
ಪ್ರಜಾವಾಣಿ ವಾರ್ತೆ
ಹೊಸದುರ್ಗ: ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ಬುಧವಾರ ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಸ್ವತ್ತು ಕಳವು ಆರೋಪಿಗಳ ಪರೇಡ್ ನಡೆಸಲಾಯಿತು.
ರಾತ್ರಿ ವೇಳೆ ಅನುಮಾನಾಸ್ಪದವಾಗಿ ತಿರುಗಾಡದಂತೆ, ಮುಂದೆ ಯಾವುದೇ ರೀತಿಯ ಕಳವು ಪ್ರಕರಣದಲ್ಲಿ ಭಾಗಿಯಾಗದಂತೆ ಪೋಲಿಸ್ ಅಧಿಕಾರಿಗಳು ಎಚ್ಚರಿಕೆ ನೀಡಿದರು.
60 ಆರೋಪಿಗಳ ವಿಳಾಸ, ಕೆಲಸದ ವಿವರ ಹಾಗೂ ಸಂಪರ್ಕ ಸಂಖ್ಯೆಯನ್ನು ಪಡೆದುಕೊಳ್ಳಲಾಯಿತು. ಕಳೆದ 10 ವರ್ಷಗಳಿಂದ ಯಾವುದೇ ಪ್ರಕರಣದಲ್ಲಿ ಭಾಗಿಯಾಗದವರ ಪಟ್ಟಿಯನ್ನು (ಎಂ.ಒ.ಬಿ.) ಬಿಡುಗಡೆ ಮಾಡಲಾಯಿತು.
ಇನ್‌ಸ್ಪಕ್ಟರ್ ಕೆ.ಟಿ. ರಮೇಶ್, ಪಿ.ಎಸ್.ಐಗಳಾದ ಮಹೇಶ್, ಶ್ರೀಶೈಲ, ಪೊಲೀಸ್ ಇಲಾಖೆ ಸಿಬ್ಬಂದಿ ಪ್ರೇಮ್, ಗಂಗಾಧರ್, ಉಮೇಶ್ ಇದ್ದರು.