ADVERTISEMENT

ಚಿತ್ರದುರ್ಗ ಜಿಲ್ಲೆಯಾದ್ಯಂತ ಕ್ಲಬ್‌ಗಳ ಕಳ್ಳಾಟ; ತೀವ್ರಗೊಂಡ ಜೂಜಾಟ

ಜಿಲ್ಲೆಯಲ್ಲಿ ಹೆಚ್ಚಿದ ಅನಧಿಕೃತ ಚಟುವಟಿಕೆ, ಪೊಲೀಸರ ದಾಳಿಯಿಂದಲೂ ನಿಯಂತ್ರಣಕ್ಕೆ ಬಾರದ ಅಕ್ರಮ

ಎಂ.ಎನ್.ಯೋಗೇಶ್‌
Published 28 ಜುಲೈ 2025, 6:52 IST
Last Updated 28 ಜುಲೈ 2025, 6:52 IST
ಹಳೇ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಬಿಗ್‌ಬಾಸ್‌ ಕ್ಲಬ್‌
ಹಳೇ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಬಿಗ್‌ಬಾಸ್‌ ಕ್ಲಬ್‌   

ಚಿತ್ರದುರ್ಗ: ಜಿಲ್ಲೆಯಾದ್ಯಂತ ಕ್ಲಬ್‌ಗಳು ಅಕ್ರಮ ಜೂಜಾಟದ ಅಡ್ಡೆಗಳಾಗುತ್ತಿದ್ದು, ಅಮಾಯಕರು ಜೀವ ಹಾಗೂ ಜೀವನ ಕಳೆದುಕೊಳ್ಳುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಉದ್ಯಮಿಗಳು, ಪ್ರಭಾವಿಗಳ ಪ್ರೋತ್ಸಾಹದಿಂದಲೇ ಕ್ಲಬ್‌ಗಳು ತಲೆ ಎತ್ತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಿಂದ ಕೂಗಳತೆ ದೂರದಲ್ಲಿರುವ ದುರ್ಗದ ಸಿರಿ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಜೂಜಾಟದ ಅಡ್ಡೆ ಮೇಲೆ ಪೊಲೀಸರು ಈಚೆಗೆ ದಾಳಿ ನಡೆಸಿ 28 ಆರೋಪಿಗಳನ್ನು ಬಂಧಿಸಿದ್ದರು. ನಗರ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚು ಕ್ಲಬ್‌ಗಳಿದ್ದು, ಅಲ್ಲಿ ಅಕ್ರಮವಾಗಿ ಜೂಜಾಡುತ್ತಿರುವ ವಿಷಯವನ್ನು ಪತ್ತೆ ಹಚ್ಚಿದ್ದಾರೆ. ಅಕ್ರಮವಾಗಿ ನಿಷೇಧಿತ ಅಂದರ್‌–ಬಾಹರ್‌, ಹೈಸ್ಟೇಕ್‌ ಇಸ್ಪೀಟ್‌ ಆಡಿಸುತ್ತಿರುವುದೂ ಗೊತ್ತಾಗಿದೆ. 

ಹಲವು ವರ್ಷಗಳಿಂದ ನಡೆಯುತ್ತಿರುವ ಕೆಲವು ಕ್ಲಬ್‌ಗಳು ಕೇವಲ ಸದಸ್ಯರಿಗೆ ಮಾತ್ರ ಸೀಮಿತವಾಗಿವೆ. ಅಲ್ಲಿ ಅತಿಥಿಗಳಿಗೆ ಪ್ರವೇಶ ನೀಡುವುದಿಲ್ಲ. ಈಚೆಗೆ ಆರಂಭವಾಗಿರುವ ಕೆಲವು ಕ್ಲಬ್‌ಗಳಲ್ಲಿ ಜೂಜಾಟವೇ ಪ್ರಧಾನವಾಗಿದ್ದು, ಸದಸ್ಯರು ಮಾತ್ರವಲ್ಲದೇ ಅತಿಥಿಗಳಿಗೂ ಪ್ರವೇಶ ನೀಡಲಾಗುತ್ತಿದೆ. ಇದಕ್ಕೆ ಇಂತಿಷ್ಟು ಶುಲ್ಕವನ್ನೂ ನಿಗದಿ ಮಾಡಲಾಗಿದೆ. 

ADVERTISEMENT

ನಗರ ವ್ಯಾಪ್ತಿಯ ಹಳೇ ರಾಷ್ಟ್ರೀಯ ಹೆದ್ದಾರಿ, ಸರ್ವಿಸ್‌ ರಸ್ತೆಯಲ್ಲೇ ಹಲವು ಕ್ಲಬ್‌ಗಳಿದ್ದು ನಿಯಮ ಮೀರಿ ತಡರಾತ್ರಿಯವರೆಗೂ ಚಟುವಟಿಕೆ ನಡೆಸುತ್ತಿವೆ. ಇಲ್ಲಿಗೆ ಕಾಲೇಜು ವಿದ್ಯಾರ್ಥಿಗಳೂ ಭೇಟಿ ನೀಡುತ್ತಿರುವುದು ಆತಂಕಕಾರಿಯಾಗಿದೆ. ಈ ಬಗ್ಗೆ ಈಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಹಲವು ಶಾಸಕರು ಧ್ವನಿ ಎತ್ತಿದ್ದು, ಅನಧಿಕೃತ ಕ್ಲಬ್‌ ಮುಚ್ಚಿಸುವಂತೆ ಸೂಚನೆ ನೀಡಿದ್ದಾರೆ. ಆದರೂ ಕ್ಲಬ್‌ಗಳ ಹಾವಳಿ ನಿಲ್ಲದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. 

ಪೊಲೀಸರು ಸಾಕಷ್ಟು ಕ್ಲಬ್‌ಗಳ ಮೇಲೆ ದಾಳಿ ಮಾಡಿದರೂ ಪ್ರಭಾವಿಗಳ ಕಾರಣಕ್ಕೆ ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅಕ್ರಮ ಚಟುವಟಿಕೆ ನಡೆಸುತ್ತಿದ್ದರೂ, ಇಸ್ಪೀಟ್‌ ಆಡುವಾಗ ಅಪಾರ ಹಣ ಸಿಕ್ಕರೂ ಅದನ್ನು ಜಪ್ತಿ ಮಾಡಲು ಸಾಧ್ಯವಾಗುತ್ತಿಲ್ಲ. ನೆಪಕ್ಕಷ್ಟೇ ದಾಳಿ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. 

ಎಫ್‌ಐಆರ್‌ ರದ್ದುಗೊಳಿಸಿದ ಕೋರ್ಟ್‌: ಅನಧಿಕೃತವಾಗಿ ಜೂಜಾಡಿಸುವ ಕ್ಲಬ್‌ಗಳ ಜೊತೆಗೆ ಕಾನೂನು ಬದ್ಧವಾಗಿ ಚಟುವಟಿಕೆ ನಡೆಸುವ ಕ್ಲಬ್‌ಗಳೂ ಜಿಲ್ಲೆಯಲ್ಲಿವೆ.  ಜಿಲ್ಲಾಧಿಕಾರಿ ಸೇರಿದಂತೆ ಹಲವು ಸರ್ಕಾರಿ ಅಧಿಕಾರಿಗಳು ಅವುಗಳ ಆಡಳಿತ ಮಂಡಳಿಯ ಪದಾಧಿಕಾರಿಗಳಾಗಿದ್ದಾರೆ. ಮನರಂಜನಾ ಕ್ಲಬ್‌ಗಳಿಗೆ ಪೊಲೀಸರು ತಪಾಸಣೆ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಮೊದಲಿನಿಂದಲೂ ಇದೆ. ರಾಜಕೀಯ ಪ್ರಭಾವ ಇಲ್ಲದ ಕಾನೂನು ಬದ್ಧ ಕ್ಲಬ್‌ಗಳ ಬಾಗಿಲು ಮುಚ್ಚಿಸಿದ್ದಾರೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸುತ್ತಾರೆ. 

ಹೊಳಲ್ಕೆರೆ ತಾಲ್ಲೂಕಿನ ಕರ್ನಾಟಕ ಫ್ಯಾಮಿಲಿ ಅಸೋಸಿಯೇಷನ್‌ ಮನರಂಜನಾ ಕೇಂದ್ರ ಈಚೆಗೆ ಸುದ್ದಿಯಾಗಿತ್ತು. ಪೊಲೀಸರ ಕಿರುಕುಳ ಖಂಡಿಸಿ ಕೇಂದ್ರದ ಅಧ್ಯಕ್ಷ ನಾಗರಾಜ್‌ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಇದಾಗಿ ಗಂಟೆಯೊಳಗಾಗಿ ಅವರ ವಿರುದ್ಧ ‘ಪೊಲೀಸರ ಕರ್ತವ್ಯಕ್ಕೆ ಅಡ್ಡಿ’ ಆರೋಪದ ಮೇಲೆ ಎಫ್‌ಐಆರ್‌ ದಾಖಲು ಮಾಡಿ, ಬಂಧಿಸಿದ್ದರು. ನಂತರ ಜೈಲಿಗೂ ಕಳುಹಿಸಿದ್ದರು. 

ಜಾಮೀನು ಪಡೆದು ಹೊರಬಂದ ನಂತರ ಅವರು ಎಫ್‌ಐಆರ್‌ಗೆ ತಡೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌ ಪೊಲೀಸರ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಎಫ್‌ಐಆರ್‌ ರದ್ದುಗೊಳಿಸಿತ್ತು. ಪೊಲೀಸರ ಕಿರುಕುಳ ಖಂಡಿಸಿರುವ ಆಡಳಿತ ಮಂಡಳಿಯು ಸದ್ಯ ಕ್ಲಬ್‌ ಅನ್ನು ಸ್ಥಗಿತಗೊಳಿಸಿದೆ. 

‘ಕಾನೂನಾತ್ಮಕವಾಗಿ ನಾವು ಜಿಎಸ್‌ಟಿ ಪಾವತಿಸಿ ಸಂಸ್ಥೆ ನಡೆಸುತ್ತಿದ್ದೇವೆ. ನಿವೃತ್ತ ನೌಕರರು ನಮ್ಮಲ್ಲಿ ಸದಸ್ಯರಾಗಿದ್ದಾರೆ. ಪೊಲೀಸರು ದಾಳಿ ಮಾಡಿ ವೈದ್ಯಕೀಯ ಪರೀಕ್ಷೆ ನೆಪದಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರ ವಾಹನ ಜಪ್ತಿ ಮಾಡಿದ್ದಾರೆ. ಪೊಲೀಸರ ಕ್ರಮ ಸರಿಯಾದುದಲ್ಲ ಎಂದು ಈಗಾಗಲೇ ರುಜುವಾತಾಗಿದ್ದು, ಪ್ರಕರಣ ರದ್ದುಗೊಂಡಿದೆ. ನೋಟಿಸ್‌ ನೀಡದೇ ಎಫ್‌ಐಆರ್‌ ದಾಖಲಿಸಿ, ಬಂಧಿಸಿರುವ ಕ್ರಮದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಿದ್ದೇನೆ. ಪೊಲೀಸರು ಕಾನೂನು ಪಾಠ ಕಲಿಯಬೇಕಿದೆ’ ಎಂದು ಕ್ಲಬ್‌ ಅಧ್ಯಕ್ಷ ನಾಗರಾಜ್‌ ತಿಳಿಸಿದರು. 

ಲೆಕ್ಕ ಪತ್ರ ಸಲ್ಲಿಕೆ ಇಲ್ಲ: ಸಹಕಾರ ಸಂಘಗಳ ಉಪನಿಬಂಧಕರು ಮನರಂಜನಾ ಸಂಸ್ಥೆಗಳ ಹೆಸರಿನಲ್ಲಿ ಜಿಲ್ಲೆಯಾದ್ಯಂತ 50ಕ್ಕೂ ಹೆಚ್ಚು ಕ್ಲಬ್‌ಗಳಿಗೆ ಅನುಮತಿ ನೀಡಿದ್ದಾರೆ. ಬಹುತೇಕ ಪ್ರಭಾವಿಗಳೇ ತೆರೆಮರೆಯಲ್ಲಿ ಕ್ಲಬ್‌ ನಿರ್ವಹಣೆ ಮಾಡುತ್ತಿದ್ದಾರೆ. ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯಲ್ಲಿ ನೋಂದಣಿಯಾಗಿರುವ ಕ್ಲಬ್‌ಗಳು ನಿಯಮಾನುಸಾರ ಪ್ರತಿ ವರ್ಷ ಲೆಕ್ಕಪತ್ರ (ಫೈಲಿಂಗ್‌) ಸಲ್ಲಿಸಬೇಕು. ಆದರೆ ಐದಾರು ವರ್ಷಗಳಿಂದಲೂ ಕ್ಲಬ್‌ಗಳು ಯಾವುದೇ ಲೆಕ್ಕಪತ್ರ ಸಲ್ಲಿಸಿಲ್ಲ. 

‘4–5 ವರ್ಷಕ್ಕೆ ಒಮ್ಮೆ ದಂಡ ಪಾವತಿಸಲು ಸರ್ಕಾರವೇ ಅನುಮತಿ ನೀಡುತ್ತಿರುವ ಕಾರಣ ಕ್ಲಬ್‌ಗಳು ಲೆಕ್ಕಪತ್ರ ಸಲ್ಲಿಸುತ್ತಿಲ್ಲ. ಪ್ರಭಾವಿಗಳೇ ಕ್ಲಬ್‌ಗಳ ಮಾಲೀಕರಾಗಿರುವ ಕಾರಣ ಕ್ರಮ ಕೈಗೊಳ್ಳಲೂ ಸಾಧ್ಯವಾಗುತ್ತಿಲ್ಲ’ ಎಂದು ನಿವೃತ್ತ ಅಧಿಕಾರಿಯೊಬ್ಬರು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಿಂದ ಕೂಗಳತೆ ದೂರದಲ್ಲಿರುವ ದುರ್ಗದ ಸಿರಿ ಹೋಟೆಲ್‌ನ ನೋಟ

ಕ್ಲಬ್‌ನಂತಾದ ಪ್ರವಾಸಿ ತಾಣಗಳು

ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳನ್ನು ಕಿಡಿಗೇಡಿಗಳು ಇಸ್ಪೀಟ್‌ ಅಡ್ಡೆಗಳನ್ನಾಗಿ ಮಾಡಿಕೊಂಡಿದ್ದಾರೆ. ಸಂಜೆಯಾಗುತ್ತಿದ್ದಂತೆ ಐತಿಹಾಸಿಕ ಚಂದ್ರವಳ್ಳಿ ತಾಣ ಕ್ಲಬ್‌ ರೂಪ ಪಡೆಯುತ್ತಿದೆ. ಕಿಡಿಗೇಡಿಗಳು ಗುಂಪುಗುಂಪಾಗಿ ಮೊಬೈಲ್ ಬೆಳಕಿನಲ್ಲಿ ಮದ್ಯ ಸೇವನೆ ಮಾಡುತ್ತಾರೆ. ಹಗಲಿನಲ್ಲೂ ಡ್ರಗ್ಸ್‌ ಸೇವನೆ ಮಾಡಿ ಬಿದ್ದು ಒದ್ದಾಡುವವರಿಗೆ ಕೊರತೆ ಇಲ್ಲ. ಕಿಡಿಗೇಡಿಗಳ ಹಾವಳಿಯಿಂದ ಸಂಜೆ ವಾಯು ವಿಹಾರ ಮಾಡುವ ಮಕ್ಕಳು ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಕಿರಿಕಿರಿಯುಂಟಾಗಿದೆ.  ತಿಮ್ಮಣ್ಣನಾಯಕನ ಕೆರೆಗೆ ತೆರಳುವ ದಾರಿಯುದ್ದಕ್ಕೂ ಕಿಡಿಗೇಡಿಗಳು ಮದ್ಯ ಸೇವನೆ ಮಾಡುತ್ತಾ ಇಸ್ಪೀಟ್‌ ಆಡುತ್ತಿರುವ ದೃಶ್ಯಗಳು ಸಾಮಾನ್ಯ ಕಂಡು ಬರುತ್ತವೆ.  ‘ಪ್ರವಾಸಿ ತಾಣದಲ್ಲಿ ಕಿಡಿಗೇಡಿಗಳ ಹಾವಳಿ ತಪ್ಪಿಸುವಂತೆ ಹಲವು ಬಾರಿ ಪೊಲೀಸರಿಗೆ ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಚಂದ್ರವಳ್ಳಿ ಬಳಿಯ ನಿವಾಸಿಗಳು ಆರೋಪಿಸಿದರು.

ನಿಯಮಿತವಾಗಿ ಪೊಲೀಸರ ದಾಳಿ 

ಹೊಳಲ್ಕೆರೆ ತಾಲ್ಲೂಕಿನಲ್ಲಿ 5 ಮನರಂಜನಾ ಕ್ಲಬ್‌ಗಳಿದ್ದು ಕೆಲವು ಕ್ಲಬ್‌ಗಳ ಮೇಲೆ ಆಗಾಗ ದಾಳಿ ನಡೆಯುತ್ತಿದೆ. ಜೈಪುರದ ಫ್ಯಾಮಿಲಿ ಅಸೋಸಿಯೇಷನ್ ಅರೇಹಳ್ಳಿಯ ಗಾಡ್ ಗಿಫ್ಟ್ ರಿಕ್ರಿಯೇಷನ್ ಮನರಂಜನಾ ಕೇಂದ್ರ ದಾವಣಗೆರೆ ಕ್ರಾಸ್‌ ಬಳಿ ಫ್ರೆಂಡ್ಸ್ ಕ್ರೀಡಾ ಕ್ಲಬ್‌ಗಳಿವೆ.  ಚಳ್ಳಕೆರೆ ನಗರದಲ್ಲಿ ಆರು ಮನರಂಜನಾ ಕ್ಲಬ್‌ಗಳಿದ್ದು ಇವುಗಳಲ್ಲಿ ಐದು ಕ್ಲಬ್‌ಗಳು ವಿವಿಧ ಕಾರಣಗಳಿಂದ ಕಾರ್ಯಚಟುವಟಿಕೆ ಸ್ಥಗಿತಗೊಳಿಸಿವೆ. ಒಂದು‌ ಮಾತ್ರ ಕಾರ್ಯನಿರ್ವಹಿಸುತ್ತಿದೆ. ನಾಯಕನಹಟ್ಟಿ ಪಟ್ಟಣದ ಪೊಲೀಸ್ ಠಾಣೆ ಹಿಂಭಾಗದಲ್ಲಿ ಟೌನ್ ಅಸೋಸಿಯೇಷನ್ ಕ್ಲಬ್ ಕಾರ್ಯನಿರ್ವಹಿಸುತ್ತಿದೆ. ಮಾರ್ಚ್ 19ರಂದು ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಿ 15 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.  ‘ಮಾಮೂಲು ಕೊಟ್ಟ ಕ್ಲಬ್‌ಗಳ ಕಾರ್ಯಚಟುವಟಿಕೆಗೆ ಯಾವುದೇ ತೊಂದರೆ ಇಲ್ಲ. ಮಾಮೂಲಿ ಕೊಡದಿದ್ದರೆ ಅವುಗಳ ಮೇಲೆ ದಾಳಿ ಅಸ್ತ್ರ ಬಳಕೆಯಾಗುತ್ತದೆ. ನಿಯಮಾನುಸಾರ ನಡೆಯದ ಕ್ಲಬ್‌ಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ವಕೀಲ ಪ್ರತಾಪ್‌ ಜೋಗಿ ಒತ್ತಾಯಿಸಿದರು.

ಜಿಲ್ಲೆಯಾದ್ಯಂತ ಕ್ಲಬ್‌ ಹಾವಳಿ ತಡೆಗೆ ಸಾಕಷ್ಟು ಕ್ರಮ ಜರುಗಿಸಲಾಗಿದೆ. ರಮ್ಮಿ ಆಟಕ್ಕೆ ಹೈಕೋರ್ಟ್‌ ಅನುಮತಿ ಇರುವ ಕಾರಣ ಅದರ ವಿರುದ್ಧ ಯಾವುದೇ ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ.
– ಉಮೇಶ್‌ ನಾಯ್ಕ, ಎಎಸ್‌ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.