ADVERTISEMENT

ಹೊಸದುರ್ಗ | ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ: ಕೆ.ಎಸ್. ಕಲ್ಮಠ್

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 7:27 IST
Last Updated 18 ಜನವರಿ 2026, 7:27 IST
ಹೊಸದುರ್ಗದಲ್ಲಿ ಹಿಂದೂ ಸಂಗಮ ಕಾರ್ಯಕ್ರಮದ ಅಂಗವಾಗಿ ಶನಿವಾರ ಬೈಕ್ ರ್‍ಯಾಲಿ ನಡೆಯಿತು 
ಹೊಸದುರ್ಗದಲ್ಲಿ ಹಿಂದೂ ಸಂಗಮ ಕಾರ್ಯಕ್ರಮದ ಅಂಗವಾಗಿ ಶನಿವಾರ ಬೈಕ್ ರ್‍ಯಾಲಿ ನಡೆಯಿತು    

ಹೊಸದುರ್ಗ: ‘ಪಟ್ಟಣದಲ್ಲಿ ಜ. 19ರದು ನಡೆಯಲಿರುವ ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಬಿರುಸಿನಿಂದ ಸಿದ್ಧತೆ ಕಾರ್ಯ ನಡೆಯುತ್ತಿದೆ. ಅಂಗಡಿ ಮುಂಗಟ್ಟುಗಳು ತಳಿರು– ತೋರಣದಿಂದ ಕಂಗೊಳಿಸುತ್ತಿವೆ’ ಎಂದು ಹಿಂದೂ ಸಂಗಮ ಕಾರ್ಯಕ್ರಮ ಆಯೋಜನೆ ಸಮಿತಿ ಅಧ್ಯಕ್ಷ ಕೆ.ಎಸ್. ಕಲ್ಮಠ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರಂಭವಾಗಿ 100 ವರ್ಷ ಪೂರೈಸಿದ ಅಂಗವಾಗಿ ಈಗಾಗಲೇ ಪಥಸಂಚಲನ ಕಾರ್ಯಕ್ರಮ ನಡೆದಿದೆ. ಸದ್ಯ ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ಜ. 19ರಂದು ಮಧ್ಯಾಹ್ನ 2ಕ್ಕೆ ಗಣಪತಿ ದೇವಾಲಯದ ಬಳಿ ಗೋಪೂಜೆ ಮೂಲಕ ಶೋಭಾಯಾತ್ರೆ ಆರಂಭವಾಗಲಿದೆ’ ಎಂದು ಹೇಳಿದರು.

ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಬೆಲಗೂರಿನ ಮಾರುತಿ ಪೀಠದ ವಿಜಯ ಮಾರುತಿ ಶರ್ಮಾ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಗದೀಶ್ ಕಾರಂತ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.

ADVERTISEMENT

ಪಟ್ಟಣದ ಹಲವೆಡೆ ದೇವಾಲಯಗಳಿಂದ ಗಂಗಾಪೂಜೆ ಮೂಲಕ ಕುಂಭಮೇಳ ನಡೆಯಲಿದೆ. ಮಹಿಳೆಯರು ಕುಂಭ ಹೊತ್ತು ಶೋಭಾಯಾತ್ರೆಯಲ್ಲಿ ಭಾಗವಹಿಸುವರು. ಶೋಭಾಯಾತ್ರೆ ನಡೆಯುವ ಮಾರ್ಗಗಳಲ್ಲಿ ವಿವಿಧ ಸಂಘಟನೆಗಳು ಅಲ್ಲಲ್ಲಿ ಮಜ್ಜಿಗೆ, ಲಘು ಪಾನೀಯ ಮತ್ತು ಉಪಾಹಾರ ನೀಡುವರು ಎಂದು ಮಾಹಿತಿ ನೀಡಿದರು.

ಪಟ್ಟಣವೆಲ್ಲ ಕೇಸರಿಮಯ: ಪಟ್ಟಣದ ವೀರಭದ್ರೇಶ್ವರ ದೇವಾಲಯದಿಂದ ಹಿಡಿದು ತರೀಕೆರೆ ರಸ್ತೆ, ಹೊಳಲ್ಕೆರೆ ರಸ್ತೆ, ಹಿರಿಯೂರು ವೃತ್ತ, ಹುಳಿಯಾರು ವೃತ್ತ ಸೇರಿದಂತೆ ಎಲ್ಲ ಕಡೆ ಕೇಸರಿ ಬಾವುಟಗಳು ರಾರಾಜಿಸುತ್ತಿವೆ. ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಲೇಪಾಕ್ಷಿ ವೃತ್ತಗಳಲ್ಲಿ ಕೇಸರಿ ಬಣ್ಣದ ವಸ್ತ್ರಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ಮುಖ್ಯ ರಸ್ತೆಗಳಲ್ಲಿ ದಾರಿಯುದ್ದಕ್ಕೂ ತಿರುಪತಿ ತಿಮ್ಮಪ್ಪ, ಧರ್ಮಸ್ಥಳ ಮಂಜುನಾಥ ಸ್ವಾಮಿ, ಸ್ವಾಮಿ ವಿವೇಕಾನಂದರ, ರಾಮಮಂದಿರ, ಹೀಗೆ ಹಲವು ಪುರಾತನ ದೇವಾಲಯ ಚಿತ್ರಗಳು, ಭಾರತಮಾತೆ, ಶಿವಾಜಿ ಸೇರಿ ಹಲವು ಗಣ್ಯ ವ್ಯಕ್ತಿಗಳು, ಇತಿಹಾಸ ಪ್ರಸಿದ್ಧ ನೆಲೆಗಳು, ಪುರಾತನ ಕಾಲದ ದೇವಾಲಯಗಳ ಚಿತ್ರಣಗಳ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತ ಕೋರುತ್ತಿವೆ.

ಹಿಂದೂ ಸಂಗಮ ಆಯೋಜನೆ ಸಮಿತಿ ಕಾರ್ಯದರ್ಶಿ ವಾಸುದೇವ, ನಿರ್ದೇಶಕರಾದ ಸುನೀತಾ ರಾಯ್ಕರ್, ಪರಮೇಶ್ ಜಿ, ಪನ್ನಿಗ ರಾಯ್ಕರ್, ಯೋಗೇಶ್, ಸಿಂಧೂ ಅಶೋಕ್, ಕೊಂಡಾಪುರ ಮಂಜುನಾಥ್ ಸೇರಿ ಹಲವರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.