ADVERTISEMENT

ನಾಲೆಯಿಂದ ನೀರು; ಐಐಎಸ್‌ಸಿ ಹಸಿರು ನಿಶಾನೆ

ವಿನ್ಯಾಸಕ್ಕೆ ಒಪ್ಪಿಗೆ ಸಿಕ್ಕಿದೆ, ಕಾಮಗಾರಿ ಇಂದಿನಿಂದಲೇ ಪುನರಾರಂಭ: ಆರ್‌ಡಬ್ಲ್ಯುಎಸ್‌ಎಸ್

ವೆಂಕಟೇಶ ಜಿ.ಎಚ್.
Published 1 ಜುಲೈ 2025, 7:53 IST
Last Updated 1 ಜುಲೈ 2025, 7:53 IST
ಜಲಜೀವನ್‌ ಮಿಷನ್ ಅಡಿ ಕುಡಿಯುವ ನೀರಿನ ಯೋಜನೆಗೆ ಬಿಆರ್‌ಪಿಯ ಭದ್ರಾ ನಾಲೆಯಿಂದ ಕೈಗೆತ್ತಿಕೊಂಡಿದ್ದ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದು
ಜಲಜೀವನ್‌ ಮಿಷನ್ ಅಡಿ ಕುಡಿಯುವ ನೀರಿನ ಯೋಜನೆಗೆ ಬಿಆರ್‌ಪಿಯ ಭದ್ರಾ ನಾಲೆಯಿಂದ ಕೈಗೆತ್ತಿಕೊಂಡಿದ್ದ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದು   

ಶಿವಮೊಗ್ಗ: ಭದ್ರಾ ಬಲದಂಡೆ ನಾಲೆಯಿಂದ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ತಜ್ಞರ ತಂಡ ಹಸಿರು ನಿಶಾನೆ ತೋರಿದೆ. 

ಹೀಗಾಗಿ ಸ್ಥಗಿತಗೊಂಡಿರುವ ಯೋಜನೆಯ ಕಾಮಗಾರಿಯನ್ನು ಮಂಗಳವಾರದಿಂದ ಪುನರಾರಂಭಿಸಲು ಗ್ರಾಮೀಣ ಕುಡಿಯುವ ನೀರು ಹಾಗೂ ನೈಮಲ್ಯ ಇಲಾಖೆ (ಆರ್‌ಡಬ್ಲ್ಯುಎಸ್‌ಎಸ್) ಸಿದ್ಧತೆ ನಡೆಸಿದೆ. 

‘ಬಲದಂಡೆ ನಾಲೆಯಿಂದ ಬಿಆರ್‌ಪಿಯಲ್ಲಿನ ಉದ್ದೇಶಿತ ಶುದ್ಧೀಕರಣ ಘಟಕಕ್ಕೆ ನೀರು ಒಯ್ಯಲು ಜಲಜೀವನ್ ಮಿಷನ್ ರೂಪಿಸಿರುವ ವಿನ್ಯಾಸ ಸರಿಯಾಗಿಯೇ ಇದೆ. ಭದ್ರಾ ಜಲಾಶಯದ ಸುರಕ್ಷತೆಗೆ ಹಾಗೂ ಬಲದಂಡೆ ನಾಲೆಗೆ ಇದರಿಂದ ಯಾವುದೇ ಧಕ್ಕೆ ಇಲ್ಲ. ವೈಜ್ಞಾನಿಕವಾಗಿಯೇ ಯೋಜನೆ ರೂಪಿಸಲಾಗಿದೆ. ಅದರಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲ ಎಂದು ಐಐಎಸ್‌ಸಿ ತಜ್ಞರು ವರದಿಯಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಚಿತ್ರದುರ್ಗ ವಿಭಾಗದ ಸೂಪರಿಂಟೆಂಡೆಂಟ್ ಎಂಜಿನಿಯರ್ ಎಂ.ಬಸನಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ಕುಡಿಯುವ ನೀರು ಒಯ್ಯಲು ಯೋಜನೆಯ ವಿನ್ಯಾಸ ರೂಪಿಸುವಾಗ ಇಲಾಖೆಯಿಂದಲೂ ಬೇರೆಬೇರೆ ಪರೀಕ್ಷೆ ನಡೆಸಿ ಜಲಾಶಯ ಮತ್ತು ನಾಲೆಯ ಸುರಕ್ಷತೆಯ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯಲಾಗಿತ್ತು. ಅದಕ್ಕೆ ಈಗ ಅನುಮೋದನೆ ದೊರೆತಿದೆ ಎಂದು ಅವರು ಹೇಳಿದರು. 

‘ಬಲದಂಡೆ ನಾಲೆಯ ಕೊನೆಯ ಭಾಗದ ರೈತರಿಗೆ ನೀರು ಹೋಗುತ್ತದೆಯೇ ಇಲ್ಲವೇ ಎಂಬ ವಿಚಾರದಲ್ಲಿ ನಾವು (ಜಲಜೀವನ ಮಿಷನ್) ಏನನ್ನೂ ಹೇಳುವುದು ಸರಿಯಲ್ಲ. ಜಲಾಶಯದ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳೇ ಅದನ್ನು ಸ್ಪಷ್ಟಪಡಿಸಬೇಕು’ ಎಂದರು.

ಕೊನೆಯ ಭಾಗಕ್ಕೆ ತೊಂದರೆ ಇಲ್ಲ: 

‘ನಾಲೆಯ ಅರಂಭಿಕ ಸ್ಥಳದಲ್ಲಿಯೇ ನೀರು ತೆಗೆಯುತ್ತಿರುವುದು ಹಾಗೂ ಈಗ ಹರಿಸುತ್ತಿರುವ 2,650 ಕ್ಯುಸೆಕ್ ಜೊತೆಗೆ ಹೆಚ್ಚುವರಿಯಾಗಿ 30 ಕ್ಯುಸೆಕ್ ನೀರು ಸೇರಿಸುವುದರಿಂದ ನಾಲೆಯಲ್ಲಿ ಹರಿಯುವ ನೀರಿನ ವೇಗ ಕಡಿಮೆ ಆಗುವುದಿಲ್ಲ ಎಂದು ಐಐಎಸ್‌ಸಿ ತಜ್ಞರ ತಂಡ ವರದಿಯಲ್ಲಿ ಉಲ್ಲೇಖಿಸಿದೆ‘ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕಾಮಗಾರಿಯ ಸ್ಥಳದಲ್ಲಿ ಫ್ಲೋ ಮೀಟರ್ ಅಳವಡಿಸುವುದರಿಂದ, ಅದನ್ನು ನಿರಂತರವಾಗಿ ನಿರ್ವಹಣೆ (Moniter) ಮಾಡುವುದರಿಂದ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಕುಡಿಯುವ ನೀರಿನ ಯೋಜನೆಗೆ ಹರಿಯಲು ಸಾಧ್ಯವಾಗುವುದಿಲ್ಲ. ನಾಲೆಯಿಂದ ಹನಿ ನೀರು ಹೆಚ್ಚು ಹರಿದರೂ, ದಾಖಲಾಗುತ್ತದೆ. ಇದನ್ನೂ ಐಐಎಸ್‌ಸಿ ತಂಡ ಪರಿಗಣಿಸಿದೆ. ಹೀಗಾಗಿ ಭದ್ರಾ ಬಲದಂಡೆ ನಾಲೆಯ ಕೊನೆಯ ಭಾಗದ ರೈತರು ವದಂತಿಗಳಿಗೆ ಕಿವಿಗೊಟ್ಟು ಅನಗತ್ಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ತಿಳಿಸಿದರು.

ಐಐಎಸ್‌ಸಿ ತಜ್ಞರ ತಂಡದ ವರದಿ ಮಂಗಳವಾರ ಬೆಳಿಗ್ಗೆ ಅಧಿಕೃತವಾಗಿ ನಮ್ಮ ಕೈಸೇರಲಿದೆ. ನಂತರ ಸ್ಥಗಿತಗೊಂಡಿರುವ ಕಾಮಗಾರಿ ಪುನಃ ಆರಂಭಿಸಿ ಅದಕ್ಕೆ ವೇಗ ನೀಡಲಾಗುವುದು
ಎಂ.ಬಸವನಗೌಡ ಎಸ್‌.ಇ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಚಿತ್ರದುರ್ಗ ವಿಭಾಗ

ಐಸಿಸಿ ಸಭೆ ನಡೆಸಿ ನಾಲೆಗೆ ನೀರು; ಕಾಡಾ ‘ಭದ್ರಾ ಬಲದಂಡೆ ನಾಲೆಗೆ ಜುಲೈ 15ಕ್ಕೆ ನೀರು ಹರಿಸುವ ವಾಡಿಕೆ ಏನೂ ಇಲ್ಲ. ಜಲಾಶಯದಲ್ಲಿ ನೀರಿನಮಟ್ಟ ಹಾಗೂ ಮಳೆಯ ಪ್ರಮಾಣ ಆಧರಿಸಿ ಹಿಂದೆಲ್ಲ ನೀರು ಹರಿಸಿದ್ದೇವೆ. ಐಸಿಸಿ ಸಭೆ ನಡೆಸಿ ಅಲ್ಲಿ ತೀರ್ಮಾನ ಕೈಗೊಂಡು ಭದ್ರಾ ನಾಲೆಗೆ ನೀರು ಹರಿಸಲಿದ್ದೇವೆ’ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ (ಕಾಡಾ) ಡಾ.ಕೆ.ಪಿ.ಅಂಶುಮಂತ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

  ‘ಕಳೆದ ವರ್ಷ ಜುಲೈ 29ರಂದು ಐಸಿಸಿ ಸಭೆ ನಡೆಸಿ ನಂತರ ನಾಲೆಗೆ ನೀರು ಹರಿಸಲಾಗಿತ್ತು. ನಮಗೂ ಅಚ್ಚುಕಟ್ಟು ಪ್ರದೇಶದ ಕೃಷಿ ಚಟುವಟಿಕೆ ಬಗ್ಗೆ ಸ್ವಲ್ಪ ಜ್ಞಾನ ಇದೆ. ಈ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ ರೈತರಿಗೆ ತೊಂದರೆ ನೀಡಲು ಬಯಸುವುದಿಲ್ಲ. ಬಲದಂಡೆ ನಾಲೆಯನ್ನು ದುರಸ್ತಿಪಡಿಸಿ ಅಲ್ಲಿಂದಲೇ ನೀರು ಹರಿಸಲಾಗುವುದು. ಆ ಬಗ್ಗೆ ಐಸಿಸಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.