
ಚಿತ್ರದುರ್ಗ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಿದ್ಧತೆಯ ನಡುವೆಯೂ ಬಿಡುವು ಮಾಡಿಕೊಂಡು ಬಂದಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ನಗರದ ಕಮ್ಮರೆಡ್ಡಿ ಸಮುದಾಯ ಭವನದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಸಮೂಹದ ವತಿಯಿಂದ ಬುಧವಾರ ನಡೆದ ‘ಜ್ಞಾನದೇಗುಲ’ ಶೈಕ್ಷಣಿಕ ಮೇಳ ಸ್ಫೂರ್ತಿಯ ಚಿಲುಮೆಯಂತಾಯಿತು.
ಚಳಿಯ ನಡುವೆಯೂ ಬೆಳಿಗ್ಗೆಯೇ ವಿದ್ಯಾರ್ಥಿಗಳು ತಾಲ್ಲೂಕಿನ ವಿವಿಧ ಶಾಲೆಗಳಿಂದ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸರತಿ ಸಾಲಿನಲ್ಲಿ ನಿಂತು ನೋಂದಣಿ ಮಾಡಿಸಿಕೊಂಡು ಶಿಸ್ತಾಗಿ ಸಭಾಂಗಣದತ್ತ ಸಾಗಿದ್ದರು. ಸಮುದಾಯ ಭವನದ ಪ್ರವೇಶದ್ವಾರದಲ್ಲಿ ಹಾಕಲಾಗಿದ್ದ ವಿವಿಧ ವಿದ್ಯಾಸಂಸ್ಥೆಗಳ ಮಳಿಗೆಗಳಲ್ಲಿ ಸಿಬ್ಬಂದಿಯು ವಿವಿಧ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ನೀಡಿದ ಮಾಹಿತಿ ಪಡೆದರು.
ವಿವಿಧ ಶಾಲೆ, ಕಾಲೇಜುಗಳ ಭಿತ್ತಿಪತ್ರ ಪಡೆದ ವಿದ್ಯಾರ್ಥಿಗಳು ಶಿಸ್ತಿನಿಂದ ಬಂದು ಸಭಾಂಗಣದಲ್ಲಿ ಕುಳಿತರು. ವೇದಿಕೆಯ ಮೇಲಿನ ಎಲ್‌ಇಡಿ ಪರದೆಯ ಮೇಲೆ ಮೂಡಿಬರುತ್ತಿದ್ದ ವಿಡಿಯೊ ದೃಶ್ಯಾವಳಿಗಳನ್ನು ಕುತೂಹಲದ ಕಣ್ಣುಗಳಿಂದ ವೀಕ್ಷಿಸುತ್ತಿದ್ದರು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಕಲರವ, ಕರತಾಡನ ಆರಂಭವಾಯಿತು. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಅವರಿಗೆ ಜೊತೆಯಾದರು.
‘ಜ್ಞಾನದೇಗುಲ’ ಮೇಳವು ವಿದ್ಯಾರ್ಥಿಗಳ ಕುತೂಹಲಕ್ಕೆ ಕನ್ನಡಿಯಾಯಿತು. ಒತ್ತಡ ರಹಿತವಾಗಿ ಪರೀಕ್ಷೆ ಬರೆಯುವುದು ಹೇಗೆ?, ಸಮಯ ಪರಿಪಾಲನೆಯ ಪರಿ ಯಾವುದು?, ದಿನಕ್ಕೆ ಎಷ್ಟು ಹೊತ್ತು ಓದಬೇಕು?, ಭಯ, ಆತಂಕ ತೊರೆದು ಪರೀಕ್ಷಾ ಕಾಲವನ್ನು ಸಂಭ್ರಮಿಸುವುದು ಹೇಗೆ? ಎಂಬೆಲ್ಲಾ ಪ್ರಶ್ನೆಗಳಿಗೆ ಈ ಮೇಳದಲ್ಲಿ ಉತ್ತರ ದೊರೆಯಿತು. ಜೊತೆಗೆ ಎಸ್‌ಎಸ್‌ಎಲ್‌ಸಿ ನಂತರ ಆಧುನಿಕ ಕಾಲಘಟ್ಟದಲ್ಲಿ ಪಡೆಯಬಹುದಾದ ವಿವಿಧ ಕ್ಷೇತ್ರಗಳು ಹಾಗೂ ಕೋರ್ಸ್‌ಗಳ ಯಾವು? ಎಂಬ ಮಾಹಿತಿಯನ್ನೂ ಪಡೆದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಆರ್.ಮಂಜುನಾಥ್ ಮೇಳಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಈ ಬಾರಿ 23,695 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ. ಉತ್ತಮ ಫಲಿತಾಂಶ ಪಡೆಯುವುದಕ್ಕಾಗಿ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಪ್ರಜಾವಾಣಿ– ಡೆಕ್ಕನ್ ಹೆರಾಲ್ಡ್ ಬಳಗ ‘ಜ್ಞಾನದೇಗುಲ’ ಶೈಕ್ಷಣಿಕ ಮೇಳ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿರುವುದು ಸಂತಸ ತಂದಿದೆ’ ಎಂದರು.
‘ನಾನು ಬಹಳ ಸಣ್ಣ ವಯಸ್ಸಿನಿಂದಲೂ ಪ್ರಜಾವಾಣಿ ಓದುತ್ತಾ ಬಂದಿದ್ದೇನೆ. ಪತ್ರಿಕೆಯು ಶಿಕ್ಷಣಕ್ಕೆ, ವಿದ್ಯಾರ್ಥಿಗಳಿಗೆ ಸದಾ ಆದ್ಯತೆ ನೀಡುತ್ತದೆ. ವಿದ್ಯಾರ್ಥಿಗಳಿಗಾಗಿ ದಿಕ್ಸೂಚಿ ಪುಟವನ್ನೂ ನೀಡುತ್ತಿದೆ. ಜೊತೆಗೆ ‘ಜ್ಞಾನದೇಗುಲ’ ಕಾರ್ಯಕ್ರಮವನ್ನೂ ಆಯೋಜಿಸಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಂಡು ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆಯಬೇಕು. ನಾವು ಈ ಬಾರಿ ಹಲವು ಪೂರ್ವಸಿದ್ಧತಾ ಪರೀಕ್ಷೆ ನಡೆಸಿದ್ದೇವೆ. ಆ ಮೂಲಕ ವಾರ್ಷಿಕ ಪರೀಕ್ಷೆಗೆ ಸಮರೋಪಾದಿ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು.
‘ಪರೀಕ್ಷಾ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಮಾಡಬೇಕಾದ ಕೆಲಸವನ್ನು ಪ್ರಜಾವಾಣಿ– ಡೆಕ್ಕನ್ ಹೆರಾಲ್ಡ್ ಪತ್ರಿಕಾ ಸಮೂಹ ಸಂಸ್ಥೆ ಮಾಡಿದೆ. ಪರೀಕ್ಷೆಗೆ ಇನ್ನು ಕೇವಲ 53 ದಿನಗಳು ಉಳಿದಿವೆ. ‘ಜ್ಞಾನದೇಗುಲ’ ಮೇಳದಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವ ಒಳನೋಟಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಉತ್ತಮ ಅಂಕಗಳನ್ನು ಪಡೆಯಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಾ ಕಿವಿಮಾತು ಹೇಳಿದರು.
‘ನಾವು ಈಗಾಗಲೇ ವಿವಿಧ ಹಂತಗಳಲ್ಲಿ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಿದ್ದೇವೆ. ಪೂರ್ವಭಾವಿ ಪರೀಕ್ಷೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ದುರದೃಷ್ಟಕರ. ಇನ್ನೂ ಸಾಕಷ್ಟು ಸಮಯವಿದ್ದು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು. ಇಲಾಖೆ ಎಷ್ಟೇ ಪೂರಕ ಪರೀಕ್ಷೆ ನೀಡಿದರೂ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಲು ಶ್ರಮಿಸಬೇಕು’ ಎಂದರು.
‘ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಶ್ರಮಪಡಬೇಕು. ಎಸ್‌ಎಸ್‌ಎಲ್‌ಸಿ ಹಂತದಲ್ಲೇ ಅನುತ್ತೀರ್ಣವಾಗಿ ಉಳಿದರೆ ಭವಿಷ್ಯದ ಜೀವನ ಮಟ್ಟ ಕಳಪೆಯಾಗಿರುತ್ತದೆ. ಇದರಿಂದ ರಾಷ್ಟ್ರೀಯ ಜೀವನಮಟ್ಟ ಸೂಚ್ಯಂಕವೂ ಕುಸಿಯುತ್ತದೆ. ಶಿಕ್ಷಣ ಪಡೆಯದೇ ಉಳಿದ ವಿದ್ಯಾರ್ಥಿಗಳು ತಂದೆ–ತಾಯಿಗೂ ಹೊರೆಯಾಗುತ್ತಾರೆ. ಇಂದು ಸಣ್ಣ ಕಾರ್ಖಾನೆಗಳಲ್ಲೂ ಕೆಲಸ ಪಡೆಯಬೇಕಾದರೆ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಬೇಕಿದೆ’ ಎಂದರು.
ಸಮಾರಂಭದಲ್ಲಿ ಜ್ಞಾನಪೂರ್ಣ ವಿದ್ಯಾಸಂಸ್ಥೆಯ ಮುಖ್ಯಸ್ಥ ವೆಂಕಟೇಶ್ ರೆಡ್ಡಿ, ಪ್ರಜಾವಾಣಿ– ಡೆಕ್ಕನ್ ಹೆರಾಲ್ಡ್‌ನ ಡಿಜಿಎಂ ಅನಂತ್, ಎಜಿಎಂ ಪ್ರಮೋದ್ ಭಾಗವತ್, ಪ್ರಸರಣ ವಿಭಾಗದ ಮುಖ್ಯಸ್ಥ ನಂದಗೋಪಾಲ, ಪ್ರಜಾವಾಣಿ ಹಿರಿಯ ವರದಿಗಾರ ಎಂ.ಎನ್.ಯೋಗೇಶ್ ಇದ್ದರು.
ಚಿತ್ರದುರ್ಗದ ಎಸ್.ಆರ್.ಎಸ್. ರೆಸಿಡೆನ್ಸಿಯಲ್ ಪಿಯು ಕಾಲೇಜ್, ದೇವರಾಜ ಅರಸು ಶಿಕ್ಷಣ ಸಂಸ್ಥೆಯ ವೀನಸ್ ಅಕಾಡೆಮಿ, ವಿಶ್ವಮಾನವ ಪಿಯು ಕಾಲೇಜ್, ನಮ್ಮ ಎಕ್ಸ್‌ಪರ್ಟ್ ಕಾಂಪೊಸಿಟ್ ಪಿಯು ಕಾಲೇಜು, ಬಾಪೂಜಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ಶ್ರೀ ರಾಘವೇಂದ್ರ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ದೊಡ್ಡಸಿದ್ದವ್ವನಹಳ್ಳಿಯ ಜ್ಞಾನಪೂರ್ಣ ಪಿಯು ಕಾಲೇಜ್, ಹೊಸದುರ್ಗದ ಎಸ್.ನಿಜಲಿಂಗಪ್ಪ ಪಿಯು ಕಾಲೇಜ್, ಹೊಳಲ್ಕೆರೆಯ ವಾಗ್ದೇವಿ ಪಿಯು ಕಾಲೇಜ್, ದಾವಣಗೆರೆಯ ರಾಘವೇಂದ್ರ ಹೈಟೆಕ್ ಪಿಯು ಕಾಲೇಜ್ ಹಾಗೂ ಶ್ರೀ ಶಾರದಾ ಐಐಟಿ ಮತ್ತು ನೀಟ್ ಅಕಾಡೆಮಿ, ಸಿದ್ದಗಂಗಾ ಪಿಯು ಕಾಲೇಜ್, ಎಸ್‌ಆರ್‌ಕೆ ಅಕಾಡೆಮಿ, ಅಶ್ವಿನಿ ಮೆಡಿಕಲ್ ಮತ್ತು ಐಐಟಿ ಅಕಾಡೆಮಿ, ಶ್ರೀ ಚೈತನ್ಯ ಎಜುಕೇಷನಲ್ ಇನ್‌ಸ್ಟಿಟ್ಯೂಷನ್ಸ್ ಹಾಗೂ ಹುಬ್ಬಳ್ಳಿಯ ವಿದ್ಯಾನಿಕೇತನ ಸೈನ್ಸ್ ಪಿಯು ಕಾಲೇಜ್ ಪ್ರಾಯೋಜಕತ್ವ ವಹಿಸಿಕೊಂಡಿವೆ.
ಓದಿಗೆ ‘ಓಂಕಾರ’ ಹಾಕಿದ ಅಂಗಡಿ
ಶಿಕ್ಷಣ ತಜ್ಞ ವಿಜಯ್ ಕುಮಾರ್ ಅಂಗಡಿ ಅವರು ತಮ್ಮ ಪ್ರೇರಣಾದಾಯಕ ಮಾತುಗಳಿಂದ ವಿದ್ಯಾರ್ಥಿಗಳ ಮನಸೂರೆಗೊಂಡರು. ಕತೆ ಹೇಳುವ ಮೂಲಕ ಮಕ್ಕಳ ಗಮನವನ್ನು ತಮ್ಮತ್ತ ಎಳೆದುಕೊಂಡರು. ಎಲ್ಲರಿಂದಲೂ ಮೂರು ಬಾರಿ ಓಂಕಾರ ಹೇಳಿಸುವ ಮೂಲಕ ಪರೀಕ್ಷಾ ಸಿದ್ಧತೆಗೆ ಓದಿಗೆ ಓಂಕಾರ ಹಾಕಿದರು. ’ನಾನು ಇಂದಿನಿಂದ ಪ್ರತಿದಿನ ಕನಿಷ್ಠ 5 ಗಂಟೆ ಅಧ್ಯಯನದಲ್ಲಿ ತೊಡಗುತ್ತೇನೆ’ ಎಂದು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ‘ಮಕ್ಕಳ ಭವಿಷ್ಯ ಉತ್ತಮಗೊಳ್ಳಬೇಕಾದರೆ ಪ್ರಮುಖವಾಗಿ ನಾಲ್ಕು ಅಂಶಗಳನ್ನು ಮೈಗೂಡಿಸಿಕೊಳ್ಳಬೇಕು. ಜ್ಞಾನದ ಹಸಿವು ಕಲಿಯುವ ಹಂಬಲ ಓದುವ ತುಡಿತ ಮಹತ್ವಾಕಾಂಕ್ಷೆಗಳಿದ್ದ ಪ್ರತಿ ವಿದ್ಯಾರ್ಥಿಯೂ ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯವಿದೆ. ಈ ನಾಲ್ಕು ಅಂಶಗಳು ಇಲ್ಲದಿದ್ದರೆ ವಿದ್ಯಾರ್ಥಿಯು ಅತ್ಯಂತ ಕಡಿಮೆ ಅಂಕಗಳನ್ನು ಪಡೆಯುತ್ತಾನೆ’ ಎಂದು ಅವರು ಹೇಳಿದರು. ‘ಅಧ್ಯಯನ ಒಂದು ಯಜ್ಞಕ್ರಿಯೆಯಂತಿರಬೇಕು’ ಎಂದು ಹೇಳಿದ ಅವರು ಓದಿಗೆ ಪ್ರೇರಣೆಯಾಗುವ ರಾಜನ ಕತೆಯೊಂದನ್ನು ಹೇಳಿದರು. ತಮ್ಮ ಜೀವನದ ಘಟನೆಯೊಂದನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದರು. ‘ನೀವು ಐವರು ಪರೀಕ್ಷೆಯಲ್ಲಿ ಪಾಸ್ ಆಗಲು ಸಾಧ್ಯವೇ ಇಲ್ಲ ನೀವು ಪಾಸ್ ಆದರೆ ನನ್ನ ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ ಎಂದು ನಮ್ಮ ಪರಿಚಯದವರೊಬ್ಬರು ಸವಾಲು ಹಾಕಿದ್ದರು. ಅವರ ಮೀಸೆ ಬೋಳಿಸಬೇಕು ಎಂದು ನಾವು ಐವರೂ ಕಷ್ಟಪಟ್ಟು ಓದಿದೆವು. ಉನ್ನತ ಅಂಕಗಳು ಬಂದಾಗ ನಮಗೆ ಅವರ ಸವಾಲಿನ ತಾತ್ಪರ್ಯ ಅರ್ಥವಾಯಿತು. ಇಂದು ನಾನು ನಿಮ್ಮ ಮುಂದೆ ನಿಂತಿದ್ದೇನೆ ಉಳಿದ ನಾಲ್ವರೂ ಉನ್ನತ ಸಾಧನೆ ಮಾಡಿದ್ದಾರೆ’ ಎಂದು ಹೇಳಿದಾಗ ಸಭಾಂಗಣದಲ್ಲಿ ಕರತಾಡನ ಮೊಳಗಿತು.
ಆಸಕ್ತಿಗೆ ತಕ್ಕ ಅವಕಾಶ ಅಪಾರ
ಎಸ್‌ಎಸ್‌ಎಲ್‌ಸಿ ನಂತರ ಮುಂದೇನು? ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಪ್ರಾಧ್ಯಾಪಕ ಡಾ.ವಿ.ವಿಕ್ರಮ್ ವಿದ್ಯಾರ್ಥಿಗಳ ಎದುರಿರುವ ಅವಕಾಶಗಳ ಆಗರವನ್ನೇ ತೆರೆದಿಟ್ಟರು. ಆಧುನಿಕ ಕಾಲಘಟ್ಟಕ್ಕೆ ಸಂಬಂಧಿಸಿದಂತೆ ಕೌಶಲ ಆಧಾರಿತ ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡಿದರು. ಆಸಕ್ತಿಗೆ ಅನುಗುಣವಾಗಿ ಯಾವ ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಮಾಹಿತಿ ಬಿಚ್ಚಿಟ್ಟರು. ‘ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕಲೆ ಮತ್ತು ಮಾನವಿಕ ವಿಭಾಗದ ಕೋರ್ಸ್‌ಗಳಿಗೆ ಆದ್ಯತೆ ನೀಡುತ್ತಾರೆ. ಆದರೆ ನಮ್ಮ ದೇಶದಲ್ಲಿ ವಿಜ್ಞಾನ ವಾಣಿಜ್ಯ ತಾಂತ್ರಿಕ ಕೋರ್ಸ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕಲಾ ಕ್ಷೇತ್ರದಲ್ಲೂ ಸಾಕಷ್ಟು ಅವಕಾಶಗಳಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸೈಬರ್ ಸೆಕ್ಯುರಿಟಿ ಇನ್ಫರ್ಮೇಷನ್ ಸೆಕ್ಯುರಿಟಿ ಬ್ಯಾಂಕಿಂಗ್ ಇನ್ಶೂರೆನ್ಸ್ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ’ ಎಂದರು.
‘ವಿದ್ಯಾರ್ಥಿಗಳು ಹೆಚ್ಚು ಶ್ರಮ ಹಾಕಿದರೆ ಲೆಕ್ಕ ಪರಿಶೋಧನಾ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಬಹುದು. ಕಾನೂನು ಮಾಧ್ಯಮ ಕ್ಷೇತ್ರಕ್ಕೂ ಪದಾರ್ಪಣೆ ಮಾಡಬಹುದು. ಇಂದು ಎಂಜಿನಿಯರಿಂಗ್ ಓದಿದವರಿಗೂ ಕೆಲಸ ಸಿಗುತ್ತಿಲ್ಲ. ಆದರೆ ಕೌಶಲ ಆಧಾರಿತವಾದ ಐಟಿಐ ಓದಿದವರು ಹೆಚ್ಚು ಕೆಲಸ ಪಡೆಯುತ್ತಿದ್ದಾರೆ. ಎಲೆಕ್ಟ್ರಿಷಿಯನ್ ಮೆಕ್ಯಾನಿಕ್ ವೆಲ್ಡರ್ ಫಿಟ್ಟರ್ ಕಲಿಕೆಗೂ ಮಾನ್ಯತೆ ಇದೆ’ ಎಂದರು. ‘ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಮಾಡುವ ಮೂಲಕ ಸರ್ಕಾರಿ ಕೆಲಸಗಳನ್ನೂ ಪಡೆಯಬಹುದು. ಭಾರತೀಯ ಸೈನ್ಯದಲ್ಲಿ ಹಲವು ಹುದ್ದೆಗಳಿವೆ. ಸೈನ್ಯವೆಂದರೆ ಗನ್ ಹಿಡಿದು ಹೋರಾಟ ಮಾಡುವ ಯೋಧ ಮಾತ್ರವಲ್ಲ. ಸೈನ್ಯದಲ್ಲಿ ವೈದ್ಯರು ತಂತ್ರಜ್ಞರು ಹಲವು ವಿಭಾಗಗಳಲ್ಲಿ ಕೆಲಸ ಮಾಡಬಹುದು. ರೈಲ್ವೆ ಪೊಲೀಸ್ ಪೋಸ್ಟಲ್ ಇಲಾಖೆಗಳಲ್ಲೂ ಅವಕಾಶ ಸೃಷ್ಟಿಸಿಕೊಳ್ಳಬಹುದು’ ಎಂದರು.
ಸೈಕಲ್ ಗೆದ್ದವರು ಯಾರು?
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿ ವಿದ್ಯಾರ್ಥಿಯಿಂದಲೂ ನೋಂದಣಿ ಫಾರಂ ತುಂಬಿಸಿ ಸಂಗ್ರಹಿಸಲಾಗಿತ್ತು. ಕಾರ್ಯಕ್ರಮದ ಕಡೆಯಲ್ಲಿ ವಿದ್ಯಾರ್ಥಿಗಳ ಫಾರಂಗಳನ್ನು ಲಾಟರಿ ಮೂಲಕ ಎತ್ತಿ 16 ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಲಾಟರಿಯಲ್ಲಿ ಬಂದ ಹೆಸರು ಘೋಷಣೆ ಮಾಡುತ್ತಿದ್ದಂತೆ ವಿದ್ಯಾರ್ಥಿಗಳು ಜಯಘೋಷ ಮೊಳಗಿಸುತ್ತಿದ್ದರು. ಇಬ್ಬರು ಅದೃಷ್ಟಶಾಲಿ ವಿದ್ಯಾರ್ಥಿಗಳಿಗೆ ಕಾಣಿಕೆ ರೂಪದ ಸೈಕಲ್ ವಿತರಿಸಲಾಯಿತು. ಶ್ರೀ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯ ದರ್ಶನ್ ಕುಮಾರ್ ವಿಶ್ವಮಾನವ ಶಾಲೆಯ ಲೋಹಿತ್ ಕುಮಾರ್ ಸೈಕಲ್ ಪಡೆದರು. ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಪಿ. ರಘು ವಿಜೇತರಿಗೆ ಸೈಕಲ್ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.