
ಹೊಸದುರ್ಗ: ಹೊಸದುರ್ಗದಲ್ಲಿಯೂ ಬಹಳಷ್ಟು ರಂಗಾಸಕ್ತರಿದ್ದು, ಕಲೆಯ ಪ್ರದರ್ಶನಕ್ಕೆ ಭವ್ಯ ರಂಗಮಂದಿರ ನಿರ್ಮಾಣವಾಗಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪಿ.ಎಲ್.ಲೋಕೇಶ್ವರಪ್ಪ ಒತ್ತಾಯಿಸಿದರು.
ನಿಜಲಿಂಗಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಹಾಗೂ ಸಮಾನ ಮನಸ್ಕರ ವೇದಿಕೆ ವತಿಯಿಂದ ಪಟ್ಟಣದ ಅಶೋಕ ರಂಗಮಂದಿರದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಸೋಮವಾರ ಆಯೋಜಿಸಿದ್ದ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರದರ್ಶನದ ಮುನ್ನ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಶಾಂತಿ, ಸಹನೆ, ಪ್ರೀತಿಯಿಂದ ಮನಸ್ಸನ್ನು ಹೇಗೆ ಗೆಲ್ಲಬೇಕೆಂದು ಗಾಂಧೀಜಿ ತೋರಿಸಿಕೊಟ್ಟಿದ್ದಾರೆ. ಮಹಾನೀಯರ ಆದರ್ಶಗಳ ಬಗ್ಗೆ ಹೇಳುವುದರಲ್ಲಿ ಮುಂದಿದ್ದು, ಅನುಸರಿಸುವುದರಲ್ಲಿ ಹಿಂದಿದ್ದೇವೆ. ಅವರ ತತ್ವಗಳು ಪಾಲನೆಯಾಗಬೇಕು. ನಾಟಕ ಮನುಷ್ಯನಲ್ಲಿ ಗುಣಾತ್ಮಕ ಬದಲಾವಣೆಯನ್ನು ತರುವಂತಹ ಪ್ರಭಾವಿ ಮತ್ತು ಪರಿಮಾಣಾತ್ಮಕ ಮಾಧ್ಯಮವಾಗಿದ್ದು, ಇಂದಿಗೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ’ ಎಂದು ಕಸಾಪ ಮಾಜಿ ಅಧ್ಯಕ್ಷ ಪಿ.ಎಲ್. ಲೋಕೇಶ್ವರಪ್ಪ ಅಭಿಪ್ರಾಯಪಟ್ಟರು.
ಚಿಂತಕ ಎಚ್.ಎಸ್.ನವೀನ್ ಕುಮಾರ್ ಮಾತನಾಡಿ, ‘ಗಾಂಧೀಜಿಯವರು ದೇಶದ ಸ್ವಾತಂತ್ರ್ಯ ಚಳವಳಿಯನ್ನು ಹೇಗೆ ಕಟ್ಟಿದರು ಎನ್ನುವ ಐತಿಹಾಸಿಕ ಸತ್ಯವನ್ನು ನಮ್ಮೊಳಗೊಬ್ಬ ಗಾಂಧಿ ತೆರೆದಿಡುವ ನಾಟಕವಾಗಿದೆ. ಇಲ್ಲಿ ಗಾಂಧಿ ಪ್ರತಿಯೊಂದು ಪಾತ್ರಗಳ ಮೂಲಕ, ಬಳಸಲಾಗಿರುವ ವಿಶಿಷ್ಟ ರಂಗ ಪರಿಕರಗಳ ಮೂಲಕ ಮತ್ತೆ ಜೀವಂತಗೊಳ್ಳುತ್ತಾರೆ. ನಾಟಕಕ್ಕೆ ವಿಶಿಷ್ಟವಾದ ಸಂಕೇತಗಳ ಭಾಷೆಯಿದೆ. ಬಹಳ ಗಟ್ಟಿಯಾದ ಸಂಭಾಷಣೆಗಳ ಶಕ್ತಿಯಿದೆ’ ಎಂದರು.
ವೇದಿಕೆ ಕಾರ್ಯಕ್ರಮದ ನಂತರ ಡಿ.ಎಸ್.ಚೌಗಲೆ ರಚನೆಯ, ರಂಗಕರ್ಮಿ ಚಿದಂಬರರಾವ್ ಜಂಬೆ ಅವರು ನಿರ್ದೇಶಿಸಿರುವ ‘ನಮ್ಮೊಳಗೊಬ್ಬ ಗಾಂಧಿ’ ನಾಟಕವನ್ನು ಶಿವಮೊಗ್ಗದ ರೆಪರ್ಟರಿ ಕಲಾವಿದರು ಪ್ರದರ್ಶಿಸಿದರು.
ಎಸ್.ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಅಧಕ್ಷ ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಾನ ನಮಸ್ಕಾರ ವೇದಿಕೆಯ ನಿಸಾರ್ ಅಹಮ್ಮದ್, ಎಸ್. ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್. ಕಲ್ಮಠ್, ಸಾಹಿತಿ ನಾಗತಿಹಳ್ಳಿ ಮಂಜುನಾಥ್, ಮುಖಂಡರುಗಳಾದ ಸುಮತಿ ಕುಮಾರ್, ಕಾಚಾಪುರ ರಂಗಪ್ಪ ಮತ್ತು ಕಿರಣ್ ಕುಮಾರ್ ಹಲವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.