
ಹೊಳಲ್ಕೆರೆ: ತಾಲ್ಲೂಕಿನ ತಾಳಿಕಟ್ಟೆ ಗ್ರಾಮದ ಕೆರೆಯಲ್ಲಿ ಅವೈಜ್ಞಾನಿಕವಾಗಿ ಮಣ್ಣು ತೆಗೆಯಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
‘ಕೆರೆಯಲ್ಲಿನ ಮಣ್ಣು ತೆಗೆಯಲು ಕೆರೆಗೆ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯುವುದು ಕಡ್ಡಾಯ. ಕೃಷಿ ಉದ್ದೇಶಗಳಿಗೆ ಮಾತ್ರ ಮಣ್ಣು ಬಳಸಿಕೊಳ್ಳಲು ಅವಕಾಶ ಇದ್ದು, ಒಂದು ಮೀಟರ್‌ಗಿಂತ ಹೆಚ್ಚು ಆಳಕ್ಕೆ ಮಣ್ಣು ತೆಗೆಯುವಂತಿಲ್ಲ. ಟ್ರ್ಯಾಕ್ಟರ್‌ಗಳಲ್ಲಿ ಮಾತ್ರ ಮಣ್ಣು ಸಾಗಿಸಬಹುದಿದ್ದು, ಟಿಪ್ಪರ್ ಲಾರಿ ಬಳಸುವಂತಿಲ್ಲ’ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ, ಈ ಎಲ್ಲಾ ನಿಯಮಗಳನ್ನು ಮೀರಿ ಇಲ್ಲಿ ಮಣ್ಣು ತೆಗೆಯಲಾಗುತ್ತಿದೆ ಎಂದು ಗ್ರಾಮದ ಎಸ್. ನಾಗಪ್ಪ, ದೇವರಾಜಪ್ಪ, ಎಚ್.ಕೆಂಚಪ್ಪ, ಹನುಮಂತಪ್ಪ, ಡಿ. ಚಂದ್ರಪ್ಪ ದೂರಿದ್ದಾರೆ.
15 ದಿನಗಳಿಂದ ಹಗಲು–ರಾತ್ರಿ ಮಣ್ಣು ಸಾಗಿಸಲಾಗುತ್ತಿದ್ದು, ಕೆರೆಯಲ್ಲಿ 40 ಅಡಿ ಆಳದವರೆಗೆ ಮಣ್ಣು ತೆಗೆಯಲಾಗಿದೆ. ಹಿಟಾಚಿ ಬಳಸಿ 10 ಚಕ್ರಗಳ ಲಾರಿಗಳಲ್ಲಿ ಮಣ್ಣು ಸಾಗಿಸುತ್ತಿದ್ದು, ಅವೈಜ್ಞಾನಿಕವಾಗಿ ಗುಂಡಿ ತೆಗೆದಿದ್ದಾರೆ. ಕೆರೆಯ ಮಣ್ಣು ಸಾಗಿಸುತ್ತಿರುವ ಟ್ರ್ಯಾಕ್ಟರ್, ಲಾರಿಗಳ ಸಂಚಾರದಿಂದ ಗ್ರಾಮದ ಪರಿಶಿಷ್ಟರ ಕಾಲೊನಿ ಹಾಗೂ ಸರ್ಕಾರಿ ಶಾಲೆಗೆ ಧೂಳು ತುಂಬಿಕೊಳ್ಳುತ್ತಿದೆ ಎಂದು ದೂರಿದ್ದಾರೆ.
‘ಗ್ರಾಮದ ಕೆಲವರು ಮಣ್ಣು ಮಾರಾಟದಲ್ಲಿ ತೊಡಗಿದ್ದು, ಬೇರೆ ಗ್ರಾಮಗಳ ರೈತರಿಗೆ ಕಳಿಸುತ್ತಿದ್ದಾರೆ. ನಿಯಮ ಮೀರಿ ಮಣ್ಣು ತೆಗೆಯುತ್ತಿರುವ ಬಗ್ಗೆ ತಹಶೀಲ್ದಾರ್, ಜಿಲ್ಲಾಧಿಕಾರಿ, ಸಣ್ಣ ನೀರಾವರಿ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಿಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ ಎಂದು ಆಕ್ರೋಶ ವ್ಯಕ್ತಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.