ಹೊಸನಗರ: ತಾಲ್ಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಚ್ಚಿಗೆಬೈಲು ಸಮೀಪದ ಶ್ರವಣ ಕೆರೆ ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಿದೆ.
‘ನಮ್ಮೂರು ನಮ್ಮ ಕೆರೆ’ ಘೋಷವಾಕ್ಯದ ಅಡಿಯಲ್ಲಿ ಕೆರೆ ಅಚ್ಚುಕಟ್ಟು ಪ್ರದೇಶದ ಗ್ರಾಮಸ್ಥರು ಒಟ್ಟಾಗಿ ತಮ್ಮೂರಿಗೆ ನೀರಿಗೆ ಆಸರೆಯಾಗಿರುವ ಶ್ರವಣ ಕೆರೆಯನ್ನು ಅಭಿವೃದ್ಧಿಪಡಿಸಲು ತೊಟ್ಟಿದ್ದ ಸಂಕಲ್ಪದ ಫಲವಾಗಿ ಆರಂಭಗೊಂಡ ಕಾಮಗಾರಿ ಇದೀಗ ಭರದಿಂದ ನಡೆಯುತ್ತಿದೆ. ಇಷ್ಟು ದಿನ ಹೂಳು ತುಂಬಿ ಹಾಳು ಬಿದ್ದಿದ್ದ ಕೆರೆ ಅಂಗಳದಲ್ಲೀಗ ಲಾರಿ, ಟಿಪ್ಪರ್, ಜೆಸಿಬಿ ಯಂತ್ರಗಳ ಚಟುವಟಿಕೆ ಜೋರಾಗಿದ್ದು, ಹೊಸ ನಿರೀಕ್ಷೆ ಹುಟ್ಟಿಸಿದೆ.
ಶ್ರವಣ ಕೆರೆ ಅಂದಾಜು 80 ಎಕರೆಗೂ ಹೆಚ್ಚು ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. 35 ಕುಟುಂಬಗಳು ಕೆರೆಯ ನೀರನ್ನೇ ನೆಚ್ಚಿಕೊಂಡಿವೆ. ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಕೆರೆಯೂ ಬತ್ತಲು ಆರಂಭಿಸಿತು. ಅಳಿದುಳಿದ ನೀರು ರೈತರಿಗೆ ಸಾಕಾಗುತ್ತಿರಲಿಲ್ಲ. ಹೂಳು ತುಂಬಿದ್ದರಿಂದ ಕೆರೆ ಇದ್ದೂ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿತ್ತು.
ಸಾರ ಮುಂದಾಳತ್ವ: ಶ್ರವಣ ಕೆರೆ ಅಭಿವೃದ್ಧಿಪಡಿಸಲು ಉದ್ದೇಶಿಸಿದ ರೈತರು ಸಮೀಪದ ‘ಸಾರ’ ಸಂಸ್ಥೆಯ ಮೊರೆ ಹೋದರು. ಸಂಸ್ಥೆಯ ಪದಾಧಿಕಾರಿಗಳನ್ನು ಭೇಟಿಯಾಗಿ, ಕೆರೆಯ ಸಮಸ್ಯೆಯನ್ನು ನಿವೇದಿಸಿಕೊಂಡರು. ಸಾರ ಸಂಸ್ಥೆ ಈ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಯೋಜನೆ ರೂಪಿಸಿತು. ಎಸಿಐ ವಲ್ಡ್ ವೈಡ್ ಸಂಸ್ಥೆಯೂ ಕೈಜೋಡಿಸಿತು. ಈ ಎಲ್ಲ ಪ್ರಯತ್ನದ ಫಲವಾಗಿ ಕೆರೆ ಕಾಯಕಲ್ಪದ ಕೈಂಕರ್ಯಕ್ಕೆ ಮುನ್ನಡಿ ಇಡಲಾಯಿತು.
₹9 ಲಕ್ಷ ವೆಚ್ಚದ ಕಾಮಗಾರಿ: ‘ನೀರು ಅತ್ಯಮೂಲ್ಯವಾದದ್ದು. ರೈತರಿಗೆ ನೀರು ಒದಗಿದರೆ ಅವರ ಬದುಕು ಹಸನಾಗುವದರಲ್ಲಿ ಎರಡು ಮಾತಿಲ್ಲ. ಗ್ರಾಮಸ್ಥರೆಲ್ಲ ಒಟ್ಟಾಗಿ ಚರ್ಚಿಸಿ, ಕೆರೆಯನ್ನು ಉಳಿಸಿಕೊಳ್ಳುವ ತೀರ್ಮಾನಕ್ಕೆ ಬಂದೆವು. ‘ಸಾರ’ ಸಂಸ್ಥೆಯ ನೇತೃತ್ವದಲ್ಲಿ ಶ್ರವಣ ಕೆರೆ ಅಭಿವೃದ್ಧಿ ಕಾಮಗಾರಿ ಶುರು ಮಾಡಿದೆವು. ಸುತ್ತಲಿನ ಗ್ರಾಮಸ್ಥರಿಗೆ ಮಾತ್ರವಲ್ಲದೆ, ಪ್ರಾಣಿ, ಪಕ್ಷಿಗಳಿಗೆ ಬಾಯರಿಕೆಯನ್ನೂ ನೀಗಿಸುವುದು ನಮ್ಮ ಉದ್ದೇಶ. ₹9 ಲಕ್ಷಕ್ಕೂ ಹೆಚ್ಚು ವೆಚ್ಚವಾಗುವ ಅಂದಾಜು ಇದೆ. ಎಲ್ಲರ ಶ್ರಮದ ಫಲವಾಗಿ ಕೆರೆಯಲ್ಲಿ ನೀರು ತುಂಬಿ ಸಮೃದ್ಧಿಯ ಕಾಲ ಬರಲಿದೆ ಎಂಬ ಆಶಾಭಾವ ಇದೆ’ ಎಂದು ಮಾಹಿತಿ ನೀಡುತ್ತಾರೆ ಶ್ರವಣ ಕೆರೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ. ಪಿ. ಹೆಗಡೆ.
ಶ್ರೀಗಳ ಮೆಚ್ಚುಗೆ: ಕಚ್ಚಿಗೆಬೈಲು ಗ್ರಾಮದ ಶ್ರವಣ ಕೆರೆ ಜೀರ್ಣೋದ್ಧಾರ ಕುರಿತು ಮೆಚ್ಚುಗೆ ಸೂಚಿಸಿದ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಕೆರೆ ಅಂಗಳಕ್ಕೆ ಭೇಟಿ ನೀಡಿ, ಗ್ರಾಮಸ್ಥರೆಲ್ಲರೂ ಸೇರಿ ತಮ್ಮ ಗ್ರಾಮದ ಕೆರೆ ಅಭಿವೃದ್ಧಿಪಡಿಸಲು ಮುಂದಾಗಿರುವುದು ನಿಜಕ್ಕೂ ಸ್ವಾಗತಾರ್ಹ ನಡೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನಮ್ಮೂರ ಶ್ರವಣ ಕೆರೆಯ ಹೂಳೆತ್ತಿ ಸುಂದರ ಕೆರೆಯನ್ನಾಗಿ ರೂಪಿಸಬೇಕು ಎಂಬುದು ಬಹು ವರ್ಷದ ಕನಸಾಗಿತ್ತು. ಇದಕ್ಕೆ ಗ್ರಾಮಸ್ಥರೆಲ್ಲ ಕೈಜೋಡಿಸಿದ್ದಾರೆ. ಸಾರ ಸಂಸ್ಥೆ ನೇತೃತ್ವ ವಹಿಸಿರುವುದು ನಮಗೆಲ್ಲ ಹರ್ಷ ತಂದಿದೆವಿಶ್ವೇಶ್ವರ ಭಟ್ ಕಚ್ಚಿಗೆಬೈಲು ನಿವಾಸಿ
ಗ್ರಾಮದ ಜೀವಸೆಲೆಯಂತಿರುವ ಕೆರೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ‘ನಮ್ಮೂರು ನಮ್ಮ ಕೆರೆ’ ಹೆಸರಿನ ಯೋಜನೆ ರೂಪಿಸಿ ಗ್ರಾಮಸ್ಥರಿಗೆ ಸಂಪೂರ್ಣ ಸಹಕಾರ ನೀಡುತ್ತಿರುವ ತಾಲ್ಲೂಕಿನ ದೊಂಬೆಕೊಪ್ಪದ ‘ಸಾರ’ ಸಂಸ್ಥೆ ಈ ಭಾಗದ ರೈತರಿಗೆ ಆಶಾಕಿರಣವಾಗಿದೆ. ಸಂಸ್ಥೆಯು ಈ ಭಾಗದಲ್ಲಿ ಸಾಕಷ್ಟು ಕೆರೆಗಳನ್ನು ಅಭಿವೃದ್ಧಿಪಡಿಸಿದೆ. ಕಾರ್ಯಯೋಜನೆಯಲ್ಲಿ ಗ್ರಾಮಸ್ಥರನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಸಂಸ್ಥೆಯು ನೆಲ–ಜಲದ ಕುರಿತು ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.