಾರಾಟ ಮಾಡಲು ಬೇರೆ ತಾಲ್ಲೂಕು, ಜಿಲ್ಲೆಗಳ ರೈತರೂ ಇಲ್ಲಿಗೆ ಬರುತ್ತಾರೆ.

ಸರಿಯಾದ ಜಾಗವಿಲ್ಲದೆ ಹೊಸದುರ್ಗ ಮಾರ್ಗದ ಮುಖ್ಯರಸ್ತೆಯ ಪಕ್ಕದಲ್ಲಿ ಸಂತೆ ನಡೆಯುತ್ತಿತ್ತು. ಸಂತೆಯನ್ನು ತಿಂಗಳ ಹಿಂದೆಯಷ್ಟೇ ಚಿತ್ರದುರ್ಗ ಮಾರ್ಗದ ಹೊನ್ನೆಕೆರೆ ಅಂಗಳಕ್ಕೆ ಸ್ಥಳಾಂತರಿಸಲಾಗಿತ್ತು. ಮುಖ್ಯರಸ್ತೆಯಿಂದ ತಾತ್ಕಾಲಿಕವಾಗಿ ರಸ್ತೆ ನಿರ್ಮಿಸಿ ಸಂತೆಮಾಳ ಸಮಗೊಳಿಸಲಾಗಿತ್ತು. ಮೊದಲ ವಾರ ಉತ್ಸಾಹದಿಂದಲೇ ಸಂತೆ ನಡೆಸಲಾಗಿತ್ತು. ವ್ಯಾಪಾರಿಗಳು ನಾಮುಂದು ತಾಮುಂದು ಎಂದು ಜಾಗ ಹಿಡಿದುಕೊಂಡಿದ್ದರು. ಆದರೆ, ಇದು ತಗ್ಗು ಪ್ರದೇಶ ಆಗಿರುವುದರಿಂದ ಈಗ ಗುಂಡಿಗಳಲ್ಲಿ ಮಳೆ ನೀರು ನಿಂತಿದೆ. ಕೊಳಚೆ ಆಗಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇಲ್ಲಿ ಸಂತೆ ನಡೆಸಲು ಆಗದೆ ರಾಷ್ಟ್ರೀಯ ಹೆದ್ದಾರಿ-13ರ ಎರಡೂ ಬದಿಯಲ್ಲಿ ಸಂತೆ ನಡೆಸಲಾಗುತ್ತಿದೆ.

ADVERTISEMENT

‘ಹೊನ್ನೆಕೆರೆ ಅಂಗಳದಲ್ಲಿ ಸಂತೆಗೆ ಗುರುತಿಸಿದ ಜಾಗ ಚೆನ್ನಾಗಿದೆ. ಆದರೆ, ಮಳೆಗಾಲದಲ್ಲಿ ಅಲ್ಲಿ ನೀರು ನಿಲ್ಲುವುದರಿಂದ ಸಂತೆ ಮಾಡುವುದು ಕಷ್ಟ. ಕೆರೆ ತುಂಬಿದರೆ ಅಲ್ಲಿಗೆ ಹೋಗಲು ಆಗುವುದಿಲ್ಲ. ಕನಿಷ್ಠ ನಾಲ್ಕು ಅಡಿ ಎತ್ತರ ಮಣ್ಣು ಹಾಕಿಸಿ, ಕಾಂಕ್ರೀಟ್ ರಸ್ತೆ ನಿರ್ಮಿಸಬೇಕು. ಮಳೆ, ಬಿಸಿಲಿಂದ ರಕ್ಷಿಸಿಕೊಳ್ಳಲು ಶೆಡ್ ನಿರ್ಮಿಸಿದರೆ ಅನುಕೂಲ ಆಗುತ್ತದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ರಂಗಪ್ಪ.

‘ಇದು ಚಿತ್ರದುರ್ಗ- ಶಿವಮೊಗ್ಗ ಪ್ರಮುಖ ರಸ್ತೆ ಆಗಿರುವುದರಿಂದ ಸದಾ ವಾಹನ ದಟ್ಟಣೆ ಹೆಚ್ಚಿರುತ್ತದೆ. ಗಿಜಿಗುಟ್ಟುವ ವಾಹನಗಳ ನಡುವೆಯೇ ವ್ಯಾಪಾರ ನಡೆಯುತ್ತದೆ. ಸಂತೆಗೆ ಬಂದ ಜನ ಅಡ್ಡಾದಿಡ್ಡಿ ಸಂಚರಿಸುವುದರಿಂದ ಅಪಘಾತಗಳಾಗುವ ಭಯ ಇದೆ. ಸಂತೆಗೆ ಬರುವವರ ಬೈಕ್, ಲಗೇಜ್‌ ಆಟೊ ಮತ್ತಿತರ ವಾಹನಗಳನ್ನು ರಸ್ತೆ ಬದಿಯೇ ನಿಲ್ಲಿಸುವುದರಿಂದ ಸಂಚಾರಕ್ಕೂ ಅಡಚಣೆ ಆಗುತ್ತಿದೆ’ ಎನ್ನುತ್ತಾರೆ ವಾಹನ ಸವಾರರು.

ಇದೇ ಜಾಗದಲ್ಲಿ ಕುರಿ, ಮೇಕೆ ಸಂತೆ ಆರಂಭಿಸಲಾಗಿತ್ತು. ಇದರಿಂದ ತಾಲ್ಲೂಕಿನ ಕುರಿಗಾಹಿಗಳು, ಮಾಂಸಪ್ರಿಯರು ಸಂತಸಗೊಂಡಿದ್ದರು. ಕುರಿ, ಮೇಕೆ ಮಾರಾಟ ಮಾಡಲು, ಕೊಳ್ಳಲು ದೂರದ ಹೊಸದುರ್ಗ, ಚಿತ್ರದುರ್ಗ, ಹಿರಿಯೂರು ಕಡೆ ಹೋಗುವುದು ತಪ್ಪಿತು ಎಂದು ಖುಷಿಪಟ್ಟಿದ್ದರು. ಆದರೆ, ಈ ಸಂತೆಗೂ ಗ್ರಹಣ ಹಿಡಿದಿದ್ದು, ಒಂದೆರಡು ವಾರ ನಡೆದ ಸಂತೆ ನಿಂತಿದೆ. ಮತ್ತೆ ಕುರಿ ಸಂತೆ ಆರಂಭಿಸಬೇಕು ಎಂಬುದು ಇಲ್ಲಿನ ಜನರ ಒತ್ತಾಯವಾಗಿದೆ.

‘ಸಂತೆ ಜಾಗದಲ್ಲಿ ಮಳೆ ನೀರು ನಿಂತಿರುವುದರಿಂದ ರಸ್ತೆಬದಿ ಸಂತೆ ನಡೆಸಲಾಗುತ್ತಿದೆ. ಮಳೆ ಬಿಟ್ಟ ನಂತದ ಸಂತೆ ಜಾಗ ಅಭಿವೃದ್ಧಿ ಮಾಡಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಾಸಿಂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.